ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ರಿಚರ್ಡ್‌ಗೆ ‘ಸೂರ್ಯಮಿತ್ರ’ ಪ್ರಶಸ್ತಿ ಪ್ರದಾನ

‘ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಿದರೆ ದೇಶದ ಅಭಿವೃದ್ಧಿ ಸಾಧ್ಯ’
Published 27 ಮೇ 2024, 15:33 IST
Last Updated 27 ಮೇ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ಸೆಲ್ಕೊ ಸಂಸ್ಥೆ ಕೊಡಮಾಡುವ ಅಂತರರಾಷ್ಟ್ರೀಯ ‘ಸೂರ್ಯ ಮಿತ್ರ’ ವಾರ್ಷಿಕ ಪ್ರಶಸ್ತಿಯನ್ನು ಅಮೆರಿಕದ ರಿಚರ್ಡ್‌ ಹ್ಯಾನ್ಸೆನ್‌ ಅವರಿಗೆ ಸೋಮವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ರಿಚರ್ಡ್ ಅವರು ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್‌ ಸೌಲಭ್ಯವನ್ನು ಹೆಚ್ಚಿಸಲು ಪ್ರಯತ್ನಿಸಿದ್ದವರು. ಅಲ್ಲದೇ ಆಧುನಿಕ ಫೋಟೊ ವೋಲ್ಟಾಯಿಕ್‌(ಪಿವಿ) ತಂತ್ರಜ್ಞಾನವನ್ನು ಮೈಕ್ರೊ ಫೈನಾನ್ಸ್‌ ಸಂಸ್ಥೆಗಳ ಮೂಲಕ ಬೆಸೆದು ಅದರ ಮಹತ್ವವನ್ನು ಸಾರುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಈ  ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರು ಮಾತನಾಡಿ, ‘ಸೂರ್ಯನ ಶಕ್ತಿಯೇ ಅಗಾಧವಾದ ಸಂಪನ್ಮೂಲ. ಹಿಂದೆ ಸೌರಶಕ್ತಿಯನ್ನು ಬಳಕೆ ಮಾಡಿಕೊಳ್ಳುವುದು ಕಡಿಮೆ ಇತ್ತು. ತಂತ್ರಜ್ಞಾನ ಬೆಳೆದಂತೆ ಸೌರ ಶಕ್ತಿಯ ಬಳಕೆ ಈಗ ಹೆಚ್ಚಾಗುತ್ತಿದೆ. ಸೌರ ಶಕ್ತಿ ಹಾಗೂ ಪವನ ಶಕ್ತಿ ಬಳಕೆ ಹೆಚ್ಚಿದಲ್ಲಿ ಯಾವುದೇ ದೇಶವು ಅಭಿವೃದ್ಧಿ ಆಗಲಿದೆ’ ಎಂದು ಹೇಳಿದರು.

‘ಸೆಲ್ಕೊ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನೂ ಪಾಲುದಾರರು ಎಂದೇ ಪರಿಗಣಿಸಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಮಾತನಾಡಿ, ‘ಗ್ರಾಮೀಣ ಪ್ರದೇಶದ ಬಡತನ ನಿರ್ಮೂಲನೆ ಹಾಗೂ ಬೆಳಕು ನೀಡುವಲ್ಲಿ ಸೆಲ್ಕೊ ಸಂಸ್ಥೆ ಶ್ರಮಿಸುತ್ತಿದೆ. ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ದೇಶವು ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲೂ ನವೀಕರಿಸಬಹುದಾದ ಇಂಧನ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ’ ಎಂದು ಹೇಳಿದರು.

ಸೆಲ್ಕೊ ಇಂಡಿಯಾದ ಸಿಇಒ ಮೋಹನ್‌ ಭಾಸ್ಕರ್‌ ಹೆಗಡೆ ಮಾತನಾಡಿ, ‘ಕಳೆದ 30 ವರ್ಷದಿಂದ ಸೆಲ್ಕೊ ಸಂಸ್ಥೆಯು ಬೆಳಕು ಮೂಡಿಸುವ ಹಾಗೂ ಬದುಕು ರೂಪಿಸುವ ಕೆಲಸ ಮಾಡುತ್ತಿದೆ. ಸೌರ ಶಕ್ತಿ ಕ್ಷೇತ್ರದಲ್ಲಿ ಇತ್ತೀಚಿಗೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಸಂಸ್ಥೆಯು 2012ರಿಂದಲೂ ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ ಸಾಧಕರು ಹಾಗೂ ಗ್ರಾಮೀಣ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಈ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ’ ಎಂದರು.

ಪ್ರಶಸ್ತಿ ಸ್ವೀಕರಿಸಿದ ರಿಚರ್ಡ್‌ ಹ್ಯಾನ್ಸೆನ್‌ ಅವರು ಅಮೆರಿಕ ಸೇರಿ ವಿವಿಧ ರಾಷ್ಟ್ರಗಳ ಗ್ರಾಮೀಣ ಪ್ರದೇಶದಲ್ಲಿ ಸೌರ ವಿದ್ಯುತ್‌ ಸೌಲಭ್ಯ ಹೆಚ್ಚಿಸಿದ ಬಗೆ ಹಾಗೂ ತಂತ್ರಜ್ಞಾನಗಳ ಬೆಳವಣಿಗೆ, ಕೋವಿಡ್‌–19 ಸಂದರ್ಭದಲ್ಲಿ ಆದ ಬಿಕ್ಕಟ್ಟು ಹಾಗೂ 1993ರಲ್ಲಿ ರಿಚರ್ಡ್‌ ಸೋಲುಜ್‌ ಇಂಕ್‌ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಪ್ರದೇಶಕ್ಕೆ ನೆರವಾದ ಬಗೆಯನ್ನು ವಿವರಿಸಿದರು.

ಇದಕ್ಕೂ ಮೊದಲು ಅಸ್ಸಾಂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT