ಭಾನುವಾರ, ಏಪ್ರಿಲ್ 5, 2020
19 °C
ಟಿಡಿಆರ್‌ ನೀಡುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಆಯುಕ್ತರಿಂದ ಕಟ್ಟುನಿಟ್ಟಿನ ಆದೇಶ

ಟಿಡಿಆರ್‌: ಅಕ್ರಮ ತಡೆಯಲು ಬಿಬಿಎಂಪಿ ಕ್ರಮ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಟ್ಟರಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪರಿಹಾರವಾಗಿ ಅಭಿವೃದ್ಧಿ ಹಕ್ಕು ವರ್ಗಾವಣೆಗೆ (ಟಿಡಿಆರ್‌) ಅವಕಾಶ ಕಲ್ಪಿಸಿದ ಪ್ರಕರಣಗಳಲ್ಲಿ ಅಕ್ರಮ ಬೆಳಕಿಗೆ ಬಂದ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಅಕ್ರಮಕ್ಕೆ ಅವಕಾಶ ಕಲ್ಪಿಸಿದ್ದ ಲೋಪಗಳನ್ನು ಸರಿಪಡಿಸುವತ್ತ ಹೆಜ್ಜೆ ಇಟ್ಟಿದೆ.

ಈ ಸಲುವಾಗಿಯೇ ಅಧಿಕಾರಿಗಳು ಅಭಿವೃದ್ಧಿ ಹಕ್ಕು ಪತ್ರಗಳ (ಡಿಆರ್‌ಸಿ) ಕಡತ ನಿರ್ವಹಣೆ ವೇಳೆ ಕಡ್ಡಾಯವಾಗಿ ಪಾಲಿಸ ಬೇಕಾದ 11 ಅಂಶಗಳನ್ನು ಪಟ್ಟಿಮಾಡಿದೆ. ಇವುಗಳನ್ನು ಪಾಲಿಸದಿದ್ದರೆ ಡಿಆರ್‌ಸಿ ವಿತರಣೆಗೆ ಸಲ್ಲಿಸುವ ಪ್ರಸ್ತಾವನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಗುತ್ತದೆ. ಈ ನಿರ್ದೇಶನ ಪಾಲಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ ಇಲಾಖಾ ವಿಚಾರಣೆಗೆ ಆದೇಶಿಸಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. 

2017ರ ಮಾ.14ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಸಿದ್ಧಪಡಿಸಿರುವ ಟಿಡಿಆರ್‌ ಸಂಬಂಧಿತ ಹೊಸ ಕಡತಗಳ ಜೊತೆಗೆ 2005ರ ಜ18ರ ಅಧಿಸೂಚನೆ ಪ್ರಕಾರ ಸಿದ್ಧಪಡಿಸಿದ್ದ ಟಿಡಿಆರ್‌ ಸಂಬಂಧಿತ ಕಡತಗಳನ್ನು ಬಿಬಿಎಂಪಿ ವಿಲೇ ಮಾಡಬೇಕಿದೆ. 2005ರ ಅಧಿಸೂಚನೆ ಪ್ರಕಾರದ ಕಡತಗಳ ಸಂಬಂಧ ಈಗಾಗಲೇ ಹಕ್ಕುಬಿಡುಗಡೆ ಪತ್ರ (ರಿಲಿಂಕ್ವಿಷ್‌ ಡೀಡ್‌) ನೋಂದಾಯಿಸಿದ್ದು ಅವುಗಳ ಟಿಡಿಆರ್‌ ಪ್ರಮಾಣಪತ್ರವನ್ನು ಇನ್ನೂ ನೀಡದ ಪ್ರಕರಣಗಳು ಹಾಗೂ ಹಕ್ಕು ಬಿಡುಗಡೆ ಪತ್ರವನ್ನು ಇನ್ನೂ ನೋಂದಾಯಿಸಿದ ಪ್ರಕರಣಗಳಿಗೆ ಸಂಬಂಧಿಸಿ ಡಿಆರ್‌ಸಿಗಳನ್ನು ಕೋರಿರುವ ಕಡತಗಳು ಟಿಡಿಆರ್‌ ವಿಭಾಗದ ಉಪ ಆಯುಕ್ತರ ಮುಂದಿವೆ.

ರಸ್ತೆಯಲ್ಲಿ ಒಟ್ಟು ಎಷ್ಟು ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ, ಯಾವ ಸ್ವತ್ತಿಗೆ ಟಿಡಿಆರ್‌ ಪ್ರಕಾರ ಪರಿಹಾರ ನೀಡಲಾಗಿದೆ, ಯಾವುದೇ ಪರಿಹಾರ ನೀಡದ ಸ್ವತ್ತುಗಳು ಯಾವುವು ಎಂಬುದನ್ನು ಗುರುತಿಸಿರುವ ರಸ್ತೆ ಹಾದುಹೋಗುವ ನಕ್ಷೆ ಆ ಕಡತಗಳಲ್ಲಿ ಇಲ್ಲ. ಹಾಗಾಗಿ ಯಾವ ಸ್ವತ್ತಿಗೆ ಡಿಆರ್‌ಸಿ ನೀಡಲಾಗಿದೆಯೇ ಇಲ್ಲವೇ ಎಂಬುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಸ್ವತ್ತುಗಳಿಗೆ ಮತ್ತೊಮ್ಮೆ ಟಿಡಿಆರ್‌ ನೀಡುವ ಸಾಧ್ಯತೆ ಇತ್ತು. ಈ ಗೊಂದಲ ನಿವಾರಿಸಲು ಮಾರ್ಗಸೂಚಿಯನ್ನು ನೀಡಲಾಗಿದೆ.

ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯವರು ಇನ್ನು ಮುಂದೆ ಪಾಲಿಕೆ ವತಿಯಿಂದ ವಿಸ್ತರಣೆಗೆ ಪ್ರಸ್ತಾಪಿಸಿರುವ ರಸ್ತೆ ಪರಿಷ್ಕೃತ ನಗರ ಮಹಾಯೋಜನೆ (ಆರ್‌ಎಂಪಿ) ಅಡಿಯಲ್ಲೂ ಗುರುತಿಸಲಾಗಿದೆಯೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಆರ್‌ಎಂಪಿಯಲ್ಲಿ ರಸ್ತೆ ವಿಸ್ತರಣೆ ಪ್ರಸ್ತಾಪ ಇಲ್ಲದಿದ್ದರೆ ಬಿಡಿಎ ಅನುಮೋದನೆ ಪಡೆದ ನಂತರವೇ ಹೊಸ ಟಿಡಿಆರ್‌ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ಹಿಂದೆ ಆಸ್ತಿ ಮಾಲೀಕರ ಬದಲು ಬೇರೆಯವರಿಗೆ ಟಿಡಿಆರ್‌ ಪ್ರಮಾಣ ಪತ್ರ ನೀಡುವ ಮೂಲಕ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿತ್ತು. ಸ್ವಾಧೀನಪಡಿಸಿಕೊಂಡ ಆಸ್ತಿಗಿಂತ ಹೆಚ್ಚು ಮೌಲ್ಯದ ಟೆಂಡರ್‌ ನೀಡಿದ ಪ್ರಕರಣಗಳು ಎಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿದ್ದವು. ಇದಕ್ಕೆ ಕಡಿವಾಣ ಹಾಕುವ ಸಲುವಾಗಿಯೂ ಪಾಲಿಕೆ ಕ್ರಮಕೈಗೊಂಡಿದೆ.

ಇನ್ನು ಮುಂದೆ ಕಾರ್ಯಪಾಲಕ ಎಂಜಿನಿಯರ್‌ ಅವರು ರಸ್ತೆ ವಿನ್ಯಾಸವನ್ನು (ಅಲೈನ್‌ಮೆಂಟ್‌) ಆರ್‌ಎಂಪಿ ನಕ್ಷೆ ಜೊತೆ ತಾಳೆ ಮಾಡಿ ಎಡ ಮತ್ತು ಬಲ ಭಾಗಗಳ ಪ್ರತಿಯೊಂದು ಸ್ವತ್ತಿಗೂ ಕ್ರಮಸಂಖ್ಯೆ ನೀಡಬೇಕು. ಆ ಸ್ವತ್ತುಗಳ ವಿಸ್ತೀರ್ಣ, ಅಳತೆ, ಕಟ್ಟಡದ ಸ್ವರೂಪ, ಮತ್ತು ಅಳತೆಯನ್ನೂ ಅದರಲ್ಲಿ ನಮೂದಿಸಬೇಕು. ಯಾವುದಾದರೂ ಕಟ್ಟಡಕ್ಕೆ ಈಗಾಗಲೇ ಟಿಡಿಆರ್‌ ನೀಡಿದ್ದರೆ ಅಥವಾ ಹಣ ನೀಡಿ ಭೂಸ್ವಾಧೀನ ಮಾಡಿಕೊಂಡಿದ್ದರೆ ಅದನ್ನೂ ಉಲ್ಲೇಖಿಸಬೇಕು. ರಸ್ತೆಯ ಈಗಿನ ಅಗಲ ಹಾಗೂ ಎಷ್ಟು ವಿಸ್ತರಣೆ ಮಾಡಲಾಗುತ್ತದೆ ಎಂಬುದನ್ನೂ ಗುರುತು ಮಾಡಬೇಕು ಎಂದೂ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್‌ಗಳು ಇನ್ನು ರಸ್ತೆವಾರು ಅಲೈನ್‌ಮೆಂಟ್‌ ರಿಜಿಸ್ಟರ್‌ನಲ್ಲಿ ನಿಗದಿತ ನಮೂನೆಗಳಲ್ಲಿ ನಕ್ಷೆ ತಯಾರಿಸಿ ಅದಕ್ಕೆ ನಗರ ಯೋಜನಾ ವಿಭಾಗದಿಂದ ಉಚಿತವಾಗಿ ಹಕ್ಕುಬಿಡುಗಡೆ ಪತ್ರ ಮಾಡಿಸಿಕೊಂಡು, ಕಟ್ಟಡದ ನಕ್ಷೆಗೆ ಅನುಮೋದನೆ ನೀಡಿದ ಮಾಹಿತಿಯನ್ನು ನಮೂದಿಸಬೇಕು. ಈ ಹಿಂದೆ ಎಷ್ಟು ಸ್ವತ್ತುಗಳಿಗೆ ಟಿಡಿಆರ್ ರೂಪದಲ್ಲಿ ಹಾಗೂ ಎಷ್ಟು ಮಂದಿಗೆ ಹಣದ ಪರಿಹಾರ ನೀಡಲಾಗಿದೆ ಎಂಬ ವಿವರಗಳನ್ನು ನಮೂದಿಸಬೇಕು ಎಂದು ಸೂಚಿಸಿದ್ದಾರೆ.   

‘ಜಂಟಿ ಸರ್ವೆ ನಡೆಸಿ ನಕ್ಷೆ ತಯಾರಿಸಿ’

ಪಾಲಿಕೆಯ ಭೂಸ್ವಾಧೀನ ಮತ್ತು ಟಿಡಿಆರ್‌ ವಿಭಾಗದ ಉಪಾ ಆಯುಕ್ತಯ ಕಚೇರಿಯ ಭೂಮಾಪಕರು/ಸರ್ವೇ ಮೇಲ್ವಿಚಾರಕರು ಹಾಗೂ ಬಿಡಿಎ ಭೂಮಾಪಕರು ಸೇರಿ ರಸ್ತೆ ವಿಸ್ತರಣೆ ಕಾಮಗಾರಿ ಅನುಷ್ಠಾನಗೊಳಿಸುವ ಎಂಜಿನಿಯರ್‌ಗಳು ಸೇರಿ ಸ್ವತ್ತಿನ ಜಂಟಿ ಸರ್ವೆ ನಡೆಸಿಯೇ ಡಿಜಿಟಲ್‌ ಸರ್ವೆ ನಕ್ಷೆ ತಯಾರಿಸಬೇಕು.

ಮಹಜರಿನ ಸಂದರ್ಭದಲ್ಲಿ ಮೂಲಮಾಲೀಕರು ಯಾರು, ಸರ್ವೆ ನಂಬರ್‌, ಕಂದಾಯ ಅಥವಾ ಭೂಪರಿವರ್ತನೆ ಮಾಡಿಸಿ ಮಾರಾಟ ಮಾಡಲಾದ ಜಮೀನೇ ಎಂಬ ವಿವರಗಳು ಸೇರಿದಂತೆ ಚೆಕ್‌ಲಿಸ್ಟ್‌ನಲ್ಲಿ ಎಲ್ಲ ಮಾಹಿತಿ ಭರ್ತಿ ಮಾಡಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು