ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ ಕಾಯಿನ್ ಅಕ್ರಮ: 450 ಪ್ರಕರಣಗಳಿಗೆ ‘ಸೈಬರ್ ತಜ್ಞ’ ಸಾಕ್ಷಿ

* ಗೌರಿ ಲಂಕೇಶ್, ರುದ್ರೇಶ್ ಹತ್ಯೆ ತನಿಖೆಗೂ ಸಹಕಾರ * ಎನ್‌ಐಎ, ಹೊರ ರಾಜ್ಯಗಳ ಪೊಲೀಸರಿಗೆ ನೆರವು
Published 2 ಫೆಬ್ರುವರಿ 2024, 0:30 IST
Last Updated 2 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್ ಕಾಯಿನ್ ಅಕ್ರಮ ಪ್ರಕರಣದ ಆರೋಪಿ ಸೈಬರ್ ತಜ್ಞ ಕೆ.ಎಸ್. ಸಂತೋಷ್‌ಕುಮಾರ್, ಕರ್ನಾಟಕ ಹಾಗೂ ಹೊರ ರಾಜ್ಯಗಳ 450ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಸಾಕ್ಷಿದಾರರಾಗಿರುವ ಅಂಶ ಪತ್ತೆಯಾಗಿದೆ. ಸಂತೋಷ್ ಬಂಧನ ಇತರೆ ಪ್ರಕರಣಗಳ ನ್ಯಾಯಾಲಯ ವಿಚಾರಣೆ ಮೇಲೆ ಪರಿಣಾಮ ಬೀರಬಹುದೆಂದು ತನಿಖಾಧಿಕಾರಿಗಳಿಗೆ ಚಿಂತೆ ಶುರುವಾಗಿದೆ. 

ತಂತ್ರಜ್ಞಾನ ಹಾಗೂ ಸೈಬರ್ ಕ್ಷೇತ್ರದ ಪರಿಣತ ಸಂತೋಷ್‌ ಕುಮಾರ್, ಗ್ರೂಪ್ ಸೈಬರ್ ಐಡಿ (ಜಿಸಿಐಡಿ) ಟೆಕ್ನಾಲಜಿ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ಸಿಇಒ ಆಗಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪನಿ, ಹಲವು ದೇಶಗಳಲ್ಲಿ ತಂತ್ರಜ್ಞಾನ–ಸೈಬರ್ ಸುರಕ್ಷತೆ ಸಂಬಂಧಿತ ಸೇವೆ ಒದಗಿಸುತ್ತಿದೆ.

‘ಸೈಬರ್ ಅಪರಾಧ ಹೆಚ್ಚಾಗುತ್ತಿದ್ದಂತೆ, ಅವುಗಳನ್ನು ಭೇದಿಸಲು ಪೊಲೀಸರಿಗೆ ತಜ್ಞರ ಅವಶ್ಯಕತೆ ಇತ್ತು. ಸಂತೋಷ್‌ ಕುಮಾರ್‌ನನ್ನು  ಸಂಪರ್ಕಿಸಿದ್ದ ಕೆಲ ಪೊಲೀಸ್ ಅಧಿಕಾರಿಗಳು, ತನಿಖೆಗೆ ಸಹಕಾರ ಪಡೆದಿದ್ದರು. ಇದಾದ ನಂತರ, ಕರ್ನಾಟಕ ಹಾಗೂ ಹೊರ ರಾಜ್ಯಗಳ ಪೊಲೀಸರೆಲ್ಲರಿಗೂ ಸಂತೋಷ್ ಆಪ್ತನಾದ’ ಎಂದು ಮೂಲಗಳು ಹೇಳಿವೆ.

‘‍ಪ್ರಕರಣಗಳ ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಿ, ವೈಜ್ಞಾನಿಕ ವರದಿ ನೀಡುವ ಮೂಲಕ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವ ಜವಾಬ್ದಾರಿಯನ್ನು ಸಂತೋಷ್‌ಕುಮಾರ್ ವಹಿಸಿಕೊಂಡಿದ್ದ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು, ಸಂತೋಷ್ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಕರ್ನಾಟಕದ ಸಿಐಡಿ, ಸಿಸಿಬಿ ಹಾಗೂ ಇತರೆ ಪೊಲೀಸರೂ ಸಂತೋಷ್‌ ಸಹಾಯ ಪಡೆಯುತ್ತಿದ್ದರು’ ಎಂದು ತಿಳಿಸಿವೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಾಕ್ಷಿ: ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಉಗ್ರರ ಸೆರೆ, ಬಾಂಗ್ಲಾ ನುಸುಳುಕೋರರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಹತ್ಯೆ, ಡ್ರಗ್ಸ್ ದಂಧೆ, ಸೈಬರ್ ವಂಚನೆಗಳು ಸೇರಿದಂತೆ ದೇಶದ 450ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಂತೋಷ್‌ ಸಾಕ್ಷಿಯಾಗಿದ್ದಾರೆ. ಹಲವು ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ’ ಎಂದು ಮೂಲಗಳು ಹೇಳಿವೆ.

‘ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಜಾರಿ ನಿರ್ದೇಶನಾಲಯ (ಇಡಿ), ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ), ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಸಂತೋಷ್ ನೆರವು ಪಡೆದಿದ್ದಾರೆ. ತಮಿಳುನಾಡು, ಕೇರಳ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಇತರೆ ರಾಜ್ಯಗಳ ಪ್ರಕರಣದಲ್ಲೂ ಸಂತೋಷ್ ಸಾಕ್ಷಿಯಾಗಿದ್ದಾರೆ. ಸಂತೋಷ್ ಬಂಧನವಾಗುತ್ತಿದ್ದಂತೆ, ಹಲವು ಪ್ರಕರಣಗಳ ತನಿಖಾಧಿಕಾರಿಗಳಿಗೆ ಚಿಂತೆ ಕಾಡುತ್ತಿದೆ. ಸಂತೋಷ್‌ ಹೇಳಿಕೆಯನ್ನು ನಮ್ಮ ಪ್ರಕರಣದಲ್ಲಿ ನ್ಯಾಯಾಲಯ ಮಾನ್ಯ ಮಾಡುವುದೇ? ಎಂಬ ಬಗ್ಗೆ ಹಲವು ಅಧಿಕಾರಿಗಳು ಕಾನೂನು ತಜ್ಞರ ಜೊತೆ ಚರ್ಚಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿ ಮೇಲೆ ಅನುಮಾನ: ಸಂತೋಷ್‌ ಕುಮಾರ್ ಹಾಗೂ ಇನ್‌ಸ್ಪೆಕ್ಟರ್ ಪ್ರಶಾಂತ್‌ಬಾಬು ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಎಸ್‌ಐಟಿ ಅಧಿಕಾರಿಗಳ ಲೋಪಗಳನ್ನು ಆರೋಪಿಗಳ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

‘2023ರ ಜೂನ್ 30ರಂದು ಎಡಿಜಿಪಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿರುವ ಸರ್ಕಾರ, ಬಿಟ್ ಕಾಯಿನ್ ಸಂಬಂಧಿತ ಪ್ರಕರಣದ ತನಿಖೆಗೆ ಸೂಚಿಸಿದೆ. ಇದೇ ತಂಡ, ಕಾಟನ್‌ಪೇಟೆ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಿಸಿತ್ತು. ಆದರೆ, ಆರೋಪಿಗಳ ಹೆಸರನ್ನು ನಮೂದಿಸಿರಲಿಲ್ಲ. ಆರೋಪಿಗಳ ಹೆಸರು ಹೇಳಲು ಭಯವಿತ್ತಾ ? ಅಥವಾ ಯಾವುದಾದರೂ ಒತ್ತಡವಿತ್ತಾ ? ಯಾರದ್ದೂ ಕೈ ಗೊಂಬೆಯಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ? ಎಸ್‌ಐಟಿ ತನಿಖೆ ಮೇಲೆ ಅನುಮಾನ ಮೂಡುತ್ತಿದೆ’ ಎಂದು ವಕೀಲ ಸುಧನ್ವ ಡಿ.ಎಸ್ ವಾದಿಸಿದ್ದರು.

‘ಶ್ರೀಕಿಯು ನ್ಯಾಯಾಲಯದಲ್ಲಿ ಇದುವರೆಗೂ ಯಾವುದೇ ಹೇಳಿಕೆ ದಾಖಲಿಸಿಲ್ಲ. ಸಮಯ ಹಾಳು ಮಾಡುತ್ತಿರುವ ಎಸ್‌ಐಟಿ ಅಧಿಕಾರಿಗಳು, ಪ್ರಕರಣದ ಸತ್ಯಾಂಶವೇನು ಎಂಬುದನ್ನು ಪತ್ತೆ ಮಾಡುತ್ತಿಲ್ಲ. ಯಾರದ್ದೂ ಒತ್ತಡದಿಂದ ಕೆಲಸ ಮಾಡುತ್ತಿರುವ ಅನುಮಾನವಿದೆ’ ಎಂದು ಅವರು ದೂರಿದ್ದರು. ಇದರ ನಡುವೆಯೇ ಎಸ್‌ಐಟಿ ಅಧಿಕಾರಿಗಳು, ಆರೋಪಿಗಳನ್ನು ಮತ್ತಷ್ಟು ದಿನ ಕಸ್ಟಡಿಗೆ ಕೋರಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

‘ಬಿಟ್‌ ಕಾಯಿನ್: ದೂರುದಾರರಿಗೆ ₹7 ಲಕ್ಷ ವಂಚನೆ’

‘ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸಂತೋಷ್ ಪ್ರಕರಣವೊಂದರಲ್ಲಿ ಆರೋಪಿಗಳಿಂದ ಬಿಟ್‌ ಕಾಯಿನ್‌ಗಳನ್ನು ಜಪ್ತಿ ಮಾಡಿ ವಾಪಸು ಕೊಡಿಸುವುದಾಗಿ ಹೇಳಿ ದೂರುದಾರರೊಬ್ಬರಿಂದ ₹7 ಲಕ್ಷ ಪಡೆದುಕೊಂಡಿದ್ದರು. ಆದರೆ ದೂರುದಾರರಿಗೆ ಯಾವುದೇ ಬಿಟ್ ಕಾಯಿನ್‌ ವರ್ಗಾವಣೆ ಮಾಡಿರಲಿಲ್ಲ. ಈ ಬಗ್ಗೆ ಇಬ್ಬರನ್ನೂ ಮತ್ತಷ್ಟು ವಿಚಾರಣೆ ನಡೆಸಬೇಕಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT