ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಪೊಲೀಸರ ದಂಡವನ್ನು ಕಾನೂನಿನಡಿ ಪ್ರಶ್ನಿಸಲು ಅವಕಾಶ l ಫೋಟೊ, ವಿಡಿಯೊ ಪ್ರಮಾಣೀಕರಿಸದ ಪೊಲೀಸರು

ನಿತ್ಯ ಸಂಚಾರ ಸದಾ ಕಿರಿಕಿರಿ: ರಸ್ತೆಯಲ್ಲೇ ‘ರಾಜಿ’; ಮೊಕದ್ದಮೆಗೆ ಜನರ ನಿರಾಸಕ್ತಿ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಚಾರ ಪೊಲೀಸರ ದಂಡ ಸಂಗ್ರಹ ಪ್ರಕ್ರಿಯೆಯ ಬಹುತೇಕ ಅಂಶಗಳು ಕಾನೂನಿನ ಉಲ್ಲಂಘನೆಯಾಗಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದ್ದರೂ ಜನರು ನಿರಾಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿಯೇ ಪೊಲೀಸರು, ಸ್ಥಳದಲ್ಲೇ ಕಾನೂನಿನ ‘ರಾಜಿ’ ಅಸ್ತ್ರ ಬಳಸಿಕೊಂಡು ದಂಡ ವಸೂಲಿ ಮಾಡುತ್ತಿದ್ದಾರೆ.

ದೇಶದೆಲ್ಲೆಡೆ ವಾಹನಗಳ ಬಳಕೆ ಹೆಚ್ಚಿರುವ ಕಾರಣಕ್ಕೆ ಸುಗಮ ಸಂಚಾರ ವ್ಯವಸ್ಥೆಗಾಗಿ ಮೋಟಾರು ವಾಹನಗಳ ಕಾಯ್ದೆ ಜಾರಿಗೆ ತರಲಾಗಿದೆ. ಸಂಚಾರ ನಿಯಮ ಉಲ್ಲಂಘನೆ, ದಂಡ ಸಂಗ್ರಹ, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಸೇರಿದಂತೆ ಹಲವು ಸಂಗತಿಗಳನ್ನು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಕಾಯ್ದೆಯನ್ನೇ ಉಲ್ಲಂಘಿಸಿ ಸಂಚಾರ ಪೊಲೀಸರು ನಡೆದುಕೊಳ್ಳುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ಪೊಲೀಸರ ದಂಡ ವ್ಯವಸ್ಥೆಯನ್ನು ಪ್ರಶ್ನಿಸಲು ಕಾನೂನಿನಡಿ ಅವಕಾಶವಿದೆ. ನ್ಯಾಯಾಲಯಕ್ಕೆ ಹೋದರೆ ವಕೀಲರ ನೇಮಕ ಹಾಗೂ ಇತರೆ ಕೆಲಸಕ್ಕೆ ಹಣ ಖರ್ಚಾಗುತ್ತದೆಂದು ತಿಳಿಯುತ್ತಿರುವ ಜನ, ತಪ್ಪು ಒಪ್ಪಿಕೊಂಡು ‘ರಾಜಿ ಪಂಚಾಯಿತಿ’ ಮೂಲಕ ಸ್ಥಳದಲ್ಲೇ ಪೊಲೀಸರಿಗೆ ಹಣ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ’ ಎಂದು ವಕೀಲ ವಿನಯ್ ವೇಣುಗೋಪಾಲ್ ಹೇಳಿದರು.

‘ರಾಜಿ ಪಂಚಾಯಿತಿಗೂ ಕಾನೂನಿನಲ್ಲಿ ಅವಕಾಶವಿದೆ. ಬಹುತೇಕರು ಇದನ್ನೇ ಒಪ್ಪಿಕೊಂಡಿದ್ದಾರೆ. ಆಕಸ್ಮಾತ್, ಇವರಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿ ಮೊಕದ್ದಮೆ ಹೂಡಿದ್ದರೆ ಪೊಲೀಸರಿಗೆ ಕಾನೂನಿನ ಬಿಸಿ ಮುಟ್ಟುತ್ತಿತ್ತು. ಅವರ ಅಕ್ರಮಗಳು ಬಯಲಾಗುತ್ತಿದ್ದವು. ಸಾರ್ವಜನಿಕರಿಗೆ ಇಂದು ಆಗುತ್ತಿರುವ ಕಿರಿಕಿರಿಯೂ ತಪ್ಪುತ್ತಿತ್ತು’ ಎಂದೂ ತಿಳಿಸಿದರು.

ಫೋಟೊ, ವಿಡಿಯೊ ಪ್ರಮಾಣೀಕರಿಸದ ಪೊಲೀಸರು: ‘ಯಾವುದೇ ಪ್ರಕರಣದಲ್ಲಿ ಫೋಟೊ ಹಾಗೂ ವಿಡಿಯೊವನ್ನು ಮಾತ್ರ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹಲವು ಆದೇಶಗಳಲ್ಲಿ ಹೇಳಿದೆ. ಸಾಕ್ಷ್ಯ ಅಧಿನಿಯಮದ ಕಲಂ 65(ಬಿ) ಅಡಿ ಫೋಟೊ ಹಾಗೂ ವಿಡಿಯೊವನ್ನು ಕಡ್ಡಾಯವಾಗಿ ತಾಂತ್ರಿಕ ಪರಿಣಿತರ ವರದಿ ಸಮೇತ ಪ್ರಮಾಣೀಕರಿಸಬೇಕು. ಈ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ. ಇದನ್ನು ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ’ ಎಂದೂ ವಿನಯ್ ಹೇಳಿದರು.

‘ಫೋಟೊ ಹಾಗೂ ವಿಡಿಯೊ ಆಧರಿಸಿ ಹಳೇ ಪ್ರಕರಣಗಳಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಇಂಥ ಬಹುತೇಕ ಪ್ರಕರಣಗಳು ಕಾನೂನಿನಡಿ ಅಸಿಂಧು. ಸ್ಥಳದಲ್ಲೇ ಮಾಡಿದ ಉಲ್ಲಂಘನೆಗೆ ಮಾತ್ರ ಪೊಲೀಸರು ದಂಡ ಸಂಗ್ರಹಿಸಬೇಕು. ಹಳೇ ಪ್ರಕರಣಗಳ ದಂಡವನ್ನು ನ್ಯಾಯಾಲಯದಲ್ಲೇ ಪಾವತಿಸಬೇಕೆಂಬ ನಿಯಮವಿದೆ. ಇದು ಸಹ ಪಾಲನೆಯಾಗುತ್ತಿಲ್ಲ’ ಎಂದೂ ಅವರು ತಿಳಿಸಿದರು.

‘ವಾಹನಗಳ ದಾಖಲೆಗಳನ್ನು ಹಾಜರುಪಡಿಸಲು 15 ದಿನಗಳ ಕಾಲಾವಧಿ ಇರುತ್ತದೆ. ತಪ್ಪು ಮಾಡದಿದ್ದರೂ ದಂಡ ಹಾಕಿದ್ದರೆ, ಆ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ವಕೀಲರ ಸಲಹೆ ಸಹ ಸಿಗಲಿದೆ’ ಎಂದು ಹೇಳಿದರು.

ಎಸಿಬಿಗೆ ದೂರು ನೀಡಲು ಅವಕಾಶ: ‘ಸಂಚಾರ ಪೊಲೀಸರು ಲಂಚ ಪಡೆದರೆ, ಅದರ ಫೋಟೊ ಅಥವಾ ವಿಡಿಯೊ ಚಿತ್ರೀಕರಣ ಮಾಡಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲು ಅವಕಾಶವಿದೆ’ ಎಂದು ವಕೀಲ ಎಸ್. ಸುಧನ್ವ ಹೇಳಿದರು.

‘ಹೆಚ್ಚು ದಂಡ ವಸೂಲಿ ಮಾಡಬೇಕೆಂಬ ಗುರಿ ಇಟ್ಟುಕೊಂಡು ರಸ್ತೆಗೆ ಇಳಿಯುವ ಪೊಲೀಸರು, ವಿನಾಕಾರಣ ಜನರ ವಾಹನಗಳನ್ನು ನಡುರಸ್ತೆಯಲ್ಲೇ ಅಡ್ಡಗಟ್ಟುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಇದಕ್ಕೆ ಪೊಲೀಸರೇ ನೇರ ಹೊಣೆ’ ಎಂದೂ ತಿಳಿಸಿದರು.

‘ಸಣ್ಣ ಮೊತ್ತವೆಂಬ ಕಾರಣಕ್ಕೆ ಸಾರ್ವಜನಿಕರು ಪೊಲೀಸರ ಜೊತೆ ವಾದ ಮಾಡದೇ ದಂಡ ಕಟ್ಟಿ ಹೋಗುತ್ತಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಂಡು ಪೊಲೀಸರು, ಜನರಿಗೆ ಕಿರಿಕಿರಿ ನೀಡಿ ದಂಡ ಸಂಗ್ರಹಿಸುತ್ತಿದ್ದಾರೆ. ಇದನ್ನು ಕಾನೂನಿನಡಿ ಪ್ರಶ್ನಿಸಬೇಕಾದ ಸಂದರ್ಭ ಬಂದಿದೆ’ ಎಂದೂ ಹೇಳಿದರು.

‘ಪ್ರಕರಣಗಳ ಇತ್ಯರ್ಥಕ್ಕೆ 5 ಎಂಎಂಟಿಸಿ ನ್ಯಾಯಾಲಯ’

‘ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕಾಗಿ ನಗರದಲ್ಲಿ 5 ಎಂಎಂಟಿಸಿ (ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಟ್ರಾಫಿಕ್ ಕೋರ್ಟ್)’ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಪ್ರಕರಣಗಳ ಒತ್ತಡ ಹೆಚ್ಚಿದ್ದು, ಮತ್ತಷ್ಟು ಶಾಶ್ವತ ನ್ಯಾಯಾಲಯಗಳ ಅಗತ್ಯವಿದೆ’ ಎಂದು ವಿನಯ್ ವೇಣುಗೋಪಾಲ್ ಹೇಳಿದರು.

‘ಅಪಘಾತ, ಅದರಿಂದಾದ ಸಾವು–ನೋವು ಪ್ರಕರಣಗಳೂ ಎಂಎಂಟಿಸಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಅದರ ಜೊತೆಯಲ್ಲೇ ಎನ್‌ಡಿಪಿಎಸ್ ಹಾಗೂ ವಿಶೇಷ ಪ್ರಕರಣಗಳ ವಿಚಾರಣೆಯೂ ಆಗುತ್ತದೆ. ಇದರ ಜೊತೆಯಲ್ಲೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನೂ ನ್ಯಾಯಾಲಯ ಪರಿಗಣಿಸುತ್ತಿದೆ. ಆದರೆ, ಅಂಥ ಪ್ರಕರಣಗಳ ಬಗ್ಗೆ ವಾದ–ಪ್ರತಿವಾದ ನಡೆಯುವುದು ತೀರಾ ಕಡಿಮೆ. ಇದು ಸಹ ಪೊಲೀಸರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ’ ಎಂದೂ ಅವರು ತಿಳಿಸಿದರು.

‘ಹಣ ಕೊಟ್ಟರೆ ಕಾನ್‌ಸ್ಟೆಬಲ್‌ಗಳಿಂದಲೂ ಪ್ರಕರಣ ಇತ್ಯರ್ಥ’

ದಂಡ ಜೊತೆಯಲ್ಲಿ ಕೈ ಬೀಸಿ ಮಾಡಿದರೆ ಕೆಲ ಕಾನ್‌ಸ್ಟೆಬಲ್‌ಗಳೇ ನ್ಯಾಯಾಲಯದಲ್ಲಿ ಓಡಾಡಿ ಪ್ರಕರಣ ಇತ್ಯರ್ಥಪಡಿಸಿಕೊಂಡು ಬರುತ್ತಿರುವ ದೂರುಗಳು ಕೇಳಿಬರುತ್ತಿವೆ.

‘ಮದ್ಯ ಕುಡಿದು ವಾಹನ ಚಾಲನೆ ಮಾಡಿ ಪೊಲೀಸರಿಗೆ ಸಿಅಕ್ಕಿಬಿದ್ದಿದ್ದೆ. ನನ್ನ ಕಾರು ಹಾಗೂ ಚಾಲನಾ ಪರವಾನಗಿ (ಡಿ.ಎಲ್) ಜಪ್ತಿ ಮಾಡಿ, ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ರಶೀದಿ ನೀಡಿದ್ದರು. ಮರುದಿನವೂ ನನ್ನನ್ನು ಸಂಪರ್ಕಿಸಿದ್ದ ಕಾನ್‌ಸ್ಟೆಬಲೊಬ್ಬರು, ‘ನೀವು ನ್ಯಾಯಾಲಯಕ್ಕೆ ಬರುವುದು ಬೇಡ. ದಂಡದ ಜೊತೆಯಲ್ಲಿ ಸ್ವಲ್ಪ ಹಣ ಕೊಡಿ. ನಾನೇ ಕಾರು ಹಾಗೂ ಡಿ.ಎಲ್‌ ಬಿಡಿಸಿಕೊಂಡು ಬರುತ್ತೇನೆ’ ಎಂದಿದ್ದರು. ಹಣ ಕೊಡುತ್ತಿದ್ದಂತೆ ಅವರೇ ಎಲ್ಲ ಮಾಡಿಸಿಕೊಂಡು ಬಂದರು’ ಎಂದು ಹೆಣ್ಣೂರು ನಿವಾಸಿಯೊಬ್ಬರು ಹೇಳಿದರು.

‘ಪಿಐಎಲ್‌ ಸಲ್ಲಿಕೆಗೆ ತಯಾರಿ’

‘ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿರುವ ‘ನಿತ್ಯ ಸಂಚಾರ– ಸದಾ ಕಿರಿಕಿರಿ’ ಸರಣಿ ವರದಿಗಳನ್ನು ನಿತ್ಯವೂ ಓದುತ್ತಿದ್ದೇನೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ಇದೊಂದು ಅರ್ಹ ವಿಷಯ. ಹೀಗಾಗಿ, ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲು ತಯಾರಿ ನಡೆಸಲಾಗುವುದು’ ಎಂದು ವಕೀಲ ಉಮಾಶಂಕರ್ ಮೇಗುಂಡಿ ಹೇಳಿದರು.

‘ಪೊಲೀಸರಿಂದ ಜನರಿಗೆ ಆಗುತ್ತಿರುವ ಕಿರಿಕಿರಿ ಬಗ್ಗೆ ಫೋಟೊ, ವಿಡಿಯೊ ಹಾಗೂ ಇತರೆ ದಾಖಲೆಗಳನ್ನು ಸಂಗ್ರಹಿಸಲಾಗುವುದು. ಜನರ ಅಭಿಪ್ರಾಯಗಳನ್ನು ಪಡೆದು, ಪಿಐಎಲ್‌ ಅರ್ಜಿಯಲ್ಲಿ ದಾಖಲಿಸಲಾಗುವುದು’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು