ಬುಧವಾರ, ಜನವರಿ 29, 2020
29 °C

ಪ್ರತಿ ಠಾಣೆಯಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿ: ಭಾಸ್ಕರ ರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಠಾಣೆಗಳಲ್ಲಿ ಕಾಠಿಣ್ಯದ (‘ರಫ್‌ ಅಂಡ್‌ ಟಫ್‌’) ಪ್ರವೃತ್ತಿ ಕಡಿಮೆ ಮಾಡುವಲ್ಲಿ ಮಹಿಳಾ ಪೊಲೀಸರ ಉಪಸ್ಥಿತಿ ಬಹಳ ಮುಖ್ಯ. ಪ್ರತಿ ಠಾಣೆಯಲ್ಲಿ ಒಬ್ಬಿಬ್ಬರಾದರೂ ಮಹಿಳಾ ಪೊಲೀಸ್‌ ಸಿಬ್ಬಂದಿ ಇದ್ದರೆ ಅಂಥ ಠಾಣೆ ನೆಮ್ಮದಿಯಿಂದ ನಡೆಯುತ್ತದೆ’ ಎಂದು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ‘ರಕ್ಷಾ ಪೆಕ್ಸ್‌’ನಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಕಳೆದ ಎರಡೂವರೆ ತಿಂಗಳಿಂದ ನಗರದಲ್ಲಿ ನಡೆಯುತ್ತಿರುವ ವಿವಿಧ ಪ್ರತಿಭಟನೆಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಅವರು ತಾಳ್ಮೆ –ಸಂಯಮದಿಂದ ವರ್ತಿಸಿದ್ದಾರೆ ಎಂದು ಶ್ಲಾಘಿಸಿದರು.

ನಗರದ 19,000 ಪೊಲೀಸ್‌ ಸಿಬ್ಬಂದಿಯಲ್ಲಿ 3,000 ಮಂದಿ ಮಹಿಳಾ ಸಿಬ್ಬಂದಿಯಿದ್ದಾರೆ. 18 ಡಿಸಿಪಿಗಳಲ್ಲಿ ಎಂಟು ಮಂದಿ ಸ್ತ್ರೀಯರಿದ್ದಾರೆ ಎಂದು ವಿವರಿಸಿದರು.

ಬೆಂಗಳೂರು ಕೇಂದ್ರ ಕಚೇರಿ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ಅವರು ‘ಮಹಿಳಾ ಪೊಲೀಸ್‌ ಪಡೆ’ಗೆ ಮತ್ತು ‘ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ’ ವಿಷಯಗಳಿಗೆ ಸಂಬಂಧಿಸಿದ ಎರಡು ವಿಶೇಷ ಅಂಚೆ ಲಕೋಟೆಗಳನ್ನು  ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ಓಂಪ್ರಕಾಶ್‌ ಪಾಟೀಲ್‌ ಮಾತನಾಡಿ ‘ಕೇರಳ ಬಿಟ್ಟರೆ ದೇಶದಲ್ಲಿ ಉಳಿದ ರಾಜ್ಯಗಳಲ್ಲಿ ಪುರುಷರ ಸಂಖ್ಯೆಗೆ ಹೋಲಿಸಿದರೆ ಸ್ತ್ರೀಯ ಪ್ರಮಾಣ ಕಡಿಮೆ ಆಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

ಪಶ್ಚಿಮ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಬಿ.ಎಸ್‌.ಉಮೇಶ್‌ ಸ್ವಾಗತಿಸಿದರು. ಎಸ್‌.ರಾಜೇಂದ್ರ ಕುಮಾರ್‌ ವಂದಿಸಿದರು.

‘ರಕ್ಷಾ ಪೆಕ್ಷ್‌’ ಅಂಚೆ ಚೀಟಿಗಳ ಪ್ರದರ್ಶನವು ವಿಷಯ ವೈವಿದ್ಯಗಳಿಂದ ಗಮನ ಸೆಳೆಯಿತು. ಮಾಹಿತಿಯ ಆಗರವಾಗಿದ್ದ ಈ ಪ್ರದರ್ಶನದಲ್ಲಿ ಸ್ಪರ್ಧಾತ್ಮಕ ಮತ್ತು ಸ್ಪರ್ಧೇತರ, ಹಿರಿಯ, ಕಿರಿಯ ವಿಭಾಗಗಳಿದ್ದು, ಒಟ್ಟು 142 ಫ್ರೇಮ್‌ (ದರ್ಶಿಕೆ)ಗಳಿದ್ದವು.

ನವದೆಹಲಿಯ ಅಂಚೆ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಕರ್ನಲ್‌ ಅರವಿಂದ ವರ್ಮಾ ಅವರು ರಕ್ಷಣಾ ವಿಭಾಗಕ್ಕೆ ಸಂಬಂಧಿಸಿ ಪ್ರದರ್ಶನಕ್ಕಿಟ್ಟ ಸಂಗ್ರಹ ಗಮನ ಸೆಳೆಯಿತು. ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೊ ಅವರ ಪ್ರದರ್ಶನದ ವಿಷಯ ‘ಮಹಾತ್ಮ ಗಾಂಧಿ– ಸ್ಪಿರಿಟ್‌ ಆಫ್‌ ನೇಷನ್‌’.

ಹಿರಿಯ ಸಂಗ್ರಾಹಕ ಜಗನ್ನಾಥ ಮಣಿ ಅವರು ‘ಒಲಿಂಪಿಕ್ಸ್‌’ ಮೇಲೆ ಇಟ್ಟ ಪ್ರದರ್ಶನದಲ್ಲಿ 1896ರ ಮೊದಲ ಆಧುನಿಕ (ಅಥೆನ್ಸ್‌) ಒಲಿಂಪಿಕ್ಸ್‌ನಿಂದ 1916ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ವರೆಗೆ ಬಿಡುಗಡೆಯಾದ ಅಂಚೆ ಚೀಟಿಗಳಿದ್ದವು.

ಕಾಂಪಿಟಿಟಿವ್‌ ಕ್ಲಾಸ್‌ನಲ್ಲಿ ಉದಯೋನ್ಮುಖ ಸಂಗ್ರಾಹಕಿ, ಪ್ರೆಸಿಡೆನ್ಸಿ ಶಾಲೆಯ (ಆರ್‌.ಟಿ.ನಗರ) ಜಾಗೃತಿ ಅಡ್ಕ ಒಲಿಂಪಿಕ್ಸ್‌ ವಿಷಯದ ಮೇಲೆ ಪ್ರದರ್ಶನ ಇಟ್ಟು ಸ್ಪರ್ಧೆಗಿಳಿದಿದ್ದಾರೆ.

ಅಂಚೆ ಚೀಟಿಗಳ ಮೇಲೆ ಹಲವು ಪ್ರಥಮಗಳ (ಯೂನಿಕ್‌ ಸ್ಟ್ಯಾಂಪ್ಸ್‌) ವಿಷಯದ ಮೇಲೆ ಎಚ್‌ಎಎಲ್‌ ಏರೋಸ್ಪೇಸ್‌ ಎಂಜಿನಿಯರ್‌ ಗಿರೀಶ್‌ ಕುಮಾರ್‌ ಅವರ ಪ್ರದರ್ಶನವೂ ಗಮನ ಸೆಳೆಯುತ್ತಿದೆ. ತೊಗಟೆಯಿಂದ ಮಾಡಿದ ಚೀಟಿ, ಮೊದಲ ಸುವಾಸಿತ ಅಂಚೆ ಚೀಟಿ, 3ಡಿ ಸ್ಟ್ಯಾಂಪ್‌ (ಆರ್ಜೆಂಟೀನಾ), ಮೀನಿನ ಚರ್ಮ ಬಳಸಿ ರಚಿಸಿದ ಸ್ಟ್ಯಾಂಪ್‌, ಬಟ್ಟೆ ಬಳಸಿ ಹೊರತಂದ ಅಂಚೆ ಚೀಟಿ (ಗ್ರೆನೆಡಾ–ಸೇಂಟ್‌ ವಿನ್ಸೆಂಟ್‌), ಪುಸ್ತಕ ರೀತಿಯ ಮಡಿಚಬಹುದಾದ ಅಂಚೆಚೀಟಿ (ನೆದರ್ಲೆಂಡ್ಸ್‌) ಮುತ್ತನ್ನು ಹೊಂದಿರುವ ಅಂಚೆಚೀಟಿ (ಯುಎಇ)... ಹೀಗೆ ಹಲವು ಪ್ರಥಮಗಳ ಅಂಚೆ ಚೀಟಿಗಳಿದ್ದವು. 

ಸ್ವಾಮಿ ವಿವೇಕಾನಂದ, ಚಿತ್ರ ಕಲಾವಿದರು, ಅಂಚೆ ಸ್ಟೇಷನರಿಗಳು, ಪುಷ್ಪಗಳ ಪರಾಗಸ್ಪರ್ಶ, ಹಡಗುಗಳು, ಪೋಪ್‌ ಜಾನ್‌ಪಾಲ್‌ II ಭೇಟಿ.... ಹೀಗೆ ವಿಷಯ ವೈವಿಧ್ಯಕ್ಕೆ ಕೊರತೆಯಿರಲಿಲ್ಲ. 60 ವಿಷಯಗಳ ಮೇಲೆ ಪ್ರದರ್ಶನವಿತ್ತು.‌

ಪ್ರದರ್ಶನ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಹಿರಿಯ ಸಂಗ್ರಾಹಕ ಡಾ.ಸಂಗೊರಾಮ್‌ ‘ನಾನು  ಸಂಗ್ರಹಿಸಿದ ಅಂಚೆ ಚೀಟಿಗಳನ್ನು ಸಂಗ್ರಹಾಲಯ ಉದ್ದೇಶಕ್ಕೆ ನೀಡುತ್ತಿದ್ದೇನೆ. ಬಾಹ್ಯಾಕಾಶ ಯೋಜನೆಗಳಿಗೆ ಸಂಬಂಧಿಸಿದ 32 ಫ್ರೇಮ್‌ಗಳನ್ನು ಐಐಎಸ್‌ಸಿ’ಗೆ ಈಗಾಗಲೇ ನೀಡಿದ್ದೇನೆ’ ಎಂದರು.

‘ಖನಿಜಗಳ ವಿಷಯದ ಮೇಲೆ ಸಂಗ್ರಹಿಸಿದ ಅಂಚೆ ಚೀಟಿಗಳ ಫ್ರೇಮ್‌ಗಳನ್ನು ಖನಿಜ ಭವನಕ್ಕೆ ನೀಡಿದ್ದೇನೆ. ಪುಷ್ಪಗಳ ವಿಷಯಗಳಿಗೆ ಸಂಬಂಧಿಸಿದ 30 ಫ್ರೇಮ್‌ಗಳಷ್ಟು ಅಂಚೆ ಚೀಟಿಗಳನ್ನು ಲಾಲ್‌ಬಾಗ್‌ ಸಸ್ಯೋದ್ಯಾನಕ್ಕೆ ನೀಡಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದರು. ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿರುವ ಇವರ ಕುಟುಂಬ ಅಂಚೆ ಚೀಟಿ ಸಂಗ್ರಾಹಕರ ಕುಟುಂಬ ಎಂದು ಹೆಸರು ಪಡೆದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು