ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಟ್ಟಡ ತೆರವು ಸ್ಥಗಿತ: ನಿರ್ಮಾಣವಾಗದ ‘ಅಂಡರ್‌ಪಾಸ್‌’

ಎಸ್‌.ಎಂ. ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಕಲ್ಪಿಸುವ ಮಾರ್ಗ
Published 16 ಜೂನ್ 2023, 23:35 IST
Last Updated 16 ಜೂನ್ 2023, 23:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲೇ ಅತ್ಯಂತ ದಟ್ಟಣೆ ಪ್ರದೇಶಗಳಲ್ಲಿ ಒಂದಾಗಿರುವ ಜಾಲಹಳ್ಳಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕೆಂದು ಎಸ್ಎಂ ರಸ್ತೆಯ ಎರಡೂ ಬದಿಯಲ್ಲೂ ನಡೆಯುತ್ತಿದ್ದ ಕಟ್ಟಡ ತೆರವು ಕಾರ್ಯವು ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದು, ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. 

ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ಎಸ್‌.ಎಂ.ರಸ್ತೆಯ ಬಲಬದಿಯಲ್ಲಿ ಕಟ್ಟಡ ತೆರವು ಕಾರ್ಯವು ವೇಗ ಪಡೆದುಕೊಂಡಿತ್ತು. ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಈ ಜಂಕ್ಷನ್‌ ಸದಾ ವಾಹನಗಳು ಹಾಗೂ ಜನರಿಂದ ಗಿಜಿಗುಡುತ್ತದೆ. ಹೆದ್ದಾರಿ ದಾಟಲು ಸರಿಯಾದ ವ್ಯವಸ್ಥೆಯಿಲ್ಲದೇ ಚಾಲಕರು ಹಾಗೂ ಪಾದಚಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ವರ್ಷದಿಂದಲೂ ಈ ಸಮಸ್ಯೆಗೆ ಮುಕ್ತಿಯೇ ಸಿಕ್ಕಿಲ್ಲ!

ರಾಷ್ಟ್ರೀಯ ಹೆದ್ದಾರಿ, ಪೀಣ್ಯ ಕೈಗಾರಿಕಾ ಪ್ರದೇಶ, ಸುಂಕದಕಟ್ಟೆ, ಯಲಹಂಕ, ದೇವನಹಳ್ಳಿ ಭಾಗದಿಂದ ಬರುವ ವಾಹನಗಳಿಂದಾಗಿ ಜಾಲಹಳ್ಳಿ ಜಂಕ್ಷನ್‌ ಸದಾ ಗಿಜಿಡುತ್ತಿರುತ್ತದೆ. ವಾಹನಗಳು ಸಿಗ್ನಲ್‌ಗಳಲ್ಲೇ ಕಾಯುವ ಸ್ಥಿತಿಯಿದೆ. ಅಂಡರ್‌ಪಾಸ್‌ ಕಾಮಗಾರಿ ವಿಳಂಬದಿಂದ ದಿನದ 24 ಗಂಟೆಯೂ ದಟ್ಟಣೆ ಇರುತ್ತದೆ. ರಾತ್ರಿ ವೇಳೆ ನೂರಾರು ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ರಸ್ತೆಯ ಮತ್ತೊಂದು ಭಾಗಕ್ಕೆ ತೆರಳುವ ಪಾದಚಾರಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಅಪಘಾತಗಳು ಸಂಭವಿಸುತ್ತಿವೆ. ಮಧ್ಯರಾತ್ರಿ ಒಂದು ಗಂಟೆವರೆಗೂ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಜಾಲಹಳ್ಳಿಯ ಎಸ್‌.ಎಂ.ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ (ಜಾಲಹಳ್ಳಿ ಕ್ರಾಸ್‌) ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌ ಕಾಮಗಾರಿಗೆ 2019ರಲ್ಲೇ ಯೋಜನೆ ರೂಪಿಸಲಾಗಿತ್ತು. ‘ಗ್ರೇಡ್‌ ಸಪರೇಟರ್‌’ ಹೆಸರಿನ ಕಾಮಗಾರಿಗೆ ₹ 57 ಕೋಟಿ ನಿಗದಿಪಡಿಸಿ ಟೆಂಡರ್‌ ಕರೆಯಲಾಗಿತ್ತು. 24 ತಿಂಗಳ ಕಾಲಾವಧಿ ನಿಗದಿ ಪಡಿಸಲಾಗಿತ್ತು. ಕಳೆದ ವರ್ಷ ಕಾಮಗಾರಿ ಆರಂಭಿಸಿದ್ದರೂ ಒಂದು ಬದಿಯಲ್ಲಿ ನಾಲ್ಕು ಕಟ್ಟಡ ತೆರವು ಬಿಟ್ಟರೆ ಬೇರೆ ಕೆಲಸಗಳೂ ಪ್ರಗತಿ ಕಂಡಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ.

ಈ ಜಂಕ್ಷನ್‌ ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕೊಂಡಿ. ಹಗಲು ರಾತ್ರಿಯೆನ್ನದೇ ಬಸ್‌ಗಳು, ಲಾರಿಗಳು ಬೇರೆ ಬೇರೆ ಪ್ರದೇಶಕ್ಕೆ ತೆರಳುತ್ತವೆ. ತುಮಕೂರು, ಹಾಸನ, ಹುಬ್ಬಳ್ಳಿ– ಧಾರವಾಡ, ದಾವಣಗೆರೆ, ಚಿತ್ರದುರ್ಗ, ಮಂಗಳೂರು, ಚಿಕ್ಕಮಗಳೂರು ಕಡೆಗೆ ತೆರಳುವ ಪ್ರಯಾಣಿಕರು ಈ ಜಂಕ್ಷನ್‌ಗೆ ಬರುತ್ತಾರೆ. ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ಬಿಎಂಟಿಸಿ ಬಸ್‌ ಹತ್ತಲು ಇದೇ ಜಂಕ್ಷನ್‌ಗೆ ಬರುತ್ತಾರೆ. ಅವರಿಗೆ ಸುರಕ್ಷಿತವಾಗಿ ನಿಲ್ಲಲು ಸ್ಥಳದ ಕೊರತೆ ಇದೆ. ತುಮಕೂರು ರಸ್ತೆಯ ಒಂದು ಬದಿಯಲ್ಲಿ ಬ್ಯಾರಿಕೇಡ್‌ ಹಾಕಿದ್ದರೂ ಪ್ರಯಾಣಿಕರಿಗೆ ಭಯ ಕಾಡುತ್ತಿದೆ.

‘ಈ ಜಂಕ್ಷನ್‌ನಲ್ಲಿ ಶೌಚಾಲಯದ ಕಟ್ಟಡ ನಿರ್ಮಿಸಲು ಜಾಗ ಕೊರತೆಯಿದೆ. ಹೊಸ ಸರ್ಕಾರಕ್ಕೆ ಜಂಕ್ಷನ್‌ನಲ್ಲಿನ ಸಮಸ್ಯೆ ತಿಳಿಸಿ ಸ್ಥಗಿತಗೊಂಡ ಕಾಮಗಾರಿ ಆರಂಭಿಸಲಾಗುವುದು’ ಎಂದು ಶಾಸಕ ಎಸ್‌.ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಎಸ್‌.ಎಂ. ರಸ್ತೆಯಲ್ಲಿ ಜಂಕ್ಷನ್‌ನಲ್ಲಿ ವಾಹನಗಳ ಸಾಲು.
ಎಸ್‌.ಎಂ. ರಸ್ತೆಯಲ್ಲಿ ಜಂಕ್ಷನ್‌ನಲ್ಲಿ ವಾಹನಗಳ ಸಾಲು.
ಎಸ್‌.ಮುನಿರಾಜು
ಎಸ್‌.ಮುನಿರಾಜು
ಈ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ನಿರ್ಮಿಸುವುದು ಹೆಚ್ಚು ಅಗತ್ಯವಿದೆ. ರಾತ್ರಿ ಸಮಯದಲ್ಲಿ ಜನರು ರಸ್ತೆ ದಾಟುವುದಕ್ಕೆ ಭಯ ಪಡುತ್ತಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ.
-ಎಸ್‌.ಮುನಿರಾಜು, ಶಾಸಕ

ಕ್ಷೇತ್ರದ ಹಗ್ಗಜಗ್ಗಾಟಎಸ್‌ಎಂ ರಸ್ತೆಯ ಎಡಭಾಗದ ಫುಟ್‌ಪಾತ್‌ ದಾಸರಹಳ್ಳಿ ಕ್ಷೇತ್ರಕ್ಕೆ ಸೇರಿದರೆ ಬಲಬದಿ ಫುಟ್‌ಪಾತ್‌ ರಾಜರಾಜೇಶ್ವರಿ ಕ್ಷೇತ್ರಕ್ಕೆ ಒಳಪಡುತ್ತಿದೆ. ಹೀಗಾಗಿ ರಸ್ತೆ ಫುಟ್‌ಪಾತ್‌ ಅಭಿವೃದ್ಧಿಯೂ ನಡೆಯುತ್ತಿಲ್ಲ. ಅಭಿವೃದ್ಧಿಗೆ ಗಡಿ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಹೆಚ್ಚಿನ ಪರಿಹಾರಕ್ಕಾಗಿ ಕೋರ್ಟ್‌ ಮೊರೆ ಕೆಲವರು ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮೆಟ್ರೊ ಕಾಮಗಾರಿ ವೇಳೆ ನೀಡಿದಂತೆಯೇ ‘ಗ್ರೇಡ್ ಸಪರೇಟರ್‌’ ಕಾಮಗಾರಿಗೆ ಸ್ವಾಧೀನ ಮಾಡಿಕೊಳ್ಳುವ ಜಾಗಕ್ಕೂ ಪರಿಹಾರ ನೀಡಬೇಕು. ಕಟ್ಟಡದ ಮಾಲೀಕರಿಗೆ ಜತೆಗೆ ಬಾಡಿಗೆದಾರರಿಗೂ ಪರಿಹಾರ ನೀಡುವಂತೆ ವ್ಯಾಪಾರಿಗಳು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಾಮಗಾರಿ ವಿಳಂಬಗೊಳ್ಳುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT