ಸೋಮವಾರ, ಏಪ್ರಿಲ್ 6, 2020
19 °C
ಆಡಳಿದ ಅವ್ಯವಸ್ಥೆಯ ನೆರಳಲ್ಲಿ ಬೆಳೆಯುತ್ತಿದೆ ಟ್ಯಾಂಕರ್ ನೀರು ಮಾಫಿಯಾ l ಬಿಬಿಎಂಪಿ–ಜಲಮಂಡಳಿ ವೈಫಲ್ಯವೇ ಇವರ ಬಂಡವಾಳ

ಅಂತರ್ಜಲಕ್ಕೆ ಕನ್ನ ಹಾಕುವ ‘ಆಪತ್ಬಾಂಧವರು’!

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೇಗಾದರೂ ಮಾಡಿ..., ಏನಾದರೂ ಮಾಡಿ..., ನಮಗೆ ನೀರು ಕೊಡಿ...’ ಎಂದು ಜನರು ಒಂದೆಡೆ ಅಂಗಲಾಚುತ್ತಿದ್ದರೆ, ಅವರ ಅಸಹಾಯಕತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಮಾಫಿಯಾ ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿದೆ.

ನೀರು ಪೂರೈಸುವಲ್ಲಿ ಸರ್ಕಾರ, ಬಿಬಿಎಂಪಿ, ಜಲಮಂಡಳಿ ವಿಫಲವಾದ ಕಡೆಗಳಲ್ಲೆಲ್ಲ ಇವರು ಹಾಜರ್‌. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದರಂತೂ ಇವರಿಗೆ ಹಬ್ಬವೋ ಹಬ್ಬ. ನೀರಿಗಾಗಿ ಹಾಹಾಕಾರ ಹೆಚ್ಚುತ್ತಿದ್ದಂತೆ ಟ್ಯಾಂಕರ್ ನೀರು ಸರಬರಾಜುದಾರರು ಮತ್ತಷ್ಟು ಹೆಚ್ಚು ಚುರುಕಾಗುತ್ತಾರೆ.

ವ್ಯವಸ್ಥೆಯ ದೋಷಗಳೇ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಲು ಕಾರಣವಾಗುತ್ತಿದೆ. ಜಲಮಂಡಳಿ ಹೊಂದಿರುವ ನೀರಿನ ಟ್ಯಾಂಕರ್‌ಗಳಿಗೆ ಹೋಲಿಸಿದರೆ, ಖಾಸಗಿ ನೀರಿನ ಟ್ಯಾಂಕರ್‌ಗಳ ಸಂಖ್ಯೆ 25 ಪಟ್ಟು ಹೆಚ್ಚು. ಸರ್ಕಾರ ಆಡಳಿತ ಯಂತ್ರವೇ ಈ ಮಾಫಿಯಾವನ್ನು ಹೇಗೆ ಪೋಷಿಸುತ್ತಿದೆ ಎಂಬುದಕ್ಕೆಈ ಅಂಕಿ ಅಂಶಕವೇ ಸಾಕ್ಷಿ.

‘ಜನರಿಗೆ ದೊಡ್ಡ ಉಪಕಾರ ಮಾಡುತ್ತಿದ್ದೇವೆ, ಅವರ ಆಪತ್ಕಾಲದಲ್ಲಿ ನೆರವಾಗುತ್ತಿದ್ದೇವೆ’ ಎನ್ನುವುದು ಟ್ಯಾಂಕರ್‌ ಮಾಫಿಯಾದ ವಾದ. ಇದಕ್ಕಾಗಿ ಇವರು ಹೆಚ್ಚಾಗಿ ಬಳಸುತ್ತಿರುವುದು ಕೃಷಿ ಮತ್ತು ವಸತಿ ಉದ್ದೇಶಕ್ಕೆ ಕೊರೆಯಲಾಗಿರುವ ಕೊಳವೆ ಬಾವಿಗಳನ್ನು. ನೀರಿನ ಕೊರತೆ ತೀವ್ರವಾಗಿರುವ ಸ್ಥಳಗಳನ್ನೇ ಕೇಂದ್ರವಾಗಿಟ್ಟುಕೊಂಡು ಕೆಲವು ಟ್ಯಾಂಕರ್‌ ಮಾಲೀಕರು ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೂ ಕೆಲವರು ನೀರಿನ ಕೃತಕ ಅಭಾವ ಸೃಷ್ಟಿಸಿ, ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. 

‘ಎರಡು ತಿಂಗಳುಗಳಿಂದ ನಮ್ಮ ವಾರ್ಡ್‌ನಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಜಲಮಂಡಳಿ ಪೂರೈಸುತ್ತಿರುವ ನೀರು ಸಾಕಾಗುತ್ತಿಲ್ಲ. 5,000 ಲೀಟರ್‌ಗಿಂತ ಕಡಿಮೆ ನೀರು ಪೂರೈಸುವ ಟ್ಯಾಂಕರ್‌ನವರು ₹800ರಿಂದ ₹1,000 ತೆಗೆದುಕೊಳ್ಳುತ್ತಾರೆ. ಜಲಮಂಡಳಿಯ ಸ್ಥಳೀಯ ವಾಲ್ವ್‌ಮನ್‌ಗಳು ಮತ್ತು ಟ್ಯಾಂಕರ್‌ ನೀರು ಪೂರೈಸುವವರ ಒಳ ಒಪ್ಪಂದ ಮಾಡಿಕೊಂಡು ನೀರಿನ ಕೃತಕ ಅಭಾವ ಸೃಷ್ಟಿಸುತ್ತಾರೆ’ ಎಂದು ನ್ಯೂ ತಿಪ್ಪಸಂದ್ರದ ನಿವಾಸಿಯೊಬ್ಬರು ಆರೋಪಿಸಿದರು. 

‘ಯಾವ ಪ್ರದೇಶದಲ್ಲಿ ಯಾವ ದಿನ ನೀರು ಬರುತ್ತದೆ, ಯಾವ ದಿನ ಬರುವುದಿಲ್ಲ ಎಂಬ ಬಗ್ಗೆ ವಾಲ್ವ್‌ಮನ್‌ಗಳು ಈ ಟ್ಯಾಂಕರ್‌ನವರಿಗೆ ಮಾಹಿತಿ ನೀಡುತ್ತಾರೆ.  ರಾತ್ರಿ 12 ಅಥವಾ 1 ಗಂಟೆಯ ವೇಳೆಗೆ ನೀರು ಬಿಡುತ್ತಾರೆ. ಅದರ ನೀರು ಹರಿವಿನ ವೇಗ (ಫೋರ್ಸ್‌) ತುಂಬಾ ಕಡಿಮೆ ಇರುತ್ತದೆ. ಅಲ್ಲದೇ, ನೀರು ತುಂಬಾ ಸಣ್ಣದಾಗಿ ಬರುವಂತೆ ವಾಲ್ವ್‌ ತಿರುವುತ್ತಾರೆ’ ಎಂದು ಅವರು ದೂರಿದರು. 

‘ಜಲಮಂಡಳಿಯಿಂದ ಒಮ್ಮೊಮ್ಮೆ ಸಮರ್ಪಕವಾಗಿ ನೀರು ಪೂರೈಕೆಯಾದರೂ, ಸ್ಥಳೀಯವಾಗಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಬಹಳಷ್ಟು ವಾಲ್ವ್‌ಮನ್‌ಗಳು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೊಂದು ಪ್ರದೇಶದಲ್ಲಿ ನೀರು ಸರಿಯಾಗಿ ಪೂರೈಸುವುದಿಲ್ಲ. ಕೇಳಿದರೆ, ರಾತ್ರಿಯೇ ನೀರು ಕೊಟ್ಟಿದ್ದೇವೆ. ನೀವು ತುಂಬಿಕೊಂಡಿಲ್ಲ ಎಂದು ದಬಾಯಿಸುತ್ತಾರೆ. ಅನಿವಾರ್ಯವಾಗಿ ನಾವು ಟ್ಯಾಂಕರ್‌ನವರ ಮೊರೆ ಹೋಗಬೇಕಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು. 

110 ಹಳ್ಳಿಗಳ ಕಥೆ ವಿಭಿನ್ನ: ನಗರದೊಳಗೆ ಈ ರೀತಿಯಾದರೆ, ಹೊರವಲಯದ 110 ಹಳ್ಳಿಗಳ ಕಥೆ ಮತ್ತೊಂದು ರೀತಿಯಲ್ಲಿದೆ. ಕಾವೇರಿ ಐದನೇ ಹಂತದಲ್ಲಿ ಈ ಹಳ್ಳಿಗಳಿಗೆ ನೀರು ಪೂರೈಸುವ ಕಾಮಗಾರಿ ನಡೆಯುತ್ತಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಿದವರು ‘ನಮ್ಮ ನೀರಿನ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ’ ಎಂಬ ಒಪ್ಪಂದಕ್ಕೆ ಜಲಮಂಡಳಿ ಜೊತೆ ಸಹಿ ಹಾಕಿದ್ದಾರೆ. 

ಪೈಪ್‌ಲೈನ್‌ ಅಳವಡಿಕೆ ಸಂಪೂರ್ಣ ಮುಗಿದ ನಂತರವೇ ಈ ಗ್ರಾಮಗಳಿಗೆ ನೀರು ಪೂರೈಸುವ ಜವಾಬ್ದಾರಿ ಜಲಮಂಡಳಿಗೆ ಬರುತ್ತದೆ. ಅಲ್ಲಿಯವರೆಗೂ ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಅಪಾರ್ಟ್‌ಮೆಂಟ್‌ ಸಮುಚ್ಚಯದವರು ಕೂಡ ಟ್ಯಾಂಕರ್ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ದುಡ್ಡಿಗೆ ನೀರು ಖರೀದಿಸುತ್ತಿದ್ದಾರೆ. ಇದೇ ಟ್ಯಾಂಕರ್ ಮಾಲೀಕರು ಒಂದು ದಿನ ಮುಷ್ಕರ ಮಾಡಿದರೂ, ಈ ಪ್ರದೇಶದ ಜನ ತೀವ್ರ ಸಮಸ್ಯೆಗೆ ಒಳಗಾಗುತ್ತಾರೆ.

ನೀರು ತರುವುದು ಎಲ್ಲಿಂದ ?: ಜಲಮಂಡಳಿಯು ನಗರದ ವಿವಿಧೆಡೆ ಕೆಲವು ಕೇಂದ್ರಗಳನ್ನು (ಪಾಯಿಂಟ್‌ಗಳನ್ನು) ಗುರುತು ಮಾಡಿದ್ದು, ಅಲ್ಲಿಂದ ಈ ಟ್ಯಾಂಕರ್‌ಗಳು ನೀರು ತರಬೇಕು. ಆದರೆ, ಶುಲ್ಕ ಒಂದು ಕಡೆ ಕಟ್ಟಿ ನೀರನ್ನು ಇನ್ನೊಂದು ಕಡೆಯಿಂದ ತರಬೇಕು. ಒಂದು ಟ್ಯಾಂಕರ್‌ ನೀರು ತರಲು ಅರ್ಧ ದಿನ ವ್ಯಯಿಸಬೇಕಾಗುತ್ತದೆ ಮತ್ತು ಇದರಿಂದ ಬರುವ ಲಾಭವೂ ಕಡಿಮೆ ಎನ್ನುವ ಕಾರಣಕ್ಕೆ, ಕೊಳವೆ ಬಾವಿಗಳಿಂದಲೇ ಹೆಚ್ಚು ನೀರು ಮೇಲೆತ್ತಿ, ಪೂರೈಸಲಾಗುತ್ತದೆ. 

ನಗರದ ಹೊರವಲಯದ ಗ್ರಾಮಗಳಲ್ಲಿ ಕೃಷಿ ಉದ್ದೇಶಕ್ಕೆ ಕೊರೆಯಲಾಗಿರುವ ಕೊಳವೆ ಬಾವಿಗಳಿಂದ, ನಗರದ ಒಳಗೆ ವಸತಿ ಉದ್ದೇಶಕ್ಕೆ ಕೊರೆಯಲಾಗಿರುವ ಕೊಳವೆಬಾವಿಗಳಿಂದ ನೀರು ತೆಗೆದುಕೊಳ್ಳುವ ಈ ಟ್ಯಾಂಕರ್‌ ನೀರು ಸರಬರಾಜುದಾರರು ಅದನ್ನು ಮಾರಾಟ ಮಾಡುತ್ತಾರೆ. ಇಂತಹ ಕೊಳವೆ ಬಾವಿಗಳಿಗೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆಯಲಾಗಿರುತ್ತದೆ. ಪ್ರಮಾಣದ ಮಿತಿ ಇಲ್ಲದೆ ನೀರು ತೆಗೆಯಲಾಗುತ್ತಿದೆ. 

ನಿರ್ಬಂಧ: ಕೊಳವೆಬಾವಿಯಿಂದ ಮೇಲಕ್ಕೆತ್ತಿದ್ದ ನೀರು ಮಾರಾಟ ಮಾಡುವುದಕ್ಕೆ ಹೊಸಕೋಟೆ ತಾಲ್ಲೂಕು ಆಡಳಿತ ಟ್ಯಾಂಕರ್ ನಿರ್ಬಂಧ ವಿಧಿಸಿದ್ದ ರಿಂದ ಟ್ಯಾಂಕರ್ ಮಾಲೀಕರು ಇತ್ತೀಚೆಗೆ ಮುಷ್ಕರ ನಡೆಸಿದ್ದರು. ಆಗ, ಮಹದೇವಪುರ ಕ್ಷೇತ್ರದ ವಿವಿಧ ಭಾಗಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿತ್ತು. ಈಗ ಕೆಲವು ನಿರ್ಬಂಧಗಳನ್ನು ಸಡಿಲಿಸಿರುವ ತಾಲ್ಲೂಕು ಆಡಳಿತ, ನೀರು ಸರಬರಾಜು ಮಾಡಲು ಷರತ್ತುಬದ್ಧ ಅವಕಾಶ ನೀಡಿದೆ. 

ಹೊಸಪೇಟೆ ತಾಲ್ಲೂಕಿನ ಎರಡು ಅಧಿಕೃತ ಕೊಳವೆ ಬಾವಿಗಳಿಂದ ಮಾತ್ರ ನೀರು ತೆಗೆಯಬೇಕು. ಒಂದು ಗ್ರಾಮದಿಂದ ದಿನಕ್ಕೆ 12,000 ಲೀಟರ್‌ ನೀರು ಹಿಡಿಸುವ  12 ನೀರಿನ ಟ್ಯಾಂಕರ್‌ ಲೋಡ್‌ಗಳನ್ನು ಮಾತ್ರ ಸಾಗಿಸಬೇಕು. ಪ್ರತಿ ಟ್ರಿಪ್‌ ಟ್ಯಾಂಕರ್‌ಗೆ ₹300 ರಾಯಧನವನ್ನು ಗ್ರಾಮ ಪಂಚಾಯ್ತಿಗೆ ಪಾವತಿಸಿ, ರಸೀದಿ ಪಡೆಯಬೇಕು. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ನೀರು ಸಾಗಾಟ ಮಾಡಬೇಕು ಎಂಬ ಷರತ್ತುಗಳನ್ನು ಟ್ಯಾಂಕರ್‌ ಮಾಲೀಕರಿಗೆ ವಿಧಿಸಲಾಗಿದೆ. 

ಕೃಷಿ ಮತ್ತು ವಸತಿ ಉದ್ದೇಶಕ್ಕೆ ಕೊರೆಯಲಾಗಿರುವ ಬಾವಿಗಳಿಂದ ನೀರು ತೆಗೆದು, ವಾಣಿಜ್ಯ ಉದ್ದೇಶಕ್ಕೆ ಬಳಸುವುದಕ್ಕೆ ಅವಕಾಶವಿಲ್ಲ. ಆದರೆ, ಇದೆಲ್ಲ ಅಕ್ರಮ ಎಂದು ಹೇಳುತ್ತಲೇ ಇಂಥದ್ದೊಂದು ವ್ಯವಸ್ಥೆಯನ್ನು ಪೋಷಿಸುವ ಕೆಲಸವೂ ನಡೆಯುತ್ತಿದೆ. ಈ ಕುರಿತು ತೆಗೆದುಕೊಳ್ಳುವ ನಿರ್ಬಂಧಗಳು, ರೂಪಿಸಿರುವ ಕಾನೂನುಗಳು ನೆಪಮಾತ್ರಕ್ಕೆ ಎನ್ನುವಂತಾಗಿದೆ.

 

‘ಲಭ್ಯವಿರುವ ನೀರೇ ಕಡಿಮೆ’

‘ಜಲಮಂಡಳಿಯು ನಗರದ 575 ಚದರ ಕಿ.ಮೀ. ವ್ಯಾಪ್ತಿಯಲ್ಲಿ ನೀರು ಪೂರೈಸುತ್ತಿದೆ. ಆದರೆ, ನಗರದ ಹೊರವಲಯದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಪೂರ್ಣಗೊಳ್ಳುವುದು 2023ಕ್ಕೆ. ಅಲ್ಲಿಯವರೆಗೆ ನೀವೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಲ್ಲಿನ ನಿವಾಸಿಗಳಿಗೆ ಮೊದಲೇ ಹೇಳಲಾಗಿತ್ತು’ ಎನ್ನುತ್ತಾರೆ ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್. 

‘ಲಭ್ಯವಿರುವ ನೀರಿನಲ್ಲಿಯೇ ಸ್ವಲ್ಪ ಉಳಿಸಿ ಈ ಭಾಗಕ್ಕೆ ನೀರು ಪೂರೈಸಲಾಗುತ್ತಿದೆ. ಒಬ್ಬ ವ್ಯಕ್ತಿಗೆ ದಿನಕ್ಕೆ 20 ಲೀಟರ್‌ ಕೊಡುತ್ತಿದ್ದೇವೆ. ಅಂತರ್ಜಲದಲ್ಲಿಯೇ ನೀರಿನ ಮಟ್ಟ ಕಡಿಮೆಯಾಗುತ್ತಿರುವುದರಿಂದ ನಾವು ಏನು ಮಾಡಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಜಲಮಂಡಳಿಯಲ್ಲಿ ಟ್ಯಾಂಕರ್‌ಗಳ ಸಂಖ್ಯೆ ಕಡಿಮೆ ಇದೆ. ಜೊತೆಗೆ, ನಗರದ ಒಳಗೆ ಮತ್ತು ಹೊರ ವಲಯದ ಪ್ರದೇಶಗಳಿಗೆ ಕೊಡುವಷ್ಟು ನೀರಿನ ಲಭ್ಯತೆ ನಮ್ಮ ಬಳಿ ಇಲ್ಲ’ ಎಂದು ಅವರು ವಿವರಿಸಿದರು. 

 

‘ಪರ್ಯಾಯ ವ್ಯವಸ್ಥೆ’

‘ಕೊಳವೆಬಾವಿಗಳಿಂದ ಅನಧಿಕೃತವಾಗಿ ಹೆಚ್ಚು ನೀರು ತೆಗೆಯುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಆದರೆ, ಖಾಸಗಿ ಟ್ಯಾಂಕರ್‌ ಮಾಲೀಕರು ಮುಷ್ಕರ ಮಾಡಿದರೂ ಜನರಿಗೆ ತೊಂದರೆಯಾಗುತ್ತದೆ. ಇದಕ್ಕಾಗಿ ಪರ್ಯಾಯ ವ್ಯವಸ್ಥೆ ರೂಪಿಸಬೇಕಾಗಿದೆ. ಈ ಕುರಿತು ಜಲಮಂಡಳಿ ಅಧ್ಯಕ್ಷರೊಂದಿಗೆ ಮಾತನಾಡಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು. 

‘ಜಲಮಂಡಳಿಯು ಯಾವ ಸ್ಥಳಗಳಲ್ಲಿ ಹೀಗೆ ನೀರು ತೆಗೆಯುವ ಪಾಯಿಂಟ್‌ ಮಾಡಿದೆ ಎಂಬ ಪಟ್ಟಿಯನ್ನು ತರಿಸಿಕೊಳ್ಳಲಾಗಿದೆ. ಟ್ಯಾಂಕರ್‌ನವರು ಈ ಪಾಯಿಂಟ್‌ಗಳಿಂದ ನೀರು ತೆಗೆದು, ಪೂರೈಸಬಹುದಾಗಿದೆ’ ಎಂದು ಅವರು ಹೇಳಿದರು.   

‘ನೀರಿನ ವ್ಯವಸ್ಥೆ ಇದೆಯೋ, ಇಲ್ಲವೋ ಎಂಬುದನ್ನು ಮನೆ ಕಟ್ಟುವಾಗಲೇ ನೋಡಿಕೊಳ್ಳಬೇಕು. ನೀರಿನ ಸಂಪರ್ಕ ಇದ್ದರೆ ಮಾತ್ರ ಮನೆಗಳನ್ನು ಕಟ್ಟುವುದು ಉತ್ತಮ’ ಎಂದು ಅವರು ಸಲಹೆ ನೀಡಿದರು. 

‘ಟ್ಯಾಂಕರ್ ನೀರು ಮಾಫಿಯಾ... ನೀರು ಮಾರಿ ಕೋಟಿಗಟ್ಟಲೆ ಸಂಪಾದಿಸುತ್ತಾರೆ ಎಂದು ದೂರುವವರು, ಅಕ್ರಮದ ವ್ಯವಹಾರ ಎನ್ನುವವರು ಮೊದಲು ನೀರು ಕೊಡಲಿ. ಸರ್ಕಾರ ಸರಿಯಾಗಿ ಎಲ್ಲರಿಗೂ ನೀರು ಪೂರೈಸಿದ್ದರೆ
ನಾವ್ಯಾಕೆ ಈ ಕೆಲಸ ಮಾಡುತ್ತಿದ್ದೆವು’ ಎಂದು ಪ್ರಶ್ನಿಸುತ್ತಾರೆ ಟ್ಯಾಂಕರ್‌ ನೀರು ಪೂರೈಕೆದಾರರ ಸಂಘದ
ಪದಾಧಿಕಾರಿಯೊಬ್ಬರು. 

‘ಒಂದು ದಿನ ಮುಷ್ಕರ ಮಾಡಿದ್ದಕ್ಕೆ ಜನ ಗೋಳಾಡಿದರು. ನಾವೇ ಹೊಂದಾಣಿಕೆ ಮಾಡಿಕೊಂಡು, ತುರ್ತು ಸಂದರ್ಭದಲ್ಲಿ ನೀರು ಪೂರೈಸುತ್ತಿದ್ದೇವೆ. ಈ ಜಲಮಂಡಳಿ, ಬಿಬಿಎಂಪಿಯವರು ಏನು ಕೆಲಸ ಮಾಡುತ್ತಾರೆ’ ಎಂದು ಅವರು ಟೀಕಿಸಿದರು. 

‘ಜಲಮಂಡಳಿಯವರು ಒಂದು ಲೋಡ್‌ ನೀರು ಕೊಡಲು ಅರ್ಧ ದಿನ ಕಾಯಿಸುತ್ತಾರೆ. ಅಲ್ಲದೆ, ಕಟ್ಟಡದ ಆರ್‌.ಆರ್ ಸಂಖ್ಯೆ ಕೊಡಬೇಕು. ಕಟ್ಟಡದಲ್ಲಿರುವ ನಿವಾಸಿಗಳ ಸಂಖ್ಯೆ ಕೊಡಬೇಕು. ಒಬ್ಬರಿಗೆ ದಿನಕ್ಕೆ 20 ಲೀಟರ್‌ ನೀರು ಕೊಡುತ್ತಾರೆ. ಅದು ಸಾಕಾಗುತ್ತದೆಯೇ’ ಎಂದು ಪ್ರಶ್ನಿಸಿದರು. 

‘ಅಂತರ್ಜಲ ಮಟ್ಟ ಸಮೃದ್ಧವಾಗಿರುವ ಕಡೆಗಳಲ್ಲಿನ ಕೊಳವೆ ಬಾವಿಗಳಿಂದ ಮಾತ್ರ ನಾವು ನೀರು ತೆಗೆಯುತ್ತಿದ್ದೇವೆ. ಸರ್ಕಾರ ಹೆಚ್ಚು ನೀರು ಕೊಡುತ್ತಿದ್ದೆಯೋ, ನಾವು ಕೊಡುತ್ತಿದೆವೆಯೋ ಎಂದು ಅಪಾರ್ಟ್‌ಮೆಂಟ್‌ ಸಮುಚ್ಚಯದವರನ್ನೇ ಕೇಳಿ. ನಮ್ಮಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಈ ಕಾರ್ಯವನ್ನು ನಾವು ಮಾಡುವುದೇ ಇಲ್ಲ’ ಎಂದು ಅವರು ಸವಾಲು ಹಾಕಿದರು.

‘ಪರವಾನಗಿ ಏಕೆ ನೀಡಬೇಕು?’

‘ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿದ್ದರೆ, ಈಗ ಟ್ಯಾಂಕರ್‌ ನೀರನ್ನು ಅವಲಂಬಿಸಬೇಕಾದ ಅಗತ್ಯವೇ ಇರುತ್ತಿರಲಿಲ್ಲ. ಈ ವ್ಯವಸ್ಥೆ ಅಳವಡಿಸಿಕೊಳ್ಳಲೇಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮ ಪಾಲಿಸದ ಕಟ್ಟಡಗಳಿಗೂ ನಿರ್ಮಾಣ ಪರವಾನಗಿ ನೀಡಲಾಗುತ್ತದೆ. ವಿದ್ಯುತ್‌ ಸಂಪರ್ಕ ಕೊಡಲಾಗುತ್ತದೆ. ಆದರೆ, ನೀರು ಮಾತ್ರ ಕೊಡುತ್ತಿಲ್ಲ. ಹಾಗಿದ್ದ ಮೇಲೆ, ಮೊದಲೇ ಪರವಾನಗಿ ಏಕೆ ನೀಡಬೇಕಿತ್ತು’ ಎಂದು ಪ್ರಶ್ನಿಸುತ್ತಾರೆ ವರ್ತೂರು ರೈಸಿಂಗ್‌ನ ಜಗದೀಶ ರೆಡ್ಡಿ. 

‘ನೀರು ನೈಸರ್ಗಿಕ ಸಂಪನ್ಮೂಲ. ಇದನ್ನು ಪೂರೈಸಬೇಕಾದುದು ಸರ್ಕಾರದ ಕರ್ತವ್ಯ. ಕಾನೂನಿನ ಪ್ರಕಾರ ನೀರನ್ನು ಮಾರಾಟ ಮಾಡುವಂತಿಲ್ಲ. ಸರ್ಕಾರಿ ವ್ಯವಸ್ಥೆಯೇ ಇದನ್ನು ನಿಯಂತ್ರಿಸಬೇಕು. ಆದರೆ, ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ಸರ್ಕಾರದಿಂದಲೇ ಈ ವ್ಯವಸ್ಥೆ ಕಾರ್ಯನಿರ್ವಹಿಸುವಂತೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು. 

ಅಂಕಿ–ಅಂಶ

1,500 -ನೀರು ಪೂರೈಸುವ ಖಾಸಗಿ ಟ್ಯಾಂಕರ್‌ಗಳ ಅಂದಾಜು ಸಂಖ್ಯೆ 

53 -ಜಲಮಂಡಳಿಯ ನೀರು ಪೂರೈಕೆ ಟ್ಯಾಂಕರ್‌ಗಳು 

10 -ಶುದ್ಧೀಕರಿಸಿದ ಕೊಳಚೆ ನೀರು ಪೂರೈಸುವ ಜಲಮಂಡಳಿ ಟ್ಯಾಂಕರ್‌ಗಳು 

3,000 -110 ಹಳ್ಳಿಗಳ ವ್ಯಾಪ್ತಿಯಲ್ಲಿ ನೀರು ಸಂಪರ್ಕ ಪಡೆದಿರುವ ಮನೆಗಳು

 
ನೀವೂ ಪ್ರತಿಕ್ರಿಯಿಸಿ: 9606038256

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು