ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ–ಕಾಚಿಗುಡ ಮಧ್ಯೆ ವಂದೇ ಭಾರತ್‌ ರೈಲು: ವೇಳಾಪಟ್ಟಿ ಇಲ್ಲಿದೆ

ಕಾಚಿಗುಡದಿಂದ ಗುರುವಾರ ನಡೆಯಲಿದೆ ಪ್ರಾಯೋಗಿಕ ಸಂಚಾರ
Published 21 ಸೆಪ್ಟೆಂಬರ್ 2023, 0:51 IST
Last Updated 21 ಸೆಪ್ಟೆಂಬರ್ 2023, 0:51 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೂರನೇ ‘ವಂದೇ ಭಾರತ್‌’ ರೈಲು ಸಂಚಾರ ಆರಂಭಗೊಳ್ಳಲಿದೆ. ಆದರೆ, ಇದು ಅಂತರ್‌ ರಾಜ್ಯ ಸಂಚಾರವಾಗಿದ್ದು, ಆಂಧ್ರ, ತೆಲಂಗಾಣ ರಾಜ್ಯದಲ್ಲೇ ಹೆಚ್ಚು ಸಂಚರಿಸಿ ಯಶವಂತಪುರಕ್ಕೆ ಬರಲಿದೆ.

ಕಾಚಿಗುಡ–ಯಶವಂತಪುರ ನಡುವೆ ಸಂಚರಿಸಲಿರುವ ಈ ‘ವಂದೇ ಭಾರತ್‌’ ರೈಲು ಆಂಧ್ರದ ಮೆಹಬೂಬ್‌ನಗರ, ಕರ್ನೂಲ್‌ ಸಿಟಿ, ಅನಂತಪುರ, ಧರ್ಮಾವರಂ ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲ್ಲಲಿದೆ.

ಕಾಚಿಗುಡ–ಯಶವಂತಪುರ ನಡುವೆ 610 ಕಿಲೋಮೀಟರ್‌ ಅಂತರ ಇದೆ. ಇದನ್ನು ಕ್ರಮಿಸಲು ಇತರ ರೈಲುಗಳು ಸುಮಾರು 12 ತಾಸು ತೆಗೆದುಕೊಂಡರೆ, ‘ವಂದೇ ಭಾರತ್‌’ 8.30 ತಾಸುಗಳಲ್ಲಿ ಕ್ರಮಿಸಲಿದೆ. 

ಸಮಯ: ಪ್ರತಿದಿನ ಬೆಳಿಗ್ಗೆ 5.30ಕ್ಕೆ ಕಾಚಿಗುಡದಿಂದ ಹೊರಡಲಿದೆ. 6.59ಕ್ಕೆ ಮೆಹಬೂಬ್‌ನಗರ, 8.39ಕ್ಕೆ ಕರ್ನೂಲ್‌ ಸಿಟಿ, 10.54ಕ್ಕೆ ಅನಂತಪುರ, 11.25ಕ್ಕೆ ಧರ್ಮಾವರಂ ರೈಲು ನಿಲ್ದಾಣಗಳಿಗೆ ತಲುಪಿ ಮಧ್ಯಾಹ್ನ 2ಕ್ಕೆ ಯಶವಂತಪುರಕ್ಕೆ ತಲುಪಲಿದೆ. ಯಶವಂತಪುರದಿಂದ ಮಧ್ಯಾಹ್ನ 2.45ಕ್ಕೆ ಹೊರಡಲಿದೆ. ಅನಂತಪುರಕ್ಕೆ ಸಂಜೆ 5.40ಕ್ಕೆ, ಕರ್ನೂಲ್‌ ಸಿಟಿಗೆ ರಾತ್ರಿ 7.50ಕ್ಕೆ, ಮೆಹಬೂಬ್‌ನಗರಕ್ಕೆ ರಾತ್ರಿ 9.39ಕ್ಕೆ ಬಂದು, ರಾತ್ರಿ 11.15ಕ್ಕೆ ಕಾಚಿಗುಡಕ್ಕೆ ತಲುಪ‍ಲಿದೆ.

2022ರ ನವೆಂಬರ್‌ನಲ್ಲಿ ಮೈಸೂರು–ಚೆನ್ನೈ ನಡುವೆ ಮತ್ತು 2023ರ ಜೂನ್‌ನಲ್ಲಿ ಕೆಎಸ್‌ಆರ್‌ ಬೆಂಗಳೂರು–ಧಾರವಾಡ ನಡುವೆ ‘ವಂದೇ ಭಾರತ್‌’ ರೈಲು ಸಂಚಾರ ಆರಂಭವಾಗಿತ್ತು. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಈ ‘ವಂದೇ ಭಾರತ್‌’ಗೂ  ಅದೇ ರೀತಿಯ ಸ್ಪಂದನೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈಲ್ವೆ ಅಧಿಕಾರಿಗಳು ಇದ್ದಾರೆ.

ಕುಸುಮಾ ಹರಿಪ್ರಸಾದ್‌
ಕುಸುಮಾ ಹರಿಪ್ರಸಾದ್‌
ಕೆ.ಎನ್‌. ಕೃಷ್ಣಪ್ರಸಾದ್‌
ಕೆ.ಎನ್‌. ಕೃಷ್ಣಪ್ರಸಾದ್‌

ಇಂದು ಪ್ರಾಯೋಗಿಕ ಸಂಚಾರ 24ಕ್ಕೆ ಉದ್ಘಾಟನೆ

ಕಾಚಿಗುಡ–ಯಶವಂತಪುರ ರೈಲು ಪ್ರಾಯೋಗಿಕ ಸಂಚಾರ ಸೆ.21ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆ.24ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಸಂಚರಿಸುತ್ತಿರುವ ಮೈಸೂರು–ಚೆನ್ನೈ ವಂದೇ ಭಾರತ್‌ನಲ್ಲಿ ನಿತ್ಯ ಶೇ 87 ರಿಂದ ಶೇ 93ರಷ್ಟು ಆಸನಗಳು ಭರ್ತಿಯಾಗುತ್ತಿವೆ. ಕೆಎಸ್‌ಆರ್‌ ಬೆಂಗಳೂರು– ಧಾರವಾಡ ನಡುವೆ ಸಂಚರಿಸುವ ‘ವಂದೇ ಭಾರತ್‌’ ರೈಲಿನಲ್ಲಿ ಶೇ 90 ರಿಂದ ಶೇ 95ರಷ್ಟು ಜನ ಪ್ರಯಾಣಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

‘ಕರ್ನಾಟಕಕ್ಕೆ ಹೆಚ್ಚು ಉಪಯೋಗವಿಲ್ಲ’

ಈ ರೈಲನ್ನು ದಕ್ಷಿಣ–ಮಧ್ಯೆ(ಸೌತ್‌ ಸೆಂಟ್ರಲ್‌) ರೈಲ್ವೆಯವರು ನಿರ್ವಹಣೆ ಮಾಡುತ್ತಾರೆ. ಹಾಗಾಗಿ ಆಂಧ್ರ ತೆಲಂಗಾಣದಲ್ಲೇ ಹೆಚ್ಚು ಸಂಚರಿಸುತ್ತದೆ. ಇದರಿಂದ ಬೆಂಗಳೂರು ಹೊರತುಪಡಿಸಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಉಪಯೋಗವಿಲ್ಲ ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. ‘ಗುಂತಕಲ್‌ ರಾಯಚೂರು ವಾಡಿ ಯಾದಗಿರಿ ಸೇಡಂ ಮೂಲಕ ಕಾಚಿಗುಡಕ್ಕೆ ಹೋಗಿದ್ದರೆ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಪ್ರಯೋಜನವಾಗುತ್ತಿತ್ತು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರೆ 70 ಕಿ.ಮೀ. ಹೆಚ್ಚಾಗುತ್ತಿತ್ತು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT