ಶನಿವಾರ, ಅಕ್ಟೋಬರ್ 8, 2022
23 °C

‘ಕೆಳ ಸೇತುವೆಗಳಲ್ಲಿ ವಾಹನ ನಿಲ್ಲಿಸಿದರೆ ದಂಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆ ಸುರಿಯುವ ಸಂದರ್ಭದಲ್ಲಿ ಕೆಳಸೇತುವೆಗಳಲ್ಲಿ ವಾಹನ ನಿಲುಗಡೆಯನ್ನು ಸಂಚಾರ ಪೊಲೀಸರು ನಿರ್ಬಂಧಿಸಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದಾಗಿ ಎಚ್ಚರಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ, ‘ನಗರದಲ್ಲಿ ಸಂಚಾರ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಕೆಳಸೇತುವೆಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ’ ಎಂದಿದ್ದಾರೆ.

‘ಮಳೆ ಸುರಿಯುವ ವೇಳೆ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ಕೆಳಸೇತುವೆಗಳಲ್ಲಿ ನಿಲ್ಲಿಸಿ ಆಶ್ರಯ ಪಡೆಯುತ್ತಿದ್ದಾರೆ. ಇದರ ಜೊತೆಯಲ್ಲೇ ಪಾದಚಾರಿಗಳು ಕೆಳಸೇತುವೆಯಲ್ಲಿ ನಿಲ್ಲುತ್ತಿದ್ದಾರೆ. ಇದರಿಂದಾಗಿ ಕೆಳಸೇತುವೆ ಮೂಲಕ ಸಾಗುವ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಆಗುತ್ತಿದೆ. ಹಲವೆಡೆ ಅಪಘಾತಗಳೂ ಸಂಭವಿಸುತ್ತಿವೆ.’

‘ಹೈಗ್ರೌಂಡ್ಸ್, ಕುಮಾರಸ್ವಾಮಿ ಲೇಔಟ್, ಕೆ.ಆರ್.ಪುರ ಹಾಗೂ ಜೀವನ್‌ ಬಿಮಾ ನಗರ ಸಂಚಾರ ಠಾಣೆ ವ್ಯಾಪ್ತಿಯ ಕೆಳ ಸೇತುವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಇಂಥ ಕೆಳಸೇತುವೆಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ, ವಾಹನಗಳನ್ನು ನಿಲ್ಲಿಸದಂತೆ ಜನರಿಗೆ ಸೂಚನೆ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಮಳೆ ಸುರಿಯುವ ವೇಳೆಯಲ್ಲಿ ನಗರದ ಯಾವುದೇ ಕೆಳಸೇತುವೆಯಲ್ಲೂ ವಾಹನಗಳನ್ನು ನಿಲ್ಲಿಸಲು ಅವಕಾಶವಿಲ್ಲ. ಆಕಸ್ಮಾತ್ ಯಾರಾದರೂ ವಾಹನ ನಿಲ್ಲಿಸಿದರೆ ಅಂಥವರಿಗೆ ದಂಡ ವಿಧಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು