ಶುಕ್ರವಾರ, ಜೂಲೈ 3, 2020
23 °C
ದುಪ್ಪಟ್ಟು ದರ ಬೇಡಿಕೆ ಆರೋಪ

ಸ್ವಂತ ಖರ್ಚಿನಲ್ಲೇ ಪ್ರಯಾಣ: ಕಾರ್ಮಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರಕ್ಕೆ ದುಡಿಯಲು ಬಂದಿರುವ ಅಥವಾ ವಿವಿಧ ಕಾರಣಗಳಿಂದ ನಗರದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ಮತ್ತು ಸಂತ್ರಸ್ತರಿಗೆ ಸ್ವಂತ ಊರುಗಳಿಗೆ ತೆರಳಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಆದರೆ, ಸ್ವಂತ ಖರ್ಚಿನಲ್ಲಿಯೇ ಪ್ರಯಾಣಿಸಬೇಕಾಗಿದ್ದರಿಂದ ಹಣವಿಲ್ಲದೆ ಕಾರ್ಮಿಕರು ಪರದಾಡಬೇಕಾಯಿತು. 

ಗುರುವಾರದವರೆಗೆ ಕಾರ್ಮಿಕ ಇಲಾಖೆಯೇ ಪ್ರಯಾಣ ದರವನ್ನು ಭರಿಸಿ, ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಟ್ಟಿತು. ಆದರೆ, ಸ್ವಂತ ಖರ್ಚಿನಲ್ಲಿಯೇ ಪ್ರಯಾಣ ಬೆಳೆಸಬೇಕು ಎಂದು ಶುಕ್ರವಾರ ಹೇಳಿದೆ. ಒಂದೂವರೆ ತಿಂಗಳಿಂದ ದುಡಿಮೆ ಇಲ್ಲದೆ ಕಂಗಾಲಾಗಿರುವ ಕಾರ್ಮಿಕರಿಗೆ ಟಿಕೆಟ್‌ ದರ ಭರಿಸುವುದೂ ಕಷ್ಟವಾಯಿತು. 

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ನಿಯಮದ ಪ್ರಕಾರ ಟಿಕೆಟ್ ವಿತರಣೆಗೆ ಅವಕಾಶ ಇರುವುದಿಲ್ಲ. ಒಪ್ಪಂದದ ಮೇರೆಗೆ ಬಸ್ ಒದಗಿಸಬಹುದು. ಹೀಗೆ ಗುತ್ತಿಗೆ ಪಡೆಯುವ ಬಸ್ ಬಾಡಿಗೆ ಕಿ.ಮೀ.ಗೆ ₹39. ಇದಕ್ಕಾಗಿ 25-30 ಕಾರ್ಮಿಕರು ಒಟ್ಟಾಗಿ ಹೊರಡಬೇಕಾಗುತ್ತದೆ. ಇನ್ನು ಅವರೆಲ್ಲರೂ ಹೆಚ್ಚು-ಕಡಿಮೆ ಒಂದೇ ಮಾರ್ಗದ ಪ್ರಯಾಣಿಕರಾಗಿರಬೇಕಾಗುತ್ತದೆ. ದೂರದ ಊರುಗಳಿಗೆ ಪ್ರಯಾಣಿಸುವ ಕಾರ್ಮಿಕರಿಗೆ ಈ ಕಾರಣಗಳಿಂದ ತುಂಬಾ ತೊಂದರೆಯಾಯಿತು.  

‘ಬೇರೆ ಕಾರ್ಮಿಕರೊಂದಿಗೆ ಸೇರಿ ಟಿಕೆಟ್‌ ದರ ಹಂಚಿಕೊಳ್ಳಬೇಕು. ಇಲ್ಲದಿದ್ದರೆ, ನಿಗದಿಗಿಂತ ದುಪ್ಪಟ್ಟು ಹಣ ನೀಡಬೇಕಾಗುತ್ತದೆ. ದುಡಿಮೆಯಿಲ್ಲದೆ ಕಷ್ಟದಲ್ಲಿರುವ ನಮಗೆ ಇದು ದೊಡ್ಡ ಹೊರೆಯಾಗಿದೆ’ ಎಂದು ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು. 

ನಗರದ ಕೆ.ಜಿ. ರಸ್ತೆಯಲ್ಲಿರುವ ಕಂದಾಯ ಭವನದ ಎದುರು ಬಸ್‌ ವ್ಯವಸ್ಥೆ ಮಾಡಲಾಗಿತ್ತು.

‘ಕಾರ್ಮಿಕ ಇಲಾಖೆಯೇ ಪ್ರಯಾಣ ವೆಚ್ಚವನ್ನು ಭರಿಸಿದರೆ ಅನುಕೂಲವಾಗುತ್ತದೆ’ ಎಂದು ಕಾರ್ಮಿಕರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು