ಮಂಗಳವಾರ, ಜನವರಿ 18, 2022
23 °C

ಜ್ಞಾನಭಾರತಿ ವೈಟ್‌ ಟಾಪಿಂಗ್‌: ಅನುದಾನ ಮರು ಹಂಚಿಕೆಗೆ ಕೃಷ್ಣ ಬೈರೇಗೌಡ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಮೂರು ಕ್ಷೇತ್ರಗಳ ನಾಲ್ಕು ಕಾಮಗಾರಿಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಶಾಸಕರಿಂದ ಆಕ್ಷೇಪ ವ್ಯಕ್ತವಾಗಿದೆ.

ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಜ್ಞಾನಭಾರತಿ ಆವರಣದಲ್ಲಿ ₹35.50 ಕೋಟಿ ಮೊತ್ತದ ಕಾಮಗಾರಿಯನ್ನು ಮರು ಟೆಂಡರ್ ಆಹ್ವಾನಿಸದೆ ಕೈಗೆತ್ತಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.

2017–18ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಒದಗಿಸಿದ್ದ ಅನುದಾನದಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗಾಗಿ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಆದರೆ, ಇದೀಗ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಎರಡು ಕಾಮಗಾರಿ, ಸರ್ವಜ್ಞನಗರ ಮತ್ತು ಚಿಕ್ಕಪೇಟೆ ಕ್ಷೇತ್ರದ ತಲಾ ಒಂದು ಕಾಮಗಾರಿ ಸೇರಿ ಒಟ್ಟು 4.03 ಕಿಲೋ ಮೀಟರ್‌ನಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಕೈಬಿಡಲಾಗಿದೆ.

‘ಒಂದು ಕ್ಷೇತ್ರಕ್ಕೆ ಮಂಜೂರಾದ ಕಾಮಗಾರಿಯನ್ನು ಮತ್ತೊಂದು ಕ್ಷೇತ್ರಕ್ಕೆ ವರ್ಗಾವಣೆ ಮಾಡಬಾರದು ಎಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದರು. ಅನಿವಾರ್ಯವಾಗಿ ಕಾಮಗಾರಿ ಬದಲಾವಣೆ ಮಾಡಿಕೊಳ್ಳಬೇಕಿದ್ದರೆ ಆ ಕ್ಷೇತ್ರದೊಳಗೇ ಪರ್ಯಾಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಆದೇಶವನ್ನೂ ನೀಡಿದ್ದರು. ಆದರೂ, ಕಾಮಗಾರಿಗಳನ್ನು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಬಿಬಿಎಂಪಿ ಅಧಿಕಾರಿಗಳು ಬದಲಿಸುತ್ತಿದ್ದಾರೆ. ಸಚಿವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಈ ಕೆಲಸಕ್ಕೆ ಕೈ ಹಾಕಿದ್ದಾರೆ’ ಎಂದು ನಗರದ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಡಳಿತ ಪಕ್ಷದ ಶಾಸಕರ ಕ್ಷೇತ್ರದ ಒಂದು ಕಾಮಗಾರಿಯ ಹಣವನ್ನು ರಾಜರಾಜೇಶ್ವರಿನಗರಕ್ಕೆ ಹಂಚಿಕೆ ಮಾಡಲಾಗಿದ್ದು, ಇದು ಬಿಜೆಪಿಯ ಮೂಲ ಶಾಸಕರ ಕೋಪಕ್ಕೆ ಕಾರಣವಾಗಿದೆ. ‘ವಲಸೆ ಬಂದವರ ಕ್ಷೇತ್ರಕ್ಕೆ ಈಗಾಗಲೇ ₹1 ಸಾವಿರ ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ನಮ್ಮ ಕ್ಷೇತ್ರಕ್ಕೆ ಅನುದಾನ ನೀಡಲು ಸತಾಯಿಸಲಾಗುತ್ತಿದೆ. ಅದರ ನಡುವೆ, ಈ ರೀತಿ ಅನುದಾನ ಕಿತ್ತುಕೊಂಡರೆ ನಾವೇನು ಮಾಡಬೇಕು. ನಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳು ಇಲ್ಲವೇ’ ಎಂದು ಬಿಜೆಪಿಯ ಶಾಸಕರೊಬ್ಬರು ಪ್ರಶ್ನಿಸಿದರು. ಮುಖ್ಯಮಂತ್ರಿ ಸಚಿವಾಲಯದಿಂದ ಬಂದ ಒತ್ತಡದ ಕಾರಣಕ್ಕೆ ಅನುದಾನ ಮರು ಹಂಚಿಕೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

‘ಜಲಮಂಡಳಿ ಪೈಪ್‌ಲೈನ್ ಇದೇ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಕಾರಣಕ್ಕೆ ನಾಲ್ಕು ಕಾಮಗಾರಿಗಳನ್ನು ತಡೆ ಹಿಡಿಯಲಾಗಿತ್ತು. ಉಳಿತಾಯ ಮೊತ್ತ ಇದ್ದರೆ ಜ್ಞಾನಭಾರತಿ ಆವರಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದಿದ್ದರಿಂದ ವೈಟ್‌ ಟಾಪಿಂಗ್‌ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ) ಎಂ.ಲೋಕೇಶ್ ತಿಳಿಸಿದರು.

‘ರಾಜರಾಜೇಶ್ವರಿನಗರ ಕ್ಷೇತ್ರದ ಹೊರವರ್ತುಲ ರಸ್ತೆಯಲ್ಲಿ ಈ ಹಿಂದೆ ಕಾಮಗಾರಿಯನ್ನು ನಿಲ್ಲಿಸಿದ್ದೆವು. ಆ ಮೊತ್ತವನ್ನು ಬ್ಯಾಟರಾಯನಪುರ ಕ್ಷೇತ್ರದ ಥಣಿಸಂದ್ರ ಮುಖ್ಯ ರಸ್ತೆಯ ವೈಟ್‌ ಟಾಪಿಂಗ್ ಕಾಮಗಾರಿಗೆ ಬಳಸಿಕೊಳ್ಳಲಾಗಿತ್ತು. ಅಗತ್ಯಕ್ಕೆ ಅನುಗುಣವಾಗಿ ಅನುದಾನ ಮರು ಹಂಚಿಕೆ ಮಾಡಲಾಗುತ್ತದೆ. ಈ ವಿಷಯವನ್ನು ಬ್ಯಾಟರಾಯನಪುರ ಶಾಸಕರ ಗಮನಕ್ಕೂ ತರಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಉಳಿತಾಯ ಅಲ್ಲ; ಬದಲಾದ ಕಾಮಗಾರಿ

ಉಳಿತಾಯ ಮೊತ್ತದಲ್ಲಿ ಜ್ಞಾನಭಾರತಿ ಆವರಣದಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ನಡೆಸುವುದರಿಂದ ಮರು ಟೆಂಡರ್ ಆಹ್ವಾನಿಸುವ ಅಗತ್ಯವಿಲ್ಲ ಎಂಬುದು ಬಿಬಿಎಂಪಿ ವಾದ.

‘ಆದರೆ, ನಾಲ್ಕು ಕಾಮಗಾರಿಗಳ ಮೊತ್ತವನ್ನು ಇಲ್ಲಿಗೆ ಬಳಸಲಾಗುತ್ತಿದೆ. ಹೀಗಾಗಿ, ಟೆಂಡರ್‌ ಪ್ರಕ್ರಿಯೆ ನಡೆಸಲೇಬೇಕು. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಿಂದ ವಿನಾಯಿತಿ ಪಡೆದುಕೊಳ್ಳಲು ಕೆಲ ಅಧಿಕಾರಿಗಳು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಬಿಬಿಎಂಪಿಯ ಹಿರಿಯ ಎಂಜಿನಿಯರ್‌ ಒಬ್ಬರು ಹೇಳಿದರು.

ದ್ವೇಷದ ರಾಜಕೀಯ: ಕೃಷ್ಣ ಬೈರೇಗೌಡ

‘ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಎರಡು ವೈಟ್‌ ಟಾಪಿಂಗ್ ಕಾಮಗಾರಿಯನ್ನು ರದ್ದುಪಡಿಸಿ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಬಿಜೆಪಿಯ ದ್ವೇಷದ ರಾಜಕೀಯಕ್ಕೆ ಮತ್ತೊಂದು ಉದಾಹರಣೆ’ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದರು.

‘ಅಧಿಕಾರ ದುರುಪಯೋಗ ಮಾಡಿಕೊಂಡು ನನ್ನ ಕ್ಷೇತ್ರದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬಿಜೆಪಿಗೆ ಇಡೀ ಬೆಂಗಳೂರಿನ ಅಭಿವೃದ್ಧಿ ಬೇಕಿಲ್ಲ, ತಮ್ಮ ಪಕ್ಷದ ಶಾಸಕರ ಅಭಿವೃದ್ಧಿ ಅಷ್ಟೇ ಬೇಕಿದೆ’ ಎಂದರು.

‘ನಗರದ ಯಾವುದೇ ಪ್ರಮುಖ ರಸ್ತೆಗೆ ಎರಡು ವರ್ಷಗಳಿಂದ ಡಾಂಬರು ಹಾಕಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಆರಂಭಿಸಿದಾಗ ಬಿಜೆಪಿ ವಿರೋಧ ಮಾಡಿತ್ತು. ಈಗ ಬೆಂಗಳೂರಿನಲ್ಲಿ ಗುಂಡಿ ಇಲ್ಲದ ರಸ್ತೆಗಳೆಂದರೆ ವೈಟ್‌ ಟಾಪಿಂಗ್ ರಸ್ತೆಗಳು ಮಾತ್ರ’ ಎಂದು ಹೇಳಿದರು.

ಬದಲಾದ ಕಾಮಗಾರಿಯ ವಿವರ

ರಸ್ತೆಯ ಹೆಸರು; ಉದ್ದ (ಕಿ.ಮೀಗಳಲ್ಲಿ); ಅಂದಾಜು ವೆಚ್ಚ(₹ ಕೋಟಿಗಳಲ್ಲಿ); ಕ್ಷೇತ್ರ

ಕೊಡಿಗೇಹಳ್ಳಿ ವೃತ್ತದಿಂದ ಭದ್ರಯ್ಯ ಲೇಔಟ್‌ನ ಹೊರ ವರ್ತುಲ ರಸ್ತೆ; 1.05; 7.20; ಬ್ಯಾಟರಾಯನಪುರ

ತಿಂಡ್ಲು ವೃತ್ತದಿಂದ ನಂಜಪ್ಪ ವೃತ್ತ; 0.94; 7.50; ಬ್ಯಾಟರಾಯನಪುರ

ಎಚ್‌ಬಿಆರ್‌ ವಾರ್ಡ್‌ನ ದೋಬಿಘಾಟ್‌ನಿಂದ ಹೊರ ವರ್ತುಲ ರಸ್ತೆ; 1.76; 15.20; ಸರ್ವಜ್ಞನಗರ

ವಿಲ್ಸನ್ ಗಾರ್ಡನ್‌ನ‌ ಬಿಟಿಎಸ್‌ ರಸ್ತೆ; 0.28; 1.90; ಚಿಕ್ಕಪೇಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು