ಮಂಗಳವಾರ, ನವೆಂಬರ್ 30, 2021
22 °C
ವಿಜಿನಾಪುರ ಕೆಳಸೇತುವೆ: ಅವೈಜ್ಞಾನಿಕ ಕಾಮಗಾರಿ– ಆರೋಪ, ವಾಹನ ಸವಾರರಿಗೆ ಕಿರಿಕಿರಿ

ಪ್ರತಿ ಮಳೆಗೂ ಜಲ ಸ್ತಂಭನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ವಿಜಿನಾಪುರದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸಂಪರ್ಕ ಕಲ್ಪಿಸುವ ವಿಜಿನಾಪುರದ ಎಫ್‌ಸಿಐ ಗೋದಾಮು ಬಳಿಯ ರೈಲ್ವೆ ಕೆಳಸೇತುವೆಯಲ್ಲಿ ಪ್ರತಿ ಸಾರಿ ಮಳೆಯಾದಾಗಲೂ ಮೂರು– ನಾಲ್ಕು ಅಡಿಗಳಷ್ಟು ನೀರು ಕಟ್ಟಿಕೊಳ್ಳುತ್ತದೆ.

ಈ ವೇಳೆ ಉಂಟಾಗುವ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈ ಕೆಳಸೇತುವೆ ಮೂಲಕ ಹಾದು ಹೋಗುವ ರಸ್ತೆಯು ವಿಜಿನಾಪುರಪುರದಿಂದ ಹೆಬ್ಬಾಳ, ಮಾರತ್ತಹಳ್ಳಿ, ವೈಟ್ ಫಿಲ್ಡ್, ಹಲಸೂರು ಕಡೆಗೆ ಸಂಪರ್ಕ ಕಲ್ಪಿಸುತ್ತದೆ. ಕೆಲ ದಿನಗಳಿಂದ ಪದೇ ಪದೇ ಸುರಿಯುತ್ತಿರುವ ಮಳೆಯಿಂದಾಗಿ ಕೆಳಸೇತುವೆಯಲ್ಲಿ ನೀರು ನಿಲ್ಲುತ್ತಿದ್ದು, ಜನರು ಇದನ್ನು ಬಳಸಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ.

ಕೆಳಸೇತುವೆ ಮಾರ್ಗದ ಬಳಿಯ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಹೆಚ್ಚಿನ ಮಳೆ ನೀರು ಕೆಳಸೇತುವೆ ಕಡೆಗೇ ಹರಿಯುತ್ತದೆ. ಈ ಸೇತುವೆ ಪಕ್ಕದಲ್ಲಿ ಅನೇಕ ಮನೆಗಳಿವೆ. ಇಲ್ಲಿ ಸರಿಯಾದ ಚರಂಡಿಯನ್ನೂ ನಿರ್ಮಾಣ ಮಾಡಿಲ್ಲ. ಚರಂಡಿಯಲ್ಲಿ ಹರಿಯುವ ನೀರು ಕೂಡ ಕೆಳಸೇತುವೆ ಬಳಿ ಸಂಗ್ರಹಗೊಳ್ಳುತ್ತದೆ.

‘ಹನ್ನೆರಡು ವರ್ಷಗಳಿಂದ ಈ ಸಮಸ್ಯೆ ಇದೆ. ಪ್ರತಿ ಸಾರಿ ಮಳೆ ಬಂದಾಗ ರೈಲ್ವೆ ಸೇತುವೆ ಬಳಿ ಪ್ರವಾಹ ಸೃಷ್ಟಿಯಾಗುತ್ತದೆ. ನೀರು ಸಂಗ್ರಹಗೊಂಡು ತೊಂದರೆ ಆದಾಗ ಮಾತ್ರ ಅ ಕ್ಷಣಕ್ಕೆ ಬಿಬಿಎಂಪಿ ಅಧಿಕಾರಿಗಳು ಕಾಟಚಾರಕ್ಕೆ ನೀರು ತೆರವುಗೊಳಿಸಿ ಕೈತೊಳೆದುಕೊಳ್ಳುತ್ತಾರೆ. ಮಳೆ ನೀರು ಸಂಗ್ರಹಗೊಳ್ಳದಂತೆ ಸಂಪ್ ನಿರ್ಮಾಣ ಮಾಡಲು ಜನವರಿಯಲ್ಲಿ ಕೆಲಸ ಆರಂಭಿಸಲಾಗಿತ್ತು. ಮಳೆಗಾಲ ಆರಂಭಗೊಂಡರೂ ಅದರ ಕೆಲಸ ಮುಗಿದಿಲ್ಲ. ದಿನನಿತ್ಯದ ಕೆಲಸಗಳಿಗಾಗಿ ಈ ಸೇತುವೆ ಹೆಚ್ಚಿನದಾಗಿ ಅವಲಂಬಿಸಿದ್ದೇವೆ’ ಎಂದು ಸ್ಥಳೀಯರು ದೂರಿದರು.

‘ಕಟ್ಟಿಕೊಳ್ಳುವ ನೀರನ್ನು ಪಂಪ್‌ ಬಳಸಿ ಹೊರಹಾಕಲಾಗುತ್ತದೆ. ನೀರು ಹರಿಯಲು ಚರಂಡಿಗಳಿಲ್ಲ. ಈ ತೊಂದರೆ ಕುರಿತು ಹಲವಾರು ಬಾರಿ ಬಿಬಿಎಂಪಿ ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಆಟೊ ಚಾಲಕ ರಾಮು ದೂರಿದರು.

ರೈಲ್ವೆ ಕೆಳಸೇತುವೆ ಚರಂಡಿಗಿಂತ ಕೆಳಮಟ್ಟದಲ್ಲಿದೆ. ಹಾಗಾಗಿ ನೀರು ಹೊರಹೋಗಲು ಸಾಧ್ಯವಾಗುತ್ತಿಲ್ಲ. ಮಳೆ ನೀರು ಸಂಗ್ರಹಕ್ಕಾಗಿ ಸಂಪ್‌ಗಳನ್ನು ನಿರ್ಮಿಸಲಾಗಿದೆ.  ಪಂಪ್‌ ಮೂಲಕ ಸಂಪ್‌ ನೀರನ್ನು ಹೊರಹಾಕಲಾಗುತ್ತದೆ. ಈಗಾಗಲೇ ಸಂಪ್ ನಿರ್ಮಾಣ ಕಾರ್ಯ ಮುಗಿದಿದೆ. ವಿದ್ಯುತ್ ಪೂರೈಕೆ ಇಲ್ಲದ ಕಾರಣ ಸಮಸ್ಯೆ ಎದುರಾಗಿದೆ. ಮಳೆಗಾಲದಲ್ಲಿ ನೀರು ಸಂಗ್ರಹಗೊಳ್ಳದಂತೆ ಎಚ್ಚರವಹಿಸುತ್ತೇವೆ.  ಇನ್ನೂ ಒಂದು ವಾರದಲ್ಲಿ ಎಲ್ಲಾ ಕೆಲಸಗಳು ಮುಗಿಯಲಿವೆ. ಆ ಬಳಿಕ ಈ ಕೆಳಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದೇವೆ’ ಎಂದು ಬಿಬಿಎಂಪಿ ಸಹಾಯಕ ಎಂಜಿನಿಯರ್ ಸತೀಶ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು