ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರ ಪತ್ರಿಕೆ’ ಸಮೇತ ಪರೀಕ್ಷಾರ್ಥಿ ಪರಾರಿ!

Last Updated 16 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯೊಬ್ಬ ಮೇಲ್ವಿಚಾರಕರ ಕಣ್ಣುತಪ್ಪಿಸಿ ‘ಉತ್ತರ ಪತ್ರಿಕೆ’ ಸಹಿತ ಪರೀಕ್ಷಾ ಕೊಠಡಿಯಿಂದ ಪರಾರಿಯಾದ ಪ್ರಸಂಗ ನಡೆದಿದೆ!

ಯಡಿಯೂರು ನಿವಾಸಿಯಾಗಿರುವ 22 ವರ್ಷದ ಪರೀಕ್ಷಾರ್ಥಿ ಉತ್ತರ ಪತ್ರಿಕೆ ಸಮೇತ ಪರಾರಿಯಾದವನು. ಈ ಕುರಿತು ಬಿಇಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ. ಶಿವಲಿಂಗಯ್ಯ ಅವರು ನೀಡಿರುವ ದೂರಿನ ಮೇರೆಗೆ ವಿದ್ಯಾರ್ಥಿ ವಿರುದ್ಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿರುವ, ಜಯನಗರ ನಾಲ್ಕನೇ ಹಂತದಲ್ಲಿರುವ ಬಿಇಎಸ್ ಕಾಲೇಜಿನಲ್ಲಿ ಪದವಿ ಪರೀಕ್ಷೆಗಳು ನಡೆಯುತ್ತಿವೆ. ಇದೇ 14ರಂದು ಬಿ.ಕಾಂ ಪರೀಕ್ಷೆ ನಡೆಯುತ್ತಿತ್ತು. ಅದೇ ಕಾಲೇಜಿನಲ್ಲಿ 2014ನೇ ಸಾಲಿನಲ್ಲಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡಿದ್ದ ಆರೋಪಿ, ಮತ್ತೆ ಪರೀಕ್ಷೆ ಬರೆಯಲು ಬಂದು ಈ ಕೃತ್ಯ ಎಸಗಿದ್ದಾನೆ.

‘ಅಂದು ಮಧ್ಯಾಹ್ನ ಎರಡು ಗಂಟೆಗೆ ಕಾಲೇಜಿನ ಕೊಠಡಿ ಸಂಖ್ಯೆ 302ರಲ್ಲಿ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷೆ ಬರೆಯುವ ಅವಧಿ ಮುಗಿಯಲು ಇನ್ನೇನು 10 ನಿಮಿಷ ಮೊದಲು ಮೇಲ್ವಿಚಾರಕರು ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ವಾಪಸು ಸಂಗ್ರಹಿಸುತ್ತಿದ್ದರು. ಈ ವೇಳೆ ವಿದ್ಯಾರ್ಥಿ, ತಾನು ಪರೀಕ್ಷೆ ಬರೆದ ಉತ್ತರ ಪತ್ರಿಕೆಯನ್ನು ನಕಲು ಮಾಡುವ ದುರುದ್ದೇಶದಿಂದ ತೆಗೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಪರೀಕ್ಷಾ ಮೇಲ್ವಿಚಾರಕರು ನನಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಮೊಬೈಲ್‌ಗೆ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಪರೀಕ್ಷೆ ಬರೆದು ಉತ್ತರ ಪತ್ರಿಕೆಯನ್ನು ನಕಲು ಮಾಡುವ ಉದ್ದೇಶದಿಂದ ಉತ್ತರ ಪತ್ರಿಕೆ ಕದ್ದೊಯ್ದಿರುವ ವಿದ್ಯಾರ್ಥಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ.

‘ಮತ್ತೆ ಅನುತ್ತೀರ್ಣಗೊಳ್ಳಬಹುದೆಂದು ಪರೀಕ್ಷೆಯ ಉತ್ತರ ಪತ್ರಿಕೆ ತೆಗೆದುಕೊಂಡು ಹೋದೆ. ಇದರಲ್ಲಿ ತಪ್ಪೇನಿದೆ’ ಎಂದು ವಿಚಾರಣೆ ನಡೆಸಿದ ಪೊಲೀಸರನ್ನೇ ವಿದ್ಯಾರ್ಥಿ ಪ್ರಶ್ನಿಸಿದ್ದಾನೆ. ‘ಪರೀಕ್ಷಾ ಕೊಠಡಿಯಿಂದ ಉತ್ತರ ಪತ್ರಿಕೆ ತೆಗೆದುಕೊಂಡು ಹೋಗಿರುವುದು ಅಪರಾಧ. ವಿದ್ಯಾರ್ಥಿಯನ್ನು ಬಂಧಿಸಿ, ಮನೆಯಲ್ಲಿದ್ದ ಉತ್ತರ ಪತ್ರಿಕೆ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT