ಮಂಗಳವಾರ, ಮೇ 18, 2021
23 °C
ಪಕ್ಕದ ರಸ್ತೆಯಲ್ಲಿಯೇ ಜನಜಂಗಳಿ * ಸೀಲ್‌ಡೌನ್‌ ಮಾಹಿತಿ ಇಲ್ಲದೆ ಪರದಾಡಿದ ಜನ

ಕೆ.ಆರ್‌. ಮಾರುಕಟ್ಟೆ: ಇಲ್ಲಿ ಹೆಸರಿಗಷ್ಟೇ ಸೀಲ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ –19 ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿರುವ ಕೆ.ಆರ್‌.ಮಾರುಕಟ್ಟೆ ಸುತ್ತಮುತ್ತಲಿನ ಐದು ಪ್ರದೇಶಗಳನ್ನು ಬಿಬಿಎಂಪಿ ಸೀಲ್‌ಡೌನ್‌ ಮಾಡಿದೆ. ನಿರ್ದಿಷ್ಟ ರಸ್ತೆಯ ಆ ತುದಿ ಮತ್ತು ಈ ತುದಿಗೆ ನಾಲ್ಕಾರು ಬ್ಯಾರಿಕೇಡ್‌ ಹಾಕಿ, ಐದಾರು ಪೊಲೀಸರನ್ನು ನಿಲ್ಲಿಸಿ ಪಾಲಿಕೆ ಕೈತೊಳೆದುಕೊಂಡಿದೆ.

ಸೀಲ್‌ಡೌನ್‌ಗೆ ಒಳಗಾದ ಪ್ರದೇಶಗಳಲ್ಲಿ ಮಂಗಳವಾರ ಓಡಾಡಿದಾಗ ಕಂಡು ಬಂದ ದೃಶ್ಯವಿದು. ಎಷ್ಟೋ ಜನರಿಗೆ ಸೀಲ್‌ಡೌನ್‌ ಆಗಿದೆ ಎಂಬುದೇ ತಿಳಿದಿರಲಿಲ್ಲ. ತರಕಾರಿ ಮಾರುವವರಿಗೆ, ವರ್ತಕರಿಗೆ ಈ ಬಗ್ಗೆ ಮಾಹಿತಿ ನೀಡಿರುವುದು ಮಂಗಳವಾರ ಬೆಳಿಗ್ಗೆ. ಅಷ್ಟರಲ್ಲಾಗಲೇ ತರಕಾರಿಗಳನ್ನು, ಇತರೆ ಸಾಮಗ್ರಿಗಳನ್ನು ಮಾರಾಟ ಮಾಡಲು ವರ್ತಕರು ಮಾರುಕಟ್ಟೆಗೆ ಬಂದಿದ್ದರು. ತರಕಾರಿಯನ್ನು ಮರಳಿ ಒಯ್ಯಲೂ ಆಗದೆ, ಮಾರಲೂ ಆಗದೆ ವ್ಯಾಪಾರಿಗಳು ಪರದಾಡಿದರು.

ಪಕ್ಕದ ರಸ್ತೆಗೆ ಬರುವುದಿಲ್ಲವೇ?

‘ಸೀಲ್‌ಡೌನ್‌ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಎಂದಿನಂತೆ ನಸುಕಿನ ಜಾವವೇ ಬಂದಿದ್ದೇವೆ. ಸೀಲ್‌ಡೌನ್‌ ಮಾಡಲಾಗಿದೆ ಎಂದು ಹೇಳಿದರು. ವ್ಯಾಪಾರವೇ ಇಲ್ಲ. ಮೊದಲೇ ಮಾಹಿತಿ ನೀಡಿದ್ದರೆ, ನಾವು ತರಕಾರಿಯನ್ನು ರೈತರಿಂದ ಖರೀದಿಸುತ್ತಲೇ ಇರಲಿಲ್ಲ’ ಎಂದರು ಕೆ.ಆರ್. ಮಾರುಕಟ್ಟೆಯಲ್ಲಿ ತರಕಾರಿ ಮಾರಲು ಬಂದಿದ್ದ ಲೋಕೇಶ್. 

‘ಪಕ್ಕದ ರಸ್ತೆಯಲ್ಲಿ ವ್ಯಾಪಾರಿಗಳು ಸರಾಗವಾಗಿ ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಪಕ್ಕದ ರಸ್ತೆಗೆ ಕೊರೊನಾ ಸೋಂಕು ಬರುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು. 

‘ವಿ.ವಿ. ಪುರದಲ್ಲಿ ಎಲೆಕ್ಟ್ರಿಕ್‌ ಕೆಲಸ ಮಾಡುತ್ತೇನೆ. ಕೆಲಸ ಇದ್ದರೆ ಮಾತ್ರ ಬರುತ್ತೇನೆ. ಅರ್ಧ ಕೆಲಸವಷ್ಟೇ ಮುಗಿದಿತ್ತು. ಹಾಗಾಗಿ, ಇವತ್ತು ಬಂದೆ. ಸೀಲ್‌ಡೌನ್‌ ಮಾಡಲಾಗಿದೆ ಎನ್ನುತ್ತಿದ್ದಾರೆ. ಇನ್ನೂ ಒಂದು ವಾರ ಕೆಲಸವಿಲ್ಲ. ಊರಿಗೆ ವಾಪಸ್‌ ಹೋಗಬೇಕು’ ಎಂದು ದೊಡ್ಡಬಳ್ಳಾಪುರದಿಂದ ಬಂದಿದ್ದ ರೇವಣ್ಣ ಹೇಳಿದರು. 

‘ಕೊರೊನಾ ನಿಯಂತ್ರಿಸಲು ಲಾಕ್‌ಡೌನ್‌ ಮಾಡಿದರೆ ಹೊಟ್ಟೆಗೆ ಅನ್ನ ಇಲ್ಲ ಎಂದು ಜನರು ಗೋಳಾಡುತ್ತಾರೆ. ಸೀಲ್‌ಡೌನ್‌ ಮಾಡದಿದ್ದರೆ ಸರ್ಕಾರ ಏನು ಕ್ರಮ ಕೈಗೊಂಡಿಲ್ಲ ಎಂದು ಜನರೇ ದೂರುತ್ತಾರೆ. ವ್ಯಾಪಾರ ಮಾಡುವವರು ಮಾಡಲಿ, ಸಾಯುವವರು ಸಾಯಲಿ ಎಂದು ಸರ್ಕಾರ  ಬಿಟ್ಟು ಬಿಟ್ಟಿದೆ’ ಎಂದರು ಕಲಾಸಿಪಾಳ್ಯದ ಅಮುದಾ. 

‘ಜನ ಬಂದರೆ ವ್ಯಾಪಾರ ಮಾಡುತ್ತೇವೆ. ಇಲ್ಲದಿದ್ದರೆ ಮನೆಗೆ ಹೋಗುತ್ತೇವೆ’ ಎಂದು ನಿರ್ಲಿಪ್ತವಾಗಿ ಅವರು ಹೇಳಿದರು.

‘ನೋಡಿ, ಈ ಜಾಗ ನಮಗೆ ದೇವರು ಕೊಟ್ಟ ಮನೆಯಿದ್ದಂತೆ. ಇಲ್ಲಿರುವ ನಮಗೆ ಈ ಕೊರೊನಾ, ಗಿರೊನಾ ಎಲ್ಲ ಬರುವುದಿಲ್ಲ’ ಎಂದು ಕೆ.ಆರ್. ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು ಮಾರುವ ಪ್ರಭು ಹೇಳಿಕೊಂಡರು. 

‘ಸೀಲ್‌ಡೌನ್‌ ಇರುವುದರಿಂದ ಬೇರೆ ರಸ್ತೆಗೆ ಹೋಗಿ ಮಾರಾಟ ಮಾಡಬೇಕು. ಹೋಟೆಲ್‌ಗಳಿಗೆ ಹೋದರೆ, ಪೊಲೀಸರು ಹೊಡೆದು ಕಳಿಸುತ್ತಿದ್ದಾರೆ. ಬೇರೆ ಕಡೆ ಹೋಗಿ ಊಟದ ಪ್ಯಾಕೆಟ್‌ ತೆಗೆದುಕೊಂಡು ಬಂದೆ. ರಾತ್ರಿ ಇಲ್ಲಿಯೇ (ಕೆ.ಆರ್. ಮಾರುಕಟ್ಟೆ) ಮಲಗುತ್ತೇವೆ’ ಎಂದೂ ಅವರು ಹೇಳಿದರು. 

ಊಟ ಇಲ್ಲದೆ ಸಾಯುತ್ತೇವೆ: ನಿವಾಸಿಗಳ ಅಳಲು

‘ಕೊರೊನಾ ಸೋಂಕಿತರು ಪತ್ತೆಯಾಗಿರುವ ಪ್ರದೇಶವನ್ನು ಬಿಟ್ಟು ನಮ್ಮ ರಸ್ತೆಯನ್ನು ಸೀಲ್‌ಡೌನ್‌ ಮಾಡಿದ್ದಾರೆ. ಈ ರಸ್ತೆಯಲ್ಲಿ ಕೋವಿಡ್‌–19 ಪ್ರಕರಣ ವರದಿಯಾಗಿಲ್ಲ’ ಎನ್ನುತ್ತಾರೆ ಚಿಕ್ಕಪೇಟೆಯ ಜಗದೀಶ್. 

‘ಕೆಲವು ವರ್ತಕರು ಸ್ವಯಂಪ್ರೇರಿತವಾಗಿ ಬಂದ್ ಮಾಡುತ್ತೇವೆ ಎಂದ ಕೂಡಲೇ ಮಾಧ್ಯಮಗಳಲ್ಲಿ ಚಿಕ್ಕಪೇಟೆ ಸಂಪೂರ್ಣ ಬಂದ್‌ ಎನ್ನುವಂತಹ ಸುದ್ದಿ ಬಂದಿದ್ದರಿಂದ ಜನರು ಬರಲೇ ಇಲ್ಲ. ಅಂಗಡಿ ತೆರೆದರೂ ವ್ಯಾಪಾರ ಇಲ್ಲದಂತಾಗಿದೆ. ಕೊರೊನಾದಿಂದ ಸಾಯುವುದಕ್ಕೆ ಮುನ್ನವೇ ನಾವು ಹಸಿವಿನಿಂದ ಸಾಯುವ ಸ್ಥಿತಿ ಬರಲಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

‘ಕಟ್ಟಡದ ಮಾಲೀಕರು ಒಂದು ತಿಂಗಳ ಬಾಡಿಗೆಯನ್ನೂ ಬಿಡುವುದಿಲ್ಲ. ಇತ್ತ ವ್ಯಾಪಾರವೂ ಆಗುತ್ತಿಲ್ಲ. ಸರ್ಕಾರ ನೋಡಿದರೆ ಮೂರು ದಿನಕ್ಕೆ ಒಂದೊಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಮಾಡುವುದಾದರೆ ಮೊದಲಿನಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಲಿ. ಇಲ್ಲದಿದ್ದರೆ, ಯಾರು ಏನಾದರೂ ಮಾಡಿಕೊಳ್ಳಲಿ ಎಂದು ಬಿಟ್ಟು ಬಿಡಲಿ’ ಎಂದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು