ಬುಧವಾರ, ಏಪ್ರಿಲ್ 1, 2020
19 °C
ಕೆಲವು ಮೆಟ್ರೊ ನಿಲ್ದಾಣಗಳಿಗೆ ಹೊಸ ಹೆಸರು l ಪರಿಚಿತ ಹೆಸರು ಕೈಬಿಟ್ಟ ಬಿಎಂಆರ್‌ಸಿಎಲ್‌ l ನಿಗಮದ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ

ವೆಲ್ಲಾರ ಇನ್ನು ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ನಿರ್ಮಾಣಗೊಳ್ಳುತ್ತಿರುವ 37 ನಿಲ್ದಾಣಗಳ ಹೆಸರು ಬದಲಾಯಿಸಿದೆ. ಇನ್ನು ಮುಂದೆ ವೆಲ್ಲಾರ ಜಂಕ್ಷನ್‌ ನಿಲ್ದಾಣವನ್ನು ‘ರಾಷ್ಟ್ರೀಯ ಮಿಲಿಟರಿ ಸ್ಕೂಲ್‌’ ಎಂದು, ಅರೇಬಿಕ್‌ ಕಾಲೇಜು ನಿಲ್ದಾಣ ‘ಕಾಡುಗೊಂಡನಹಳ್ಳಿ’ ನಿಲ್ದಾಣ ಎಂದು ಕರೆಯಲಾಗುತ್ತದೆ.

ಹೆಸರು ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು, ‘ಹೆಚ್ಚು ಪ್ರಚಲಿತದಲ್ಲಿರುವ ಹೆಸರು ಬಿಟ್ಟು ಬೇರೆ ಹೆಸರಿಟ್ಟಿರುವುದು ಸರಿಯಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಾಗ ಆಯಾ ನಿಲ್ದಾಣಗಳಿಗೆ ಹೆಸರನ್ನು ಸೂಚಿಸಲಾಗಿತ್ತು.

ದೆಹಲಿ ಮೆಟ್ರೊ ರೈಲು ನಿಗಮದ ಸಲಹೆಯಂತೆ ಆಯಾ ನಿಲ್ದಾಣದ ಹತ್ತಿರವಿರುವ ಪ್ರಮುಖ ಹೆಗ್ಗುರುತು ಮತ್ತು ಪ್ರದೇಶಗಳ ಹೆಸರಿನ ಆಧಾರದ ಮೇಲೆ ಹೆಸರಿಡಲು ಸೂಚಿಸಲಾಗಿತ್ತು. ಇದೇ ಸಲಹೆಯನ್ನು ಇಟ್ಟುಕೊಂಡು ರಾಜ್ಯ ಸರ್ಕಾರವು 37 ನಿಲ್ದಾಣಗಳ ಹೆಸರುಗಳನ್ನು ಬದಲಿಸಿದೆ. ಆದರೆ, ಕೆಲವು ಹೊಸ ಹೆಸರುಗಳು ಜನರಿಗೆ ಹೆಚ್ಚು ಪರಿಚಿತವಾಗಿಲ್ಲ. 

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ–ಕೆ.ಆರ್. ಪುರದವರೆಗಿನ ಮಾರ್ಗ ಹಾಗೂ ಕೆ.ಆರ್.ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ನಡುವೆ ಬರುವ ಈ 37 ನಿಲ್ದಾಣಗಳಲ್ಲಿ ಕೆಲವು ನಿಲ್ದಾಣಗಳ ಹೆಸರಿನಲ್ಲಿದ್ದ ಪದಗಳನ್ನು ಕೈಬಿಡಲಾಗಿದೆ.

ಉದಾಹರಣೆಗೆ ‘ರಾಗಿಗುಡ್ಡ ದೇವಾಲಯ’ ಎಂಬ ಹೆಸರಿನಲ್ಲಿದ್ದ ‘ದೇವಾಲಯ’ ಪದವನ್ನು ಕೈಬಿಟ್ಟು ‘ರಾಗಿಗುಡ್ಡ ಎಂದಷ್ಟೇ. ಕೆಲವು ಹೆಸರುಗಳನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. (ಕೃಷ್ಣ ಲೀಲಾ ಪಾರ್ಕ್‌ ‘ದೊಡ್ಡಕಲ್ಲಸಂದ್ರ’ ಎಂದಾಗಿದೆ).  

‘ಸ್ಥಳದ ಹೆಗ್ಗುರುತನ್ನೇ ಉಳಿಸಿಕೊಳ್ಳುವುದಾಗಿದ್ದರೆ ವೆಲ್ಲಾರ ಜಂಕ್ಷನ್, ಅರೇಬಿಕ್‌ ಕಾಲೇಜು, ದೊಡ್ಡನೆಕ್ಕುಂದಿ, ಉಜ್ವಲ ವಿದ್ಯಾಲಯ ನಿಲ್ದಾಣಗಳಿಗೆ ಅದೇ ಹೆಸರು ಮುಂದುವರಿಸಬಹುದಿತ್ತು. ಸ್ವಾಗತ್‌ ಅಡ್ಡರಸ್ತೆಗೆ ತಾವರೆಕೆರೆ ಎಂದು ಹೇಳಲಾಗಿದೆ.

ಅದೇ ರೀತಿ ಮೈಕೊ ಇಂಡಸ್ಟ್ರೀಸ್‌ಗೆ ಲಕ್ಕಸಂದ್ರ ಎಂದು ಮರುನಾಮಕರಣ ಮಾಡಲಾಗಿದೆ. ಡಿಪಿಆರ್‌ನಲ್ಲಿದ್ದ ಹೆಸರನ್ನೇ ಮುಂದುವರಿಸಬೇಕಿತ್ತು’ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

‘ಹೆಸರು ಬದಲಾವಣೆಗೆ ರಾಜಕೀಯ ಕಾರಣಗಳೇನಿಲ್ಲ. ಈ ಹಿಂದೆಯೂ ‘ಯಶವಂತಪುರ ಕೈಗಾರಿಕಾ ಪ್ರದೇಶ’ ನಿಲ್ದಾಣದ ಹೆಸರನ್ನು ಗೊರಗುಂಟೆಪಾಳ್ಯ ಎಂದು ಬದಲಾಯಿಸಲಾಗಿತ್ತು. ಆಯಾ ಹಳ್ಳಿಯ ಹೆಸರನ್ನೇ ನಿಲ್ದಾಣಗಳಿಗೆ ಇಡಲಾಗಿದೆ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

‘ಯಶವಂತಪುರ ಕೈಗಾರಿಕಾ ಪ್ರದೇಶ ಎಂಬ ಹೆಸರನ್ನು ಗೊರಗುಂಟೆಪಾಳ್ಯ ಎಂದು ಬದಲಾಯಿಸಿದರಲ್ಲಿ ತಪ್ಪಿಲ್ಲ. ಏಕೆಂದರೆ ಆ ಹೆಸರು ಸುತ್ತ–ಮುತ್ತಲಿನ ಜನಕ್ಕೆ ಅದು ಪರಿಚಯವಿತ್ತು. ಆದರೆ, ವೆಲ್ಲಾರ ಜಂಕ್ಷನ್‌ ನಿಲ್ದಾಣವನ್ನು ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ ಎಂದು ಹೆಸರಿಸಿದರೆ ಸುತ್ತ–ಮುತ್ತಲಿನವರನ್ನು ಬಿಟ್ಟರೆ ಉಳಿದವರಿಗೆ ಗುರುತಿಸುವುದು ಕಷ್ಟವಾಗುತ್ತದೆ’ ಎಂಬುದು ಸ್ಥಳೀಯರ ಆಕ್ಷೇಪ.

ಸ್ವಾಗತ:  ರೀಚ್‌ 2ಇಯಲ್ಲಿನ ಮೈಸೂರು ರಸ್ತೆ ಟರ್ಮಿನಲ್‌ನಿಂದ ಕೆಂಗೇರಿ ಮಾರ್ಗದಲ್ಲಿ ಬರುವ ಆರ್.ವಿ. ಕಾಲೇಜು ರಸ್ತೆ ನಿಲ್ದಾಣವನ್ನು ಪಟ್ಟಣಗೆರೆ ಎಂದು ಬದಲಿಸಿರುವುದನ್ನು ಜನ ಸ್ವಾಗತಿಸಿದ್ದಾರೆ. ಈಗಾಗಲೇ ಆರ್.ವಿ. ರಸ್ತೆ ನಿಲ್ದಾಣ ಇರುವುದರಿಂದ ಈ ನಿಲ್ದಾಣಕ್ಕೆ ಆರ್.ವಿ. ಕಾಲೇಜು ರಸ್ತೆ ಎಂದು ಹೆಸರಿಟ್ಟಿದ್ದರೆ ಗೊಂದಲವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. 

ಹೊಸ ನಿಲ್ದಾಣಗಳು: ರೀಚ್‌ 2ಇ ಮಾರ್ಗದಲ್ಲಿನ ಹೊಸ ನಿಲ್ದಾಣಕ್ಕೆ ಚಲ್ಲಘಟ್ಟ, ರೀಚ್‌ 5ರ ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ಬೊಮ್ಮಸಂದ್ರ ನಿಲ್ದಾಣದವರೆಗೆವರೆಗಿನ ಹೊಸ ನಿಲ್ದಾಣಕ್ಕೆ ಬೆರಟೇನ ಅಗ್ರಹಾರ, 2ಬಿ ಹಂತದ ಹೊಸ ನಿಲ್ದಾಣಕ್ಕೆ ಬೆಟ್ಟಹಲಸೂರು ಎಂದು ಹೆಸರಿಡಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು