ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕರ್ಮ ಪ್ರದರ್ಶನ: ಕಸುಬುಗಳ ಸವಾಲು ಅನಾವರಣ

ಜೇಡಿ ಮಣ್ಣಿಗೆ ಬೇಕು ಮೀಸಲು ಕೆರೆ, ರಾಜ್ಯದಲ್ಲಿ ಬಿದಿರು, ಈಚಲು ಗರಿಗೂ ಕೊರತೆ
Published : 12 ಸೆಪ್ಟೆಂಬರ್ 2024, 15:42 IST
Last Updated : 12 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ಬೆಂಗಳೂರು: ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ (ಎಂಎಸ್‌ಎಂಇ) ಆವರಣದಲ್ಲಿ ಗುರುವಾರದಿಂದ ಆರಂಭವಾದ ಮೂರು ದಿನಗಳ ಪ್ರಧಾನಮಂತ್ರಿ ವಿಶ್ವಕರ್ಮ ಪ್ರದರ್ಶನ ಮತ್ತು ವ್ಯಾಪಾರ ಮೇಳ–2024 ಕರಕುಶಲ ಸಾಮಗ್ರಿಗಳ ಪ್ರದರ್ಶನದ ಜೊತೆಗೆ ಕುಶಲಕರ್ಮಿ ಕಸುಬುಗಳ ಸಮಸ್ಯೆಗಳನ್ನೂ ಅನಾವರಣಗೊಳಿಸಿತು.

ಬಿದಿರು, ಜೇಡಿಮಣ್ಣು, ಮರ, ಲೋಹದ ಸಾಮಗ್ರಿಗಳು, ಕೈಮಗ್ಗದ ಖಾದಿ ಬಟ್ಟೆಗಳು, ಚರ್ಮದ ಪಾದರಕ್ಷೆಗಳು, ಕಲಾತ್ಮಕ ಮೀನಿನ ಬಲೆಗಳು, ಕಬ್ಬಿಣದ ಕೃಷಿ ಸಲಕರಣೆಗಳು, ಬಾಳೆ ದಿಂಡಿನಲ್ಲಿ ತಯಾರಿಸಿದ ಪರಿಕರಗಳು, ಈಚಲು ಪೊರಕೆಗಳು ಮೇಳದಲ್ಲಿ ಗಮನ ಸೆಳೆದವು. ಕುಶಲಕರ್ಮಿಗಳ ಕೈಚಳಕದಲ್ಲಿ ಮೂಡಿದ ಪ್ರತಿ ಸಾಮಗ್ರಿಗಳಲ್ಲೂ ವಿಶೇಷ ಛಾಪು ಕಣುತ್ತಿತ್ತು. ಆ ವಿಶೇಷತೆಯ ಹಿಂದಿನ ಶ್ರಮದ ಕಥೆ ಮಾತ್ರ ಭಿನ್ನವಾಗಿದ್ದವು.

ಪ್ರತಿ ಹೋಬಳಿಗೂ ಬೇಕು ಒಂದು ಕೆರೆ:

ಮೇಳದಲ್ಲಿದ್ದ 56 ಮಳಿಗೆಗಳಲ್ಲಿ ಹೆಚ್ಚಿನ ಮಳಿಗೆಗಳು ಕುಂಬಾರರ ಕೈಚಳದಲ್ಲಿ ಮೂಡಿದ ಮಡಕೆ, ಕುಡಿಕೆ, ಮ್ಯಾಜಿಕ್‌ ದೀಪ, ಗಣಪತಿ ದೀಪ, ವಾಸ್ತು ದೀಪ, ನೀರಿನ ಬಾಟಲ್‌, ಹೂ ಬಾನಿ, ಹೂಜಿಗಳು, ಚಹ ಲೋಟಗಳು, ನೀರಿನ ಲೋಟಗಳು, ಬಗೆಬಗೆಯ ಅಲಂಕಾರದ ಬುದ್ಧನ ವಿಗ್ರಹಗಳು ಕಣ್ಮನ ಸೆಳೆದವು. 

‘ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ದೊರೆತಿದೆ. ಯೋಜನೆ ಬಳಸಿಕೊಂಡು ಎಲ್ಲ ಕೆರೆಗಳ ಹೂಳು ತೆಗೆಯಲಾಗಿದೆ. ಇದರಿಂದ ಜೇಡಿ ಮಣ್ಣು ಸಿಗುತ್ತಿಲ್ಲ. ಅದಕ್ಕಾಗಿ ಪ್ರತಿ ಹೋಬಳಿಯಲ್ಲೂ ಕನಿಷ್ಠ ಒಂದು ಕೆರೆ ಮೀಸಲಿಡಬೇಕು. ಸಿದ್ಧಪಡಿಸಿದ ಸಾಮಗ್ರಿ ಸುಡಲು ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆ ಕಟ್ಟಿಗೆ ಪೂರೈಸಬೇಕು. ಈ ಎರಡು ಕೆಲಸ ಆಗದಿದ್ದರೆ ಕೆಲ ವರ್ಷಗಳಲ್ಲೇ ಕುಂಬಾರಿಕೆ ಕಲೆ ನಶಿಸಲಿದೆ’ ಎನ್ನುತ್ತಾರೆ ಶಿವಮೊಗ್ಗ ಜಿಲ್ಲೆ ಹಾರನಹಳ್ಳಿ ಸಂಕದೇವನಕೊಪ್ಪದ ಎಸ್‌.ಬಿ. ಹಾಲೇಶ್‌.

ಸಾವಿರಾರು ಕುಟುಂಬಗಳಿಗೆ ಕೆಲಸವಿಲ್ಲ: 

ಮೇಳದಲ್ಲಿ ಸಾಕಷ್ಟು ಗಮನ ಸೆಳೆದದ್ದು ಬಿದಿರಿನ ಸಾಮಗ್ರಿಗಳು. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜೀವಂತಿಕೆ ಉಳಿಸಿಕೊಂಡಿರುವ ಬಿದಿರಿನ ಕಸುಬುದಾರಿಕೆಯೂ ಕಚ್ಛಾ ಸಾಮಗ್ರಿಗಳ ಕೊರತೆಯ ಕಾರಣ ನಶಿಸುತ್ತಿದೆ. ಬಿದಿರಿನ ತೊಟ್ಟಿಲು, ಬಾಗಿನದ ಮೊರಗಳಿಗೆ ಶ್ರಾವಣ, ದೀಪಾವಳಿ ಸಮಯದಲ್ಲಿ ಭಾರಿ ಬೇಡಿಕೆ ಇರುತ್ತದೆ.  

‘ರಾಜ್ಯದಲ್ಲಿ ಗುಣಮಟ್ಟದ ಬಿದಿರು ಸಿಗುತ್ತಿಲ್ಲ. ಹಾಗಾಗಿ, ಆಂಧ್ರಪ್ರದೇಶ, ಗೋವಾದಿಂದ ತರಿಸುತ್ತಿದ್ದೇವೆ. ಕೊರತೆಯ ಕಾರಣ ಸಾವಿರಾರು ಕುಟುಂಬಗಳು ಕೆಲಸವಿಲ್ಲದೇ ಬೇರೆಕಡೆ ಚದುರಿದ್ದಾರೆ. ಸರ್ಕಾರ ಬಿದಿರು ಬೆಳೆಸಲು ಜಮೀನು ನೀಡಬೇಕು. ಶೇ 90ರಷ್ಟು ಕುಟುಂಬಗಳು ಬೀದಿ ಬದಿ, ಮನೆಯ ಅಂಗಳದಲ್ಲೇ ಹೆಣಿಗೆ ಮಾಡುತ್ತವೆ. ಅವರಿಗೆ ಪ್ರತ್ಯೇಕ ಜಾಗ ಮೀಸಲಿಡಬೇಕು’ ಎನ್ನುತ್ತಾರೆ ಆದಿಕಲ್ಲಮ್ಮ ಮೇದ ಸಮುದಾಯ ಸಂಘದ ನಾಗರತ್ನಾ, ಮುರಳಿ.   

ಬಿದಿರು ಸಾಮಗ್ರಿ ತಯಾರಿಸುವ ಕಸುಬಿನಂತೆ ಈಚಲು ಗರಿಗಳನ್ನು ಬಳಸಿ ಕಸ ಗುಡಿಸುವ ಪೊರಕೆ ತಯಾರಿಸುವವರೂ ಇಂತಹದೇ ಸ್ಥಿತಿ ಅನುಭವಿಸುತ್ತಿದ್ದಾರೆ.

‘ಈಚಲು ಗರಿಗಳಿಗಾಗಿ ವರ್ಷದ ಕೆಲವು ತಿಂಗಳು ಆಂಧ್ರಪ್ರದೇಶಕ್ಕೆ ತೆರಳುತ್ತೇವೆ. ವರ್ಷಕ್ಕೆ 100 ಪೆಂಡಿ (35ರಿಂದ 40 ಕೆ.ಜಿ.) ತಂದು ವರ್ಷವಿಡೀ ಕೆಲಸ ಮಾಡುತ್ತೇವೆ. ₹50ಕ್ಕೆ ಒಂದು ಜೊತೆ ಮಾರಾಟ ಮಾಡುತ್ತೇವೆ. ಹೊಟ್ಟೆ, ಬಟ್ಟೆಗಷ್ಟೇ ದುಡಿಮೆ’ ಎನ್ನುತ್ತಾರೆ ಹರಪನಹಳ್ಳಿ ತಾಲ್ಲೂಕು ಇಟ್ಟಿಗುಡಿಯ ಪ್ರೇಮಾ ಶಿವಕುಮಾರ್.  

ಮೇಳಗಳ ಮೂಲಕ ಬೆಂಬಲ: ಶೋಭಾ ಕರಂದ್ಲಾಜೆ

ಪ್ರತಿಯೊಬ್ಬ ಕಲಾವಿದನಿಗೂ ಕಲೆಯೇ ಜೀವಾಳ. ಮೇಳಗಳನ್ನು ಆಯೋಜಿಸುವ ಮೂಲಕ ಕೇಂದ್ರ ಸರ್ಕಾರ  ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ದಿಮೆ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಪ್ರಧಾನಮಂತ್ರಿ ವಿಶ್ವಕರ್ಮ ಪ್ರದರ್ಶನ ಮತ್ತು ವ್ಯಾಪಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದರಿಗೆ ಆರ್ಥಿಕ ನೆರವು ಸಾಲ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಪಿಎಂ ವಿಶ್ವಕರ್ಮ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಸೌಲಭ್ಯವನ್ನು ಪಡೆಯಬೇಕು ಎಂದರು.

ಜೇಡಿ ಮಣ್ಣಿನಲ್ಲಿ ತಯಾರಿಸಿದ ಕುಂಬಾರಿಕೆಯ ಸಾಮಗ್ರಿಗಳನ್ನು ಪ್ರದರ್ಶಿಸಿದ ಎಸ್‌.ಬಿ. ಹಾಲೇಶ್‌.
ಜೇಡಿ ಮಣ್ಣಿನಲ್ಲಿ ತಯಾರಿಸಿದ ಕುಂಬಾರಿಕೆಯ ಸಾಮಗ್ರಿಗಳನ್ನು ಪ್ರದರ್ಶಿಸಿದ ಎಸ್‌.ಬಿ. ಹಾಲೇಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT