ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆಗಳಿಗೆ 100 ಶಿಕ್ಷಕರ ನೇಮಕ’

ಬಿಐಎಎಲ್‌ನ ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕಾರ್ಯಕ್ರಮ
Last Updated 20 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು (ಬಿಐಎಎಲ್‌) ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) 100 ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರನ್ನು ಸರ್ಕಾರಿ ಶಾಲೆಗಳಿಗೆ ನಿಯೋಜಿಸಲು ಉದ್ದೇಶಿಸಿದೆ.

‘ಬೆಂಗಳೂರು ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶವಾಗಿದೆ.ದೇವನಹಳ್ಳಿ ತಾಲ್ಲೂಕಿನ ಆಯ್ದ ಸರ್ಕಾರಿ ಶಾಲೆಗಳಲ್ಲಿ 100 ಇಂಗ್ಲಿಷ್‌ ಮತ್ತು ಇತರೆ ವಿಷಯಗಳ ಬೋಧಕರನ್ನು ನೇಮಿಸುವ ಉದ್ದೇಶವನ್ನು ಹೊಂದಿದೆ.ಇದುವರೆಗೆ ಹಲವು ಶಾಲೆಗಳಲ್ಲಿ 50 ಶಿಕ್ಷಕರನ್ನು ನೇಮಕ ಮಾಡಿ ನಿಯೋಜಿಸಲಾಗಿದೆ’ ಎಂದು ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹರಿ ಕೆ. ಮರಾರ್‌ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ದೇವನಹಳ್ಳಿ ತಾಲ್ಲೂಕಿನ ವಿವಿಧೆಡೆ ಒಟ್ಟು 11 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಪುನರ್‌ನಿರ್ಮಿಸಿ, ಆಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ಎರಡು ಶಾಲೆಗಳ ನಿರ್ಮಾಣ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೆ ಮುನ್ನ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದರು.

‘ಅತ್ಯಾಧುನಿಕ ಮೂಲಸೌಕರ್ಯ ಸಂಪರ್ಕ, ಕಂಪ್ಯೂಟರ್‌ ಕೋಣೆಗಳು, ವಿಜ್ಞಾನ ಪ್ರಯೋಗಾಲಯ, ಆಟದ ಮೈದಾನಗಳು ಮತ್ತು ಗ್ರಂಥಾಲಯಗಳು ಸೇರಿವೆ. ಈ ಎಲ್ಲ ಶಾಲೆಗಳು ಸೌರವಿದ್ಯುತ್‌ ಸೌಲಭ್ಯ ಹೊಂದಿವೆ’ ಎಂದು ಅವರು ತಿಳಿಸಿದರು.

ಈ ಶಾಲೆಗಳಲ್ಲಿ ಆಧುನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. 2,500 ವಿದ್ಯಾರ್ಥಿಗಳಿಗೆ ಕಲಿಕಾ ವಸ್ತುಗಳು ಮತ್ತು ಸಾಮಗ್ರಿಗಳನ್ನು ಪೂರೈಸಲಾಗಿದೆ. 30 ಶಾಲೆಗಳ ಮೂರು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಬಿಐಎಎಲ್‌ ಬೆಳಗಿನ ತಿಂಡಿಯನ್ನು ನಿಗಮ ಪೂರೈಸುತ್ತಿದೆ ಎಂದು ಮರಾರ್‌ ತಿಳಿಸಿದರು.

ದತ್ತು ಪಡೆಯಲಾಗಿರುವ ಸರ್ಕಾರಿ ಶಾಲೆಗಳು: ಬೆಟ್ಟಕೋಟೆ, ಅರೆದೇಶನಹಳ್ಳಿ, ಕನ್ನಮಂಗಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ವಿಜಯಪುರ ಬಾಲಕಿಯರ ಮಾದರಿ ಶಾಲೆ ಮತ್ತು ಕೊರಚರಪಾಳ್ಯ, ಬೈಚಾಪುರ, ಅಣ್ಣೇಶ್ವರ, ಬುವನಹಳ್ಳಿ, ಚಿಕ್ಕಸನ್ನೆ, ದೊಡ್ಡಸನ್ನೆ ಹಾಗೂ ಯರ್ತಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಕುಡಿಯುವ ನೀರು ಕಲ್ಪಿಸಲು ಆದ್ಯತೆ

‘ವಿಮಾನ ನಿಲ್ದಾಣದ ಸುತ್ತ–ಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನದಲ್ಲಿದೆ. ಮಳೆ ನೀರು ಸಂಗ್ರಹ, ಕೆರೆಗಳ ಅಭಿವೃದ್ಧಿ ಸೇರಿದಂತೆ ಈ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಗಮನ ನೀಡಲಾಗುತ್ತದೆ. ಶಾಲೆಗಳ ಅಭಿವೃದ್ಧಿ ನಂತರ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ನಮ್ಮ ಆದ್ಯತೆಯಾಗಿದೆ’ ಎಂದು ಹರಿ ಮರಾರ್‌ ತಿಳಿಸಿದರು.

‘ದೂಳಿನ ಸಮಸ್ಯೆಗೆ ಪರಿಹಾರ’

‘ವಿಮಾನ ಸಂಚಾರ ವೇಳೆ ದೂಳು ಹೆಚ್ಚುತ್ತಿದ್ದು, ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಇದನ್ನು ಒಪ್ಪಲು ಸಾಧ್ಯವಿಲ್ಲ. ದೂಳಿನಿಂದಲೇ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ಸರ್ಕಾರದ ತಜ್ಞರ ಸಮಿತಿ ವರದಿ ಏನಾದರೂ ನೀಡಿದರೆ, ಈ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಹರಿ ಮರಾರ್‌ ತಿಳಿಸಿದರು.

‘ವಿಮಾನ ಸಂಚಾರ ಅಥವಾ ಇಳಿಯುವ ಸಂದರ್ಭದಲ್ಲಿ ದೂಳು ಏಳದ ರೀತಿಯಲ್ಲಿ ಸ್ಪ್ರೇ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಿಗೆ ಇಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೋರಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT