ಶನಿವಾರ, ಸೆಪ್ಟೆಂಬರ್ 25, 2021
24 °C

ಶಿವರಾಮ ಕಾರಂತ ಬಡಾವಣೆ: ಕಟ್ಟಡ ಸಕ್ರಮ- ಅರ್ಜಿ ಸಲ್ಲಿಕೆಗೆ ಸೆ.9 ಕೊನೆ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವರಾಮಕಾರಂತ ಬಡಾವಣೆ ನಿರ್ಮಾಣಕ್ಕೆ  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಪ್ರದೇಶಗಳಲ್ಲಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಸೆ. 9 ಕೊನೆಯ ದಿನ ಎಂದು ಈ ಬಡಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ನ್ಯಾ. ಎ.ವಿ. ಚಂದ್ರಶೇಖರ್ ಸಮಿತಿ ತಿಳಿಸಿದೆ.

ಸೋಮಶೆಟ್ಟಿಹಳ್ಳಿ ಮತ್ತು ಮೇಡಿ ಅಗ್ರಹಾರದಲ್ಲಿರುವ ಸಹಾಯ ಕೇಂದ್ರಗಳಲ್ಲಿ ಸೆ.9 ರವರೆಗೂ ಅರ್ಜಿ ಸ್ವೀಕರಿಸಲಾಗುತ್ತದೆ. ಆ ಬಳಿಕ ಸಹಾಯ ಕೇಂದ್ರಗಳಲ್ಲಾಗಲೀ ಅಥವಾ ಆನ್‌ಲೈನ್‌ ಪೋರ್ಟಲ್‌ (jcc-skl.in) ಮೂಲಕವಾಗಲೀ ಅರ್ಜಿ ಸ್ವೀಕಾರ ಮಾಡುವುದಿಲ್ಲ ಎಂದು ಸಮಿತಿಯು ಸ್ಪಷ್ಟಪಡಿಸಿದೆ. ಇನ್ನೂ ಯಾರಾದರೂ ಭೂಮಾಲೀಕರು, ಸಾರ್ವಜನಿಕರು ಈ ಪ್ರದೇಶಗಳಲ್ಲಿ ನಿರ್ಮಿಸಿರುವ ಕಟ್ಟಡಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಬಾಕಿ ಇದ್ದರೆ ಗಡುವಿನೊಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸಮಿತಿ ಕೋರಿದೆ.

ಶಿವರಾಮ ಕಾರಂತ ಬಡಾವಣೆಗೆ ಗೊತ್ತುಪಡಿಸಿರುವ ಪ್ರದೇಶಗಳಲ್ಲಿ 2018ರ ಆ.3ಕ್ಕೆ ಮುಂಚಿತವಾಗಿ ನಿರ್ಮಿಸಲಾದ  ಕಟ್ಟಡಗಳನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಕಟ್ಟಡಗಳನ್ನು ಒಡೆದು ಹಾಕಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌. ಅಬ್ದುಲ್‌ ನಜೀರ್‌ ಮತ್ತು ಸಂಜೀವ್‌ ಖನ್ನಾ ಅವರನ್ನೊಳಗೊಂಡ ಪೀಠವು ಹೇಳಿದೆ. 2018ರ ಆ.3ಕ್ಕೆ ಮುನ್ನ ನಿರ್ಮಿಸಿರುವ ಕಟ್ಟಡಗಳು ಮತ್ತು ಮನೆಗಳ ಬಗ್ಗೆ ವರದಿ ನೀಡಲು ಸುಪ್ರೀಂ ಕೋರ್ಟ್‌ ನ್ಯಾ. ಎ.ವಿ. ಚಂದ್ರಶೇಖರ್ ಸಮಿತಿಯನ್ನು ನೇಮಿಸಿತ್ತು.  ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಮಿತಿಯು ಮಾರ್ಚ್‌ 1ರಂದು ಚಾಲನೆ ನೀಡಿತ್ತು. ಈ ಬಡಾವಣೆಯ ಅಧಿಸೂಚಿತ ಪ್ರದೇಶಗಳಲ್ಲಿ ಐದು ಸಹಾಯ ಕೇಂದ್ರಗಳನ್ನು ಆರಂಭಿಸಿತ್ತು. ಅವುಗಳಲ್ಲಿ ಮೂರು ಸಹಾಯಕೇಂದ್ರಗಳು ಈಗ ಅಸ್ತಿತ್ವದಲ್ಲಿ ಇಲ್ಲ. ಎರಡು ಸಹಾಯ ಕೇಂದ್ರಗಳಲ್ಲಿ ಸಮಿತಿಯು ಈಗಲೂ ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಈ ಸಮಿತಿಯ ಅವಧಿಯನ್ನು ಸುಪ್ರೀಂ ಕೋರ್ಟ್ 2022ರ ಮಾರ್ಚ್‌ 31ರವರೆಗೆ ವಿಸ್ತರಿಸಿದೆ.

‘ಅಧಿಸೂಚಿತ ಪ್ರದೇಶದಲ್ಲಿ ನಿರ್ಮಿಸಿರುವ ಕಟ್ಟಡಗಳ ಸಂಬಂಧ ನಮಗೆ ಇದುವರೆಗೆ 4,900ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಅವುಗಳಲ್ಲಿ ಸುಮಾರು 4,500 ಅರ್ಜಿಗಳನ್ನು ಪರಿಶೀಲನೆಗಾಗಿ ಪರಿಗಣಿಸಲಾಗಿದೆ’ ಎಂದು ಸಮಿತಿಯ ಸದಸ್ಯರಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ (ನಿವೃತ್ತ) ಜೈಕರ್‌ ಜೆರೋಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2018ರ ಆ.3ರ ಬಳಿಕವೂ ನಿರ್ಮಿಸಿದ ಎಲ್ಲ ಕಟ್ಟಡಗಳನ್ನೂ ಸಕ್ರಮಗೊಳಿಸಲು ಸಾಧ್ಯವಾಗದು. ಕೆಲವೊಂದು ಕಟ್ಟಡಗಳು ಗೋಮಾಳ, ಬಿ–ಖರಾಬು ಜಮೀನು ಹಾಗೂ ಕೆರೆ ಅಥವಾ ರಾಜಕಾಲುವೆಗಳ ಮೀಸಲು ಪ್ರದೇಶದಲ್ಲಿವೆ. ಅಂತಹ ಕಟ್ಟಡಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ’ ಎಂದರು.

ಈ ಬಡಾವಣೆಗೆ ಗೊತ್ತುಪಡಿಸಿದ ಜಾಗದಲ್ಲಿ 2018ರ ಆ 3ರ ಬಳಿಕ ನಿರ್ಮಾಣವಾಗಿರುವ ಕಟ್ಟಡಗಳನ್ನು ಕೆಡಹುವ ಕಾರ್ಯವನ್ನು ಬಿಡಿಎ ಈಗಾಗಲೇ ಆರಂಭಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು