ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌, ವೈಕುಂಠ ಏಕಾದಶಿ: ಮಾರುಕಟ್ಟೆಯಲ್ಲಿ ಜನಜಂಗುಳಿ !

ಕ್ರಿಸ್‌ಮಸ್‌, ವೈಕುಂಠ ಏಕಾದಶಿ ಹಬ್ಬದ ಸಾಮಗ್ರಿ ಖರೀದಿ ಜೋರು
Last Updated 24 ಡಿಸೆಂಬರ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ಗುರುವಾರ ಹೆಚ್ಚು ಜನ ಜಂಗುಳಿ ಇತ್ತು. ವೈಕುಂಠ ಏಕಾದಶಿಗಾಗಿ ಬಹುತೇಕರು ಹೂವು–ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರೆ, ಕ್ರಿಸ್‌ಮಸ್‌ ಇದ್ದುದರಿಂದ ಕ್ರೈಸ್ತರು ಆಲಂಕಾರಿಕ ವಸ್ತುಗಳನ್ನು ಖರೀದಿಸುವಲ್ಲಿ ಮಗ್ನರಾಗಿದ್ದರು. ಅವೆನ್ಯೂ ರಸ್ತೆ, ಚಿಕ್ಕಪೇಟೆಯಲ್ಲಿ ಹೊಸ ಬಟ್ಟೆ ಖರೀದಿ ಜೋರಾಗಿತ್ತು.

ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಅಂತರ ಕಾಪಾಡುವುದು ಸೇರಿದಂತೆ ಕೋವಿಡ್‌ನ ಯಾವುದೇ ಮಾರ್ಗಸೂಚಿಗಳ ಪಾಲನೆ ಇರಲಿಲ್ಲ.

‘ಕೊರೊನಾ ಸೋಂಕು ರೂಪಾಂತರ ಹೊಂದಿ ತೀವ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ವೈಕುಂಠ ಏಕಾದಶಿ ಇರುವುದರಿಂದ ಅನಿವಾರ್ಯವಾಗಿ ಪೂಜಾ ಸಾಮಗ್ರಿ ಖರೀದಿಗೆ ಬರಬೇಕಾಗಿದೆ’ ಎಂದು ಹಿರಿಯ ನಾಗರಿಕ ವೆಂಕಟೇಶ್ ಹೇಳಿದರು.

‘ದೇವರ ಮೇಲೆ ಭಾರ ಹಾಕಿ ಬಂದಿದ್ದೇವೆ. ರಾತ್ರಿಯಿಂದ ಕರ್ಫ್ಯೂ ಜಾರಿ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. (ಈಗ ವಾಪಸ್‌ ತೆಗೆದುಕೊಂಡಿದೆ). ನಾಳೆ (ಶುಕ್ರವಾರ) ಹಣ್ಣು ಅಥವಾ ಹೂವುಗಳು ತಾಜಾ ಇರುತ್ತವೆಯೋ ಇಲ್ಲವೋ ಎಂಬ ಅನುಮಾನವಿತ್ತು. ಹಾಗಾಗಿ, ಇಂದೇ (ಗುರುವಾರ) ಖರೀದಿಗೆ ಬಂದಿದ್ದೇವೆ’ ಎಂದು ಸುಶೀಲಾ ಎಂಬುವರು ಹೇಳಿದರು.

‘ಹೂವು–ಹಣ್ಣುಗಳ ಬೆಲೆಯಲ್ಲಿಯೇ ಶೇ 10ರಿಂದ ಶೇ 20ರಷ್ಟು ಬೆಲೆ ಹೆಚ್ಚಾಗಿದೆ. ಹಬ್ಬ ಮಾಡಲೇ ಬೇಕು ಎಂಬ ಉದ್ದೇಶದಿಂದ ಖರೀದಿ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಇದು ಹಬ್ಬದ ಸಡಗರವೇನೂ ಅಲ್ಲ. ಅವೆನ್ಯೂ ರಸ್ತೆಯಲ್ಲಿ ಯಾವಾಗಲೂ ಇಷ್ಟೇ ಜನಜಂಗುಳಿ ಇರುತ್ತದೆ. ಕರ್ಫ್ಯೂ, ಲಾಕ್‌ಡೌನ್‌ನಂತಹ ಯಾವುದೇ ಕ್ರಮಗಳು ಇಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಅವೆನ್ಯೂ ರಸ್ತೆಯ ನಿವಾಸಿಯೊಬ್ಬರು ಹೇಳಿದರು.

ಕ್ರಿಸ್‌ಮಸ್‌ ಖರೀದಿ:ಗೋದಲಿ ನಿರ್ಮಾಣಕ್ಕೆ ಬೇಕಾಗುವ ವಸ್ತುಗಳು, ಆಲಂಕಾರಿಕ ವಸ್ತುಗಳ ಖರೀದಿಯಲ್ಲಿ ಕ್ರೈಸ್ತರು ತೊಡಗಿದ್ದರು. ಕ್ರಿಸ್‌ಮಸ್‌ ಟ್ರೀ, ಕೇಕ್‌ ಖರೀದಿ ಭರಾಟೆಯೂ ಜೋರಾಗಿತ್ತು. ಎರಡೂ ಹಬ್ಬಗಳು ಒಟ್ಟೊಟ್ಟಿಗೇ ಬಂದಿದ್ದರಿಂದ ಮಾರುಕಟ್ಟೆಗಳಲ್ಲಿ ಹೆಚ್ಚು ಜನ ಸೇರಿದ್ದರು.

‘ವೈಕುಂಠ ಏಕಾದಶಿ’ ಆಚರಣೆಗೆ ಟಿಟಿಡಿ ಸಜ್ಜು
ಕೋವಿಡ್‌ ಹಿನ್ನೆಲೆಯಲ್ಲಿ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ‘ವೈಕುಂಠ ಏಕಾದಶಿ’ ಆಚರಣೆಗೆ ನಗರದ ವೈಯಾಲಿ ಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಸಜ್ಜಾಗಿದೆ.

‘ಸರ್ಕಾರ ಮೊದಲು ಕರ್ಫ್ಯೂ ಇದೆ ಎಂದಿದ್ದರಿಂದ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಮಾತ್ರ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಈಗಲೂ ಅದೇ ವ್ಯವಸ್ಥೆ ಮುಂದುವರಿಯುತ್ತದೆ. ಆದರೆ, ಭಕ್ತರು ಬೆಳಿಗ್ಗೆ 5ಕ್ಕೇ ಬಂದರು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ರಾತ್ರಿ 9ಕ್ಕೆ ಸರಿಯಾಗಿ ದೇಗುಲದ ಬಾಗಿಲು ಹಾಕಲಾಗುತ್ತದೆ’ ಎಂದು ಟಿಟಿಡಿ ಸಮಿತಿ ಸದಸ್ಯರಾದ ವಸಂತ ಕವಿತಾ ಹೇಳಿದರು.

‘ಹಿರಿಯ ನಾಗರಿಕರಿಗೆ, ಗಣ್ಯರಿಗೆ, ಅತಿಗಣ್ಯರಿಗೆ ಮತ್ತು ಸಾಮಾನ್ಯರಿಗೆ ಎಂದು ಪ್ರತ್ಯೇಕ ಸಾಲು ಮಾಡಲಾಗಿದೆ. ಪ್ರತಿ 10 ಮೀಟರ್‌ಗೆ ಒಂದರಂತೆ ಸ್ವಯಂಚಾಲಿತವಾಗಿ ಸ್ಯಾನಿಟೈಸರ್‌ ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ. ಜನರನ್ನು ನಿಯಂತ್ರಿಸುವ ಸಂಪೂರ್ಣ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ’ ಎಂದು ಹೇಳಿದರು.

‘ವೈಕುಂಠ ದ್ವಾರ ನಿರ್ಮಿಸಲಾಗಿದೆ. ಮೊದಲು ಎರಡು ದಿನ ಮಾತ್ರ ಇರುತ್ತಿತ್ತು. ಈ ಬಾರಿ ಹತ್ತು ದಿನದವರೆಗೆ (ಡಿ.25ರಿಂದ ಜ.3ರವರೆಗೆ) ವೈಕುಂಠ ದ್ವಾರದ ಮೂಲಕ ದರ್ಶನದ ವ್ಯವಸ್ಥೆ ಇರುತ್ತದೆ. ಭಕ್ತರು ಏಕಕಾಲಕ್ಕೆ ದೇಗುಲದ ಕಡೆಗೆ ಧಾವಿಸದೆ ಈ ಹತ್ತು ದಿನಗಳಲ್ಲಿ ಯಾವಾಗಲಾದರೂ ಬಂದು ದೇವರ ದರ್ಶನ ಮಾಡಿಕೊಂಡು ಹೋಗಬಹುದು’ ಎಂದರು.

‘ಪ್ರತಿ ಬಾರಿ ಪೊಂಗಲ್‌, ಚಿತ್ರಾನ್ನ ಎಲ್ಲ ಕೊಡಲಾಗುತ್ತಿತ್ತು. ಈ ಬಾರಿ ಲಡ್ಡುಗಳನ್ನು ಮಾತ್ರ ವಿತರಿಸಲಾಗುತ್ತದೆ. ಕೃಷ್ಣಯ್ಯ ಶೆಟ್ಟಿಯವರು 25 ಸಾವಿರ ಲಡ್ಡುಗಳನ್ನು ಮಾಡಿಸಿಕೊಟ್ಟಿದ್ದಾರೆ. ಅದನ್ನು ಪಾಕೆಟ್‌ಗಳಲ್ಲಿ ಇಟ್ಟುಕೊಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT