ಬೆಂಗಳೂರು: ‘ವೈದ್ಯಕೀಯ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು, ಗ್ರಾಮೀಣ ಭಾಗಕ್ಕೂ ವೈದ್ಯಕೀಯ ಮೂಲಸೌಲಭ್ಯ ಒದಗಿಸಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ನಗರದಲ್ಲಿ ಶನಿವಾರ ಹಮ್ಮಿಕೊಂಡ ವಜ್ರ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಲಭ್ಯವಾಗಬೇಕು. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಯ ಲಾಭ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ನಿಟ್ಟಿನಲ್ಲಿ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಉತ್ತಮವಾದ ಕಾರ್ಯ ಮಾಡುತ್ತಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಕೌಶಲಯುಕ್ತ ವೈದ್ಯರನ್ನು ನೀಡುತ್ತಿದೆ’ ಎಂದು ಅಭಿಪ್ರಾಯಪಟ್ಟರು.
ಇಂಧನ ಸಚಿವ ಕೆ.ಜೆ. ಜಾರ್ಜ್, ‘ಕೋವಿಡ್ ಕಾಣಿಸಿಕೊಂಡ ಸಂದರ್ಭದಲ್ಲಿ ರೋಗ ನಿರ್ವಹಣೆಗೆ ಖಾಸಗಿ ವೈದ್ಯಕೀಯ ಸಂಸ್ಥೆಗಳೂ ಕೊಡುಗೆ ನೀಡುವೆ. ಅವುಗಳಲ್ಲಿ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ರೋಗಿಗಳ ಚಿಕಿತ್ಸೆಗೆ ತೆಗೆದುಕೊಂಡ ಕ್ರಮ ಶ್ಲಾಘನೀಯ’ ಎಂದರು.
ಭಾರತೀಯ ಕ್ಯಾಥೋಲಿಕ್ ಬಿಷಪ್‌ಗಳ ಮಹಾಸಂಸ್ಥೆಯ (ಸಿಬಿಸಿಐ) ಅಧ್ಯಕ್ಷ ಆಂಡ್ರ್ಯೂಸ್ ಥಾಜತ್, ‘ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ವ್ಯವಸ್ಥೆ ಸುಧಾರಣೆಗೆ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ತನ್ನದೆ ಕೊಡುಗೆ ನೀಡುತ್ತಿದೆ. ಎಲ್ಲ ವೈದ್ಯಕೀಯ ಕಾಲೇಜುಗಳೂ ಗ್ರಾಮೀಣ ಭಾಗಗಳಿಗೆ ವೈದ್ಯಕೀಯ ಸೇವೆ ನೀಡಬೇಕು’ ಎಂದು ಹೇಳಿದರು.
ಅಂಚೆ ಇಲಾಖೆಯ ಕರ್ನಾಟಕ ಶಾಖೆಯ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಅವರು ಸೇಂಟ್ ಜಾನ್ಸ್ ಚಿಹ್ನೆ ಹೊಂದಿರುವ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ಸಿಲಿಯಾ ಅವರಿಗೆ ‘ಮೇರಿ ಗ್ಲೋವರಿ–2023’ ಪ್ರಶಸ್ತಿ ನೀಡಲಾಯಿತು.
ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಮೊದಲ ಮೂರು ಬ್ಯಾಚ್‌ಗಳ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.