ಶನಿವಾರ, ಜುಲೈ 31, 2021
25 °C
ಕೋವಿಡ್‌ ಪರೀಕ್ಷೆ: ವೆಚ್ಚ ಉಳಿತಾಯದ ಆಶಾಕಿರಣ ಈ ಉಪಕರಣ

ಬೆಂಗಳೂರು: ಅನಗತ್ಯ ಪರೀಕ್ಷೆ ತಪ್ಪಿಸಲಿದೆ ಪೋರ್ಟೆಬಲ್‌ ಎಕ್ಸ್–ರೇ

ಪ್ರವೀಣ್‌ ಕುಮಾರ್‌ ‍ಪಿ.ವಿ. Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ರಾಜಾಜಿನಗರದ ‘ಐಟಿಐಇ ನಾಲೆಜ್‌ ಸಲ್ಯೂಷನ್ಸ್‌’ ಸಂಸ್ಥೆಯು ದಕ್ಷಿಣ ಕೋರಿಯಾದ ಎಚ್‌ಡಿಟಿ ಕಂಪನಿ ಸಹಭಾಗಿತ್ವದಲ್ಲಿ ಪೋರ್ಟೆಬಲ್‌ ಎಕ್ಸ್‌–ರೇ ಉಪಕರಣವನ್ನು ಅಭಿವೃದ್ಧಿಪಡಿಸಿದೆ.

ಅನಗತ್ಯವಾಗಿ ಕೋವಿಡ್‌ ಪರೀಕ್ಷೆ ನಡೆಸುವುದನ್ನು ತಪ್ಪಿಸಲು ಈ ಸಾಧನವು ನೆರವಾಗಲಿದೆ ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕ ಡಾ.ಸಂಜೀವ ಕುಬಕಡ್ಡಿ.

‘ಈ ಉಪಕರಣ ಬಳಸಿ ವ್ಯಕ್ತಿಯನ್ನು ಮುಟ್ಟದೆಯೇ ಶ್ವಾಸಕೋಶದ ಎಕ್ಸ್‌–ರೇ ತೆಗೆಯಬಹುದು. ಆಂಬುಲೆನ್ಸ್‌ನಲ್ಲೂ ಈ ಉಪಕರಣವನ್ನು ಒಯ್ದು ಆರಂಭಿಕ ಹಂತದಲ್ಲೇ ವ್ಯಕ್ತಿಯ ಎಕ್ಸ್–ರೇ ತೆಗೆಯಬಹುದು. ವ್ಯಕ್ತಿಗೆ ಕೋವಿಡ್‌ ಲಕ್ಷಣಗಳಿವೆಯೇ ಎಂಬುದನ್ನು ಶ್ವಾಸಕೋಶದ ರಚನೆಯಲ್ಲಿನ ಮಾರ್ಪಾಡುಗಳನ್ನು ಆಧರಿಸಿ ಪತ್ತೆ ಹಚ್ಚುವ ಹೊಸ ತಂತ್ರಾಂಶವನ್ನು ಇದರಲ್ಲಿ ಅಳವಡಿಸಿದ್ದೇವೆ. ಕೋವಿಡ್ ಲಕ್ಷಣ ಕಂಡುಬಂದರೆ ಆ ವ್ಯಕ್ತಿಯ ಗಂಟಲ ದ್ರವದ ಪರೀಕ್ಷೆಯ ಮೂಲಕ ದೃಢಪಡಿಸಿಕೊಳ್ಳಬಹುದು’ ಎಂದು ಡಾ.ಕುಬಕಡ್ಡಿ ವಿವರಿಸಿದರು.

‘ಕೋವಿಡ್‌ ಪರೀಕ್ಷೆಗೆ ₹ 4,500ರವರೆಗೆ ಖರ್ಚಾಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧರಿತವಾದ ಈ ಉಪಕರಣದಿಂದ ತೆಗೆಯುವ ಪ್ರತಿ ಎಕ್ಸ್‌–ರೇಗೆ ಹೆಚ್ಚೆಂದರೆ ₹ 100 ಖರ್ಚಾಗಬಹುದು. ವ್ಯಕ್ತಿಯ ಎಕ್ಸ್‌–ರೇ ಚಿತ್ರ ನೋಡಿ ಅವರಿಗೆ ಕೋವಿಡ್‌ ಪರೀಕ್ಷೆಯ ಅಗತ್ಯವಿದೆಯೇ ಎಂದು ನಿರ್ಧರಿಸಬಹುದು. ಇದರಿಂದ ಸಾವಿರಾರು ರೂಪಾಯಿಯ ಉಳಿತಾಯವಾಗುತ್ತದೆ’ ಎಂದು ತಿಳಿಸಿದರು.

‘ಸಾಮಾನ್ಯ ಎಕ್ಸ್–ರೇ ಯಂತ್ರಗಳಿಗಿಂತ ನೂರು ಪಟ್ಟು ಕಡಿಮೆ ವಿಕಿರಣ ಹೊರಸೂಸುವ ಈ ಉಪಕರಣ ಹೆಚ್ಚು ಸುರಕ್ಷಿತ. ಪೋರ್ಟೆಬಲ್‌ ಬ್ಯಾಟರಿ, ವೈ–ಫೈ ಸೌಲಭ್ಯವಿರುವ ಈ ಸಾಧನದಿಂದ ತೆಗೆಯುವ ಎಕ್ಸ್‌–ರೇ ಇಮೇಜ್‌ಗಳನ್ನು ನೇರವಾಗಿ ವೈದ್ಯರಿಗೆ ಕಳುಹಿಸಬಹುದು. ಪ್ರತಿಫಲಕ ಹಾಗೂ ತಂತ್ರಾಂಶದ ವೆಚ್ಚ ಸೇರಿ ಇದರ ದರ ₹ 35 ಲಕ್ಷ’ ಎಂದರು.

2019ರ ನವೆಂಬರ್‌ನಲ್ಲಿ ನಡೆದಿದ್ದ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಈ ಯಂತ್ರವನ್ನು ಮೂಲಮಾದರಿಯನ್ನು ಸಂಸ್ಥೆ ಬಿಡುಗಡೆ ಮಾಡಿತ್ತು. ಟೆಕ್‌ ಸಮಿಟ್‌ನ ವಸ್ತುಪ್ರದರ್ಶನದಲ್ಲಿ  ಈ ಸಂಸ್ಥೆಯ ಮಳಿಗೆಗೆ ‘ಬೆಸ್ಟ್‌ ಎಕ್ಸಿಬಿಟರ್‌’ ಪ್ರಶಸ್ತಿ ಲಭಿಸಿತ್ತು. ಈಗ ಕೋವಿಡ್‌ ಲಕ್ಷಣ ಗುರುತಿಸುವ ತಂತ್ರಾಂಶವನ್ನೂ ಸಂಸ್ಥೆಯು ಉಪಕರಣದಲ್ಲಿ ಅಳವಡಿಸಿದೆ. 

‘ಚಿಕಿತ್ಸೆಗೆ ಸ್ಪಂದನೆ ತಿಳಿಯುವುದಕ್ಕೂ ಸಹಕಾರಿ’

‘ಕೋವಿಡ್ ರೋಗಿಯು ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಅವರ ಎಕ್ಸ್‌–ರೇ ತೆಗೆಯಬೇಕಾಗುತ್ತದೆ. ಆಸ್ಪತ್ರೆಗಳ ಎಕ್ಸ್‌–ರೇ ಕೊಠಡಿಗೆ ರೋಗಿಯನ್ನು ಪದೇ ಪದೇ ಕರೆದೊಯ್ಯುವುದು ಅಪಾಯಕಾರಿ. ಈ ಯಂತ್ರದಿಂದ ರೋಗಿ ಇರುವಲ್ಲೇ ಅವರನ್ನು ಮುಟ್ಟದೆಯೇ ಎಕ್ಸ್‌–ರೇ ತೆಗೆಯಬಹುದು’ ಎಂದು ಡಾ.ಸಂಜೀವ ಕುಬಕಡ್ಡಿ ತಿಳಿಸಿದರು. 

‘ಅಮೆರಿಕ, ಚೀನಾ,  ದಕ್ಷಿಣ ಕೋರಿಯಾ, ಸಿಂಗಪುರದಲ್ಲಿ ಕೋವಿಡ್‌ ಚಿಕಿತ್ಸೆಗೂ ಈ ಉಪಕರಣ ಬಳಸಲಾಗುತ್ತಿದೆ. ನಮ್ಮ ದೇಶದಲ್ಲೂ ಬಳಕೆಗೆ ಸಿದ್ಧತೆ ನಡೆದಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು