ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಪ್ರಣಾಳಿಕೆಗೆ ಒಪ್ಪಿಗೆ ನೀಡುವ ಪಕ್ಷಕ್ಕೆ ಬೆಂಬಲ’

ವಿಧಾನಸಭೆ ಚುನಾವಣೆ: ರಾಜಕೀಯ ಪಕ್ಷಗಳ ಮುಖಂಡರ ಜೊತೆ ರೈತ ಸಂಘ ಚರ್ಚೆ
Last Updated 29 ಮಾರ್ಚ್ 2023, 20:31 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರ ಚುನಾವಣಾ ಪ್ರಣಾಳಿಕೆಗೆ ಒಪ್ಪಿಗೆ ನೀಡುವ ಪಕ್ಷಕ್ಕೆ ಬೆಂಬಲ ನೀಡಲಾಗುವುದು. ನಮಗೆ ಯಾವ ಪಕ್ಷವೂ ಶತ್ರುವಲ್ಲ, ಆತ್ಮೀಯವೂ ಅಲ್ಲ’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದಲ್ಲಿ ಬುಧವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಪ್ರೆಸ್‌ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜಕೀಯ ಪಕ್ಷಗಳ ಮುಖಂಡರ ಜತೆಗಿನ ಮುಖಾಮುಖಿ ಚರ್ಚೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಇದುವರೆಗೆ 21 ಸರ್ಕಾರಗಳು ಆಡಳಿತ ನಡೆಸಿವೆ. ಆದರೆ, ರೈತರ ಸ್ಥಿತಿ ಬದಲಾಗಿಲ್ಲ. ದಿನದಿಂದ ದಿನಕ್ಕೆ ಶೋಚನೀಯವಾಗುತ್ತ ಸಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸುತ್ತಿಲ್ಲ’ ಎಂದು ಕಿಡಿಕಾರಿದರು.

’1960ರ ಸಂದರ್ಭದಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡುವ ಸ್ಥಿತಿ ಇತ್ತು. ಈಗ ವಿದೇಶಕ್ಕೆ ಆಹಾರ ಪದಾರ್ಥ ರಫ್ತು ಮಾಡಲಾಗುತ್ತಿದೆ. ಈ ಸಾಧನೆಗೆ ರೈತರ ಶ್ರಮವೇ ಕಾರಣ. ದೇಶದ ಜನರನ್ನು ಹೊಟ್ಟೆ ಹಸಿವಿನ ಸಂಕಷ್ಟದಿಂದ ಪಾರು ಮಾಡಿದ್ದು ರೈತರೇ ಹೊರತು ಐಟಿ ಕಂಪನಿಗಳಲ್ಲ. ಆದರೆ, ರೈತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ನಿರ್ಲಕ್ಷ್ಯ ತಾಳಿವೆ’ ಎಂದು ಆರೋಪಿಸಿದರು.

ರೈತ ಮುಖಂಡ ತೇಜಸ್ವಿ ವಿ ಪಟೇಲ್, ‘ರೈತರ ಬದುಕು ಹಸನು ಮಾಡುವ ಯೋಜನೆಗಳನ್ನು ರಾಜಕೀಯ ಪಕ್ಷಗಳು ಹೊಂದಿಲ್ಲ. ಬೆಳೆ ವಿಮೆಯಲ್ಲೂ ರೈತರಿಗೆ ಅನ್ಯಾಯವಾಗುತ್ತದೆ. ಚುನಾವಣೆಯಲ್ಲಿ ಈ ಬಾರಿ ಅತಿ ಕಡಿಮೆ ಖರ್ಚು ಮಾಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಸದಸ್ಯ ಪ್ರೊ.ಕೆ.ಇ. ರಾಧಾಕೃಷ್ಣ ಮಾತನಾಡಿ, ‘ರೈತರ ಕಲ್ಯಾಣಕ್ಕಾಗಿ ಕಾಲಮಿತಿ ಕ್ರಮಗಳನ್ನು ಪಕ್ಷವು ಕೈಗೊಳ್ಳಲಿದೆ. ಪ್ರಣಾಳಿಕೆಯಲ್ಲಿ ಯೋಜನೆಗಳನ್ನು ಪ್ರಕಟಿಸುವ ಜತೆಗೆ, ಬಜೆಟ್‌ನಲ್ಲಿ ಎಷ್ಟು ಹಣ ನಿಗದಿಪಡಿಸಲಾಗುವುದು ಎನ್ನುವುದನ್ನು ಸಹ ತಿಳಿಸಲಾಗುವುದು’ ಎಂದು ತಿಳಿಸಿದರು.

‘ವಿವಿಧ ಯೋಜನೆಗಳಲ್ಲಿ ಜಮೀನು ನೀಡುವ ರೈತರನ್ನು ಸಹ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗುವುದು. ಅಣೆಕಟ್ಟುಗಳ ಹೂಳೆತ್ತಲು ಆದ್ಯತೆ ರೂಪಿಸಲಾಗುವುದು. ಸಕ್ಕರೆ ಕಾರ್ಖಾನೆಗಳ ಮಾಲೀಕರು ಮಾತ್ರವಲ್ಲ ಶಿಕ್ಷಣ ಸಂಸ್ಥೆಗಳ ಮಾಲೀಕರು ಸಚಿವರಾದಾಗ ಹಿತಾಸಕ್ತಿ ಸಂಘರ್ಷ ನಡೆಯುತ್ತದೆ. ಆದರೆ, ಇದನ್ನು ತಡೆಯುವ ದಾರಿ ಇಲ್ಲ’ ಎಂದರು.

ಜೆಡಿಎಸ್ ಪ್ರತಿನಿಧಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ‘ರೈತರನ್ನು ಎಲ್ಲ ಸಂಕಷ್ಟಗಳಿಂದ ಪಾರು ಮಾಡುವ ಯೋಜನೆಗಳನ್ನು ಜೆಡಿಎಸ್‌ ಹೊಂದಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ದಿನದ 24 ಗಂಟೆಯೂ ರೈತರಿಗೆ ಉಚಿತ ವಿದ್ಯುತ್ ನೀಡಲಿದೆ. ಗ್ರಾಮೀಣ ರೈತ ಯುವಕರನ್ನು ಮದುವೆಯಾಗುವ ಯುವತಿಗೆ ₹2 ಲಕ್ಷ ನೀಡಲಾಗುವುದು’ ಎಂದರು. ಆಮ್‌ ಆದ್ಮಿ ಪಕ್ಷ ಪ್ರತಿನಿಧಿಸಿದ್ದ ಕಾರ್ಯಾಧ್ಯಕ್ಷ ನಾಗಣ್ಣ ಮಾತನಾಡಿ, ‘ಪಕ್ಷವು ಘೋಷಣೆಗಳನ್ನು ಮಾಡುವ ಮುನ್ನ ತಲಸ್ಪರ್ಶಿ ಅಧ್ಯಯನ ಕೈಗೊಳ್ಳುತ್ತದೆ. ರಾಜ್ಯ ಸರ್ಕಾರದ ಮೇಲೆ ₹6 ಲಕ್ಷ ಕೋಟಿ ಸಾಲ ಇದೆ. ಪ್ರತಿ ವರ್ಷ ₹32 ಸಾವಿರ ಕೋಟಿ ಬಡ್ಡಿ ಪಾವತಿಸಲಾಗುತ್ತಿದೆ. ದೆಹಲಿಯಲ್ಲಿನ ಆಪ್‌ ಸರ್ಕಾರ ಒಂದು ಪೈಸೆ ಸಾಲ ಮಾಡದೇ ಯೋಜನೆ ರೂಪಿಸಿದ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲಾಗುವುದು. ರೈತರಿಗೆ ಗೊಬ್ಬರ, ಬಿತ್ತನೆ ಬೀಜ, ವಿದ್ಯುತ್ ಉಚಿತವಾಗಿ ನೀಡಬೇಕು. ಇದಕ್ಕೆ ₹21 ಸಾವಿರ ಕೋಟಿ ಸಾಕು’ ಎಂದರು.

ಬಿಜೆಪಿಯಿಂದ ಯಾರೂ ಪಾಲ್ಗೊಂಡಿರಲಿಲ್ಲ. ಪತ್ರಕರ್ತ ಶ್ರೀಶ, ರೈತ ಮುಖಂಡರಾದ ನಾರಾಯಣ ರೆಡ್ಡಿ, ವೀರನಗೌಡ ಪಾಟೀಲ್, ಯತಿರಾಜ್ ನಾಯ್ಡು, ಉಳುವಪ್ಪ ಬಳಗೇರ್, ಸುರೇಶ್ ಪಾಟೀಲ್, ರಮೇಶ್ ಉಗಾರ್, ಲಕ್ಷ್ಮಿದೇವಿ ಇದ್ದರು.

ರೈತರ ಪ್ರಣಾಳಿಕೆಗಳು

l 60 ವರ್ಷ ತುಂಬಿದ ರೈತರಿಗೆ ₹5 ಸಾವಿರ ಪಿಂಚಣಿ ಸೌಲಭ್ಯ ಕಲ್ಪಿಸಬೇಕು.

l ಹಗಲು ವೇಳೆ ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡಬೇಕು.

l ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಸಾಲ ನೀತಿ ಬದಲಾಗಬೇಕು.

l ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಡ್ಡಿ ರಹಿತ ಕೃಷಿ ಸಾಲ ನೀಡಬೇಕು.

l ಕೃಷಿ ಸಾಲಕ್ಕೆ ‘ಸಿಬಿಲ್ ಸ್ಕೋರ್‌’ ಪರಿಗಣನೆ ಕೈ ಬಿಡಬೇಕು.

l ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾಯ್ದೆ ರೂಪಿಸಬೇಕು.

l ಫಸಲ್ ಭೀಮಾ ಬೆಳೆ ವಿಮೆ ಯೋಜನೆಯನ್ನು ತಿದ್ದುಪಡಿ ಮಾಡಬೇಕು.

lಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಜಮೀನಿನಲ್ಲಿನ ದರ ಎಂದು ನಿಗದಿ
ಪಡಿಸಬೇಕು

l ಕಬ್ಬಿನ ಅಲೆಮನೆಗಳಲ್ಲಿ ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಅವಕಾಶ ನೀಡಬೇಕು.

l ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು.

lಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವ ಭರವಸೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT