ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಬೆಂಗಳೂರು ಉತ್ತರ–ದಕ್ಷಿಣಕ್ಕೆ ‘ಬಿ’ ಗ್ರೇಡ್

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ಕಳಪೆ ಪ್ರದರ್ಶನ ಮುಂದುವರಿಕೆ
Last Updated 10 ಆಗಸ್ಟ್ 2020, 22:24 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಐವರು 624 ಅಂಕಗಳನ್ನು ಗಳಿಸಿದ್ದಾರೆ. ಆದರೆ, ಒಟ್ಟಾರೆ ಫಲಿತಾಂಶದಲ್ಲಿ ಈ ಜಿಲ್ಲೆಗಳು ‘ಬಿ’ ದರ್ಜೆಗೆ ತೃಪ್ತಿಪಟ್ಟುಕೊಂಡಿವೆ.

ಫಲಿತಾಂಶದಲ್ಲಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ಕಳಪೆ ಪ್ರದರ್ಶನ ಮುಂದುವರಿದಿದೆ.

2017-18ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 22ನೇ ಸ್ಥಾನದಲ್ಲಿದ್ದ ಬೆಂಗಳೂರು ಉತ್ತರ ಜಿಲ್ಲೆಯು 2018-19ನೇ ಸಾಲಿನಲ್ಲಿ ಶೇ 76.21ರಷ್ಟು ಫಲಿತಾಂಶ ಪಡೆಯುವ ಮೂಲಕ 26ನೇ ಸ್ಥಾನಕ್ಕೆ ಕುಸಿದಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆಯು ಶೇ 68.83ರಷ್ಟು ಫಲಿತಾಂಶ ಪಡೆಯುವ ಮೂಲಕ 27ನೇ ಸ್ಥಾನದಿಂದ 32ನೇ ಸ್ಥಾನಕ್ಕೆ ಜಾರಿತ್ತು.ಈ ಬಾರಿ ಶೈಕ್ಷಣಿಕ ಜಿಲ್ಲೆಗಳಿಗೆ ರ‍್ಯಾಂಕ್‌ ಬದಲು `ಗ್ರೇಡ್' ನೀಡಲಾಗಿದ್ದು, ಈ ಎರಡೂ ಶೈಕ್ಷಣಿಕ ಜಿಲ್ಲೆಗಳು ಶೇ 60ರಿಂದ 85ರಷ್ಟು ಫಲಿತಾಂಶ ಪಡೆದಿವೆ.

ಕಳೆದ ಬಾರಿ ಶೇ 88.34ರಷ್ಟು ಫಲಿತಾಂಶ ಪಡೆದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಬಾರಿಯೂ `ಎ' ಗ್ರೇಡ್ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದೆ.

3 ಶಾಲೆಗಳಲ್ಲಿ ಶೂನ್ಯ ಫಲಿತಾಂಶ: ಬೆಂಗಳೂರು ನಗರದ ಮೂರು ಶಾಲೆಗಳು ಶೂನ್ಯ ಸಾಧನೆ ಮಾಡಿವೆ. ಬೆಂಗಳೂರು ಉತ್ತರ ಜಿಲ್ಲೆ ವ್ಯಾಪ್ತಿಯ ಶ್ರೀರಾಮಪುರ ಪಿಐಟಿ ಕಾಲೊನಿಯಲ್ಲಿರುವ ಬಿಬಿಎಂಪಿ ಶಾಲೆಯಲ್ಲಿ 5 ಮಂದಿ ಪರೀಕ್ಷೆ ಬರೆದಿದ್ದರು. ಈ ಐವರು ಸಹ ಅನುತ್ತೀರ್ಣಗೊಂಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ನಂಜಪ್ಪ ಬ್ಲಾಕ್‍ನಲ್ಲಿರುವ ಬಿಬಿಎಂಪಿ ಶಾಲೆಯಲ್ಲಿ ಪರೀಕ್ಷೆ
ಬರೆದಿದ್ದ ಏಕೈಕ ವಿದ್ಯಾರ್ಥಿ ಸಹ ಫೇಲಾಗಿದ್ದಾನೆ. ಕಲಾಸಿಪಾಳ್ಯದ ಎಸ್.ಎಲ್.ಎನ್. ಶಾಲೆಯಲ್ಲಿ ಎಲ್ಲ 26 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ.

‘ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ಯಾಗಿದೆ. ಶೂನ್ಯ ಫಲಿತಾಂಶ ಪಡೆದಿರುವ ಶಾಲೆಗಳು ಸೇರಿದಂತೆ ಫಲಿತಾಂಶ ಕುಸಿತಗೊಂಡಿರುವ ಶಾಲೆಗಳ ಬಗ್ಗೆ ಪರಿಶೀಲನೆ ನಡೆಸಿ, ಮುಂದಿನ ಬಾರಿಗೆ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಡಿಪಿಐ ರಾಜೇಂದ್ರ ಹೇಳಿದರು.

ಮನೆಗೆಲಸದ ತಾಯಿಯ ಮಗ ಜಿಲ್ಲೆಗೆ ಪ್ರಥಮ
ಬೆಂಗಳೂರು:
ಲಾಕ್‌ಡೌನ್‌ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ ಬಿ. ಮಹೇಶ್‌, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪೈಕಿ, ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ (616 ಅಂಕ) ಪಡೆದಿದ್ದಾನೆ.

ಜೀವನ್‌ಬಿಮಾ ನಗರದಲ್ಲಿನ ಕರ್ನಾಟಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿ ಮಹೇಶ್ ತಾಯಿ ಮನೆಗೆಲಸ ಮಾಡುತ್ತಾರೆ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿರುವ ಈ ವಿದ್ಯಾರ್ಥಿ , ಓದುವುದರಲ್ಲಿ ರಾಜಿಯಾಗಿಲ್ಲ.

‘ಲಾಕ್‌ಡೌನ್‌ ಸಂದರ್ಭದಲ್ಲಿ ನನ್ನ ತಾಯಿ ಕೆಲಸ ಕಳೆದುಕೊಂಡರು. ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟಿದ್ದೆ. ಈಗ ಉತ್ತಮ ಅಂಕಗಳು ಬಂದಿರುವುದು ಸಂತಸ ತಂದಿದೆ. ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳಬೇಕೆಂದಿದ್ದೇನೆ. ಶಿಕ್ಷಕನಾಗುವ ಹಂಬಲವಿದೆ’ ಎಂದು ಹೇಳುತ್ತಾನೆ ಮಹೇಶ್.

ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿಗೆ 452 ಅಂಕ
ಸಂಕಷ್ಟದಲ್ಲಿಯೇ ಬಾಲ್ಯ ಕಳೆದಿದ್ದ ಪಲ್ಲವಿ ಓದುವುದನ್ನೇ ಬಿಟ್ಟಿದ್ದ ವಿದ್ಯಾರ್ಥಿನಿ. ಈ ಬಾರಿಯ ಪರೀಕ್ಷೆಯಲ್ಲಿ 452 ಅಂಕಗಳನ್ನು ಗಳಿಸಿದ್ದಾಳೆ.

ಮದ್ಯವ್ಯಸನಿ ತಂದೆಯು ತಾಯಿಯನ್ನು ಕೊಂದು ಜೈಲಿಗೆ ಹೋದಾಗ ಪಲ್ಲವಿಯ ನೆರವಿಗೆ ನಿಂತಿದ್ದು ‘ಸ್ಪರ್ಶ ಟ್ರಸ್ಟ್‌’ ಎಂಬ ಸರ್ಕಾರೇತರ ಸಂಸ್ಥೆ. ಈ ಸಂಸ್ಥೆಯು ಪಲ್ಲವಿಯನ್ನು ಮತ್ತೆ ಓದುವುದಕ್ಕೆ ವ್ಯವಸ್ಥೆ ಮಾಡಿತ್ತು.

‘ಬಾಲ್ಯದ ದಿನಗಳು ಯಾವಾಗಲೂ ನನ್ನನ್ನು ಕಾಡುತ್ತವೆ. ಆದರೆ, ಓದುವುದರತ್ತ ನಾನು ಗಮನ ನೀಡಿದೆ. ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡು ಐಎಎಸ್‌ ಅಧಿಕಾರಿಯಾಗಬೇಕು ಎಂಬ ಗುರಿ ಹೊಂದಿದ್ದೇನೆ’ ಎಂದು ಹೇಳುತ್ತಾಳೆ ಪಲ್ಲವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT