ಗುರುವಾರ , ಅಕ್ಟೋಬರ್ 29, 2020
20 °C

ಯಲಹಂಕ: ಥಣಿಸಂದ್ರ-ನಾಗವಾರ ರಸ್ತೆ ಗುಂಡಿಮಯ, ವಾಹನಗಳ ಸಂಚಾರ ದುಸ್ತರ

ಡಿ.ಸುರೇಶ್ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಹೆಗಡೆನಗರ-ನಾಗವಾರ ಮುಖ್ಯರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ. 

ಈ ರಸ್ತೆಯು ಬಳ್ಳಾರಿ ಮುಖ್ಯರಸ್ತೆ, ರೇವಾ ಕಾಲೇಜು ಜಂಕ್ಷನ್, ಹೆಣ್ಣೂರು-ಬಾಗಲೂರು ಮುಖ್ಯರಸ್ತೆ ಹಾಗೂ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಎರಡು ವರ್ಷಗಳಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

’ರಸ್ತೆ ಪಕ್ಕದಲ್ಲಿ ಚರಂಡಿ ಇದ್ದರೂ ಹೂಳಿನಿಂದ ಮುಚ್ಚಿಕೊಂಡಿರುವುದರಿಂದ ಮಳೆ ಬಂದ ಸಂದರ್ಭದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತದೆ. ವಾಹನ ಸವಾರರು ಭಯದಿಂದ ಸಂಚರಿಸಬೇಕಿದೆ. ಥಣಿಸಂದ್ರ ವೃತ್ತದ ಮೂಲಕ ನಾಲ್ಕು ಕಡೆಗೆ ರಸ್ತೆ ಹಾದುಹೋಗಿರುವುದರಿಂದ ಸಂಚಾರ ದಟ್ಟಣೆ ವೇಳೆಯಲ್ಲಿ ವಾಹನಗಳು ಮಂದಗತಿಯಲ್ಲಿ ಸಾಗುತ್ತವೆ. ಇದರಿಂದಾಗಿ, ಸ್ಥಳೀಯರು ಗ್ರಾಮದೊಳಗೆ ಸಂಚರಿಸಲು ಪ್ರಯಾಸಪಡಬೇಕಾಗಿದೆ‘ ಎಂದು ಥಣಿಸಂದ್ರ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆ ಶಾರದಮ್ಮ ದೂರಿದರು.

’ಅಶ್ವತ್ಥನಗರದ ಬಳಿ ವಾಲ್ ಅಳವಡಿಸಲು ಜಲಮಂಡಳಿಯವರು ತೆಗೆದಿರುವ ದೊಡ್ಡ ಗುಂಡಿಯನ್ನು ಎರಡು ತಿಂಗಳು ಕಳೆದರೂ ಮುಚ್ಚಿಲ್ಲ. ಕಿರಿದಾದ ರಸ್ತೆಯಲ್ಲೇ ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸಬೇಕಿದೆ‘ ಎಂದು ಥಣಿಸಂದ್ರ ನಿವಾಸಿ ಸಿ.ಚಂದ್ರಶೇಖರ್ ಹೇಳಿದರು. 

’ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಬಿದ್ದು ಗಾಯಗೊಳ್ಳುವುದು ಸಾಮಾನ್ಯ. ಕಳೆದ ವಾರ ಒಂದೇ ದಿನದಲ್ಲಿ 5 ಮಂದಿ ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡರು. ಬಿಬಿಎಂಪಿ ಅಧಿಕಾರಿಗಳು ಇತ್ತೀಚೆಗೆ ಎರಡು ಸಲ ರಸ್ತೆಗೆ ಜಲ್ಲಿ ಸುರಿದು ತೇಪೆ ಹಾಕುವ ಕೆಲಸ ಮಾಡಿದರು. ಆದರೆ, ಒಂದೇ ಮಳೆಗೆ ಜಲ್ಲಿ ಮತ್ತು ಮಣ್ಣು ಕೊಚ್ಚಿಕೊಂಡು ಹೋಯಿತು‘ ಎಂದು ಸ್ಥಳೀಯ ನಿವಾಸಿ ಬಾಬು ಹೇಳಿದರು.

’ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ತಪ್ಪಿದಲ್ಲಿ ಶೀಘ್ರದಲ್ಲೇ ಥಣಿಸಂದ್ರ ವೃತ್ತದಲ್ಲಿ ತಮಟೆ ಚಳವಳಿ ಹಮ್ಮಿಕೊಳ್ಳಲಾಗುವುದು‘ ಎಂದು ಪ್ರಜಾವಿಮೋಚನಾ ಚಳವಳಿ(ಸ್ವಾಭಿಮಾನ) ರಾಜ್ಯಘಟಕದ ಅಧ್ಯಕ್ಷ ಮುನಿಆಂಜಿನಪ್ಪ ಎಚ್ಚರಿಸಿದರು.

’ಥಣಿಸಂದ್ರ-ನಾಗವಾರ ರಸ್ತೆ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಬಿಜೆಪಿ ಸರ್ಕಾರ ವಾಪಸ್ ಕಿತ್ತುಕೊಂಡಿತು. ಕಾವೇರಿ ನೀರು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ರಸ್ತೆ ತೀರಾ ಹಾಳಾಗಿ ಜನರಿಗೆ ತೊಂದರೆಯಾಗುತ್ತಿದೆ. ಅನುದಾನ ಬಿಡುಗಡೆಗಾಗಿ ಮುಖ್ಯಮತ್ರಿ ಅವರಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಾಗವಾರ ವರ್ತುಲ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗುತ್ತಿದ್ದು, ಅದರ ಉಳಿಕೆ ಹಣದಲ್ಲಿ ಈ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾಡುವಂತೆ ಮನವಿ ಮಾಡಲಾಗಿದೆ‘ ಎಂದು ಶಾಸಕ ಕೃಷ್ಣಬೈರೇಗೌಡ ತಿಳಿಸಿದರು.

’ಥಣಿಸಂದ್ರ ರೈಲ್ವೆ ಮೇಲ್ಸೇತುವೆಯಿಂದ ನಾಗವಾರ ವರ್ತುಲ ರಸ್ತೆಯವರೆಗೆ ವೈಟ್‌ ಟಾಪಿಂಗ್‌ ಮಾಡಲಾಗುತ್ತಿದೆ. ಜಲಮಂಡಳಿಯಿಂದ ‍ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಸಂಬಂಧ ಜಲಮಂಡಳಿ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಲಾಗುವುದು‘ ಎಂದು ಪಾಲಿಕೆಯ ಯಲಹಂಕ ವಲಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿ ಯರ್‌ ವರುಣ್‌ ಕುಮಾರ್
ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು