ಮಂಗಳವಾರ, ಮೇ 17, 2022
26 °C

ವಿಶ್ವದಲ್ಲೇ ಶಕ್ತಿಯುತವಾದ ನ್ಯಾಯಾಂಗ ವ್ಯವಸ್ಥೆ: ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದಲ್ಲಿ ಈಗಲೂ ಸಾರ್ವಜನಿಕರ ಗೌರವ ಮತ್ತು ನಂಬಿಕೆಗೆ ಹೆಚ್ಚು ಪಾತ್ರವಾಗಿರುವುದು ಎಂದರೆ ನ್ಯಾಯಾಂಗ ವ್ಯವಸ್ಥೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು

ಹೈಕೋರ್ಟ್, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಜಂಟಿಯಾಗಿ ಶನಿವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಾಗಾರಿ, ನೂತನ ಕಟ್ಟಡ ಉದ್ಘಾಟನೆ, ನೂತನ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ದಾವೆಗಳನ್ನು ನಿಭಾಯಿಸುವ ಶಕ್ತಿಯುತವಾದ ವ್ಯವಸ್ಥೆಯನ್ನು ನಮ್ಮ ನ್ಯಾಯಾಂಗ ವ್ಯವಸ್ಥೆ ಹೊಂದಿದೆ. ಇದಕ್ಕೆ ಬೇಕಾದ ಮೂಲಸೌಕರ್ಯ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆ. ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲಾಗುವುದು ಎಂದು ಹೇಳಿದರು.‌

‘ಭಾರತದ ನ್ಯಾಯಾಲಯ ವ್ಯವಸ್ಥೆ ಅತ್ಯಂತ ಸುಭದ್ರವಾಗಿದ್ದು, ಕೋವಿಡ್ ಸಂದರ್ಭದಲ್ಲೂ ಆನ್‍ಲೈನ್ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಲಾಗಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಶಾಖಾ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಶೀಘ್ರದಲ್ಲಿ ನ್ಯಾಯ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದೆ’ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್, ‘ವಾಣಿಜ್ಯ ವ್ಯಾಜ್ಯಗಳಿಗಾಗಿ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸುವ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಪರ್ವವೊಂದು ಆರಂಭ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ತಂತ್ರಜ್ಞಾನವನ್ನು ನ್ಯಾಯಾಲಯ ಬಳಸಿಕೊಳ್ಳುತ್ತಿದ್ದು, ವ್ಯಾಜ್ಯಗಳ ತ್ವರಿತ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಮೆಚ್ಚುಗೆ ಸೂಚಿಸಿದರು.

ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ‘ಇದೊಂದು ಹೈಬ್ರಿಡ್ ಕಾಲವಾಗಿದ್ದು, ನ್ಯಾಯಮೂರ್ತಿ ಮೋಹನ್ ಎಂ.ಶಾಂತನಗೌಡ ಅವರು ದೆಹಲಿಯಲ್ಲಿ ಕುಳಿತು ಇಂದಿನ ಕಾರ್ಯಕ್ರಮಕ್ಕೆ ಇ-ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೊರ ತಂದಿರುವ ಗೀತೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ, ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ, ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ, ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಬಾಬು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು