ಭಾನುವಾರ, ಜೂನ್ 26, 2022
22 °C
ರಾಷ್ಟ್ರದ ಏಕತೆಗೆ ಧಕ್ಕೆಯಾಗುವ ಅಂಶಗಳು ಉಲ್ಲೇಖ

ಪಠ್ಯಪುಸ್ತಕದಲ್ಲಿ ಪ್ರಾದೇಶಿಕವಾದಕ್ಕೆ ತಕರಾರು: ಕರವೇ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾದೇಶಿಕವಾದದಿಂದ ರಾಷ್ಟ್ರದ ಏಕತೆ ಮತ್ತು ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂದು ಪಠ್ಯಪುಸ್ತಕ ಗಳಲ್ಲಿ ಉಲ್ಲೇಖಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಕ್ಷೇಪ ವ್ಯಕ್ತಪಡಿಸಿದೆ.

10ನೇ ತರಗತಿಯ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕದಲ್ಲಿ ಹೊಸ ಆವೃತ್ತಿಯ ರಾಜ್ಯಶಾಸ್ತ್ರ ವಿಷಯದ ‘ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು’ ಕುರಿತು ಅಧ್ಯಾಯದಲ್ಲಿ ಪ್ರಾದೇಶಿಕವಾದದ ಬಗ್ಗೆ ಪ್ರಸ್ತಾಪಿಸಲಾಗಿದೆ.

‘ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನೇ ಅತ್ಯಂತ ಗಾಢವಾಗಿ ಪ್ರೀತಿಸಿ, ಕೇವಲ ಆ ಭಾಗದ ಬಗ್ಗೆಯೇ ಅತಿಯಾದ ಅಭಿಮಾನವನ್ನು ಬೆಳೆಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎಂದು ಕರೆಯಬಹುದು. ಭಾರತದಂತಹ ವಿಶಾಲ ರಾಷ್ಟ್ರ ಸಹಜವಾಗಿ ಹಲವಾರು  ಪ್ರಾದೇಶಿಕ ವಿಭಿನ್ನತೆಯನ್ನು ಹೊಂದಿದ ದೇಶ. ಒಂದು ನಿರ್ದಿಷ್ಟ ಹಂತದವರೆಗೆ ಈ ಪ್ರಾದೇಶಿಕವಾದ ಸಹನೆಗೆ ಯೋಗ್ಯ ಎನಿಸುತ್ತದೆ. ತಮ್ಮದೇ ಪ್ರದೇಶದ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸಲು ಈ ಭಾವನೆ ಪ್ರೇರಣೆ ನೀಡುತ್ತದೆ. ಆದರೆ, ಈ ಪ್ರಾದೇಶಿಕ ಮನೋಭಾವ ತೀರಾ ಹೆಚ್ಚು ಎನಿಸಿದರೆ ಅದು ರಾಷ್ಟ್ರದ ಏಕತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ಒದಗಿಸುತ್ತದೆ. ಆದುದರಿಂದ ಆಯಾ ಪ್ರದೇಶದ ಜನಸಮುದಾಯ ತಮ್ಮದೇ ಪ್ರಾದೇಶಿಕ ಮನೋಭಾವ ಹೊಂದುವ ಜೊತೆ ಜೊತೆಗೇ ಸಮಗ್ರ ದೇಶದ ಪ್ರಗತಿಯ ಬಗೆಗೂ ಚಿಂತನೆ ಹರಿಸುವಿಕೆ ಅತ್ಯಗತ್ಯ’ ಎಂದು ಪಠ್ಯದಲ್ಲಿ ವಿವರಿಸಲಾಗಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ‘ಭಾಷಾ ಅಭಿಮಾನ, ಪ್ರಾದೇಶಿಕವಾದ ದೇಶ ಎದುರಿಸುತ್ತಿರುವ ಸಮಸ್ಯೆಗಳು. ರಾಷ್ಟ್ರವಾದಕ್ಕೆ ಇವು ಕಂಟಕ ಎಂದು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ನಾಡದ್ರೋಹಿಗಳಷ್ಟೇ ಇಂಥ ವಾದ ಮಾಡುತ್ತಾರೆ. ಕನ್ನಡತನ ಎಂಬುದು ಭಾರತೀಯತೆಗೆ ಪೂರಕವೇ ಹೊರತು ಮಾರಕವಲ್ಲ’ ಎಂದು ಪ್ರತಿಪಾದಿಸಿದ್ದಾರೆ.

’ಭಾಷಾಭಿಮಾನ ರಾಷ್ಟ್ರೀಯತೆಯ ಶತ್ರು ಎಂದು ಹೇಳುವ ಪಠ್ಯವನ್ನು ಕನ್ನಡಿಗರು ಯಾಕೆ, ಹೇಗೆ ಸಹಿಸಿಕೊಳ್ಳಬೇಕು? ಮ. ರಾಮಮೂರ್ತಿ, ಅ.ನ. ಕೃಷ್ಣರಾಯರು, ಡಾ.ರಾಜಕುಮಾರ್ ಸೇರಿದಂತೆ ಕನ್ನಡ ಚಳವಳಿ ಕಟ್ಟಿಬೆಳೆಸಿದ ಸಾವಿರಾರು ಮಹಾನಾಯಕರಿಗೆ ಮಾಡಿದ ಅವಮಾನವಿದು. ಪ್ರಾದೇಶಿಕವಾದವು ದೇಶದ ಸಮಸ್ಯೆ ಎಂದು ಬಿಂಬಿಸಿರುವ ಪಾಠವನ್ನು ಈ ಕೂಡಲೇ ಕಿತ್ತುಹಾಕಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು