ಸೋಮವಾರ, ಆಗಸ್ಟ್ 26, 2019
20 °C
‘ನಗರದ ನೀರಿನ ದಾಹ’ ವಿಚಾರಸಂಕಿರಣ, ಬೆಂಗಳೂರಿಗೆ ಶರಾವತಿ ನೀರು ಹರಿಸುವ ಪ್ರಸ್ತಾವಕ್ಕೆ ವಿರೋಧ

ಬೆಂಗಳೂರಿಗೆ ಶರಾವತಿ ನೀರು ಹರಿಸುವ ಪ್ರಸ್ತಾವ: ನೀರು ಹೀರುವ ಬಂಡವಾಳಶಾಹಿ ವ್ಯವಸ್ಥೆ

Published:
Updated:
Prajavani

ಬೆಂಗಳೂರು: ನಗರಕ್ಕೆ ಶರಾವತಿ ನೀರು ತರುವ ಪ್ರಸ್ತಾವಕ್ಕೆ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಹೊರ ಜಿಲ್ಲೆಗಳಿಂದ ನೀರು ತರುವ ಬದಲು, ನಗರವನ್ನು ಜಲಸ್ವಾವಲಂಬಿಯಾಗಿಸುವ ಕೆಲಸವಾಗಬೇಕು ಎಂಬ ಸಲಹೆಗಳು ಕೇಳಿ ಬಂದವು.

ಗ್ರಾಮಸೇವಾ ಸಂಘ, ‘ಶರಾವತಿ ನದಿ ಉಳಿಸಿ’ ಹೋರಾಟ ಸಮಿತಿ, ಪಶ್ಚಿಮ ಘಟ್ಟ ಜಾಗೃತಿ ಸಮಿತಿ ಹಾಗೂ ಮತ್ತಿತರ ಸಂಘ–ಸಂಸ್ಥೆಗಳು ‘ನಗರ ನೀರಿನ ದಾಹ’ ಕುರಿತು ಹಮ್ಮಿಕೊಂಡಿದ್ದ ಈ ವಿಚಾರ ಸಂಕಿರಣದಲ್ಲಿ, ಶರಾವತಿ ಜಲಾನಯನ ಪ್ರದೇಶದಲ್ಲಿ ಈಗಿರುವ ಪರಿಸ್ಥಿತಿ, ಬೆಂಗ ಳೂರಿನಲ್ಲಿ ಎದುರಾಗಿರುವ ನೀರಿನ ಕೊರತೆಗೆ ಕಾರಣಗಳೇನು ಎಂಬುದನ್ನು ಪರಿಸರ ತಜ್ಞರು ಉದಾಹರಣೆ ಸಹಿತ ವಿವರಿಸಿದರು.

‘ನಗರದಲ್ಲಿ ಹೆಚ್ಚು ನೀರು ಬಳಕೆಯಾ ಗುತ್ತಿರುವುದು ಕೈಗಾರಿಕೆಗಳಿಗೆ. ಇಂಥ ಕಾರ್ಪೊರೇಟ್‌ ಶಕ್ತಿಗಳಿಂದಾ ಗಿಯೇ ಬಹುಮಹಡಿ ಕಟ್ಟಡಗಳು, ಸಿಮೆಂಟ್‌ ರಸ್ತೆ, ಮೇಲ್ಸೇತುವೆಗಳು ತಲೆ ಎತ್ತುತ್ತಿವೆ. ಬೆಂಗಳೂರು ಸುತ್ತಲಿನ ಐದು ಜಿಲ್ಲೆಗಳಲ್ಲಿನ ನದಿಗಳು ಬತ್ತಿ ಹೋಗಲು ಇದೇ ಕಾರಣ. ರಾಜಕಾರಣಿಗಳನ್ನು ಕಾರ್ಪೊರೇಟ್‌ ಕಂಪನಿಗಳು ಕುಣಿಸುತ್ತಿವೆ’ ಎಂದು ಪರಿಸರ ತಜ್ಞ ನಾಗೇಶ ಹೆಗಡೆ ವಿಷಾದಿಸಿದರು.

‘ಹುಬ್ಬಳ್ಳಿ–ಧಾರವಾಡದ ನಡುವೆ ಇರುವ ತಂಪು ಪಾನೀಯದ ಕಾರ್ಖಾನೆಗೆ ಒಂದು ದಿನಕ್ಕೆ 16 ಸಾವಿರ ಕುಟುಂಬಗಳಿಗೆ ಬೇಕಾಗುವಷ್ಟು ನೀರನ್ನು ನೀಡಲಾಗುತ್ತಿದೆ. ಇದೇ ಕಾರಣ ಮುಂದಿಟ್ಟುಕೊಂಡು, ಮಹದಾಯಿ ನದಿ ನೀರನ್ನು ಉಪಯೋಗಿಸಲು ಕನ್ನಡಿಗರು ಯೋಗ್ಯರಲ್ಲ ಎಂದು ಗೋವಾ ಸರ್ಕಾರ ಪ್ರತಿಪಾದಿಸಿತು’ ಎಂದು ಹೆಗಡೆ ಹೇಳಿದರು. 

ಜಲ ಸಂರಕ್ಷಣಾ ತಜ್ಞ ಎ.ಆರ್. ಶಿವ ಕುಮಾರ್,  ‘ಬೆಂಗಳೂರಿನಲ್ಲಿ ವರ್ಷಕ್ಕೆ  900ರಿಂದ 1000 ಮಿಲಿ ಮೀಟರ್‌ ಮಳೆಯಾಗುತ್ತದೆ. ನಗರವು ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ, ಶೇ 30ರಿಂದ ಶೇ 40ರಷ್ಟು ಬೇಡಿಕೆ ಈಡೇರಿಸಬಹುದು’ ಎಂದರು. 

ರಂಗಕರ್ಮಿ ಪ್ರಸನ್ನ, ‘ನದಿ ತಿರುವು ಯೋಜನೆಗಿಂತ ಹಳ್ಳಿಗಳಿಗೆ ಮರು ವಲಸೆ ನಡೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ರಚನಾತ್ಮಕ ಚಳವಳಿ ಆಗಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ತ್ಯಾಗರಾಜ ಸಮಿತಿಯು, ಲಿಂಗನ ಮಕ್ಕಿ ಅಣೆಕಟ್ಟೆಯಲ್ಲಿ 155 ಟಿಎಂಸಿ ಅಡಿ ನೀರು ಇದೆ. ಇದರಲ್ಲಿ ಬೆಂಗಳೂರಿಗೆ ಬೇಕಾದ 30 ಟಿಎಂಸಿ ನೀರನ್ನು ತೆಗೆದುಕೊಳ್ಳಬಹುದು ಎಂದು ಅವಾಸ್ತವಿಕ ವರದಿ ನೀಡಿದೆ. ಸಂಪೂರ್ಣ ಅಣೆ ಕಟ್ಟೆ ತುಂಬಿದಾಗ ಮಾತ್ರ 155 ಟಿಎಂಸಿ ಅಡಿ ನೀರು ಇರುತ್ತದೆ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಡ್ಯಾಂ ತುಂಬಿರುವುದು ಎರಡು ಸಲ ಮಾತ್ರ’ ಎಂದು ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಸಂಚಾಲಕ ಸಮಿತಿಯ ಸದಸ್ಯ ಹರ್ಷಕುಮಾರ್‌ ಕುಗ್ವೆ ಹೇಳಿದರು.  

‘ಈಗಿರುವ ಡ್ಯಾಂನಲ್ಲಿ ಶೇ 40ರಷ್ಟು ಹೂಳು ತುಂಬಿಕೊಂಡಿದೆ. ಶರಾವತಿ ನದಿಯ ಹರಿವಿನ ಪ್ರಮಾಣ, ಸಂಗ್ರಹ ಪ್ರಮಾಣವೂ ತುಂಬಾ ಕಡಿಮೆ ಯಾಗಿದೆ’ ಎಂದರು.

ನಿರ್ಣಯಗಳು

l ಗ್ರಾಮೀಣ ಭಾರತವನ್ನು ಬೆಂಗಳೂರಿಗಿಂತ ಉತ್ತಮ ಪಡಿಸುವ ಮೂಲಕ ತಿರುಗು ವಲಸೆ ರೂಪಿಸುವುದು

l ಬೆಂಗಳೂರು ನುಂಗುತ್ತಿರುವ ವಿಪರೀತ ಸಂಪನ್ಮೂಲಗಳ ಬಗ್ಗೆ ಶ್ವೇತಪತ್ರ ಹೊರಡಿಸುವುದು

l ನದಿಗಳು ತಮ್ಮ ನೈಸರ್ಗಿಕ ಮಾರ್ಗದಲ್ಲಿಯೇ ಚಲಿಸಲಿ–ಇದನ್ನು ಬದಲಿಸಬಾರದು

l ಮಾಲಿನ್ಯ ಕಾರ್ಖಾನೆಗಳನ್ನು ತಡೆಗಟ್ಟುವುದು

l ನಗರದ ಕೆರೆ, ರಾಜಕಾಲುವೆಗಳನ್ನು ಪುನರುಜ್ಜೀವನಗೊಳಿಸುವುದು

ಸಮರ್ಥ ಜಲನೀತಿ ಬೇಕು

ನೀರು ಮತ್ತು ಆಹಾರ ಭದ್ರತೆ ಕುರಿತು ವಿಧಾನಸಭೆ ವಿಶೇಷ ಅಧಿವೇಶನ ನಡೆಯುವ ಅಗತ್ಯವಿದೆ. ರಾಜ್ಯದಲ್ಲಿ 2002ರ ನಂತರ ಜಲನೀತಿ ಪರಿಷ್ಕರಣೆ ಆಗಿಲ್ಲ. ಕುಡಿಯುವ ನೀರಿಗಿಂತ, ಕೈಗಾರಿಕೆಗಳ ಬೇಡಿಕೆ ಹೆಚ್ಚುತ್ತಿದೆ. ಏನಾದರೂ ಮಾಡಿ, ಬೆಂಗಳೂರಿಗೆ ನೀರು ತನ್ನಿ ಎನ್ನುವಂತಾಗಿದೆ.

ಡಾ.ಎಸ್.ಜಿ. ಒಂಬತ್ಕೆರೆ, ಪರಿಸರ ಹೋರಾಟಗಾರ

**

ಕಾವೇರಿ ನೀರನ್ನೇ ತರಬಾರದಿತ್ತು

ಶರಾವತಿ ಇರಲಿ, ಕಾವೇರಿ ನೀರನ್ನೇ ಬೆಂಗಳೂರಿಗೆ ಹರಿಸಬಾರದಿತ್ತು. ನಮ್ಮ ಹಿಂದಿನ ಪೀಳಿಗೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ ಇಂದು ಶರಾವತಿ ನೀರನ್ನು ಕೇಳುವ ಧೈರ್ಯವನ್ನು ಯಾರೂ ಮಾಡುತ್ತಿರಲಿಲ್ಲ. ಬೇರೆ ಕಡೆಯಿಂದ ನೀರು ತರುವ ಬದಲು, ಬೆಂಗಳೂರನ್ನು ಜಲ ಸ್ವಾವಲಂಬಿಯಾಗಿಸುವ ಕೆಲಸವಾಗಬೇಕು.

ಶ್ರೀಹರ್ಷ ಹೆಗ್ಡೆ, ಪರಿಸರ ಹೋರಾಟಗಾರ

**

ಪಶ್ಚಿಮ ಘಟ್ಟ ಅಭಿವೃದ್ಧಿಗೆ ಹಣ

ಕಾವೇರಿ ಜಲಾನಯನ ಪ್ರದೇಶಗಳು ನೀರು ಬಳಸಿಕೊಂಡು ಇಲ್ಲಿ ಕಾರ್ಪೊರೇಟ್‌ ಕಂಪನಿಗಳು ಸಾವಿರಾರು ಕೋಟಿ ದುಡ್ಡು ಮಾಡಿಕೊಳ್ಳುತ್ತಿವೆ. ಬಿಬಿಎಂಪಿಗೆ ₹10 ಸಾವಿರ ಕೋಟಿ ಬಜೆಟ್‌ ಇಡುತ್ತಾರೆ.ಪಶ್ಚಿಮ ಘಟ್ಟ ಅಭಿವೃದ್ಧಿಗೆ ₹1,000 ಕೋಟಿಯಾದರೂ ನೀಡಬೇಕು. ಪರಿಸರ ಸಂರಕ್ಷಣೆ ಕಾರ್ಯ ಕೈಗೊಳ್ಳಬೇಕು

ಸಹದೇವ್‌, ಪಶ್ಚಿಮ ಘಟ್ಟ ಜಾಗೃತಿ ವೇದಿಕೆ ಸಂಚಾಲಕ

**

ನೀರು ಬಳಕೆ ಯೋಜನೆ ಅಗತ್ಯ

ಬೆಂಗಳೂರಿನಲ್ಲಿ 6,000 ಖಾಸಗಿ ಎಸ್‌ಟಿಪಿಗಳಿದ್ದು, ದಿನಕ್ಕೆ 35 ಕೋಟಿ ಲೀಟರ್‌ ನೀರನ್ನು ಶುದ್ಧೀಕರಿಸಲಾಗುತ್ತಿದೆ. ವಿಶ್ವದ ಯಾವುದೇ ನಗರವು ಇಂತಹ ಸಾಮರ್ಥ್ಯ ಹೊಂದಿಲ್ಲ. ಆದರೆ, ಈ ನೀರನ್ನು ಯಾವ ರೀತಿ ಬಳಸಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಬೇಕಾಗಿದೆ.

ಶುಭಾ ರಾಮಚಂದ್ರನ್‌, ಬಯೋಮ್‌ ಸಂಸ್ಥೆಯ ಜಲತಂಡದ ಮುಖ್ಯಸ್ಥೆ

**

ಮಳೆಯ ನೀರು ಕುಡಿಯಬಹುದಾ ?

ಸಂಗ್ರಹಿಸಿದ ಮಳೆ ನೀರನ್ನು ಮನೆಯಲ್ಲಿಯೇ ಹೇಗೆ ಶುದ್ಧೀಕರಿಸಬಹುದು ಎಂಬುದರ ಬಗ್ಗೆ ಶಿವಕುಮಾರ್‌ ಮಾಹಿತಿ ನೀಡಿದರು.

‘ರಾಸಾಯನಿಕವಾಗಲಿ, ಯಾವುದೇ ಇಂಧನವಾಗಲಿ ಬಳಸದೆ, ಯಾವುದೇ ದುಡ್ಡು ಖರ್ಚು ಮಾಡದೆ ಮಳೆಯ ನೀರನ್ನು ಶುದ್ಧಗೊಳಿಸಬಹುದು’ ಎಂದ ಅವರು, ‘ಹತ್ತು ಲೀಟರ್‌ ನೀರನ್ನು ಒಂದು ಸ್ಟೀಲ್‌ ಪಾತ್ರೆಯಲ್ಲಿ ಹಾಕಬೇಕು. ಅದರಲ್ಲಿ ಕಾಗದದಂತಹ ಬೆಳ್ಳಿಯ ತಗಡನ್ನು ಅದ್ದಿಟ್ಟು, ಮುಚ್ಚಳ ಮುಚ್ಚಿ ಕತ್ತಲಲ್ಲಿ ಇಡಬೇಕು. ಎಂಟರಿಂದ–ಹತ್ತು ತಾಸುಗಳ ನಂತರ ನೀರು ಸಂಪೂರ್ಣವಾಗಿ ಶುದ್ಧವಾಗಿರುತ್ತದೆ. ವಿಶ್ವದ ಯಾವುದೇ ಪ್ರಯೋಗಾಲಯದಲ್ಲಿ ಪರೀಕ್ಷಿಸಿದರೂ ಈ ನೀರಿನಲ್ಲಿ ಒಂದೇ ಒಂದು ಬ್ಯಾಕ್ಟೀರಿಯಾ ಸಿಗುವುದಿಲ್ಲ’ ಎಂದರು.

‘ಬೆಳ್ಳಿಯ ತಗಡನ್ನು ಸೋಪು ಅಥವಾ ಡಿಟೆರ್ಜೆಂಟ್‌ನಲ್ಲಿ ತೊಳೆಯಬಾರದು. ನೀರಿನಲ್ಲಿ ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ಸ್ವಚ್ಛಗೊಳಿಸಿ, ಒಣ ಬಟ್ಟೆಯಿಂದ ಒರೆಸಬೇಕು. 20 ವರ್ಷಗಳವರೆಗೆ ಧಾರಾಳವಾಗಿ ಈ ತಗಡನ್ನು ಬಳಸಬಹುದಾಗಿದೆ’ ಎಂದು ಶಿವಕುಮಾರ್‌ ವಿವರಿಸಿದರು.

Post Comments (+)