ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ ಕಥೆ: ಟ್ಯಾಕ್ಸಿ ಚಾಲಕನಿಗೆ ಮೋಡಿ; ಪರಾರಿ ಚಾಲಾಕಿ ಜೋಡಿ!

Last Updated 9 ಆಗಸ್ಟ್ 2019, 8:45 IST
ಅಕ್ಷರ ಗಾತ್ರ

ವಾರಾಂತ್ಯದಲ್ಲಿ ಎರಡು ದಿನ ಮೈಸೂರು, ಮಡಿಕೇರಿ ಸುತ್ತಾಡಬೇಕು ಎಂದು ಉತ್ತರ ಭಾರತದಿಂದ ಬಂದಿದ್ದ ಸುಂದರ ಯುವ ಜೋಡಿ ಬೆಂಗಳೂರಿನಿಂದ ಕಾರು ಬಾಡಿಗೆ ಪಡೆಯುತ್ತಾರೆ. ಒಂದಿಡಿ ದಿನ ಮೈಸೂರು ಸುತ್ತಾಡಿದ ಬಳಿಕ ಮಡಿಕೇರಿಯತ್ತ ಪ್ರಯಾಣ. ಜಲಪಾತ ನೋಡಿದ ನಂತರ ಮಂಡಲಪಟ್ಟಿ ಗಿರಿಧಾಮಕ್ಕೆ ಹೊರಟು ನಿಂತಾಗ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಚಾಲಕ ಅವರನ್ನು ಸಮೀಪದ ನಿಸಾನಿ ಬೆಟ್ಟಕ್ಕೆ ಕರೆದೊಯ್ಯುತ್ತಾನೆ.

ಎರಡು ತಾಸಿನಲ್ಲಿ ಬರುವುದಾಗಿ ಹೇಳಿ ಬೆಳಿಗ್ಗೆ 10.30ಕ್ಕೆ ಬೆಟ್ಟದಲ್ಲಿ ಮರೆಯಾದ ಜೋಡಿ ಮಧ್ಯಾಹ್ನ ಮೂರು ಗಂಟೆಯಾದರೂ ಸುದ್ದಿ ಇಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ ಎಂಬ ಉತ್ತರ. ಬೆಟ್ಟದಲ್ಲಿ ಹುಡುಕಿ ಸುಸ್ತಾದ ಚಾಲಕ ಮರಳಿ ಕಾರಿನಲ್ಲಿ ಕಾಯುತ್ತಾನೆ. ಸಂಜೆ ಏಳಾದರೂ ನವಜೋಡಿಯ ಸುಳಿವು ಇಲ್ಲ. ಕಾದು, ಕಾದು ಸುಸ್ತಾದ ಚಾಲಕ ಮಡಿಕೇರಿಗೆ ಹೋಗಿ ಹೋಟೆಲ್‌ನಲ್ಲಿ ವಿಚಾರಿಸುತ್ತಾನೆ. ಅವರು ರೂಂ ಚೆಕ್‌ಔಟ್‌ ಮಾಡಿ ತೆರಳಿರುತ್ತಾರೆ. ವಿಧಿ ಇಲ್ಲದೆ ಬೆಂಗಳೂರಿಗೆ ಮರಳುತ್ತಾನೆ.

ಮರುದಿನ ಹರಿಯಾಣದ ಜೋಡಿ ನೀಡಿದ ವಿಳಾಸ ಹುಡುಕಿಕೊಂಡು ಮಾರತ್ತಹಳ್ಳಿಗೆ ಹೋದರೆ ಅದೊಂದು ಸರ್ವೀಸ್‌ ಅಪಾರ್ಟ್‌ಮೆಂಟ್‌. ಅಲ್ಲಿಂದಲೂ ಅವರು ಜಾಗ ಖಾಲಿ ಮಾಡಿದ ಸಂಗತಿ ಚಾಲಕನ ಗಮನಕ್ಕೆ ಬರುತ್ತದೆ. ಬೇರೆ ನಂಬರ್‌ನಿಂದ ಕರೆ ಮಾಡಿದಾಗ ಸ್ವೀಕರಿಸಿದ ಜೋಡಿ ಆನ್‌ಲೈನ್‌ನಲ್ಲಿ ಹಣ ನೀಡುವ ಭರವಸೆ ನೀಡುತ್ತದೆ. ಅದಾದ ನಂತರ ಮೊಬೈಲ್‌ ಸ್ವಿಚ್ಡ್‌ ಆಫ್‌!ಬಾಡಿಗೆ ಬರಬೇಕಿದ್ದ ₹6,800 ಹಣ ನೀಡದೆ ಆ ಜೋಡಿ ಚಾಲಕನನ್ನು ವಂಚಿಸಿತ್ತು.

***

ವಿಮಾನ ನಿಲ್ದಾಣದಿಂದ ಸೂಟು, ಬೂಟು ಮತ್ತು ಟೈ ಧರಿಸಿದ ವ್ಯಕ್ತಿಯನ್ನು ಹತ್ತಿಸಿಕೊಂಡಟ್ಯಾಕ್ಸಿ ಹತ್ತಿದ ಮಂಗಳೂರು ದಾರಿ ಹಿಡಿಯಿತು. ಮಾರ್ಗಮಧ್ಯೆ ರೈಲು ಬರುವ ವೇಳೆ ವಿಚಾರಿಸಿಕೊಂಡು ಬರುವುದಾಗಿ ಸಕಲೇಶಪುರದ ರೈಲು ನಿಲ್ದಾಣದಲ್ಲಿ ಇಳಿದು ಹೋದ ವ್ಯಕ್ತಿ ಮರಳಿ ಬರಲಿಲ್ಲ. ಊರೆಲ್ಲ ಹುಡುಕಿದರೂ ಅಸಾಮಿ ನಾಪತ್ತೆ! ₹8,000 ಬಾಡಿಗೆ ಖೋತಾ. ಇದು ಆರೇಳು ತಿಂಗಳ ಹಿಂದೆ ನಡೆದ ಘಟನೆ.

***

ಇಂದಿರಾ ನಗರ ಪಬ್‌ವೊಂದರಲ್ಲಿ ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಓಲಾ ಟ್ಯಾಕ್ಸಿ ಬುಕ್‌ ಮಾಡಿದ. ಮಂಜುನಾಥ ನಗರದ ಡ್ರಾಪ್‌ ಪಾಯಿಂಟ್‌ನಲ್ಲಿ ಕಾರು ನಿಂತಾಗ,ಇದು ನನ್ನ ಮನೆಯಲ್ಲ ಎಂದು ವರಾತ ತೆಗೆದ. ಗಲ್ಲಿ, ಗಲ್ಲಿ ಸುತ್ತಾಡಿಸಿದ. ಕೊನೆಗೆ ಕಾರಿನ ಬಾಗಿಲು ತೆಗೆದು ಮಲಗಿಬಿಟ್ಟ. ಆತನನ್ನು ಕೆಳಗಿಳಿಸಲು ಅಲ್ಲಿದ್ದವರೆಲ್ಲ ಸಾಹಸ ಮಾಡಬೇಕಾಯಿತು.

***

ಬಣ್ಣದ ಬದುಕು ಅರಿಸಿಸಕಲೇಶಪುರದ ಆಲೂರು ತಾಲ್ಲೂಕಿನ ಕೆರೆಹಳ್ಳಿಯಿಂದ ಬೆಂಗಳೂರಿಗೆ ಬಂದ ಪುನೀತ್‌ ಎಂಬ ಯುವಕ ಮೋಸಹೋದ ಕತೆ ಇದು. ಪುನೀತ್‌ ಜೀವನದಲ್ಲಿ ಇತ್ತೀಚೆಗೆ ನಡೆದ ಈ ಮೂರು ಕಹಿ ಘಟನೆಗಳು ಆತ ಮತ್ತು ಆತನ ಸಂಗಡಿಗರನ್ನು ದಿಗಿಲುಗೊಳಿಸಿವೆ. ಎಲ್ಲ ಗ್ರಾಹಕರನ್ನೂ ಸಂಶಯದಿಂದಲೇ ನೋಡುವಂತೆ ಮಾಡಿವೆ.

ನಾಟಕ ಮತ್ತು ಸಿನಿಮಾದಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಜ್ಯೂನಿಯರ್‌ ಆರ್ಟಿಸ್ಟ್‌ ಆಗಿ ನಟಿಸಿದ್ದ ಪುನೀತ್‌, ಜೀವನ ನಿರ್ವಹಣೆಗಾಗಿ ಸಾಲ ಮಾಡಿ ಕಾರು ಖರೀದಿಸಿದ. ತಾನೇ ಚಾಲಕನಾದ. ವಾರಾಂತ್ಯದಲ್ಲಿ ಮಾತ್ರ ನಟನೆಗೆ ಮೀಸಲಿಟ್ಟ. ಕಾರು ಖರೀದಿಸಲು ಮಾಡಿದ ಸಾಲದ ಕಂತು ಮರು ಪಾವತಿಸಲು ನಗರದ ಹೊರಗಿನ ಪ್ರವಾಸಗಳಿಗೆ (ಲಾಂಗ್‌ ಟ್ರಿಪ್‌) ಒಪ್ಪಿಕೊಂಡರೆ ಗ್ರಾಹಕರೇ ಪಂಗನಾಮ ಹಾಕಿ ಹೋದರು.

ಇದು ಕೇವಲ ಪುನೀತ್‌ ಒಬ್ಬನ ಕತೆಯಲ್ಲ. ಇದೇ ರೀತಿ ಎಷ್ಟೋ ಟ್ಯಾಕ್ಸಿ ಚಾಲಕರು ಗ್ರಾಹಕರಿಂದ ಮೋಸ ಹೋಗಿದ್ದಾರೆ. ಪೊಲೀಸರಿಗೂ ದೂರು ನೀಡಲು ಪರದಾಡುತ್ತಿದ್ದಾರೆ. ತಾನು ಹರಿಯಾಣದ ಜೋಡಿಯಿಂದ ಮೋಸ ಹೋದ ಘಟನೆಯನ್ನು ಆತ ಮೂರ‍್ನಾಲ್ಕು ನಿಮಿಷ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಟ್ಯಾಕ್ಸಿ ಮತ್ತು ಕಾರು ಬಾಡಿಗೆ ಪಡೆಯುವ ಗ್ರಾಹಕರು, ಚಾಲಕರಿಗೆ ಹಣ ಕೊಡದೆ ಪರಾರಿಯಾಗುವ ಪ್ರಕರಣ ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿವೆ ಎಂದು ಪುನೀತ್‌ ‘ಮೆಟ್ರೊ’ ಜತೆ ಕಹಿ ಘಟನೆಗಳನ್ನು ಹಂಚಿಕೊಂಡ. ಜತೆಗೆ ಆತನ ಸಹೋದ್ಯೋಗಿ ಚಾಲಕ ಬಸವರಾಜ ಇದೇ ರೀತಿಯ ಕಹಿ ಘಟನೆ ಬಿಚ್ಚಿಟ್ಟ.

ಪುನೀತ್
ಪುನೀತ್

ತಿರುಪತಿಗೆ ಹೋಗಲು ಕಾರು ಬಾಡಿಗೆ ಪಡೆದಿದ್ದ ಬೆಂಗಳೂರಿನ ಒಂದು ಕುಟುಂಬ ಚಾಲಕನಿಗೆ ತಿರುಪತಿ ನಾಮ ಹಾಕಿದ ಘಟನೆ ಇನ್ನೂ ಸ್ವಾರಸ್ಯಕರವಾಗಿದೆ. ದರ್ಶನಕ್ಕಾಗಿ ಬೆಟ್ಟ ಹತ್ತಿದ ಕುಟುಂಬ ಎರಡೂ ದಿನವಾದರೂ ಮರಳಿ ಬರಲಿಲ್ಲ. ಎರಡು ದಿನ ಕಾರಿನಲ್ಲಿಯೇ ಕಾದು ಸುಸ್ತಾಗಿ ಬೆಟ್ ಹತ್ತಿದರೆ ಕುಟುಂಬ ಎಲ್ಲಿಯೂ ಕಾಣಲಿಲ್ಲ. ಬಸ್‌ ಮೂಲಕ ಅವರು ಹೊರಟು ಹೋಗಿದ್ದರು ಎಂಬ ಸಂಗತಿ ತಿಳಿಯಿತು. ಬರಿಗೈಯಲ್ಲಿ ಮರಳಿ ಬರಬೇಕಾಯಿತು ಎಂದು ಬಸವರಾಜ ಬೇಸರ ವ್ಯಕ್ತಪಡಿಸಿದ.

ನಾಲ್ಕು ತಾಸು ಅಥವಾ ಒಂದು ದಿನಕ್ಕೆ ಟ್ಯಾಕ್ಸಿ ಬುಕ್‌ ಮಾಡುವ ಗ್ರಾಹಕರು, ಎಲ್ಲ ಸುತ್ತಾಡಿದ ನಂತರ ಕೊನೆಗೆ ಮಾಲ್‌ಗಳಿಗೆ ಕರೆದೊಯ್ಯುತ್ತಾರೆ. ಶಾಪಿಂಗ್‌ ಮುಗಿಸಿಕೊಂಡು ಬರುವುದಾಗಿ ಹೇಳಿ ಹೋಗುವ ಗ್ರಾಹಕರು ಮಂಗಮಾಯವಾಗುತ್ತಾರೆ. ಮರಳಿ ಬರುವುದಿಲ್ಲ. ಗ್ರಾಹಕರು ಬರಬಹುದು ಎಂದು ತಾಸುಗಟ್ಟಲೇ ಕಾಯ್ದು ಸುಸ್ತಾದ ಟ್ಯಾಕ್ಸಿ ಚಾಲಕರಿಗೆ ಮಾಲ್‌ ಬಾಗಿಲು ಹಾಕಿದಾಗಲೇ ತಾವು ಮೋಸ ಹೋಗಿರುವ ಸಂಗತಿ ತಿಳಿಯುತ್ತದೆ. ಅಷ್ಟು ಹೊತ್ತಿಗಾಗಲೇ ಗ್ರಾಹಕರು ಅಲ್ಲಿಂದ ಪರಾರಿಯಾಗಿರುತ್ತಾರೆ. ಮೊಬೈಲ್‌ಗೆ ಕರೆ ಮಾಡಿದರೆ, ಅದು ಕೂಡ ಸ್ವಿಚ್‌ ಆಫ್‌ ಆಗಿರುತ್ತದೆ.ಅವರನ್ನು ಹುಡುಕುವುದು ಕಷ್ಟ!

ಆ್ಯಪ್‌ ಆಧಾರಿತ ಬಾಡಿಗೆ ಕಾರು ಓಡಿಸುವವರೂ ಕೂಡ ಈ ರೀತಿ ಮೋಸ ಹೋಗುತ್ತಿದ್ದಾರೆ. ಗ್ರಾಹಕರ ಎಲ್ಲ ವಿವರ ಸಂಸ್ಥೆಗಳ ಬಳಿ ಇದ್ದರೂ ಉಪಯೋಗವಾಗುವುದಿಲ್ಲ. ವಂಚಿಸುವ ಉದ್ದೇಶದಿಂದಲೇ ನಕಲಿ ಸಿಮ್‌ ಬಳಸಿ ಗ್ರಾಹಕರು ಕಾರು ಬುಕ್‌ ಮಾಡಿರುತ್ತಾರೆ. ಬಳಿಕ ಸಿಮ್‌ ಬಿಸಾಡುತ್ತಾರೆ.

ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪನಿಗಳಿಗೆ ಕಾರು ಓಡಿಸುವ ಬದಲು ಸ್ವಂತ ಬಾಡಿಗೆ ಓಡಿಸುವುದರಿಂದ ಒಂದಿಷ್ಟ ಹೆಚ್ಚುಹಣ ಸಂಪಾದಿಸಬಹುದು. ಆ ಹಣವನ್ನು ಕಾರು ಖರೀದಿಸಲು ಪಡೆದ ಸಾಲದ ಕಂತು ಪಾವತಿಗಾದರೂ ಬಳಸಬಹುದು ಎಂಬ ಲೆಕ್ಕಾಚಾರದಿಂದ ಚಾಲಕರು ವಾಟ್ಸ್‌ ಆ್ಯಪ್‌ ಗ್ರುಪ್‌ ಮಾಡಿಕೊಂಡಿದ್ದಾರೆ. ಆ್ಯಪ್‌ ಆಧಾರಿತ ಟ್ಯಾಕ್ಸಿ ಚಾಲಕರು ಕೂಡ ಈ ಗ್ರುಪ್‌ನಲ್ಲಿದ್ದಾರೆ.

ಆದರೆ, ಗ್ರಾಹಕರ ಸೋಗಿನಲ್ಲಿ ಬರುವ ವಂಚಕರು ಹಣ ನೀಡದೆ ಮೋಸ ಮಾಡಿ ಹೋಗುತ್ತಾರೆ. ಆ್ಯಪ್ ಆಧಾರಿತ ಟ್ಯಾಕ್ಸಿ ಬಾಡಿಗೆ ನೀಡುವ ಸಂಸ್ಥೆಗಳು 24 ಗಂಟೆ ದುಡಿಸಿಕೊಳ್ಳುತ್ತವೆ. ಹಣದ ಆಸೆಗಾಗಿ ಚಾಲಕರು ನಿದ್ದೆ ಇಲ್ಲದೆ ಹೆಚ್ಚು ಟ್ರಿಪ್‌ ಮಾಡಿ ನಿದ್ದೆಗಣ್ಣಲ್ಲಿ ಚಾಲನೆ ಮಾಡುತ್ತಿರುವುದರಿಂದ ನಗರದಲ್ಲಿ ಅಪಘಾತಗಳು ಹೆಚ್ಚುತ್ತಿವೆ ಎನ್ನುವುದು ಪುನೀತ್‌ ವಾದ.

ಕೈಯಲ್ಲಿ ಹಣವಿಲ್ಲ. ಆರು ದಿನದಿಂದ ನಾನು ಮನೆಗೆ ಹೋಗಿಲ್ಲ. ಒಂದಾದ ಮೇಲೊಂದರಂತೆ ಟ್ರಿಪ್‌ ಮಾಡುತ್ತಿದ್ದೇನೆ. ಮೊದಲೇ ನಾಟಕ, ಸಿನಿಮಾ ಮಾಡಿಕೊಂಡು ಹಾಯಾಗಿದ್ದೆ ಎಂದು ಈಗ ಅನಿಸುತ್ತಿದೆ. ಹಾಗಂತ ರವೀಂದ್ರ ಕಲಾ ಕ್ಷೇತ್ರದ ಮೆಟ್ಟಿಲು ಮೇಲೆ ಕುಳಿತರೆ, ಸಿನಿಮಾ ಅವಕಾಶಕ್ಕಾಗಿ ಕಾಯ್ದು ಕುಳಿತರೆ ಉಪವಾಸ ಗ್ಯಾರಂಟಿ ಎಂದು ವ್ಯಥೆ ಬಿಚ್ಚಿಟ್ಟ. ಇದು ಈತನೊಬ್ಬನ ಕಥೆಯಲ್ಲ. ಉತ್ತರ ಕರ್ನಾಟಕದಿಂದ ಬಂದ ಬಹಳಷ್ಟು ಯುವಕರ ಪಾಡು ಇದಕ್ಕಿಂತ ಭಿನ್ನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT