ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ, ದಾಸೋಹದ ಮಹತ್ವ ಸಾರಿದ ಸ್ವಾಮೀಜಿ: ಶಿವರುದ್ರ ಸ್ವಾಮೀಜಿ

ಶಿವಕುಮಾರ ಸ್ವಾಮೀಜಿ 116ನೇ ಜನ್ಮದಿನೋತ್ಸವ, ಗುರುವಂದನಾ ಕಾರ್ಯಕ್ರಮ
Last Updated 2 ಏಪ್ರಿಲ್ 2023, 3:55 IST
ಅಕ್ಷರ ಗಾತ್ರ

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯದಲ್ಲಿ ಶನಿವಾರ ವಿ.ಸೋಮಣ್ಣ ಪ್ರತಿಷ್ಠಾನದಿಂದ ಶಿವಕುಮಾರ ಸ್ವಾಮೀಜಿ ಅವರ 116ನೇ ಜನ್ಮದಿನೋತ್ಸವ, ಗುರುವಂದನಾ ಕಾರ್ಯಕ್ರಮ ನಡೆಯಿತು.

ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬೇಲಿಮಠದ ಶಿವರುದ್ರ ಸ್ವಾಮೀಜಿ ಬಳಿಕ ಮಾತನಾಡಿ, ‘ಸಮಾಜದಲ್ಲಿ ಜ್ಞಾನದ ದೀಪವಾಗಿ, ಎಲ್ಲರ ಬಾಳಿಗೆ ಬೆಳಕಾಗಿ ನಿಂತವರು ಶಿವಕುಮಾರ ಸ್ವಾಮೀಜಿ. ಶ್ರಮ, ಬೆವರ ಹನಿಯಿಂದ ದುಡಿದ ಹಣದಲ್ಲಿ ಸ್ವಾಭಿಮಾನಿಯಾಗಿ ಬದುಕು ಸಾಗಿಸಬೇಕು’ ಎಂದು ಹೇಳಿದರು.

ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್‌.ಕಿರಣ್ ಕುಮಾರ್ ಮಾತನಾಡಿ,‘ಅನ್ನ, ಶಿಕ್ಷಣ, ಆಶ್ರಯವನ್ನು ಸಮಾಜಕ್ಕೆ ನೀಡಿದ ಮಹಾನ್ ಸಂತ ಎಂದರೆ ಶಿವಕುಮಾರ್‌ ಸ್ವಾಮೀಜಿ. ವಿಜ್ಞಾನ, ತಂತ್ರಜ್ಞಾನಗಳ ಫಲವಾಗಿ ವಿಶ್ವ ಅತಿವೇಗವಾಗಿ ಬೆಳೆಯುತ್ತಿದ್ದರೂ, ಮನುಷ್ಯ ನೆಮ್ಮದಿಯ ಜೀವನ ಸಾಗಿಸಲು ಕೆಲವು ಶಕ್ತಿಗಳ ಪ್ರೇರಣೆ ಅಗತ್ಯ’ ಎಂದರು.

ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್.ಮಂಜುನಾಥ್ ಮಾತನಾಡಿ, ‘ಶ್ರೀಗಳು ಮಾಡಿದ ಸಾಧನೆ ವಿಶ್ವಕ್ಕೆ ಮಾದರಿ. ಶಿಕ್ಷಣದ ಮೂಲಕ ಸಂಸ್ಕಾರ, ಮಾನವೀಯತೆ ಮತ್ತು ಜ್ಞಾನದ ಮೂಲಕ ಸಮಾಜದ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಸ್ವಾಮೀಜಿ ಮಾಡಿದ್ದರು. ನಮ್ಮ ಆತ್ಮತೃಪ್ತಿಯಿಂದ ಕೆಲಸ ಮಾಡಬೇಕು. ಸಂತರು, ಗುರುಗಳ ಆಶೀರ್ವಾದ ಇರಬೇಕು’ ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕನ್ನಡಪರ ಹೋರಾಟಗಾರ ಪಾಲನೇತ್ರ, ಪಾಲಿಕೆ ಮಾಜಿ ಸದಸ್ಯರಾದ ದಾಸೇಗೌಡ ಅವರು ಸ್ವಾಮೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಡಾ.ಎಸ್.ರಾಜು, ಮೋಹನ್ ಕುಮಾರ್, ರೂಪಾ ಲಿಂಗೇಶ್ವರ್, ರಾಜಪ್ಪ, ಶ್ರೀಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT