ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಪೈಸೆ ಲಂಚ ಪಡೆದಿದ್ದರೆ ರಾಜಕೀಯದಿಂದ ನಿವೃತ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ ಗುತ್ತಿಗೆದಾರರ ಸಮ್ಮೇಳನ
Published 4 ಮಾರ್ಚ್ 2024, 15:46 IST
Last Updated 4 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ‘ಗುತ್ತಿಗೆದಾರರ ಬಿಲ್‌ ಪಾವತಿಸಲು ನೀಡುವ ಯಾವುದೇ ಎಲ್‌ಒಸಿಗೆ (ಹಣ ಭರವಸೆ ಪತ್ರ) ಐದು ಪೈಸೆ ನಾನು ಪಡೆದಿದ್ದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ನಗರದಲ್ಲಿ ಸೋಮವಾರ ನಡೆದ ರಾಜ್ಯ ಗುತ್ತಿಗೆದಾರರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದಿನ ಸರ್ಕಾರ 40 ಪರ್ಸೆಂಟ್‌ ಲಂಚ ಪಡೆಯುತ್ತಿದ್ದ ಬಗ್ಗೆ ತನಿಖೆ ನಡೆಸಲು ನ್ಯಾ. ನಾಗಮೋಹನದಾಸ್ ಸಮಿತಿ ನೇಮಕ ಮಾಡಲಾಗಿದೆ. ತನಿಖೆ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿಯೂ ಈ ರೀತಿ ಲಂಚ ಪಡೆಯುತ್ತಿದ್ದರೆ ಈ ಸಮಿತಿಗೆ ದೂರು ಸಲ್ಲಿಸಿ’ ಎಂದು ಸಲಹೆ ನೀಡಿದರು.

‘ನಾನು ಹಿಂದಿನ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗುತ್ತಿಗೆದಾರರ ಬಿಲ್‌ ಉಳಿಸಿಕೊಂಡಿರಲಿಲ್ಲ. ಬಿಜೆಪಿ ಆಡಳಿತಕ್ಕೆ ಬಂದಾಗ ಅವರು ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲದೇ ಇದ್ದರೂ ಹಣಕಾಸು ಆಯೋಗ ಒಪ್ಪದೇ ಇದ್ದರೂ ಅನೇಕ ಟೆಂಡರ್‌ಗಳನ್ನು ಕರೆದಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ನೀವು ಯಾಕೆ ಕಾಮಗಾರಿ ನಡೆಸಲು ಒಪ್ಪಿಕೊಂಡ್ರಿ. ನಾನೇ ಹೇಳಿದರೂ ಕಾಮಗಾರಿಯ ಒಟ್ಟು ವೆಚ್ಚದ 3ನೇ 1 ಭಾಗದಷ್ಟು ಹಣ ತೆಗೆದಿರಿಸದ ಕಾಮಗಾರಿಗಳನ್ನು ನೀವು ಒಪ್ಪಿಕೊಳ್ಳಬೇಡಿ. ಒಪ್ಪಿಕೊಂಡರೆ ಹಿಂದಿನ ಸರ್ಕಾರದಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಂತೆ ಮುಂದೆಯೂ ಸಂಕಷ್ಟಕ್ಕೆ ಸಿಲುಕುತ್ತೀರಿ’ ಎಂದು ಎಚ್ಚರಿಸಿದರು.

ಪ್ಯಾಕೇಜ್ ಪದ್ಧತಿ ರದ್ದುಗೊಳಿಸುವುದು, ಬಾಕಿ ಮೊತ್ತವನ್ನು ಪಾವತಿಸುವುದು ಸೇರಿದಂತೆ ಗುತ್ತಿಗೆದಾರರು ಮುಂದಿಟ್ಟ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ಪ್ಯಾಕೇಜ್‌ ಪದ್ಧತಿಯಲ್ಲಿ ಅನೇಕ ಗುತ್ತಿಗೆದಾರರು ಬಂದುಬಿಟ್ಟಿದ್ದಾರೆ. ಒಮ್ಮೆಲೇ ನಿಲ್ಲಿಸಲಾಗುವುದಿಲ್ಲ. ಹಂತ ಹಂತವಾಗಿ ಕಡಿಮೆಗೊಳಿಸಿ, ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ರಾಜಕಾರಣಿಗಳು ಮತ್ತು ಅಧಿಕಾರಿಗಳ ಕಿರುಕುಳದಿಂದ ನೀವು ಬಸವಳಿದಿದ್ದೀರಿ. ರಾಜಕೀಯದವರ ಸಹವಾಸದಿಂದ ದೂರ ಇರುವುದು ಒಳಿತು’ ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು.

‘ಮುಂದಿನ 9 ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ. ನಿಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುತ್ತೇವೆ. ಗುತ್ತಿಗೆದಾರರು ಇಲ್ಲದೇ ಸರ್ಕಾರ ನಡೆಸಲು ಸಾಧ್ಯವಿಲ್ಲ. ಹಿಂದಿನ ಸರ್ಕಾರ ಸರಿಯಾದ ಯೋಜನೆ ತಯಾರಿಸದೆ ಕಾಮಗಾರಿಗಳನ್ನು ಮಂಜೂರು ಮಾಡಿ ನಿಮ್ಮ ಮೇಲೆ ಹೊರೆ ಹಾಕಿದೆ. ಹಿಂದಿನ ಸರ್ಕಾರ ಬಜೆಟ್‌ನಲ್ಲಿ ನೀರಾವರಿಗೆ ₹ 16 ಸಾವಿರ ಕೋಟಿ ಮೀಸಲಿರಿಸಿ, ₹ 25 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಿದೆ. ನನ್ನ ಇಲಾಖೆಯಲ್ಲಿ ₹ 1.25 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳು ಈ ರೀತಿಯಾಗಿ ನಡೆಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಯಾವುದೇ ಪ್ಯಾಕೇಜ್‌ ಕಾಮಗಾರಿ ಕೈಬಿಟ್ಟು, ಸಣ್ಣ ಗುತ್ತಿಗೆದಾರರಿಗೆ ಉಪಯೋಗವಾಗಲು ಲೋಕೋಪಯೋಗಿ ಇಲಾಖೆಯಿಂದ ₹ 4,000 ಕೋಟಿಯ ಕಾಮಗಾರಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಗುತ್ತಿಗೆದಾರರ ಸಂಕಷ್ಟ ಪರಿಹರಿಸಲು ಈಗಾಗಲೇ ಎರಡು ಬಾರಿ ಸಭೆ ನಡೆಸಿದ್ದೇನೆ’ ಎಂದು ತಿಳಿಸಿದರು.

ಸಚಿವರಾದ ಬಿ.ಜೆಡ್‌. ಜಮೀರ್ ಅಹಮದ್ ಖಾನ್, ದಿನೇಶ್‌ ಗುಂಡೂರಾವ್‌, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

‘ಬಾಕಿ ಬಿಲ್‌ ಒಮ್ಮೆಲೇ ಪಾವತಿಸಲು ನೋಟ್‌ ಪ್ರಿಂಟರ್‌ ಇಲ್ಲ’

‘ಗುತ್ತಿಗೆದಾರರ ಬಾಕಿ ಬಿಲ್‌ ಒಂದೇ ಬಾರಿಗೆ ಚುಕ್ತಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದೀರಿ. ಒಂದೇ ಬಾರಿ ಪಾವತಿಸಲು ನಮ್ಮ ಸರ್ಕಾರದಲ್ಲಿ ನೋಟ್‌ ಪ್ರಿಂಟ್‌ ಮಷಿನ್‌ ಇಲ್ಲ. ಹಂತಹಂತವಾಗಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ₹ 5300 ಕೋಟಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ಘೋಷಿಸಿದ್ದರು. ಆದರೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಎಷ್ಟೇ ಅಸಹಕಾರ ನೀಡಿದರೂ ಗುತ್ತಿಗೆದಾರರ ಬಾಕಿ ಹಣವನ್ನು ಉಳಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT