ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆದಾಯ ಹೆಚ್ಚಳಕ್ಕೆ ನೆರವಾದ ತಂತ್ರಜ್ಞಾನ

ಐಐಎಚ್‌ಆರ್‌ ತೋಟಗಾರಿಕಾ ಮೇಳದಲ್ಲಿ ‘ಅಟಾರಿ’ ನಿರ್ದೇಶಕ ವೆಂಕಟ ಸುಬ್ರಹ್ಮಣ್ಯಂ
Published 5 ಮಾರ್ಚ್ 2024, 22:30 IST
Last Updated 5 ಮಾರ್ಚ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನಗಳು ಲಕ್ಷದ್ವೀಪದಂತಹ ದೂರ ಪ್ರದೇಶಗಳಲ್ಲಿರುವ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗಿವೆ’ ಎಂದು ಬೆಂಗಳೂರಿನ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ ನಿರ್ದೇಶಕ ವೆಂಕಟ ಸುಬ್ರಹ್ಮಣ್ಯಂ ಅವರು ಶ್ಲಾಘಿಸಿದರು.

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಮಂಗಳವಾರದಿಂದ ಆರಂಭವಾದ ‘ರಾಷ್ಟ್ರೀಯ ತೋಟಗಾರಿಕಾ ಮೇಳ–2024‘ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಐಐಎಚ್‌ಆರ್‌ ತಂತ್ರಜ್ಞಾನಗಳು, ಮಹಿಳಾ ಉದ್ಯೋಗಿಗಳನ್ನು ಸೃಷ್ಟಿಸುವಲ್ಲಿಯೂ ಅಪಾರ ಕೊಡುಗೆ ನೀಡುತ್ತಿವೆ. ಇಂಥ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ, ಸನ್ಮಾನಿಸುತ್ತಿರುವುದು ಶ್ಲಾಘನೀಯ’ ಎಂದರು.

ಮೇಳ ಉದ್ಘಾಟಿಸಿ ಮಾತನಾಡಿದ ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭಾನುಪ್ರಕಾಶ್ ಶ್ರೀವಾಸ್ತವ್, ‘ದೇಶದ ಸೇನೆಗಾಗಿ ಬಿಇಎಲ್‌ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಹಾಗೂ ಸಂಶೋಧನೆಯನ್ನು ತೋಟಗಾರಿಕೆಯಲ್ಲಿ ಅಳವಡಿಸಿಕೊಳ್ಳಲು ಐಐಎಚ್ಆರ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ (ಐಸಿಎಆರ್‌) ತೋಟಗಾರಿಕೆ ವಿಭಾಗದ ಉಪಮಹಾ ನಿರ್ದೇಶಕ ಪ್ರೊ. ಸಂಜಯ್ ಕುಮಾರ್ ಸಿಂಗ್, ‘ಭಾರತದ ಆರ್ಥಿಕತೆಯಲ್ಲಿ ತೋಟಗಾರಿಕೆ ಕ್ಷೇತ್ರದ ಕೊಡುಗೆ ಹೆಚ್ಚಿದೆ. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ನಂತರ ಕೃಷಿ ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ತೋಟಗಾರಿಕೆ ಕ್ಷೇತ್ರ ಸಾಕಷ್ಟು ಕೊಡುಗೆ ನೀಡಿದೆ‘ ಎಂದರು.

‘ತೋಟಗಾರಿಕೆಯಲ್ಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ದೇಶದ ರೈತರ ಆದಾಯವೃದ್ಧಿ ಮಾಡುವುದರ ಜೊತೆಗೆ, ಹೊರದೇಶಗಳಿಗೆ ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡುವುದರ ಕಡೆ ಗಮನ ಹರಿಸಬೇಕಾಗಿದೆ. ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೂ ಒತ್ತು ನೀಡಬೇಕಿದೆ‘ ಎಂದು ಸಲಹೆ ನೀಡಿದರು.  

ಐಐಎಚ್‌ಆರ್‌ ನಿರ್ದೇಶಕ (ಪ್ರಭಾರ) ಪ್ರಕಾಶ್ ಪಾಟೀಲ್‌ ಸ್ವಾಗತಿಸಿದರು. ತೋಟಗಾರಿಕೆ ಮೇಳದ ಆಯೋಜನಾ ಕಾರ್ಯದರ್ಶಿ ಎಂ.ವಿ.ಧನಂಜಯ ಅವರು ಮೂರು ದಿನಗಳ ಮೇಳದ ಚಟುವಟಿಕೆಗಳನ್ನು ವಿವರಿಸಿದರು.

ಸಮಾರಂಭದಲ್ಲಿ ಸಂಸ್ಥೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವ 12 ಪ್ರಗತಿಪರ ರೈತರು, ತೋಟಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ನಾಲ್ವರು ಉದ್ಯಮಿಗಳು, ಐದು ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಐದು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT