ಶನಿವಾರ, ಜೂನ್ 19, 2021
26 °C
ಪ್ಯಾಕೇಜ್‌–7ಕ್ಕೆ ರಾಜ್ಯ ಸರ್ಕಾರ ಅನುಮೋದನೆ

ವೈಟ್‌ಟಾಪಿಂಗ್‌ ಕಾಮಗಾರಿ ವಿಚಾರದಲ್ಲಿ ಉಲ್ಟಾ ಹೊಡೆದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈಟ್‌ ಟಾಪಿಂಗ್‌ ಯೋಜನೆಯ ಎರಡನೇ ಹಂತದ ಏಳನೇ ಪ್ಯಾಕೇಜ್‌ಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ತನ್ಮೂಲಕ ವೈಟ್‌ಟಾಪಿಂಗ್‌ ಕಾಮಗಾರಿ ಅನುಷ್ಠಾನದ ವಿಚಾರದಲ್ಲಿ ಈ ಹಿಂದೆ ಪ್ರಕಟಿಸಿದ್ದ ನಿಲುವಿಗೆ ಬಿಜೆಪಿ ಸಂಪೂರ್ಣ ವ್ಯತಿರಿಕ್ತವಾದ ನಿರ್ಧಾರ ಕೈಗೊಂಡಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್‌ಟಾಪಿಂಗ್‌ ಯೋಜನೆ ಜಾರಿಗೊಳಿಸಿದ್ದನ್ನು ಬಿಜೆಪಿ ಕಟುವಾಗಿ ವಿರೋಧಿಸಿತ್ತು. ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ, ‘ಈ ಯೋಜನೆಯೇ ಅವೈಜ್ಞಾನಿಕ. ಇದು ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನೇ ರದ್ದುಪಡಿಸುತ್ತೇವೆ. ಈಗಾಗಲೇ ಜಾರಿಯಾಗುತ್ತಿರುವ ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಿ, ದುಂದುವೆಚ್ಚಕ್ಕೆ ಕಾರಣವಾದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಹೇಳಿಕೆ ನೀಡಿದ್ದರು.

ಎರಡನೇ ಹಂತದ ವೈಟ್‌ಟಾಪಿಂಗ್‌ ಕಾಮಗಾರಿಗಳಲ್ಲಿ ಏಳನೇ ಪ್ಯಾಕೇಜ್‌ನ ವೆಚ್ಚವನ್ನೂ ಸರ್ಕಾರ ಕಡಿಮೆ ಮಾಡಿಲ್ಲ. ಈ ಹಿಂದೆ ಟೆಂಡರ್‌ ಕರೆದಷ್ಟೇ ಮೊತ್ತಕ್ಕೆ ಕಾಮಗಾರಿ ಗುತ್ತಿಗೆ ನೀಡಲು ಸರ್ಕಾರದ ಅಧಿಕಾರಯುಕ್ತ ಸಮಿತಿ ಸಮ್ಮತಿ ನೀಡಿದೆ.

ಬೆಂಗಳೂರಿಗೆ ವಿಶೇಷ ಮೂಲಸೌಕರ್ಯ ಒದಗಿಸಲು ಬಂಡವಾಳ ಒದಗಿಸುವ ಯೋಜನೆ ಅಡಿ 2017–18ನೇ ಸಾಲಿನಲ್ಲಿ ಸರ್ಕಾರ ವೈಟ್‌ಟಾಪಿಂಗ್‌ ಕಾಮಗಾರಿಗಳ ₹ 2,191 ಕೋಟಿ ವೆಚ್ಚದ ಕ್ರಿಯಾಯೋಜನೆಗಳಿಗೆ ಅನುದಾನ ಮಂಜೂರು ಮಾಡಿತ್ತು. ಒಟ್ಟು ಮೂರು ಹಂತಗಳಲ್ಲಿ ಈ ಕಾಮಗಾರಿ ಅನುಷ್ಠಾನಗೊಳಿಸಲು ಮುಂದಾಗಿತ್ತು. ಇದರಲ್ಲಿ 53 ಕಾಮಗಾರಿಗಳಿಗಾಗಿ ಒಟ್ಟು ₹ 690 ಕೋಟಿ ಅನುದಾನವನ್ನೂ ಒದಗಿಸಿತ್ತು. ಈ ಯೋಜನೆಯಡಿ ಒಟ್ಟು ಎಂಟು ಪ್ಯಾಕೇಜ್‌ಗಳನ್ನು ರಚಿಸಲಾಗಿತ್ತು.

ಎರಡನೇ ಹಂತದ ಕಾಮಗಾರಿಗಳಿಗೆ 2018ರ ಆ.16ರಂದು ಅಲ್ಪಾವಧಿ ಟೆಂಡರ್‌ ಕರೆಯಲಾಗಿತ್ತು. ಪ್ಯಾಕೇಜ್‌–7 ಮತ್ತು 8ರ ಟೆಂಡರ್‌ ಪ್ರಕ್ರಿಯೆಯಲ್ಲಿ ಯಾವುದೇ ಗುತ್ತಿಗೆದಾರರು ಭಾಗವಹಿಸಿರಲಿಲ್ಲ. ಹಾಗಾಗಿ ಈ ಎರಡು ಪ್ಯಾಕೇಜ್‌ಗಳಿಗೆ 2018ರ ಡಿ.5ರಂದು ಮತ್ತೆ ಅಲ್ಪಾವಧಿಗೆ ಮರುಟೆಂಡರ್‌ ಕರೆಯಲಾಗಿತ್ತು. ಒಟ್ಟು ₹ 25.93 ಕೋಟಿ ವೆಚ್ಚದ ಏಳನೇ ಪ್ಯಾಕೇಜ್‌ಗೆ ಒಟ್ಟು ಆರು ಗುತ್ತಿಗೆದಾರರು ತಾಂತ್ರಿಕ ಅರ್ಹತೆ ಗಳಿಸಿದ್ದರು. ಗುತ್ತಿಗೆದಾರ ಉದಯ್‌ ಶಿವಕುಮಾರ್‌ ಅತಿ ಕಡಿಮೆ ಮೊತ್ತವನ್ನು (₹ 25.97 ಕೋಟಿ) ನಮೂದಿಸಿದ್ದರು. ಅದಕ್ಕೆ ಜಿಎಸ್‌ಟಿ ಸೇರಿಸಿ ಒಟ್ಟು ₹ 29.09 ಕೋಟಿಯನ್ನು ಸರ್ಕಾರ ಪಾವತಿಸಬೇಕಾಗುತ್ತದೆ. ಈ ಟೆಂಡರ್‌ ಮೊತ್ತವು ಲೋಕೋಪಯೋಗಿ ಇಲಾಖೆಯ ಎಸ್‌ಆರ್‌ ದರಕ್ಕಿಂತ ಶೇ 0.15ರಷ್ಟು ಹೆಚ್ಚು ಇದೆ. 

ನಗರದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಕೈಬಿಡುವಂತೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಸೂಚಿಸಿದ್ದರು. 2019ರ ನ. 4ರಂದು ನಡೆದ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿಯವರ ಟಿಪ್ಪಣಿ ಆಧರಿಸಿ ಪ್ಯಾಕೇಜ್‌–7ರ ವೈಟ್‌ಟಾಪಿಂಗ್‌ ಕಾಮಗಾರಿಯ ಟೆಂಡರ್‌ ರದ್ದುಪಡಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಪ್ಯಾಕೇಜ್‌–7ರಲ್ಲಿ ಅಭಿವೃದ್ಧಿಪಡಿಸಲು ಗುರುತಿಸಿದ ರಸ್ತೆಗೆ ವೈಟ್‌ಟಾಪಿಂಗ್‌ ಅಗತ್ಯವಿಲ್ಲ. ಕೇವಲ ಡಾಂಬರೀಕರಣ (ರಿಸರ್ಫೇಸಿಂಗ್ ) ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕೈಗೊಂಡರೆ ಸಾಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.  

ಆದರೆ, ಸಿ.ವಿ.ರಾಮನ್‌ನಗರ ಕ್ಷೇತ್ರದ ಶಾಸಕ ಎಸ್‌.ರಘು ಅವರು 2020ರ ಫೆ.3ರಂದು ಪತ್ರ ಬರೆದು, ‘ಸಿಎಂಎಚ್‌ ರಸ್ತೆ ಮತ್ತು ಸಿ.ವಿ.ರಾಮನ್‌ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಪ್ರಗತಿಯಲ್ಲಿವೆ. ಹಾಗಾಗಿ ಪ್ಯಾಕೇಜ್‌–7ರಲ್ಲಿ ಇಂದಿರಾನಗರದ 100 ಅಡಿ ರಸ್ತೆಯನ್ನೂ ವೈಟ್‌ಟಾಪಿಂಗ್‌ ಮಾಡಿ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದ್ದರು. ಹಾಗಾಗಿ, ಪ್ಯಾಕೇಜ್‌–7 ಅನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವವನ್ನು ಅಧಿಕಾರಯುಕ್ತ ಸಮಿತಿ ಮುಂದೆ 2020ರ ಫೆ. 25ರಂದು ಮಂಡಿಸಲಾಗಿತ್ತು. 2020ರ ಮಾ.12ರಂದು ಬಿಬಿಎಂಪಿ ಆಯುಕ್ತರು ಈ ಬಗ್ಗೆ ಮತ್ತೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಪ್ರಕಾರ ಮುಖ್ಯಮಂತ್ರಿ ಅವರ ಮುಂದೆ ಈ ಪ್ರಸ್ತಾಪ ಮಂಡಿಸಿದ ಬಳಿಕವೇ ತೀರ್ಮಾನ ಕೈಗೊಳ್ಳಲು ಅಧಿಕಾರಯುಕ್ತ ಸಮಿತಿ ನಿರ್ಧರಿಸಿತ್ತು. 2020ರ ಜೂ 10ರಂದು ನಡೆದ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ಪ್ಯಾಕೇಜ್‌ 7ರ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಇದೀಗ ಆಡಳಿತಾತ್ಮಕ ಹಾಗೂ ಟೆಂಡರ್ ಅನುಮೋದನೆ ಸಿಕ್ಕಿದೆ.

ದೊಡ್ಡಿಹಾಳ್‌ ಸಮಿತಿ ತನಿಖೆಯಲ್ಲಿ ಸಾಬೀತಾಗಲಿಲ್ಲ ಭ್ರಷ್ಟಾಚಾರ

ಕಾಂಗ್ರೆಸ್‌ ಹಾಗೂ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟದ ಆಡಳಿತಾವಧಿಯಲ್ಲಿ ಜಾರಿಗೊಂಡ ವೈಟ್‌ಟಾಪಿಂಗ್‌ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌, ಈ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದರು.  ವೈಟ್‌ಟಾಪಿಂಗ್‌ ಕಾಮಗಾರಿಗಳ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ ಕ್ಯಾ.ದೊಡ್ಡಿಹಾಳ್‌ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು.  

ಮೊದಲ ಹಂತ ಮತ್ತು ಎರಡನೇ ಹಂತದಲ್ಲಿ ಕೈಗೊಂಡ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಪರಿಶೀಲಿಸಿದ್ದ ಸಮಿತಿ, ‘ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವ ಸಲುವಾಗಿ ಅಂದಾಜು ವೆಚ್ಚದಲ್ಲಿ ಹಾಗೂ ವಿನ್ಯಾಸದಲ್ಲಿ ಉದ್ದೇಶಪೂರ್ವಕವಾಗಿ ಯಾವುದೇ ವ್ಯತ್ಯಾಸ ಮಾಡಿರುವುದು ಕಂಡುಬಂದಿಲ್ಲ’ ಎಂದು ಸ್ಪಷ್ಟಪಡಿಸಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು