ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯಾನಕ್ಕೆ ಮುಖರ್ಜಿ ಹೆಸರೇಕೆ ?’

ವಿಜಯನಗರದ ಉದ್ಯಾನಕ್ಕೆ ಭಾರತೀಯ ಜನಸಂಘದ ಸ್ಥಾಪಕರ ಹೆಸರು: ಸ್ಥಳೀಯರ ವಿರೋಧ
Last Updated 30 ಆಗಸ್ಟ್ 2020, 19:28 IST
ಅಕ್ಷರ ಗಾತ್ರ

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿಜಯನಗರದಲ್ಲಿರುವ ಉದ್ಯಾನಕ್ಕೆ ಡಾ.ಶ್ಯಾಮಪ್ರಸಾದ್‌ ಮುಖರ್ಜಿ ಎಂದು ಹೆಸರಿಟ್ಟಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಮಾರೇನಹಳ್ಳಿ ವಾರ್ಡ್‌ನಲ್ಲಿರುವ ಈ ಉದ್ಯಾನವನ್ನು ಮೊದಲು ನಚಿಕೇತ ಉದ್ಯಾನ ಎಂದು ಕರೆಯುತ್ತಿದ್ದರು. ನಚಿಕೇತ ಸ್ವಾಮಿ ವಿವೇಕಾನಂದರ ಮೊದಲ ಶಿಷ್ಯ. ಈಗ ಇದ್ದಕ್ಕಿದ್ದಂತೆ, ಜನಸಂಘ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿಯವರ ಹೆಸರಿಡಲಾಗಿದೆ. ಇದರ ಬದಲು ನಮ್ಮ ರಾಜ್ಯದ ಅಥವಾ ಸ್ಥಳೀಯರ ನಾಯಕರ ಹೆಸರಿಡಬಹುದಿತ್ತು’ ಎಂದು ವಿಜಯನಗರ ನಿವಾಸಿ ಚಂದ್ರಕಾಂತ ಸೊನ್ನದ ಹೇಳಿದರು.

‘ಶ್ಯಾಮಪ್ರಸಾದ್ ಮುಖರ್ಜಿಯವರ ಬಗ್ಗೆ ಗೌರವವಿದೆ. ಆದರೆ, ನಗರದ ಉದ್ಯಾನಕ್ಕೂ ಉತ್ತರ ಭಾರತೀಯರ ಹೆಸರೇ ಬೇಕೇ’ ಎಂದು ಪ್ರಶ್ನಿಸಿರುವ ಅವರು, ‘2015ರಲ್ಲಿ ಆಗಿನ ಸಂಸದ ಅನಂತಕುಮಾರ್ ಈ ಉದ್ಯಾನವನ್ನು ಉದ್ಘಾಟಿಸಿದ್ದರು. ಅವರ ಹೆಸರನ್ನಾದರೂ ಇಡಬಹುದಿತ್ತು ಅಥವಾ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಇದೇ ಉದ್ಯಾನಕ್ಕೆ ವಾಯುವಿಹಾರಕ್ಕೆ ಬರುತ್ತಿದ್ದರು. ಅವರ ಹೆಸರಿನಿಂದ ಈ ಉದ್ಯಾನವನ್ನು ಕರೆಯಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

‘ಉದ್ಯಾನದ ಪಕ್ಕದಲ್ಲಿ ನಚಿಕೇತ ಮನೋವಿಕಾಸ ಕೇಂದ್ರ ಇದ್ದುದರಿಂದ ಈ ಪಾರ್ಕ್‌ ಅನ್ನು ನಚಿಕೇತ ಉದ್ಯಾನ ಎಂದು ಕರೆಯುತ್ತಿದ್ದರು. ಆದರೆ, ಅದು ಅಧಿಕೃತ ಹೆಸರಲ್ಲ. ಎಲ್ಲರೊಂದಿಗೆ ಚರ್ಚಿಸಿಯೇ ಉದ್ಯಾನಕ್ಕೆ ಶ್ಯಾಮಪ್ರಸಾದ್ ಮುಖರ್ಜಿಯವರ ಹೆಸರಿಡಲು ತೀರ್ಮಾನಿಸಲಾಗಿದೆ’ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಮಧುಕುಮಾರಿ ವಾಗೀಶ್ ಹೇಳಿದರು.

‘ಅನಂತಕುಮಾರ್ ಅವರ ಹೆಸರಿಡಲು ಅಭ್ಯಂತರವೇನೂ ಇಲ್ಲ. ಸ್ಥಳೀಯರಿಂದ ಹೆಚ್ಚು ಆಕ್ಷೇಪಣೆ ಕೇಳಿ ಬಂದರೆ, ನಿರ್ಧಾರ ಮರುಪರಿಶೀಲಿಸಲಾಗುವುದು’ ಎಂದರು.

‘ಸ್ಥಳೀಯ ಪಾಲಿಕೆ ಸದಸ್ಯರ ಕೋರಿಕೆ ಮೇರೆಗೆ ಉದ್ಯಾನ ಅಥವಾ ಸ್ಥಳಕ್ಕೆ ನಿರ್ದಿಷ್ಟ ಹೆಸರಿಡಲಾಗಿದೆ. ಸ್ಥಳೀಯರು ಆಕ್ಷೇಪಣೆ ಸಲ್ಲಿಸಿದರೆ ಮುಂದೆ ಪರಿಶೀಲಿಸಲಾಗುವುದು’ ಎಂದು ಮೇಯರ್‌ ಎಂ. ಗೌತಮ್‌ಕುಮಾರ್‌ ಹೇಳಿದರು.

ನವೀಕರಣಗೊಂಡಿರುವ ಈ ಉದ್ಯಾನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ (ಸೆ.2) ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT