ಸೋಮವಾರ, ಸೆಪ್ಟೆಂಬರ್ 27, 2021
22 °C
ಪ್ರಜಾವಾಣಿ ಫಲಶ್ರುತಿ

‘ದಂಡ’ ಸಂಗ್ರಹ ತಾತ್ಕಾಲಿಕ ಸ್ಥಗಿತ; ಪೊಲೀಸರಿಂದ ಉಪಕರಣ ಹಿಂಪಡೆದ ಟಿಎಂಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ವಾಹನ ಚಾಲಕರನ್ನು ಅಡ್ಡಗಟ್ಟಿ ದಂಡ ಸಂಗ್ರಹಿಸಲು ಪೊಲೀಸರು ಬಳಸುತ್ತಿದ್ದ ಉಪಕರಣಗಳನ್ನು ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಅಧಿಕಾರಿಗಳು ಸೋಮವಾರ ದಿಢೀರ್ ಹಿಂಪಡೆದಿದ್ದು, ದಂಡ ಸಂಗ್ರಹ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಂಚಾರ ಪೊಲೀಸರ ಶಿಸ್ತಿಲ್ಲದ ದಂಡ ಸಂಗ್ರಹದಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ನಿತ್ಯ ಸಂಚಾರ – ಸದಾ ಕಿರಿಕಿರಿ’ ಸರಣಿ ವರದಿಗಳನ್ನು ಪ್ರಕಟಿಸಲಾಗುತ್ತಿದೆ. ವರದಿಗಳಿಂದ ಎಚ್ಚೆತ್ತ ಪೊಲೀಸ್ ಹಿರಿಯ ಅಧಿಕಾರಿಗಳು, ಏಕಾಏಕಿ ಮೌಖಿಕ ಆದೇಶ ಹೊರಡಿಸಿ ದಂಡ ಸಂಗ್ರಹ ಉಪಕರಣಗಳನ್ನು ವಾಪಸು ಪಡೆದಿದ್ದಾರೆ. ಮುಂದಿನ ಆದೇಶದವರೆಗೂ ದಂಡ ಸಂಗ್ರಹ ಮಾಡಲು ರಸ್ತೆಗೆ ಇಳಿಯದಂತೆಯೂ ಸೂಚಿಸಿದ್ದಾರೆಂದು ಗೊತ್ತಾಗಿದೆ.

‘ಸೋಮವಾರ ಬೆಳಿಗ್ಗೆ ಎಂದಿನಂತೆ ದಂಡ ಸಂಗ್ರಹ ಕೆಲಸಕ್ಕೆ ಬಂದಿದ್ದೆವು. ‘ದಂಡ ಸಂಗ್ರಹವನ್ನು ಸ್ಥಗಿತಗೊಳಿಸಿ, ಉಪಕರಣಗಳನ್ನು ಟಿಎಂಸಿಗೆ ತಂದುಕೊಡಿ’ ಎಂಬುದಾಗಿ ನಿಯಂತ್ರಣ ಕೊಠಡಿಯಿಂದ ಸಂದೇಶ ಬಂದಿತ್ತು. ಉಪಕರಣಗಳನ್ನು ವಾಪಸು ಕೊಟ್ಟಿದ್ದು, ಕಾರಣ ಗೊತ್ತಾಗಿಲ್ಲ’ ಎಂದು ಸಂಚಾರ ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದರು.

‘ನಗರದಲ್ಲಿ ಸೋಮವಾರ ಯಾವುದೇ ದಂಡ ಸಂಗ್ರಹ ಮಾಡಿಲ್ಲ. ಬಹುತೇಕ ಸಿಬ್ಬಂದಿಯನ್ನು ವಾಹನಗಳ ಸುಗಮ ಸಂಚಾರ ಕೆಲಸಕ್ಕೆ ನಿಯೋಜಿಸಲಾಗಿತ್ತು. ದಂಡ ಸಂಗ್ರಹ ಬಗ್ಗೆ ಹಿರಿಯ ಅಧಿಕಾರಿಗಳ ಮುಂದಿನ ಆದೇಶಕ್ಕೆ ಕಾಯುತ್ತಿದ್ದೇವೆ’ ಎಂದೂ ತಿಳಿಸಿದರು.

ಇದನ್ನೂ ಓದಿ: 

ನಗರದ ಬಹುತೇಕ ರಸ್ತೆಗಳಲ್ಲಿ ಪೊಲೀಸರು ವಾಹನಗಳನ್ನು ಅಡ್ಡಗಟ್ಟುವ ಯಾವುದೇ ದೃಶ್ಯಗಳು ಕಂಡುಬರಲಿಲ್ಲ. ಬಹುತೇಕ ಸಿಬ್ಬಂದಿ, ವಾಹನಗಳ ದಟ್ಟಣೆ ನಿಯಂತ್ರಣದಲ್ಲಿ ತೊಡಗಿದ್ದು ಕಂಡುಬಂತು.

ಉಪಕರಣ ಹಿಂಪಡೆದ ಬಗ್ಗೆ ಪ್ರತಿಕ್ರಿಯಿಸಿದ ಸಂಚಾರ ಠಾಣೆಯೊಂದರ ಇನ್‌ಸ್ಪೆಕ್ಟರೊಬ್ಬರು, ‘ಉಪಕರಣದಲ್ಲಿರುವ ತಂತ್ರಜ್ಞಾನವನ್ನು ನವೀಕರಣ ಮಾಡಬೇಕಿದೆ. ಹೀಗಾಗಿ, ಉಪಕರಣಗಳನ್ನು ವಾಪಸು ಪಡೆದಿರುವುದಾಗಿ ಗೊತ್ತಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು