ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಜ್ಞಾನಭಾರತಿ: ಮಾಸ್ಟರ್‌ಪ್ಲಾನ್ ಪರಿಕಲ್ಪನೆಯಲ್ಲಿ ಏನೇನಿದೆ?

Last Updated 29 ಸೆಪ್ಟೆಂಬರ್ 2020, 9:12 IST
ಅಕ್ಷರ ಗಾತ್ರ

ಬೆಂಗಳೂರು: ಏರೋಸ್ಪೇಸ್ ಮತ್ತು ಸ್ಪೇಸ್ ಟೆಕ್ನಾಲಜಿ, ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ, ಯೋಗ ಅಂತರ್‌ ವಿಶ್ವವಿದ್ಯಾಲಯ ಕೇಂದ್ರ, ಜ್ಞಾನ ಮತ್ತು ಧ್ಯಾನ ಕೇಂದ್ರ, ವಿಜ್ಞಾನ ಪಾರ್ಕ್, ಅರ್ಥ್ ಪಾರ್ಕ್, ಬಟಾನಿಕಲ್ ಗಾರ್ಡನ್, ಯುವಿಸಿಇಯ 2ನೇ ಕ್ಯಾಂಪಸ್, ಆಂಫಿಥಿಯೇಟರ್‌, ಒಳಾಂಗಣ ಕ್ರೀಡಾಂಗಣ, ಹೆಲಿಪ್ಯಾಡ್ ಸೇರಿದಂತೆ ವಿವಿಧ ಯೋಜನೆಗಳಿಗೆ ಬೆಂಗಳೂರು ವಿಶ್ವವಿದ್ಯಾಲಯವು ಜ್ಞಾನಭಾರತಿ ಆವರಣದಲ್ಲಿ ಜಾಗ ಮೀಸಲಿಡಲು ಯೋಜಿಸಿದೆ.

ಜ್ಞಾನಭಾರತಿ ಆವರಣದಲ್ಲಿ ವಿವಿಧ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಈಗಾಗಲೇ 272.54 ಎಕರೆಯನ್ನು ಷರತ್ತುಬದ್ಧವಾಗಿ ಬೋಗ್ಯಕ್ಕೆ ನೀಡಲಾಗಿದೆ. ಅಲ್ಲದೆ, ಹೊಸದಾಗಿ ವಿವಿಧ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಂದಿರುವ ಸೂಚನೆ, ನಿರ್ದೇಶನ, ಕೆಲ ಉದ್ದೇಶಿತ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಜಾಗವನ್ನು ಗುರುತಿಸಲು ಬೆಂ.ವಿ.ವಿ ಮುಂದಾಗಿದೆ.

ಇದಕ್ಕೆ ‍ಪೂರಕವಾಗಿ ಜ್ಞಾನಭಾರತಿ ಆವರಣದ ‘ಮಾಸ್ಟರ್‌ಪ್ಲಾನ್’‌ ರೂಪಿಸುವ ಕಾರ್ಯಕ್ಕೆ ವಿಶ್ವವಿದ್ಯಾಲಯ ಚಾಲನೆ ನೀಡಿದೆ. ಈ ಕಾರ್ಯಕ್ಕೆ ಸಹಕಾರ ನೀಡಲು ರೋಟರಿ ಇಂಟರ್‌ನ್ಯಾಷನಲ್‌ ಕೈಜೋಡಿಸಿದೆ.

ಈ ಸಂಬಂಧ ವಿ.ವಿ ಆವರಣದ ಇಂಚಿಂಚು ಜಾಗವನ್ನು ಗುರುತಿಸುವ ಕೆಲಸ ನಡೆದಿದೆ. ಇದಕ್ಕಾಗಿಯೇ ಇಡೀ ಆವರಣದ ಡಿಜಿಟಲ್ ಸರ್ವೆ ಮಾಡಲಾಗಿದೆ. ಡಿಜಿಟಲ್ ಸರ್ವೆ ಪ್ರಕಾರ ಜ್ಞಾನಭಾರತಿ ಆವರಣದ ಒಟ್ಟಾರೆ ವಿಸ್ತೀರ್ಣ 1162 ಎಕರೆ. ಅದಕ್ಕೆ ತಕ್ಕಂತೆ ‘ಮಾಸ್ಟರ್‌ಪ್ಲಾನ್‌’ ಸಿದ್ಧಗೊಳ್ಳುತ್ತಿದೆ. ಈಗಾಗಲೇ ಅದರ ಪರಿಕಲ್ಪನೆ ಸಿದ್ಧವಾಗಿದ್ದು, ಅಂತಿಮ ರೂಪ ನೀಡುವ ಕೆಲಸ ಆಗುತ್ತಿದೆ.

‘ಮಾಸ್ಟರ್‌ಪ್ಲಾನ್‌’ ಪರಿಕಲ್ಪನೆ ಹೇಗಿದೆ? ಮುಂದಿನ ವರ್ಷಗಳಲ್ಲಿ ಏನೇನು ಬರಬಹುದು?ಯಾವುದಕ್ಕೆ ಎಷ್ಟು ಜಾಗ ಮೀಸಲಿಡುವ ಉದ್ದೇಶ ಇದೆ? ಎಂಬುದರ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಯಾವುದಕ್ಕೆ ಎಷ್ಟು?

ಅಂದಾಜು 230 ಎಕರೆ ಪ್ರದೇಶವನ್ನು ವಿವಿಧ ಬಗೆಯ ‘ಥೀಮ್’ ಪಾರ್ಕ್‌ಗಳಿಗೆ ಮೀಸಲಿಡಲಾಗುತ್ತದೆ. ಇದರಲ್ಲಿ ಬಟಾನಿಕಲ್‌ ಗಾರ್ಡನ್‌ಗೆ 50.37 ಎಕರೆ, ಫ್ರುಟ್‌ ಗಾರ್ಡನ್‌ಗೆ 30 ಎಕರೆ, ವಿಜ್ಞಾನ ಪಾರ್ಕ್‌ಗೆ 24 ಎಕರೆ, ಔಷಧೀಯ ಗಿಡಗಳ ಪಾರ್ಕ್‌ಗೆ 25.9 ಎಕರೆ, ಉದ್ಯಾನಕ್ಕೆ 50 ಎಕರೆ, ಅರ್ಥ್‌ ಪಾರ್ಕ್‌ಗೆ 18.28 ಎಕರೆ, ಪಕ್ಷಿ ಮತ್ತು ಪ್ರಾಣಿ ಪಾರ್ಕ್‌ಗೆ 29 ಎಕರೆ ಕಾಯ್ದಿರಿಸಲಿದೆ.

ಕೇಂದ್ರೀಯ ವಿ.ವಿ ಸಂಶೋಧನಾ ಕೇಂದ್ರ ಮತ್ತು ಏರೋಸ್ಪೇಸ್ ವಿಭಾಗ‌

ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಜತೆಗೂಡಿ ಆಂಟೆನಾ, ಮೈಕ್ರೋವೇವ್, ಆಪ್ಟಿಕಲ್ ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಬೆಂ.ವಿ.ವಿಯು ಜ್ಞಾನಭಾರತಿ ಆವರಣದಲ್ಲಿ ಆರಂಭಿಸಲಿದೆ. ಇಲ್ಲಿ ‘5ಜಿ’, ‘6ಜಿ’ ಸೇರಿದಂತೆ ಮತ್ತಿತರಅತ್ಯಾಧುನಿಕ ಸಂಶೋಧನೆಗಳು ನಡೆಯಲಿವೆ.ಇದಕ್ಕಾಗಿ ಈಗಾಗಲೇ 10 ಎಕರೆ ಜಾಗವನ್ನು ಕಲಬುರ್ಗಿ ಕೇಂದ್ರೀಯ ವಿ.ವಿಗೆ ಬೋಗ್ಯಕ್ಕೆ ನೀಡಿದೆ. ಕೇಂದ್ರ ಸರ್ಕಾರದಿಂದ ಮೊದಲ ಹಂತವಾಗಿ ಅಂದಾಜು ₹ 100 ಕೋಟಿ ಅನುದಾನ ದೊರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಕುಲಪತಿ ವೇಣುಗೋಪಾಲ್‌.

ಇದಕ್ಕೆ ಪೂರಕವಾಗಿ ಏರೋಸ್ಪೇಸ್ ಮತ್ತು ಸ್ಪೇಸ್ ಟೆಕ್ನಾಲಜಿ ವಿಭಾಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜತೆಗೂಡಿ ಜ್ಞಾನಭಾರತಿಯಲ್ಲಿ ಆರಂಭಿಸುವ ಯೋಜನೆ ವಿಶ್ವವಿದ್ಯಾಲಯಕ್ಕಿದೆ. ಇಸ್ರೇಲ್ ಸಹಭಾಗಿತ್ವದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಇಲ್ಲಿ ನಡೆಸುವ ಚಿಂತನೆ ಇದೆ. ಅದಕ್ಕಾಗಿ 43 ಎಕರೆ ಕಾಯ್ದಿರಿಸಲಾಗುತ್ತದೆ.

ಅಲ್ಲದೆ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಸಂಶೋಧನಾ ಚಟುವಟಿಕೆಗೆ 42.9 ಎಕರೆ, ಕೆಮಿಕಲ್ ಟೆಕ್ನಾಲಜಿ ಅಧ್ಯಯನಕ್ಕೆ 22 ಎಕರೆ, ಮೊಲಿಕ್ಯುಲರ್ ಬಯಾಲಜಿ ಅಧ್ಯಯನಕ್ಕೆ 22 ಎಕರೆಯನ್ನು ಗುರುತಿಸಲಾಗುತ್ತದೆ.

ಯೋಗ, ಧ್ಯಾನ, ಜ್ಞಾನ ಕೇಂದ್ರ

ಯೋಗ ಅಂತರ್‌ ವಿಶ್ವವಿದ್ಯಾಲಯ ಕೇಂದ್ರಕ್ಕೆ 15 ಎಕರೆಯನ್ನು ಈಗಾಗಲೇ ವಿಶ್ವವಿದ್ಯಾಲಯ ಮಂಜೂರು ಮಾಡಿದೆ. ಇದರ ಜತೆಗೆ ಧ್ಯಾನ ಮತ್ತು ಜ್ಞಾನ ಕೇಂದ್ರಕ್ಕೆ 5 ಎಕರೆ ಮೀಸಲಿಡಲಿದೆ. ಧ್ಯಾನ ಕೇಂದ್ರದಲ್ಲಿ ಸುಮಾರು 2000 ಜನ ಕುಳಿತ ಧ್ಯಾನ ಮಾಡಬಹುದಾದ ಪಿರಮಿಡ್‌ ನಿರ್ಮಿಸುವ ಯೋಜನೆಯೂ ಇದೆ.

ನವದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ಕೌನ್ಸಿಲ್‌ ಆಫ್‌ ಆರ್ಕಿಟೆಕ್ಟರ್‌’ನ ಕೇಂದ್ರಕ್ಕಾಗಿ ಎರಡು ಎಕರೆಯನ್ನು ವಿ.ವಿ ಒದಗಿಸಲಿದೆ. ಅಲ್ಲಿ ರಾಷ್ಟ್ರೀಯ ಡಿಜಿಟಲ್‌ ಗ್ರಂಥಾಲಯ, ಅತಿಥಿಗೃಹ ನಿರ್ಮಾಣವಾಗಲಿದೆ, ಅದೇ ಅಲ್ಲದೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ದಕ್ಷಿಣ ಭಾರತ ಕೇಂದ್ರಕ್ಕೆ 1 ಎಕರೆ, ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ 1 ಎಕರೆ, ಎನ್‌ಸಿಸಿಗೆ 1 ಎಕರೆ ಜಾಗವನ್ನು ವಿ.ವಿ ನೀಡಲಿದ್ದು, ಮಾಸ್ಟರ್‌ಪ್ಲಾನ್‌ನಲ್ಲಿ ಇವುಗಳ ಜಾಗವನ್ನೂ ಗುರುತಿಸಲಾಗುತ್ತದೆ.

ನ್ಯಾಕ್‌ಗೆ ಮತ್ತೆ 5 ಎಕರೆ

ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್‌) ಕೇಂದ್ರ ಕಚೇರಿ ಜ್ಞಾನಭಾರತಿ ಆವರಣದಲ್ಲಿದೆ. ಇಲ್ಲಿನ ಐದು ಎಕರೆ ಜಾಗದಲ್ಲಿ ನ್ಯಾಕ್‌ ತಲೆಯೆತ್ತಿದೆ. ಅದರ ಜತೆಗೆ ಮತ್ತೆ ಐದು ಎಕರೆಯನ್ನು ವಿ.ವಿ ನ್ಯಾಕ್‌ಗೆ ನೀಡಲಿದೆ. ಅಲ್ಲಿ ಅಂದಾಜು ₹ 40 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸಭಾಂಗಣ ಹಾಗೂ ಅತಿಥಿ ಗೃಹ ನಿರ್ಮಿಸುವ ಯೋಜನೆಯನ್ನು ನ್ಯಾಕ್‌ ಹೊಂದಿದೆ. ಇದು ನ್ಯಾಕ್ ಮತ್ತು ಬೆಂ.ವಿ.ವಿ ಎರಡೂ ಸಂಸ್ಥೆಗಳ ಬಳಕೆಗೆ ಲಭ್ಯವಾಗಲಿದೆ.

ಜತೆಗೆ ಕೆಂಪೇಗೌಡ ಅಧ್ಯಯನ ಪೀಠಕ್ಕೆ 5 ಎಕರೆ, ಐಲ್ಯಾಂಡ್‌ ಒಪನ್‌ ಗ್ಯಾಲರಿಗೆ 16.27 ಎಕರೆ ಜಾಗ ಮೀಸಲಿಡಲಾಗುತ್ತದೆ.

ಕ್ರೀಡೆಗೆ 45 ಎಕರೆ

ಜ್ಞಾನಭಾರತಿ ಆವರಣದಲ್ಲಿ ಸುಸಜ್ಜಿತ ಒಳಂಗಾಣ, ಹೊರಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸುವ ಯೋಜನೆ ಇದೆ. ಟೆನಿಸ್‌, ಬ್ಯಾಸ್ಕೆಟ್‌ಬಾಲ್‌, ಫುಟ್‌ಬಾಲ್‌, ಸ್ಕೇಟಿಂಗ್‌ಗೆ ಅತ್ಯಾಧುನಿಕ ಅಂಕಣಗಳನ್ನು ನಿರ್ಮಿಸುವ ಉದ್ದೇಶವಿದೆ. ಒಟ್ಟಾರೆ ಕ್ರೀಡೆಗೆ 45 ಎಕರೆ ಮೀಸಲಿಡಲಾಗುತ್ತದೆ.

ಯುವಿಸಿಇಗೆ ಮತ್ತೊಂದು ಕ್ಯಾಂಪಸ್‌

ಬೆಂಗಳೂರಿನ ಕೆ.ಆರ್‌. ವೃತ್ತದ ಬಳಿ ಇರುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿಗೆ (ಯುವಿಸಿಇ) ವಿಶಾಲವಾದ ಮತ್ತೊಂದು ಕ್ಯಾಂಪಸ್‌ ಅನ್ನು ಜ್ಞಾನಭಾರತಿ ಆವರಣದಲ್ಲಿ ಆರಂಭಿಸುವ ಯೋಜನೆ ಇದೆ. ಐಐಟಿ ಮಾದರಿಯಲ್ಲಿ ಯುವಿಸಿಇ ಅನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ವಿ.ವಿ ಹೊಂದಿದೆ.ಇದಕ್ಕೂ ನಿರ್ದಿಷ್ಟ ಜಾಗವನ್ನು ಕಾಯ್ದಿರಿಸಲಾಗುತ್ತದೆ.‌

ಹೆಲಿಪ್ಯಾಡ್‌ಗೆ ಎರಡು ಎಕರೆ

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಇಲ್ಲಿ ಚಟುವಟಿಕೆ ಆರಂಭಿಸುವುದರಿಂದ ದೇಶ, ವಿದೇಶಗಳಿಂದ ಗಣ್ಯಾತಿಗಣ್ಯರು, ಅತಿಥಿಗಳು ಇಲ್ಲಿನ ವಿಚಾರ ಸಂಕಿರಣ, ಕಾರ್ಯಾಗಾರ, ಸಭೆ, ಸಮಾರಂಭಗಳಿಗೆ ಬರುತ್ತಾರೆ. ಭವಿಷ್ಯದಲ್ಲಿ ಅವರ ಸುಗಮ ಸಂಚಾರಕ್ಕೆ ಹೆಲಿಪ್ಯಾಡ್‌ ಅಗತ್ಯವಾಗಬಹುದು. ಅದಕ್ಕಾಗಿ ಎರಡು ಎಕರೆ ಮೀಸಲಿಡಲಾಗುವುದು ಎನ್ನುತ್ತಾರೆ ಕುಲಪತಿ.

‘ಜೀವವೈವಿಧ್ಯಕ್ಕೆ ಧಕ್ಕೆಯಾಗದು’

ಜ್ಞಾನಭಾರತಿ ಆವರಣದ ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ಈ ಯೋಜನೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎನ್ನುವ ಕುಲಪತಿ ವೇಣುಗೋಪಾಲ್‌ ಅವರು, ‘ಜ್ಞಾನಭಾರತಿ ಆವರಣದಲ್ಲಿ ಹಸಿರನ್ನು ಇನ್ನಷ್ಟು ಹೆಚ್ಚಿಸಲು ನಾನಾ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಈಗಾಗಲೇ ಎರಡು ವರ್ಷಗಳಲ್ಲಿ 3 ಲಕ್ಷ ಸಸಿಗಳನ್ನು ನೆಟ್ಟಿದ್ದೇವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT