ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ವಿದ್ಯಾರ್ಥಿಗಳ ನಿರ್ಲಕ್ಷ್ಯ: ಸುರೇಶ್‌ಕುಮಾರ್

Published 17 ಮೇ 2024, 16:47 IST
Last Updated 17 ಮೇ 2024, 16:47 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ತಿಲಾಂಜಲಿ ಕೊಟ್ಟು, ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳಿರುವುದು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿರುವುದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್‌ ಹೇಳಿದರು.

ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುವುದಾಗಿ ತಿಳಿಸಿದ ಸರ್ಕಾರ ಇವತ್ತಿನವರೆಗೂ ಯಾವುದೇ ಪ್ರಗತಿ ಮಾಡದೇ ಇರುವುದೇ ಒಂದು ದೊಡ್ಡ ಸಾಧನೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಈ ಸರ್ಕಾರ ವಿದ್ಯಾರ್ಥಿಗಳ ಜತೆ ಚೆಲ್ಲಾಟವಾಡುತ್ತಿದೆ. ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನೇ ಮಸುಕು ಮಾಡುತ್ತಿದೆ. ನಮ್ಮಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ಕೇಂದ್ರ ಪಠ್ಯಕ್ರಮದ ಶಾಲೆಗಳು, ಜೊತೆಗೆ ಸ್ವಾಯತ್ತ ವಿಶ್ವವಿದ್ಯಾಲಯಗಳು ಇವೆ. ಆ ವಿದ್ಯಾರ್ಥಿಗಳಿಗೆ ಒಂದು ನೀತಿ, ಸರ್ಕಾರಿ ಶಾಲೆಗೆ ಇನ್ನೊಂದು ನೀತಿ ಅನುಸರಿಸುತ್ತಿದೆ’ ಎಂದು ಟೀಕಿಸಿದರು.

‘ರಾಜ್ಯ ಸರ್ಕಾರದಲ್ಲಿ ಪೂರ್ಣಾವಧಿ ಶಿಕ್ಷಣ ಸಚಿವರು ಇಲ್ಲದಿರುವುದೇ ಎಲ್ಲ ಸಮಸ್ಯೆಗೂ ಕಾರಣ. ಶಿಕ್ಷಣ ಸಚಿವರು ತಮ್ಮ ಕುಟುಂಬದ ಸದಸ್ಯರನ್ನು ರಾಜಕಾರಣಕ್ಕೆ ತರಲು ತಮ್ಮ ಪೂರ್ತಿ ಸಮಯ ಮೀಸಲಿಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಹಾಳಾಗಿದೆ. ಹೀಗಾಗಿ ಪೂರ್ಣ ಪ್ರಮಾಣದ ಸಚಿವರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ಸಿಇಟಿ ಚೆನ್ನಾಗಿದೆ ಎಂದು ಹಿಂದೆ ಹೆಸರು ಪಡೆದಿತ್ತು. ಸಿಇಟಿಯನ್ನು ಹಾಳುಗೆಡವಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ. ಸರ್ವರ್‌ ಡೌನ್‌ ಕಾರಣಕ್ಕೆ ಪ್ರವೇಶ ಪತ್ರ ಪಡೆಯಲು ವಿದ್ಯಾರ್ಥಿಗಳಿಗೆ ಆಗಲಿಲ್ಲ. ಅದೆಷ್ಟೋ ವಿದ್ಯಾರ್ಥಿಗಳು ನನಗೂ ಫೋನ್‌ ಮಾಡಿದ್ದು, ನಾನು ಸಚಿವರ ಗಮನಕ್ಕೆ ತಂದಿದ್ದೆ. ಏನೂ ಪ್ರಯೋಜನ ಆಗಲಿಲ್ಲ. ಪರೀಕ್ಷಾ ಅಕ್ರಮ ತಡೆಯುವ ನೆಪವೊಡ್ಡಿ, ಒಂದು ಜಿಲ್ಲೆಯ ಹುಡುಗ ಇನ್ನೊಂದು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವಂತೆ ಮಾಡಿದರು. ಮಕ್ಕಳ ಕನಸುಗಳಿಗೆ ಕಲ್ಲು ಹಾಕುವ ಕೆಲಸ ಮಾಡಿದ್ದಾರೆ’ ಎಂದು ಸುರೇಶ್‌ ಕುಮಾರ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT