ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಭಿನ್ನವಾಗಿ ಕಂಡರೂ ಭಾರತೀಯರ ಜೀವನ ಪದ್ಧತಿಯ ಮೂಲ ಒಂದೇ: ಎಸ್‌.ಎಲ್‌. ಭೈರಪ್ಪ

ಆಚಾರ್ಯ ಬಿಎಂಶ್ರೀ ಗೌರವ ಪ್ರಶಸ್ತಿ ಸ್ವೀಕರಿಸಿದ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ
Published 25 ಡಿಸೆಂಬರ್ 2023, 15:57 IST
Last Updated 25 ಡಿಸೆಂಬರ್ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾದೇಶಿಕವಾಗಿ ಭಿನ್ನ ಭಿನ್ನವಾಗಿ ಕಂಡರೂ ಭಾರತೀಯರ ಜೀವನ ಪದ್ಧತಿಯ ಮೂಲ ಒಂದೇ ಎಂದು ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಹೇಳಿದರು.

ಬಬ್ಬೂರುಕಮ್ಮೆ ಸೇವಾ ಸಮಿತಿ ವತಿಯಿಂದ ಸೋಮವಾರ ‘ಆಚಾರ್ಯ ಬಿಎಂಶ್ರೀ’ ಗೌರವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಸುತ್ತಾಡಿದ್ದೇನೆ. ಮೇಲ್ನೋಟಕ್ಕೆ ಸಂಸ್ಕೃತಿಯಲ್ಲಿ ವ್ಯತ್ಯಾಸ ಕಾಣಬಹುದು. ಆಳದಲ್ಲಿ ಎಲ್ಲರ ನಂಬಿಕೆ, ಸಂಸ್ಕೃತಿ ಒಂದೇ ಆಗಿರುವುದನ್ನು ಕಂಡಿದ್ದೇನೆ’ ಎಂದು ವಿವರಿಸಿದರು.

‘ಬೇರೆ ಬೇರೆ ಜಾತಿ ಸಮುದಾಯಗಳ ಸಂಸ್ಕೃತಿ, ಸಂಪ್ರದಾಯಗಳನ್ನು ನೋಡುತ್ತಾ ನಾನು ಬೆಳೆದವನು. ಒಕ್ಕಲಿಗರು, ಕುರುಬರು ಸಹಿತ ಬೇರೆ ಸಮುದಾಯದವರ ಮನೆಗೆ ತೆರಳಿ, ಅವರ ಸಂಸ್ಕೃತಿಯನ್ನು ಹತ್ತಿರದಿಂದ ಕಂಡು, ಅವರ ಮನೆಯಲ್ಲಿಯೇ ಉಂಡುವನು. ನಾನು ಕಾದಂಬರಿ ಬರೆಯಬೇಕು ಎಂದು ಈ ರೀತಿ ಮಾಡಿದ್ದಲ್ಲ. ಬಾಲ್ಯದಲ್ಲೇ ಇದ್ದ ಕುತೂಹಲವು ಅಧ್ಯಯನಕ್ಕೆ ಕಾರಣವಾಯಿತು. ಇದೇ ಕಾದಂಬರಿ ಬರೆಯಲು ಸಹಾಯವಾದವು’ ಎಂದು ಹೇಳಿದರು.

‘ನಾನು ಹಾಸನ ಸೇರಿದಂತೆ ಬೇರೆ ಬೇರೆ ಊರುಗಳ ಜಾತ್ರೆಗಳಿಗೆ ತೆರಳುತ್ತಿದ್ದೆ. ಅಲ್ಲಿ ಜನಸಾಮಾನ್ಯರೊಂದಿಗೆ ಮಾತನಾಡುತ್ತಿದ್ದೆ. ಜನರ ಆಡುನುಡಿ ಕಿವಿಗೆ ಬೀಳುತ್ತಿದ್ದುದರಿಂದ ನನ್ನ ಕನ್ನಡ ಭಾಷೆ ಬಿಗಿಯಾಯಿತು’ ಎಂದು ತಿಳಿಸಿದರು.

‘ನವೋದಯ ಸಾಹಿತ್ಯ ಚಳವಳಿ ಕಟ್ಟಲು ಕೆಲಸ ಮಾಡಿದ ಬಿಎಂಶ್ರೀ ಅವರಿಂದ ಆಧುನಿಕ ಕನ್ನಡ ಬೆಳೆಯಿತು. ಬಿಎಂಶ್ರೀಯವರ ಹೆಗಲ ಮೇಲೆ ಕುಳಿತು ನಾವೆಲ್ಲ ಕಾದಂಬರಿ ಬರೆಯುವಂತಾಯಿತು’ ಎಂದು ವಿಶ್ಲೇಷಿಸಿದರು.

‘ನಾನು ಕನ್ನಡದಲ್ಲಿ ಬರೆಯುವ ಭಾರತದ ಲೇಖಕ. ಕನ್ನಡ ನನ್ನ ಭಾಷೆ. ಭಾರತೀಯತೆ ನನ್ನ ವಿಚಾರ’ ಎಂದು ಹೇಳಿದರು.

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌. ಶ್ರೀಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು. ಬಬ್ಬೂರುಕಮ್ಮೆ  ಸೇವಾ ಸಮಿತಿ ಅಧ್ಯಕ್ಷ ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT