ಮಂಗಳವಾರ, ಜುಲೈ 5, 2022
25 °C

ಟೋಯಿಂಗ್ ಕಿರಿಕಿರಿ; ಬೇಸತ್ತ ಜನರಿಂದ ಸಿಬ್ಬಂದಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಾಹನ ನಿಲುಗಡೆ’ ಫಲಕವಿರುವ ಸ್ಥಳದಲ್ಲಿ ನಿಲ್ಲಿಸುವ ವಾಹನಗಳನ್ನೂ ಟೋಯಿಂಗ್ ಮಾಡುತ್ತಿದ್ದ ಸಂಚಾರ ಪೊಲೀಸರ ವರ್ತನೆಯಿಂದ ಬೇಸತ್ತ ಇಂದಿರಾನಗರದ ಕೆಲ ನಿವಾಸಿಗಳು, ‘ಟೈಗರ್’ ವಾಹನವನ್ನು ಅಡ್ಡಗಟ್ಟಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆಯಿತು.

ಇಂದಿರಾನಗರ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿ ಸೇರಿದ್ದ ನಿವಾಸಿಗಳ ಗುಂಪು, ಟೈಗರ್ ವಾಹನದಲ್ಲಿದ್ದ ಎಎಸ್‌ಐ ಅವರನ್ನು ತರಾಟೆಗೆ ತೆಗೆದುಕೊಂಡಿತು. ವಾಹನದ ಚಾಲಕ ಹಾಗೂ ಸಿಬ್ಬಂದಿಯನ್ನು ಹಿಡಿದು ಥಳಿಸಿತು. ಹೆದರಿದ ಸಿಬ್ಬಂದಿ, ವಾಹನ ಬಿಟ್ಟು ಸ್ಥಳದಿಂದ ಓಡಿ ಹೋದರು.

ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ‘ಕೊರೊನಾ ಸಮಯದಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವ ಸಿಬ್ಬಂದಿಗೆ ಇಂದಿರಾನಗರದ ಜನ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕೆಲ ಸ್ಥಳೀಯರ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

ಆಗಿದ್ದೇನು: ‘ಹಲಸೂರು ಸಂಚಾರ ಠಾಣೆ ವ್ಯಾಪ್ತಿಗೆ ಬರುವ ರಸ್ತೆಯ ಬದಿಯಲ್ಲಿ ‘ವಾಹನ ನಿಲುಗಡೆ’ ಫಲಕ ಹಾಕಲಾಗಿದೆ. ಫಲಕ ನೋಡಿ ಸಾರ್ವಜನಿಕರು ವಾಹನ ನಿಲ್ಲಿಸಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದಾರೆ. ಇದೇ ಮಾರ್ಗದಲ್ಲಿ ಹೋಗುವ ಟೋಯಿಂಗ್ ವಾಹನದ ಸಿಬ್ಬಂದಿ, ಬೇಕಾಬಿಟ್ಟಿಯಾಗಿ ವಾಹನಗಳನ್ನು ಟೋಯಿಂಗ್ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ಮಾಡದ ತಪ್ಪಿಗೆ ಸುಖಾಸುಮ್ಮನೇ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ. ಸರಿಯಾದ ಜಾಗದಲ್ಲಿ ವಾಹನ ನಿಲ್ಲಿಸಿದರೂ ಟೋಯಿಂಗ್ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಅವರ ತಪ್ಪು ಪ್ರಶ್ನಿಸಿದರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ’ ಎಂದೂ ತಿಳಿಸಿದರು.

‘ಗುರುವಾರವೂ ಟೋಯಿಂಗ್ ಮಾಡಲು ವಾಹನ ಸ್ಥಳಕ್ಕೆ ಬಂದಿತ್ತು. ವಾಹನ ಟೋಯಿಂಗ್ ಮಾಡುವಾಗಲೇ ಪುರಾವೆ ಸಮೇತ ಅಕ್ರಮ ಬಯಲು ಮಾಡಲಾಯಿತು. ಅಷ್ಟಕ್ಕೆ ಸಿಬ್ಬಂದಿ, ಸ್ಥಳೀಯರ ಮೇಲೆಯೇ ಹರಿಹಾಯ್ದರು. ತಾಳ್ಮೆ ಕಳೆದುಕೊಂಡ ಸ್ಥಳೀಯರು, ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದರು’ ಎಂದೂ ವಿವರಿಸಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು, ‘ಸಿಬ್ಬಂದಿಯಿಂದ ಯಾವುದೇ ಸಮಸ್ಯೆಯಾದರೂ ದೂರು ನೀಡಬೇಕು. ಅದನ್ನು ಬಿಟ್ಟು ಹಲ್ಲೆ ಮಾಡುವುದು ಸರಿಯಲ್ಲ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು