ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಪಮಾನ ಏರಿಳಿತ: ಮಕ್ಕಳನ್ನು ಕಾಡುತ್ತಿದೆ ವೈರಾಣು ಜ್ವರ

ಆಸ್ಪತ್ರೆಗಳಲ್ಲಿನ ಹೊರ ರೋಗಿಗಳಲ್ಲಿ ಶೇ 30ರಷ್ಟು ಮಂದಿ ಜ್ವರ ಪೀಡಿತರು
Published 4 ಸೆಪ್ಟೆಂಬರ್ 2024, 0:47 IST
Last Updated 4 ಸೆಪ್ಟೆಂಬರ್ 2024, 0:47 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ತಾಪಮಾನದ ಏರಿಳಿತ, ಗಾಳಿ ಸಹಿತ ಮಳೆ ಹಾಗೂ ಬಿಸಿಲಿನಿಂದಾಗಿ ವೈರಾಣು ಜ್ವರವು ಮಕ್ಕಳನ್ನು ಹೆಚ್ಚಾಗಿ ಕಾಡಲಾರಂಭಿಸಿದೆ. ಇನ್ನೊಂದೆಡೆ, ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಪ್ರಕರಣಗಳು ಏರಿಕೆಯತ್ತ ಸಾಗಿವೆ.

ಇಲ್ಲಿನ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಿಗೆ ಭೇಟಿ ನೀಡುತ್ತಿರುವವರಲ್ಲಿ ಶೇ 30ಕ್ಕೂ ಅಧಿಕ ಮಂದಿ ಜ್ವರ ತಪಾಸಣೆಗೆ ಒಳಪಡುತ್ತಿದ್ದಾರೆ. ಇವರಲ್ಲಿ ಮಕ್ಕಳೇ ಹೆಚ್ಚಿನವರಾಗಿದ್ದಾರೆ. ಕಳೆದೊಂದು ತಿಂಗಳಿನಿಂದ ನಗರದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ದಿನದ ಬಹುತೇಕ ಅವಧಿ ಮೋಡ ಕವಿದ ವಾತಾವರಣದಿಂದ ತಾಪಮಾನ ಇಳಿಮುಖವಾಗಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ವರದಿಯಾಗುತ್ತಿದ್ದು, ಕೆಲ ದಿನಗಳು ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ಗೂ ಕುಸಿದಿದೆ. ಈ ವಾತಾವರಣದಿಂದ ಮಕ್ಕಳು ಹೆಚ್ಚಾಗಿ ಅಸ್ವಸ್ಥರಾಗುತ್ತಿದ್ದಾರೆ.

ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಪ್ರತಿನಿತ್ಯ 500ರಿಂದ 600 ಹೊರ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿ ಜ್ವರ, ಕೆಮ್ಮು ಸಂಬಂಧಿ ಸಮಸ್ಯೆಗೆ ತಪಾಸಣೆಗೆ ಒಳಪಡುತ್ತಿದ್ದಾರೆ. ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್‌ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿನಿತ್ಯ ಸರಾಸರಿ 50 ಜ್ವರ ಪೀಡಿತರು ಭೇಟಿ ನೀಡುತ್ತಿದ್ದಾರೆ. ಅದೇ ರೀತಿ, ಮಣಿಪಾಲ್, ನಾರಾಯಣ ಹೆಲ್ತ್, ಅಪೋಲೊ, ಫೋರ್ಟಿಸ್ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೂ ಜ್ವರದ ಚಿಕಿತ್ಸೆಗಾಗಿ ಬರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ವಿವಿಧ ಕ್ಲಿನಿಕ್‌ಗಳಲ್ಲಿ ಸಹ ರೋಗಿಗಳ ದಟ್ಟಣೆ ಹೆಚ್ಚಾಗುತ್ತಿದೆ.

ಮಕ್ಕಳಿಗೆ ಸಮಸ್ಯೆ: ‘ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ, ಸಾಮಾನ್ಯವಾಗಿ ಜ್ವರ ಮೊದಲು ಮಕ್ಕಳಿಗೆ ಬರುತ್ತದೆ. ಬಳಿಕ ಮನೆ ಮಂದಿಗೆಲ್ಲ ಹರಡುತ್ತದೆ. ನೆಗಡಿ, ಕೆಮ್ಮು, ಮೈ–ಕೈ ನೋವಿನಿಂದ ಪ್ರಾರಂಭವಾಗಿ, ಐದಾರು ದಿನ ಸಮಸ್ಯೆ ಬಾಧಿಸುತ್ತದೆ. ವಾತಾವರಣ ಬದಲಾವಣೆಯಾದಾಗ ಜ್ವರ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಬಿಸಿ ನೀರು ಸೇವನೆ ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಬೇಕು’ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಎಸ್. ಸಂಜಯ್ ತಿಳಿಸಿದರು.

‘ಕೆಲ ದಿನಗಳಿಂದ ಮಳೆ–ಬಿಸಿಲಿನಿಂದ ಚಳಿಯ ವಾತಾವರಣ ಇದೆ. ಇದರಿಂದಾಗಿ ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯ ಪೀಡಿತರಾಗುತ್ತಿದ್ದು, ಹೆಚ್ಚಿನವರು ಜ್ವರ, ಉಸಿರಾಟದ ಸಮಸ್ಯೆ, ಗಂಟಲು ನೋವು ಸಮಸ್ಯೆ ಸಂಬಂಧ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿದರು.

ವೈರಾಣು ಜ್ವರ ಬಂದಾಗ ವಿಶ್ರಾಂತಿ ಅಗತ್ಯ. ಹೊರಗಡೆ ಓಡಾಡಿದಲ್ಲಿ ಸೋಂಕು ಹರಡಲಿದೆ. ಸೀನಿದಾಗ ಕೆಮ್ಮಿದಾಗ ಹೊಮ್ಮುವ ಹನಿ ಬೇರೊಬ್ಬರಿಗೆ ತಗುಲದಂತೆ ಎಚ್ಚರ ವಹಿಸಬೇಕು

-ಡಾ.ಕೆ.ಎಸ್. ಸಂಜಯ್ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕ

ವೈರಾಣು ಜ್ವರದ ಪ್ರಮುಖ ಲಕ್ಷಣಗಳು

ತೀವ್ರ ಆಯಾಸ ದಣಿವು ಮೈ–ಕೈ ನೋವು ತಲೆನೋವು ನೆಗಡಿ ಶೀತ–ಜ್ವರ ಕೆಮ್ಮು ಮೂಗು ಕಟ್ಟುವುದು ಕಣ್ಣುಗಳಲ್ಲಿ ಅಸ್ವಸ್ಥತೆ ಗಂಟಲು ಉರಿ.

ಐಎಲ್‌ಐ ಪ್ರಕರಣ ಹೆಚ್ಚಳ 

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಜುಲೈ ಬಳಿಕ ರಾಜ್ಯದಲ್ಲಿ ಶೀತ ಜ್ವರ ಮಾದರಿ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಪ್ರಕರಣಗಳು ಏರಿಕೆ ಕಂಡಿವೆ. ಪ್ರತಿ ವಾರ ದೃಢಪಡುತ್ತಿದ್ದ ಪ್ರಕರಣಗಳ ಸಂಖ್ಯೆ ಜುಲೈ ತಿಂಗಳಲ್ಲಿ ನೂರರ ಗಡಿಯೊಳಗಿತ್ತು. ಈಗ ಆ ಸಂಖ್ಯೆ 250ರ ಗಡಿ ದಾಟಿದೆ. ಈ ರೋಗದ ಶಂಕೆಯ ಕಾರಣದಿಂದ ಪ್ರತಿ ವಾರ 400ಕ್ಕೂ ಅಧಿಕ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿಯೇ ದೃಢಪಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT