ಶನಿವಾರ, ಸೆಪ್ಟೆಂಬರ್ 25, 2021
25 °C
ವಿಡಿಯೊ ಕಥೆಗಳಿಗೆ ಬಿಐಸಿಯಿಂದ ಆಹ್ವಾನ, ಪ್ರತಿ ವಿಡಿಯೊಕ್ಕೆ ₹ 20 ಸಾವಿರ ಗೌರವಧನ

ಬೆಂಗಳೂರಿನ ಕಥೆ ಹೇಳೋಣ ಬನ್ನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಚರಿತ್ರೆ, ಸಂಸ್ಕೃತಿ, ಪರಂಪರೆ ಹಾಗೂ ಕಲೆಗಳಿಗೆ ಸಂಬಂಧಿಸಿದಂತೆ ಹೇಳಲು ನಿಮ್ಮಲ್ಲಿ ಕಥೆಗಳಿವೆಯೇ? ದೃಶ್ಯರೂಪ ಕೊಟ್ಟು ಹೇಳುವುದಾದರೆ ಅಂತಹ ಕಥೆಗಳು ತನಗೆ ಬೇಕು ಎನ್ನುತ್ತದೆ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ).

ಬೆಂಗಳೂರಿನ ಕುರಿತು ಅನನ್ಯ ವಿಡಿಯೊ ಕಥೆಗಳ ಕಣಜ ‘B·LORE’ಅನ್ನು ಹೊಂದುವ ಅಪೇಕ್ಷೆ ಹೊಂದಿರುವ ಬಿಐಸಿ, ಅದಕ್ಕಾಗಿ ಆಸಕ್ತರಿಂದ ಸಾಕ್ಷ್ಯಚಿತ್ರಗಳನ್ನು ಆಹ್ವಾನಿಸಿದೆ.

ಗಂಗರ ಆಧಿಪತ್ಯದ ಕಾಲದಲ್ಲಿ ಪುಟ್ಟ ಗ್ರಾಮವಾಗಿದ್ದ ಬೆಂಗಳೂರು, ಮಹಾನಗರ­ವಾಗಿ ಬೆಳೆಯುವವರೆಗೆ ಕಾಲದ ಕುಲುಮೆಯಲ್ಲಿ ದಿಗಿಲು ಉಂಟು ಮಾಡುವಷ್ಟು ರೂಪಾಂತರ ಹೊಂದಿದೆ. ಗಗನಚುಂಬಿ ಕಟ್ಟಡಗಳನ್ನೂ ನೆಲದಡಿ ರೈಲು ಮಾರ್ಗಗಳನ್ನೂ ಹೊಂದಿರುವ ಈ ಊರು ದಶದಿಕ್ಕುಗಳಲ್ಲಿ ಹಬ್ಬಿದೆ.

‘ದೇಶದ ವಿಜ್ಞಾನದ ರಾಜಧಾನಿ’, ‘ಸಿಲಿಕಾನ್‌ ವ್ಯಾಲಿ’ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಮಹಾನಗರ, ಆರು ಶತಮಾನಗಳ ಹಿಂದೆ ಒಂದು ಪುಟ್ಟ ಹಳ್ಳಿ­ಯಾಗಿತ್ತು ಎಂದರೆ ಈಗ ಯಾರೂ ನಂಬುವುದಿಲ್ಲ. ಚೋಳ, ಹೊಯ್ಸಳ, ವಿಜಯನಗರ, ಮರಾಠ ಮತ್ತು ಮೈಸೂರು ಅರಸರ ಆಡಳಿತವನ್ನು ಕಂಡಿದ್ದ ಈ ಊರು ಮೊಗಲ್‌ ದೊರೆಗಳ ಆಳ್ವಿಕೆಗೂ ಒಳಪಟ್ಟಿತ್ತು.

ಚರಿತ್ರೆಯ ಗಣಿಯೊಳಗೆ ಇಳಿದಷ್ಟೂ ನಗರದ ಕುರಿತು ಇಂತಹ ಲೆಕ್ಕವಿಲ್ಲದಷ್ಟು ಕಥೆಗಳು ಸಿಗುತ್ತವೆ. ಮಲ್ಲಿಗೆ ಪರಿಮಳವನ್ನು ಸೂಸುವ ಜಗದ್ವಿಖ್ಯಾತ ಕರಗ, ದೇಶದ ಸಂಗೀತಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುವ ಶ್ರೀರಾಮನವಮಿ ಸಂಗೀತೋತ್ಸವ... ಹೀಗೆ ಸಾಂಸ್ಕೃತಿಕವಾಗಿಯೂ ಈ ಊರು ಶ್ರೀಮಂತ.

ಚರಿತ್ರೆ (ನಗರದ ನಿರ್ಮಾಣ, ಸ್ವಾತಂತ್ರ್ಯಪೂರ್ವದ ಕಾಲಘಟ್ಟ, ಕೈಗಾರಿಕಾ ಬೆಳವಣಿಗೆ), ಸಂಸ್ಕೃತಿ (ಸಮುದಾಯ, ಸಂಪ್ರದಾಯ, ಆಡುಭಾಷೆ, ಆಚಾರ, ವಿಚಾರ, ಆಹಾರ), ಪರಂಪರೆ, ಕಲೆ (ದೃಶ್ಯ ಹಾಗೂ ಪ್ರದರ್ಶನ), ಆವಿಷ್ಕಾರ, ನಾಗರಿಕರ ಸಹಭಾಗಿತ್ವ ಇವೇ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಸ್ಫೂರ್ತಿದಾಯಕ ವಿಡಿಯೊ ಕಥೆಗಳು ಬೇಕು ಎನ್ನುವುದು ಬಿಐಸಿ ಬೇಡಿಕೆ. ‘ಸಲಹೆ ರೂಪದಲ್ಲಿ ಕೆಲವು ವಿಷಯಗಳನ್ನು ಮುಂದಿಟ್ಟಿದ್ದೇವೆ. ಇವುಗಳಿಗೇ ಸೀಮಿತವಾಗಬೇಕು ಎಂದೇನಿಲ್ಲ. ಈ ವಿಷಯಗಳ ಆಚೆಗೂ ಯೋಚಿಸಿ, ಸಿದ್ಧಪಡಿಸಿದ ವಿಡಿಯೊ ಕಥೆಗಳಿಗೂ ಸ್ವಾಗತ. ವೈವಿಧ್ಯ ಹೆಚ್ಚಿದಷ್ಟೂ ನಮಗೆ ಸಂತೋಷ’ ಎನ್ನುತ್ತಾರೆ ಬಿಐಸಿಯ ಗೌರವ ನಿರ್ದೇಶಕ ವಿ.ರವಿಚಂದರ್‌.

‘ಮುಂದಿನ ಕೆಲವು ವರ್ಷಗಳಲ್ಲಿ ಬೆಂಗಳೂರಿನ ವೈವಿಧ್ಯಕ್ಕೆ ಸಂಬಂಧಿಸಿದಂತೆ ಅನನ್ಯ ಕಥೆಗಳ ಅರ್ಕೈವ್ ರೂಪಿಸುವುದು ಬಿಐಸಿಯ ಈ ಯೋಜನೆ ಹಿಂದಿರುವ ಉದ್ದೇಶ. ಈಗಾಗಲೇ ಮೊದಲ 75 ವಿಡಿಯೊಗಳಿಗೆ ಗೌರವಧನ ನೀಡಲು ದೇಣಿಗೆದಾರರು ಸಿಕ್ಕಿದ್ದಾರೆ. ಮುಂದಿನ ದಿನಗಳಲ್ಲಿ 500 ವಿಡಿಯೊಗಳನ್ನು ಸಂಗ್ರಹಿಸಲು ಬೇಕಾದಷ್ಟು ಹಣಕಾಸಿನ ನೆರವು ಹರಿದುಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ರವಿಚಂದರ್‌.

ವೈಯಕ್ತಿಕವಾಗಿ ಅಥವಾ ಸಾಂಸ್ಥಿಕವಾಗಿ ಯಾರು ಬೇಕಾದರೂ ಪ್ರವೇಶ ಕಳುಹಿಸಬಹುದು. ಇದಕ್ಕೆ ಯಾವುದೇ ಕಾಲಮಿತಿ ಇಲ್ಲ. ಅರ್ಜಿಯ ಜತೆಗೆ ವಿಡಿಯೊವನ್ನೂ ಕಳುಹಿಸಬಹುದು ಇಲ್ಲವೆ ಉದ್ದೇಶಿತ ಫಿಲಂ ವಿವರ ಬರೆದು ಕಳುಹಿಸಬಹುದು. ಕಂಟೆಂಟ್‌ಗೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯ ನಿಯಮಾವಳಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ವಿಡಿಯೊ ನಿರ್ಮಾಣ ಮಾಡುವವರ ಹೊಣೆ ಎಂದು ಅವರು ವಿವರಿಸುತ್ತಾರೆ.

ಹೆಚ್ಚಿನ ವಿವರಗಳಿಗೆ ಬಿಐಸಿ ವೆಬ್‌ಸೈಟ್‌ ನೋಡಬಹುದು. ಅರ್ಜಿ ಸಲ್ಲಿಸುವ ಇ–ಮೇಲ್‌ ವಿಳಾಸ: bic@bangaloreinternationalcentre.org

ವಿಡಿಯೊ ಹೇಗಿರಬೇಕು?

ಬೆಂಗಳೂರಿನ ಯಾವುದೇ ವಿಶೇಷಕ್ಕೆ ಸಂಬಂಧಿಸಿದಂತೆ ಗರಿಷ್ಠ ನಾಲ್ಕು ನಿಮಿಷದ ವಿಡಿಯೊ ಕಥೆಯನ್ನು ನೀವು ಹೇಳಬಹುದು. ಅದು ಎ.ವಿ. ಫಿಲಂ (ಆಡಿಯೊ–ವಿಡಿಯೊ, ಎಂಪಿ–4) ರೂಪದಲ್ಲಿರಬೇಕು. ಈ ವಿಡಿಯೊ ಯಾವುದೇ ಭಾಷೆಯಲ್ಲೂ ಸಿದ್ಧವಾಗಿರಬಹುದು. ಆದರೆ, ಇಂಗ್ಲಿಷ್‌ನ ಶೀರ್ಷಿಕೆಗಳನ್ನು ಕೊಡುವುದು ಕಡ್ಡಾಯ. ಸೃಜನಶೀಲತೆ, ಸ್ವಂತಿಕೆ ಹಾಗೂ ಕುತೂಹಲಕಾರಿ ವಿವರಗಳುಳ್ಳ ಕಥೆಗಳಿಗೆ ಆದ್ಯತೆ. ತಮಾಷೆ ಸಂಗತಿಗಳೂ ಅಪೇಕ್ಷಣೀಯ ಎನ್ನುತ್ತದೆ ಬಿಐಸಿ.

ನಗರದ ಎಲ್ಲ ಆಯಾಮಗಳ ಕುರಿತು ಕುತೂಹಲಕಾರಿ ವಿಡಿಯೊ ಕಥೆಗಳ ಕಣಜವನ್ನಾಗಿ ‘B·LORE’ ಅನ್ನು ಅಭಿವೃದ್ಧಿಪಡಿಸುವುದು ಬಿಐಸಿ ಗುರಿ. ಅದರ ವೆಬ್‌ಸೈಟ್‌ ಮತ್ತು ಯುಟ್ಯೂಬ್‌ ಚಾನಲ್‌ ಹಾಗೂ ಇತರ ಮಲ್ಟಿಮೀಡಿಯಾ ವೇದಿಕೆಗಳ ಮೂಲಕ ಈ ಕಥಾ ಕಣಜ ಬೆಂಗಳೂರಿನ ಕುರಿತು ತಿಳಿಯಬಯಸುವವರ ಮುಂದೆ ತೆರೆದುಕೊಳ್ಳಲಿದೆ. ಅಂದಹಾಗೆ, ಆಯ್ಕೆಯಾದ ವಿಡಿಯೊ ಕಥೆಗಳಿಗೆ ಬಿಐಸಿಯಿಂದ ತಲಾ ₹ 20 ಸಾವಿರ ಗೌರವಧನ ಸಿಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು