ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದರೆ ಬರಲಿದೆ ಎಸ್‌ಎಂಎಸ್

ಸಂಚಾರ ಪೊಲೀಸರ ಹೊಸ ವ್ಯವಸ್ಥೆ; ಪ್ರಾಯೋಗಿಕ ಜಾರಿ
Last Updated 4 ಡಿಸೆಂಬರ್ 2021, 16:32 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ಸಾರ್ವಜನಿಕರ ಮನೆಗಳಿಗೆ ನೋಟಿಸ್ ಪ್ರತಿ ಕಳುಹಿಸುತ್ತಿದ್ದ ಪೊಲೀಸರು, ಇನ್ನು ಮುಂದೆ ಎಸ್‌ಎಂಎಸ್ ರವಾನಿಸಲಿದ್ದಾರೆ. ಈ ಹೊಸ ವ್ಯವಸ್ಥೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.

‘ವಾಹನ ದಟ್ಟಣೆ ಜೊತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಅಪಘಾತಗಳು ಮೇಲಿಂದ ಮೇಲೆ ನಡೆಯುತ್ತಿವೆ. ನಿಯಮ ಉಲ್ಲಂಘಿಸುವವರಿಂದ ದಂಡ ಸಂಗ್ರಹಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಎಸ್‌ಎಂಎಸ್ ವ್ಯವಸ್ಥೆ ರೂಪಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.

‘ಉಲ್ಲಂಘನೆ ಪ್ರಕರಣ ದಾಖಲಿಸಲು ಈ ಹಿಂದೆ ಪುಸ್ತಕಗಳನ್ನು ಬಳಸಲಾಗುತ್ತಿತ್ತು. ಇದೀಗ, ಸಂಚಾರ ನಿಯಮ ಉಲ್ಲಂಘನೆ ವರದಿ ( ಎಫ್‌ಟಿವಿಆರ್) ದಾಖಲಿಸುವ ಉಪಕರಣ ಬಳಸಲಾಗುತ್ತಿದೆ. ಉಪಕರಣದಲ್ಲಿ ಸಂಗ್ರಹವಾಗುವ ಮಾಹಿತಿ ಆಧರಿಸಿ, ನಿಯಮ ಉಲ್ಲಂಘಿಸಿದವರ ಮನೆಗಳಿಗೆ ನೋಟಿಸ್ ಪ್ರತಿ ಕಳುಹಿಸಲಾಗುತ್ತಿದೆ. ಸದ್ಯ ದಿನಕ್ಕೆ 20 ಸಾವಿರ ಪ್ರತಿಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತಿದೆ’ ಎಂದೂ ತಿಳಿಸಿದರು.‌‌‌

‘ಕಾಗದ ಮುದ್ರಣ,‌ ಅಂಚೆ ವೆಚ್ಚ ಸೇರಿ ಒಂದು ನೋಟಿಸ್ ಪ್ರತಿಗೆ ₹ 4.50 ಖರ್ಚಾಗುತ್ತಿದೆ. ನೋಟಿಸ್ ತಯಾರಿಸಲು ಹಾಗೂ ನೋಟಿಸ್‌ ತಲುಪಿಸಲು ಸಿಬ್ಬಂದಿಗೂ ಹೆಚ್ಚು ಸಮಯ ಬೇಕಾಗುತ್ತಿದೆ. ಸಾರ್ವಜನಿಕರು ವಿಳಾಸ ಬದಲಾಯಿಸಿದ್ದರೆ, ನೋಟಿಸ್‌ಗಳು ವಾಪಸು ಬರುತ್ತಿವೆ. ಇದಕ್ಕೆ ಎಸ್‌ಎಂಎಸ್‌ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ’ ಎಂದೂ ಹೇಳಿದರು.

‘ಒಂದು ಎಸ್‌ಎಂಎಸ್‌ಗೆ 20 ಪೈಸೆ ವೆಚ್ಚವಾಗಲಿದೆ. ಕಾಗದ ಬಳಕೆ ತಪ್ಪಲಿದ್ದು, ಸಾಕಷ್ಟು ಹಣ ಉಳಿಯಲಿದೆ’ ಎಂದೂ ತಿಳಿಸಿದರು.

‘ಆರ್‌ಟಿಒಗಳಲ್ಲಿ ವಾಹನ ನೋಂದಣಿ ವೇಳೆ ಮಾಲೀಕರು ಮೊಬೈಲ್‌ ನಂಬರ್ ನೀಡಿರುತ್ತಾರೆ. ಅಂಥ ನಂಬರ್‌ಗಳ ಮಾಹಿತಿಯನ್ನು ಸಾರಿಗೆ ಇಲಾಖೆ ನಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಸಂಚಾರ ನಿಯಮ ಉಲ್ಲಂಘಿಸುವ ಸಾರ್ವಜನಿಕರ ಪುರಾವೆ ಎಫ್‌ಟಿವಿಆರ್ ಉಪಕರಣದಲ್ಲಿ ದಾಖಲಾಗಲಿದೆ. ನಂತರ, ನೋಂದಾಯಿತ ಮೊಬೈಲ್ ನಂಬರ್‌ಗೆ ದಂಡ ಮಾಹಿತಿಯುಳ್ಳ ಎಸ್‌ಎಂಎಸ್ ರವಾನೆ ಆಗಲಿದೆ. ಅದನ್ನು ನೋಡಿ, ದಂಡ ಪಾವತಿ ಮಾಡಬಹುದಾಗಿದೆ. 7 ದಿನಗಳ ಒಳಗೆ ದಂಡ ಪಾವತಿ ಮಾಡದಿದ್ದರೆ ಕಾನೂನು ಕ್ರಮ ಜರುಗಿಸಲೂ ಅವಕಾಶವಿರುತ್ತದೆ’ ಎಂದೂ ರವಿಕಾಂತೇಗೌಡ ಹೇಳಿದರು.

'ವಾಹನ ಮಾಲೀಕರ ಹೆಸರು, ನೋಟಿಸ್ ಸಂಖ್ಯೆ, ದಿನಾಂಕ, ಸಮಯ ಹಾಗೂ ದಂಡದ ಮೊತ್ತ... ಇತ್ಯಾದಿ ವಿವರ ಎಸ್‌ಎಂಎಸ್‌ನಲ್ಲಿ ಇರಲಿದೆ. ಕರ್ನಾಟಕ ಮೊಬೈಲ್ ಒನ್ ಕೇಂದ್ರಗಳು ಹಾಗೂ ಪೇಟಿಎಂ ಮೂಲಕ ಹಣ ಪಾವತಿಗೂ ಅವಕಾಶ ನೀಡಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT