ಮೇಲ್ಸೇತುವೆ ನಿರ್ಮಾಣ: ಟೆಂಡರ್ ಕರೆಯದೆಯೇ ಗುತ್ತಿಗೆ

ಬೆಂಗಳೂರು: ಹೆಚ್ಚುವರಿ ಕಾಮಗಾರಿಗಳ ನೆಪದಲ್ಲಿ ಮೂಲ ಗುತ್ತಿಗೆ ಮೊತ್ತಕ್ಕಿಂತ ಅನೇಕ ಪಟ್ಟು ಹೆಚ್ಚು ಮೊತ್ತದ ಕಾಮಗಾರಿಯನ್ನು ಒಬ್ಬರೇ ಗುತ್ತಿಗೆದಾರರಿಗೆ ವಹಿಸುವ ಮೂಲಕ ಬಿಬಿಎಂಪಿಯು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಆಶಯವನ್ನೇ ಗಾಳಿಗೆ ತೂರುತ್ತಿದೆ!
ಶಾಸನ ರೂಪಿಸುವ ಹೊಣೆ ಹೊತ್ತ ಶಾಸಕರೇ ಕಾಮಗಾರಿಯ ಗುತ್ತಿಗೆಯನ್ನು ನಿರ್ದಿಷ್ಟ ಸಂಸ್ಥೆಗೇ ನೀಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ.
ಪಶ್ಚಿಮ ಕಾರ್ಡ್ ರಸ್ತೆಗೆ ರಾಜಾಜಿನಗರದಲ್ಲಿ – ಮಂಜುನಾಥನಗರ ಮುಖ್ಯರಸ್ತೆ ಕೂಡುವಲ್ಲಿ ದ್ವಿಪಥ ಸಂಚಾರದ ಮೇಲ್ಸೇತುವೆ, ಶಿವನಗರದ 8ನೇ ಮತ್ತು 1ನೇ ಮುಖ್ಯ ರಸ್ತೆಗಳು ಕೂಡುವಲ್ಲಿ ದ್ವಿಮುಖ ಸಂಚಾರದ ಇಂಟಿಗ್ರೇಟೆಡ್ ಅಂಡರ್ ಪಾಸ್ ಮತ್ತು ಬಸವೇಶ್ವರ ನಗರದ ಮುಖ್ಯರಸ್ತೆ ಕೂಡುವಲ್ಲಿ ಏಕಮುಖ ಸಂಚಾರದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳ ಪ್ಯಾಕೇಜ್‌ನ ಗುತ್ತಿಗೆಯನ್ನು ಎಂ.ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಲಾಗಿದೆ. ಒಟ್ಟು ₹ 89.86 ಕೋಟಿ ವೆಚ್ಚದ ಈ ಪ್ಯಾಕೇಜ್‌ಗೆ 2015ರ ಫೆ. 11ರಂದು ಅನುಮೋದನೆ ನೀಡಲಾಗಿತ್ತು.
ಮಂಜುನಾಥನಗರದ ಮುಖ್ಯರಸ್ತೆ ಕೂಡುವಲ್ಲಿನ ಮೇಲ್ಸೇತುವೆ 2018ರ ಆ. 27ರಂದು ಲೋಕಾರ್ಪಣೆಗೊಂಡಿದೆ. ಶಿವನಗರ 8ನೇ ಮತ್ತು 1ನೇ ಮುಖ್ಯ ರಸ್ತೆ ಕೂಡುವಲ್ಲಿ ಇಂಟಿಗ್ರೇಟೆಡ್ ಅಂಡರ್‌ಪಾಸ್ ಬದಲಿಗೆ ಮೇಲ್ಸೇತುವೆಯನ್ನೇ ನಿರ್ಮಿಸಲಾಗಿದ್ದು, 2021ರ ಅ. 4ರಂದು ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಬಸವೇಶ್ವರನಗರ ಮುಖ್ಯರಸ್ತೆ ಕೂಡುವಲ್ಲಿನ ಮೇಲ್ಸೇತುವೆ ಗಡುವು ಮುಗಿದು ನಾಲ್ಕು ವರ್ಷಗಳಾದರೂ ಪೂರ್ಣಗೊಂಡಿಲ್ಲ.
ಶಿವನಗರ ಮುಖ್ಯರಸ್ತೆಗಳು ಕೂಡುವಲ್ಲಿನ ಮೇಲ್ಸೇತುವೆಯ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ ವಸತಿ ಸಚಿವ ವಿ.ಸೋಮಣ್ಣ (ಗೋವಿಂದರಾಜನಗರ ಕ್ಷೇತ್ರದ ಶಾಸಕ) ಹಾಗೂ ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್, ಬಸವೇಶ್ವರನಗರದ ಮುಖ್ಯರಸ್ತೆ ಕೂಡುವಲ್ಲಿಯೂ ದ್ವಿಮುಖ ಸಂಚಾರದ ಮೇಲ್ಸೇತುವೆ ನಿರ್ಮಿಸುವಂತೆ ಕೋರಿಕೆ ಸಲ್ಲಿಸಿದ್ದರು.
ಪಶ್ಚಿಮ ಕಾರ್ಡ್ ರಸ್ತೆಯ ಮೊದಲೆರಡು ಮೇಲ್ಸೇತುವೆಗಳು ಲೋಕಾರ್ಪಣೆಗೊಂಡ ಬಳಿಕ ಯಶವಂತಪುರದ ಕಡೆಯಿಂದ ಬರುವ ವಾಹನಗಳು ಸಿಗ್ನಲ್ ಮುಕ್ತವಾಗಿ ಸಂಚರಿಸುತ್ತಿವೆ. ಹಾಗಾಗಿ, ಬಸವೇಶ್ವರನಗರ ಮುಖ್ಯರಸ್ತೆ ಕೂಡುವಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇಲ್ಲಿಯೂ ದ್ವಿಮುಖ ಸಂಚಾರದ ಮೇಲ್ಸೇತುವೆ ನಿರ್ಮಿಸಿದರೆ ದಟ್ಟಣೆ ಸಮಸ್ಯೆ ಬಗೆಹರಿಯಲಿದೆ ಎಂಬುದು ಶಾಸಕರ ಅಭಿಪ್ರಾಯ. ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಮುಖ್ಯಮಂತ್ರಿಯವರು, ಬಿಬಿಎಂಪಿ ಅಧಿಕಾರಿಗಳಿಗೆ ಮೌಖಿಕ ಆದೇಶವನ್ನೂ ನೀಡಿದ್ದರು.
ಇದಾದ ಬಳಿಕ ಸಚಿವ ವಿ.ಸೋಮಣ್ಣ ಅವರು ಅ.12ರಂದು ಸ್ಥಳ ಪರಿಶೀಲನೆ ನಡೆಸಿ, ವಿಧಾನಸೌಧದ ಕಚೇರಿಯಲ್ಲಿ ಈ ಕಾಮಗಾರಿ ಪರಿಷ್ಕರಣೆ ಕುರಿತು ಸಭೆಯನ್ನೂ ನಡೆಸಿದ್ದಾರೆ. ದ್ವಿಮುಖ ಸಂಚಾರದ ಮೇಲ್ಸೇತುವೆ ಕಾಮಗಾರಿಯನ್ನೂ ಮೆ.ಎಂ.ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ಸ್ ಸಂಸ್ಥೆಗೆ ವಹಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತರು ಬಸವೇಶ್ವರನಗರ ರಸ್ತೆ ಜಂಕ್ಷನ್‌ನಲ್ಲಿ ಹೆಚ್ಚುವರಿ ಮೇಲ್ಸೇತುವೆಯನ್ನು ₹ 23.62 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ಕೋರಿ ಅ.27ರಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ.
ಟೆಂಡರ್ ಕರೆಯದೆಯೇ ಹಿಂದಿನ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆಗಳು) ಲೋಕೇಶ್, ‘ಈಗ ಕಾಮಗಾರಿ ನಡೆಸುತ್ತಿರುವ ಮೇಲ್ಸೇತುವೆ ಹಾಗೂ ಹೊಸ ಮೇಲ್ಸೇತುವೆಗಳೆರಡನ್ನೂ ಜೋಡಿಸಬೇಕಿದೆ. ಹಾಗಾಗಿ ಅದೇ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗುತ್ತಿದೆ’ ಎಂದರು.
ಲೋಕೋಪಯೋಗಿ ಇಲಾಖೆಯ ಈಗಿನ ದರಪಟ್ಟಿ ಪ್ರಕಾರ ಈ ಹೆಚ್ಚುವರಿ ಮೇಲ್ಸೇತುವೆಗೆ ₹ 18.52 ಕೋಟಿ ವೆಚ್ಚವಾಗಲಿದೆ. ಅಷ್ಟು ಮೊತ್ತದಲ್ಲಿ ಈಗಿನ ಗುತ್ತಿಗೆದಾರರಿಂದ ಕೆಲಸ ಮಾಡಿಸಬಹುದಿತ್ತು. ಅದರ ಬದಲು ₹ 23.62 ಕೋಟಿ ವೆಚ್ಚ ಮಾಡುವುದು ಎಷ್ಟು ಸರಿ ಎಂಬುದು ಪ್ರಶ್ನೆ.
ಮೂಲ ಪ್ಯಾಕೇಜ್‌ಗೆ ಹೆಚ್ಚುವರಿ ಕಾಮಗಾರಿಗಳನ್ನು ಸೇರಿಸಿ ಟೆಂಡರ್ ಕರೆಯದೆಯೇ ಅದೇ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವುದು ಒಳ್ಳೆಯ ಸಂಪ್ರದಾಯವಲ್ಲ. ಮುಂದೆ ಬೇರೆ ಶಾಸಕರೂ ತಮಗೆ ಬೇಕಾದ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಿಸಲು ಇಂತಹದ್ದೇ ಬೇಡಿಕೆ ಸಲ್ಲಿಸಬಹುದು ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.
ಪಶ್ಚಿಮ ಕಾರ್ಡ್ ರಸ್ತೆ ಕಾಮಗಾರಿಯ ಪ್ಯಾಕೇಜನ್ನು ಮೂರು ಬಾರಿ ಪರಿಷ್ಕರಿಸಲಾಗಿದೆ. ಶಿವನಗರ ಮುಖ್ಯ ರಸ್ತೆ ಕೂಡುವಲ್ಲಿ ಕೆಳಸೇತುವೆ ಬದಲು ಇಂಟಿಗ್ರೇಟೆಡ್ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಯಿತು. ಈ ಪರಿಷ್ಕರಣೆಯಿಂದ ಪ್ಯಾಕೇಜ್‌ನ ಮೊತ್ತ ₹ 89.86 ಕೋಟಿಯಿಂದ ₹ 112.07 ಕೋಟಿಗೆ ಹೆಚ್ಚಿತು. ಬಳಿಕ 72ನೇ ಅಡ್ಡರಸ್ತೆಯ ಬಳಿ ₹ 33.71 ಕೋಟಿ ವೆಚ್ಚದ ಮೇಲ್ಸೇತುವೆಯನ್ನೂ ಇದೇ ಪ್ಯಾಕೇಜ್‌ಗೆ ಸೇರಿಸಲಾಯಿತು. ಆಗ ಮೊತ್ತ ₹ 145.78 ಕೋಟಿಗೆ ಹೆಚ್ಚಿತು. ಈಗ ಬಸವೇಶ್ವರನಗರ ಜಂಕ್ಷನ್‌ನಲ್ಲಿ ₹ 23.62 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ. ಈಗ ಪ್ಯಾಕೇಜ್ ಮೊತ್ತ ₹ 169.4 ಕೋಟಿಗೆ ಹೆಚ್ಚಳವಾಗುತ್ತಿದೆ.
ಕಾಮಗಾರಿ ವೆಚ್ಚ ಇಷ್ಟೊಂದು ಹೆಚ್ಚಳವಾದರೂ ಬೇರೆ ಗುತ್ತಿಗೆದಾರರು ಸ್ಪರ್ಧಾತ್ಮಕ ದರವನ್ನು ಬಿಡ್ ಮಾಡಲು ಅವಕಾಶ ಕಲ್ಪಿಸದಿರುವುದು ಅನುಮಾನ ಮೂಡಿಸಿದೆ.
2017ರ ಸೆ. 13ರ ಒಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿಗಳು ಸಾಕಷ್ಟು ವಿಳಂಬವಾಗಿವೆ. ಮಂಜುನಾಥನಗರ ರಸ್ತೆ ಕೂಡುವಲ್ಲಿ ನಿರ್ಮಿಸಿದ ಮೇಲ್ಸೇತುವೆಯ ರ‍್ಯಾಂಪ್‌ನ ಕಾಂಕ್ರೀಟ್ ಹಲಗೆಗಳು ಕಾಮಗಾರಿ ಲೋಕಾರ್ಪಣೆಗೊಂಡ ಎರಡೇ ವರ್ಷಗಳಲ್ಲಿ ಹೊರಕ್ಕೆ ಚಾಚಿದ್ದು, ಅವುಗಳನ್ನು ನೈಲಿಂಗ್ ಮೂಲಕ ದುರಸ್ತಿಪಡಿಸಲಾಗಿದೆ. ಈಗ ಮತ್ತೆ ಅದೇ ಗುತ್ತಿಗೆ ಸಂಸ್ಥೆಗೆ ಹೆಚ್ಚುವರಿ ಮೇಲ್ಸೇತುವೆ ಕಾಮಗಾರಿ ವಹಿಸುತ್ತಿರುವುದೇಕೆ ಎಂಬುದು ಪ್ರಶ್ನೆ.
ದರಪಟ್ಟಿಗಿಂತ ₹ 50 ಕೋಟಿ ಅಧಿಕ ವೆಚ್ಚ
2015ರಲ್ಲಿ ಈ ಮೂರು ಕಾಮಗಾರಿಗಳ ಪ್ಯಾಕೇಜ್‌ನ ಅಂದಾಜು ಮೊತ್ತ ₹ 64 ಕೋಟಿ ಇತ್ತು. ಶೇ 40.41ರಷ್ಟು ಅಧಿಕ ಟೆಂಡರ್ ಪ್ರೀಮಿಯಂನಲ್ಲಿ ₹ 89.86 ಕೋಟಿ ಮೊತ್ತಕ್ಕೆ ಕಾಮಗಾರಿಗಳ ಟೆಂಡರ್ ನೀಡಲಾಗಿತ್ತು. ಈಗ ಮೊತ್ತವು ₹ 169.64 ಕೋಟಿಗೆ ಹೆಚ್ಚಳವಾಗಿದೆ. ಇದು ಮೂಲ ಅಂದಾಜು ಮೊತ್ತಕ್ಕಿಂತ ಎರಡೂವರೆ ಪಟ್ಟು ಅಧಿಕ. ಈಗಿನ ದರಪಟ್ಟಿ ಪ್ರಕಾರವೂ ಈ ಮೂರು ಕಾಮಗಾರಿಗಳ ಮೊತ್ತ ₹ 120 ಕೋಟಿ ಮೀರದು. ₹ 50 ಕೋಟಿ ಟೆಂಡರ್ ಪ್ರೀಮಿಯಂ ಅನ್ನು ಗುತ್ತಿಗೆ ಸಂಸ್ಥೆಗೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.