ಭಾನುವಾರ, ಜೂಲೈ 5, 2020
27 °C
ಬ್ಯಾಂಕ್‌ಗಳ ಕಾರ್ಯವೈಖರಿ * ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ನೆನಪು

₹5 ಲಕ್ಷ ಸಾಲಕ್ಕೂ ತಿಣುಕಾಡಿದ್ದೆ: ಕಿರಣ್‌ ಮಜುಂದಾರ್‌ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೆಣ್ಣು ಎಂಬ ಕಾರಣಕ್ಕೇ ₹5 ಲಕ್ಷ ಸಾಲ ನೀಡಲು ಬ್ಯಾಂಕ್‌ಗಳು ಸತಾಯಿಸಿದ್ದವು. ಆದರೆ, ಸಾಧಿಸುವ ಛಲದೊಂದಿಗೆ ಮುನ್ನುಗ್ಗಿದೆ. ಈಗ 12 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದೇನೆ’ ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ ಹೇಳಿದರು.

ಸುಧಾಮೂರ್ತಿ ಅವರ ‘ದಿ ಡಾಟರ್‌ ಫ್ರಂ ಎ ವಿಶಿಂಗ್‌ ಟ್ರೀ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

‘ಆಗ, ನನ್ನ ಬ್ಯಾಂಕ್ ಖಾತೆಯಲ್ಲಿ ₹10 ಸಾವಿರ ಇತ್ತು. ₹ 5 ಲಕ್ಷ ಸಾಲ ನೀಡಿದರೆ ಉದ್ಯಮ ಆರಂಭಿಸುತ್ತೇನೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದ್ದೆ. ಹೆಣ್ಣು ಮಕ್ಕಳು ಯಾವ ಉದ್ಯಮ ಆರಂಭಿಸುತ್ತೀರಿ? ಅದೆಲ್ಲಾ ಸುಲಭದ ವಿಷಯ ಅಲ್ಲ
ಎಂದು ಹೇಳಿ ಕಳುಹಿಸಿದ್ದರು’ ಎಂದು ಗತಕಾಲದ ನೆನಪು ಮೆಲುಕು ಹಾಕಿದರು.

‘ನಾನು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಬೇರೆ ಬೇರೆ ಬ್ಯಾಂಕ್‌ಗಳ ಕದ ತಟ್ಟಿ ಬ್ಯಾಂಕ್‌ ಅಧಿಕಾರಿಗಳಿಗೆ ನನ್ನ ಸಾಮರ್ಥ್ಯ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ಕೊನೆಗೂ ಒಂದು ಬ್ಯಾಂಕ್ ಸಾಲ ನೀಡಿತು. ಉದ್ಯಮ ಆರಂಭಿಸಿ ಯಶಸ್ವಿಯಾದೆ’ ಎಂದು ಅವರು ಉದ್ಯಮ ಸ್ಥಾಪನೆಯ ಆರಂಭದ ದಿನಗಳನ್ನು ನೆನಪಿಸಿಕೊಂಡರು.

‘ನಾನು ಹೆಣ್ಣು, ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಕುಳಿತುಕೊಂಡರೆ ಯಶಸ್ಸು ಸಾಧಿಸಲು ಆಗುವುದಿಲ್ಲ. ನಾನು ಕಲಿತಿದ್ದ ವಿದ್ಯೆ ನನ್ನಲ್ಲಿ ಛಲ ಮತ್ತು ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿತ್ತು’ ಎಂದು ವಿವರಿಸಿದರು.

‘ಹೆಣ್ಣು ಮಕ್ಕಳು ಯಾವುದಕ್ಕೂ ಅಂಜದೆ ಪುರುಷರಿಗೆ ಸರಿಸಮನಾಗಿ ಮುನ್ನುಗ್ಗಬೇಕು. ಪುರುಷರು ಮಹಿಳೆಯರನ್ನು ಗೌರವಿಸಬೇಕು. ಅದೇ ರೀತಿ ಮಹಿಳೆ ಕೂಡಾ ಪುರುಷರನ್ನು ಗೌರವದಿಂದ ಕಾಣಬೇಕು’ ಎಂದರು.

‘ಪಾರ್ವತಿಗೂ ಮಗಳಿಲ್ಲದ ಚಿಂತೆ ಇತ್ತು’
ಲೇಖಕಿ ಸುಧಾಮೂರ್ತಿ ಮಾತನಾಡಿ, ‘ಪೋಷಕರ ಕಡೆಯ ದಿನಗಳಲ್ಲಿ ಅವರ ಆರೋಗ್ಯದ ಕಡೆ ಗಮನ ಹರಿಸುವುದು ಹೆಣ್ಣು ಮಕ್ಕಳೇ. ಕಿರಣ್ ಮಜುಂದಾರ್ ಶಾ ಅವರು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ತಾಯಿಯ ಆರೈಕೆಗೆ ಸಮಯ ಮೀಸಲಿಡುತ್ತಾರೆ’ ಎಂದು ಹೇಳಿದರು.

‘ಸಾಕ್ಷಾತ್ ಶಿವನನ್ನೇ ಮದುವೆಯಾಗಿದ್ದ ಪಾರ್ವತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದರೆ, ಹೆಣ್ಣು ಮಕ್ಕಳಿಲ್ಲ ಎಂಬ ಚಿಂತೆ ಆಕೆಯನ್ನೂ ಕಾಡಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು