ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಮೊತ್ತದ ಪ್ಯಾಕೇಜ್ ಬೇಡ

ವೈಟ್‌ಟಾಪಿಂಗ್‌ ಕಾಮಗಾರಿ ವೆಚ್ಚ ಕಡಿಮೆ ಮಾಡಲು ತಜ್ಞರ ಸಮಿತಿ ಶಿಫಾರಸು
Last Updated 26 ಅಕ್ಟೋಬರ್ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಟಾಪಿಂಗ್‌ ಕಾಮಗಾರಿಗೆ ಟೆಂಡರ್‌ ಕರೆಯುವಾಗ ಭಾರಿ ಮೊತ್ತದ ಕಾಮಗಾರಿ ಪ್ಯಾಕೇಜ್‌ಗಳನ್ನು ರೂಪಿಸುವುದು ತರವಲ್ಲ. ಹೆಚ್ಚು ಕಂಪನಿಗಳು ಭಾಗವಹಿಸುವುದಕ್ಕೆ ಅನುಕೂಲವಾಗುವಂತೆ ಪ್ಯಾಕೇಜ್‌ ರೂಪಿಸಬೇಕು ಎಂದು ವೈಟ್‌ಟಾಪಿಂಗ್‌ ಯೋಜನೆಗಳ ತನಿಖೆ ನಡೆಸಿರುವ ಕ್ಯಾ.ಆರ್‌.ಆರ್‌.ದೊಡ್ಡಿಹಾಳ್‌ ಸಮಿತಿಯ ವರದಿ ಶಿಫಾರಸು ಮಾಡಿದೆ.

ಅಂದಾಜು ವೆಚ್ಚ ₹ 100 ಕೋಟಿ ಮೀರದಂತೆ ಪ್ಯಾಕೇಜ್‌ ರೂಪಿಸಿದರೆ ಹೆಚ್ಚು ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸುವುದಕ್ಕೆ ಅವಕಾಶ ಸಿಗುತ್ತದೆ. ಗುತ್ತಿಗೆದಾರರ ನಡುವೆ ಪೈಪೋಟಿ ಹೆಚ್ಚುವುದರಿಂದ ಟೆಂಡರ್‌ ಮೊತ್ತವು ಕಡಿಮೆಯಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಕಾಂಕ್ರೀಟ್‌ ಹಾಕಲು ಸ್ಲಿಪ್‌ ಮಾದರಿಯ (ಗರಿಷ್ಠ 11.5 ಮೀ ಅಗಲಕ್ಕೆ ಒಮ್ಮೆಗೆ ಕಾಂಕ್ರೀಟ್‌ ಹಾಕಬಹುದು) ಹಾಗೂ ಸ್ಥಿರ (ಫಿಕ್ಸ್‌) ಮಾದರಿಯ (ಒಮ್ಮೆಗೆ 4.5 ಮೀ ಅಗಲಕ್ಕೆ ಕಾಂಕ್ರೀಟ್‌ ಹಾಕಬಹುದು) ಪೇವರ್‌ ಯಂತ್ರಗಳೆರಡನ್ನೂ ಬಳಸಲು ಅವಕಾಶ ನೀಡಬೇಕು. 180 ಮಿ.ಮಿ. ದಪ್ಪದ ಕಾಂಕ್ರೀಟ್‌ ಅಗತ್ಯವಿರುವ ಕಡಿಮೆ ಉದ್ದದ ರಸ್ತೆಗಳಿಗೆ ಸ್ಥಿರ ಮಾದರಿಯ ಯಂತ್ರ ಸೂಕ್ತ. ಅವುಗಳನ್ನು ರಾತ್ರಿ ತಂದು ಬೆಳಿಗ್ಗೆ ತೆರವುಗೊಳಿಸಬಹುದು. ಸ್ಲಿಪ್‌ ಮಾದರಿಯ ಯಂತ್ರವನ್ನು ಕಾಮಗಾರಿ ವೇಳೆ ಅಲ್ಲೇ ಉಳಿಸಿಕೊಳ್ಳಬೇಕಾಗುತ್ತದೆ.

ಸ್ಥಿರ ಮಾದರಿ ಯಂತ್ರಗಳ ಬೆಲೆಯೂ ಕಡಿಮೆ (ಸುಮಾರು ₹ 4 ಕೋಟಿ). ಹೆಚ್ಚು ಕಂಪನಿಗಳ ಬಳಿ ಈ ಯಂತ್ರ ಇದೆ. ಇವುಗಳ ಬಳಕೆಗೆ ಅವಕಾಶ ನೀಡಿದರೆ ಹೆಚ್ಚು ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸುತ್ತಾರೆ. ಇದರಿಂದ ಪೈಪೋಟಿ ಹೆಚ್ಚುತ್ತದೆ. ದುಬಾರಿ ಬೆಲೆಯ ಸುಮಾರು (₹ 12 ಕೋಟಿ) ಸ್ಲಿಪ್‌ ಮಾದರಿಯ ಯಂತ್ರ ತಾಂತ್ರಿಕವಾಗಿ ಉನ್ನತ ಮಟ್ಟದ್ದು. ಇದನ್ನು ಹೊಂದಿರುವ ಗುತ್ತಿಗೆದಾರರಿಗೆ ತಾಂತ್ರಿಕ ಮೌಲ್ಯಮಾ‍ಪನದ ವೇಳೆ ಹೆಚ್ಚು ಅಂಕ ನೀಡಬೇಕು ಎಂದು ಸಮಿತಿ ಹೇಳಿದೆ.

ರಸ್ತೆಗಳ ಡಾಂಬರು ಪದರದ ಸರಾಸರಿ ದಪ್ಪ 150 ಮಿ.ಮೀ. ಇರುತ್ತದೆ. ಭಾರತೀಯ ರಸ್ತೆ ಕಾಂಗ್ರೆಸ್‌ (ಐಆರ್‌ಸಿ) ಮಾನದಂಡಗಳ ಪ್ರಕಾರ ವೈಟ್‌ಟಾಪಿಂಗ್‌ ಮಾಡುವ ಡಾಂಬರು ರಸ್ತೆ ಮೇಲ್ಪದರವನ್ನು ದೊರಗುಗೊಳಿಸಿದ ಬಳಿಕವೂ ಅದರ ದಪ್ಪ ಕನಿಷ್ಠ 75 ಮಿ.ಮೀ ಇರಬೇಕು. ಮೇಲ್ಮೈ ದೊರಗುಗೊಳಿಸುವಾಗ ರಸ್ತೆಯ ಅಡ್ಡ ಇಳಿಜಾರು (ಕೇಂಬರ್‌) ಶೇ 3ರಷ್ಟಿದ್ದರೆ, ಆ ಇಳಿಜಾರನ್ನು ವೈಟ್‌ಟಾಪಿಂಗ್‌ಗಾಗಿ ಹಾಗೆಯೇ ಉಳಿಸಿಕೊಳ್ಳಬೇಕು. ಅಡ್ಡ ಇಳಿಜಾರನ್ನು ಕಡಿಮೆ ಮಾಡಲು ಡಾಂಬರು ಮಿಶ್ರಿತ ಜಲ್ಲಿಯ ಇನ್ನೊಂದು ಪದರವನ್ನು ಹಾಕಬಾರದು. ಶೇ 3ರಷ್ಟು ಅಡ್ಡ ಇಳಿಜಾರು ಇರುವ ಕಾಂಕ್ರೀಟ್‌ನಿಂದ (ಪಿಕ್ಯುಸಿ) ವಾಹನ ಸವಾರರಿಗೆ ತೊಡಕು ಉಂಟಾಗದು. ಇದರಿಂದ ಟ್ಯಾಕ್‌ ಕೋಟ್‌ ಮತ್ತು ಡಾಂಬರು ಮಿಶ್ರಿತ ಜಲ್ಲಿ ಹಾಕುವ ಎರಡೆರಡು ಕೆಲಸ ಉಳಿಯುತ್ತದೆ. ಕಾಮಗಾರಿಯನ್ನೂ ಬೇಗ ಪೂರ್ಣಗೊಳಿಸಬಹುದು. ವೆಚ್ಚವೂ ಉಳಿತಾಯವಾಗುತ್ತದೆ ಎಂದು ಸಮಿತಿ ಹೇಳಿದೆ.

ವೆಚ್ಚ ಉಳಿತಾಯಕ್ಕೆ ಸಲಹೆಗಳು
*ಮಳೆನೀರು ಇಂಗಿಸುವ ಗುಂಡಿಗಳನ್ನು ಅಲ್ಲಲ್ಲಿ ಅಳವಡಿಸುವ ಬದಲು ಮಳೆ ನೀರು ಚರಂಡಿ, ಪಾದಚಾರಿ ಮಾರ್ಗ, ವಾಹನ ನಿಲುಗಡೆ ತಾಣಗಳಿಗೆ ತೂತುಗಳಿಂದ ಕೂಡಿದ (ಪರ್ವಿಯಸ್‌) ಕಾಂಕ್ರೀಟ್‌ ಬಳಸಬಹುದು. ಇದು ನೀರು ಭೂಮಿಗೆ ಇಂಗಿಸುತ್ತದೆ. ಇಲಿ ಹೆಗ್ಗಣಗಳ ಕಾಟ ತಪ್ಪಿಸಲು ಮೂಲಸೌಕರ್ಯ ಕೊಳವೆ ಮೇಲೆ ಕಾಂಕ್ರೀಟ್‌ ಹಾಕುವುದನ್ನು ತಪ್ಪಿಸಬಹುದು.

*ಪಾದಚಾರಿ ಮಾರ್ಗಗಳಲ್ಲಿ ಇಲಿ–ಹೆಗ್ಗಣ ಕಾಟ ತಪ್ಪಿಸಲು 200 ಎಂ.ಎಂ. ಕಲ್ಲುಪುಡಿ, ವೆಟ್‌ಮಿಕ್ಸ್‌ ಜಲ್ಲಿ (ಡಬ್ಲ್ಯುಎಂಎಂ) ಹಾಗೂ 75 ಮಿ.ಮೀ ಕಾಂಕ್ರೀಟ್‌ ಹಾಕುವ ಬದಲು 60 ಮಿ.ಮೀ ದಪ್ಪದ ಪೇವರ್‌ ಬ್ಲಾಕ್‌ ಅನ್ನು 50 ಮಿ.ಮೀ ದಪ್ಪದ ಮರಳಿನೊಂದಿಗೆ ಅಳವಡಿಸಬಹುದು. 100 ಮೀ ಉದ್ದದ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಈ ವಿಧಾನ ಅಳವಡಿಸಿ ಸಾಧಕ–ಬಾಧಕ ನೋಡಿ ಮುಂದುವರಿಯಬಹುದು.

*ಮೂಲಸೌಕರ್ಯ ಅಳವಡಿಸಲು ಪಾದಚಾರಿ ಮಾರ್ಗಗಳಲ್ಲಿ ನಿರ್ಮಿಸುವ ಕಾಂಕ್ರೀಟ್‌ ಚೇಂಬರ್‌ಗಳ ನಡುವಿನ ಅಂತರ ಹಾಗೂ ಅವುಗಳ ಗಾತ್ರವನ್ನು ಮರುಪರಿಶೀಲಿಸಬೇಕು. ಅವುಗಳ ಗಾತ್ರ ಹಾಗೂ ಸಂಖ್ಯೆ ಕಡಿಮೆ ಮಾಡಬೇಕು.

*ಈಗಿರುವ ಫುಟ್‌ಪಾತ್‌ ಸ್ಲಾಬ್‌ಗಳು, ಪೇವರ್‌ ಬ್ಲಾಕ್‌, ಕರ್ಬ್‌ಗಳು ಚೆನ್ನಾಗಿದ್ದರೆ ಮರುಬಳಕೆ ಮಾಡಬೇಕು.

*ಕಾಲುವೆಗಳ ತಳಪಾಯಕ್ಕೆ ಪ್ರಸ್ತುತ ಕ್ಯೂಬಿಕ್‌ ಮೀಟರ್‌ಗೆ ₹ 3,184 ದರದ ಮರಳು ಬಳಸಲಾಗುತ್ತಿದೆ. ಅದರ ಕಲ್ಲು ಪುಡಿಗೆ ಕ್ಯೂಬಿಕ್‌ ಮೀಟರ್‌ಗೆ ₹ 1906 ದರ ಇದೆ. ವೆಟ್‌ಮಿಕ್ಸ್‌ ಜಲ್ಲಿಗೆ ಕ್ಯೂಬಿಕ್‌ ಮೀಟರ್‌ಗೆ ₹ 1,768 ದರ ಇದೆ. ಇವುಗಳಲ್ಲಿ ಮಿತವ್ಯಯಿ ಪದಾರ್ಥ ಬಳಸಬೇಕು.

*ರಸ್ತೆ ಅಗೆಯಲು ಯಾಂತ್ರಿಕ ವಿಧಾನಕ್ಕೆ ಬಳಿಸಿದರೆ ವೆಚ್ಚ ಕಡಿಮೆ ಆಗಲಿದೆ.

*ಕಲ್ಲಿನ ಪುಡಿ ( ಸ್ಟೋನ್‌ ಡಸ್ಟ್‌) ತುಂಬಿಸುವ ವೆಚ್ಚವನ್ನು ಪರಿಶೀಲನೆಗೆ ಒಳಪಡಿಸಿದರೂ ವೆಚ್ಚ ಉಳಿತಾಯವಾಗಲಿದೆ.

‘ಜಿಜಿಬಿಎಸ್‌ ಮಿಶ್ರ ಮಾಡಿ ವೆಚ್ಚ ಉಳಿಸಿ’
ವೆಚ್ಚ ಕಡಿಮೆ ಮಾಡುವ ಸಲುವಾಗಿ ವೈಟ್‌ಟಾಪಿಂಗ್‌ನ ಕಾಂಕ್ರೀಟ್‌ಗೆ ಗ್ರೌಂಡ್‌ ಗ್ರಾನ್ಯುಲೇಟೆಡ್‌ ಬ್ಲಾಸ್ಟ್‌ ಫರ್ನೇಸ್‌ ಸ್ಯಾಗ್‌ (ಜಿಜಿಬಿಎಸ್‌) ಮಿಶ್ರ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ಕ್ಯಾ.ಆರ್‌.ಆರ್‌.ದೊಡ್ಡಿಹಾಳ್‌ ಸಮಿತಿ ಸಲಹೆ ನೀಡಿದೆ.

ಬೆಂಗಳೂರಿನಲ್ಲಿ ಈಗಾಗಲೇ ಕೆಲವು ಕಾಮಗಾರಿಗಳಲ್ಲಿ ಕಾಂಕ್ರೀಟ್‌ಗೆ ಜಿಜಿಬಿಎಸ್‌ವನ್ನು ಮಿಶ್ರ ಮಾಡಲಾಗುತ್ತಿದೆ. ಇದರಿಂದ ಕಾಂಕ್ರೀಟ್‌ನ ಅಭೇದ್ಯತೆ ಹಾಗೂ ಬಾಳಿಕೆ ಹೆಚ್ಚುತ್ತದೆ. ನಿರ್ದಿಷ್ಟ ರಸ್ತೆಯಲ್ಲಿ ಜಿಜಿಬಿಎಸ್‌ ಮಿಶ್ರ ಮಾಡಿದ ಕಾಂಕ್ರೀಟ್‌ ಬಳಸಬೇಕು. ಅದರ ಫಲಿತಾಂಶದ ಆಧಾರದಲ್ಲಿ ಜಿಜಿಬಿಎಸ್‌ ಪ್ರಮಾಣವನ್ನು ಹೆಚ್ಚಿಸಬಹುದು. ಇದರಿಂದ ವೆಚ್ಚ ಗಣನೀಯವಾಗಿ ಇಳಿಕೆ ಆಗಲಿದೆ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT