ಬುಧವಾರ, ಜೂನ್ 29, 2022
26 °C

ವಿಶ್ವೇಶ್ವರಯ್ಯ ಟರ್ಮಿನಲ್‌: ಜೂ.6ರಿಂದ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಿರ್ಮಾಣಗೊಂಡು ಉದ್ಘಾಟನೆಗಾಗಿ 14 ತಿಂಗಳಿಂದ ಕಾದಿದ್ದ ಬೈಯ್ಯಪ್ಪನಹಳ್ಳಿ ಬಳಿಯ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಕಾರ್ಯಾರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಜೂನ್ 6ರಿಂದ ಮೂರು ರೈಲುಗಳ ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ಮುಂದಾಗಿದೆ.

ಮೊದಲ ಹಂತದಲ್ಲಿ ವಾರದಲ್ಲಿ ಮೂರು ದಿನ ಬೆಂಗಳೂರಿನಿಂದ ಹೊರಡುವ ಬಾಣಸವಾಡಿ–ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲು(ರೈಲು ಗಾಡಿ ಸಂಖ್ಯೆ 12684), ಬಾಣಸವಾಡಿ–ತಿರುವನಂತಪುರ (16320), ಬಾಣಸವಾಡಿ–ಪಟ್ನಾ (22354) ರೈಲುಗಳ ಸಂಚಾರವನ್ನು ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಿಂದ ಕಾರ್ಯಾಚರಣೆಗೊಳಿಸಲು ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿದೆ.

ಬೈಯಪ್ಪನಹಳ್ಳಿ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ತಲೆ ಎತ್ತಿರುವ ವಿಮಾನ ನಿಲ್ದಾಣ ಮಾದರಿಯ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡರೂ ಕಾರ್ಯಾಚರಣೆ ಆರಂಭವಾಗಿರಲಿಲ್ಲ. ಪ್ರಧಾನ ಮಂತ್ರಿಯಿಂದ ಉದ್ಘಾಟನೆ ಮಾಡಿಸಲು ಕಾಯಲಾಗುತ್ತಿದೆ ಎಂಬುದನ್ನು ನೈರುತ್ಯ ರೈಲ್ವೆ ಅಲ್ಲಗಳೆದಿದೆ.

‘ಯಶವಂತಪುರ ಮತ್ತು ಕೆಎಸ್‌ಆರ್‌(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ಟರ್ಮಿನಲ್ ನಿರ್ಮಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರೈಲುಗಳ ಸಂಖ್ಯೆ ಕಡಿಮೆ ಮಾಡಿದ್ದರಿಂದ ಆ ಎರಡು ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆಯೇ ಇತ್ತು. ನಿಧಾನವಾಗಿ ಎಲ್ಲ ರೈಲುಗಳ ಸಂಚಾರ ಆರಂಭಿಸಲಾಗಿದ್ದು, ಒತ್ತಡ ಹೆಚ್ಚಾಗಿರುವುದರಿಂದ ಈಗ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಕಾರ್ಯಾಚರಣೆ ಸ್ಥಳಾಂತರಿಸಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ಸ್ಪಷ್ಟಪಡಿಸಿದರು.

‘ಈ ಟರ್ಮಿನಲ್‌ನಲ್ಲೇ ರೈಲುಗಳ ತಪಾಸಣೆ ಮತ್ತು ನಿರ್ವಹಣೆ ಘಟಕವಿದೆ. ಅದು 11 ತಿಂಗಳಿಂದ ಕಾರ್ಯಾಚರಣೆಯಲ್ಲಿದೆ. ನಿಲ್ದಾಣಕ್ಕೆ ಪ್ರಯಾಣಿಕರು ಬರಲು ರಸ್ತೆ ವ್ಯವಸ್ಥೆ ಸಮರ್ಪಕವಾಗಿ ಇರಲಿಲ್ಲ. ಅವೆಲ್ಲವೂ ಈಗ ಪೂರ್ಣಗೊಂಡಿದೆ. ಹಂತ– ಹಂತವಾಗಿ ರೈಲುಗಳ ಕಾರ್ಯಾಚರಣೆ ಈ ನಿಲ್ದಾಣದಿಂದ ಆರಂಭವಾಗಲಿದೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು