ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಿಂದ ವಿಶ್ವ ಸುಸಂಸ್ಕೃತ: ಮೋಹನ್‌ ಭಾಗವತ್‌

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಅಭಿಮತ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಕಾರಗಳಿಂದ ನಮ್ಮನ್ನು ಮೇಲಕ್ಕೆತ್ತಿ ಸಮಾಜದ ವಿಚಾರ, ಸಂವೇದನೆಗಳನ್ನು ಅರ್ಥ ಮಾಡಿಸಿಕೊಡಲು ಕಲೆ ಪ್ರಮುಖ ಪಾತ್ರ ವಹಿಸುತ್ತದೆ. ಕಲೆಯಿಂದ ವಿಶ್ವವು ಸುಸಂಸ್ಕೃತಗೊಳ್ಳುತ್ತದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.

ಸಂಸ್ಕಾರ ಭಾರತಿ ವತಿಯಿಂದ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಕಲಾಸಾಧಕ ಸಂಗಮದಲ್ಲಿ, ಮೂರನೇ ದಿನ ನಡೆದ ‘ಭರತ ಮುನಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಲೆ ಒಂದು ವಿದ್ಯೆಯಾಗಿದ್ದು, ಅಂತ್ಯದಲ್ಲಿ ನಮ್ಮ ಮುಕ್ತಿಗೂ ಕಾರಣವಾಗುತ್ತದೆ. ಭಾರತೀಯತೆಯನ್ನು ಉಳಿಸುವ ಕೆಲಸವನ್ನು ಕಲೆಯ ಮೂಲಕ ಕಲಾವಿದರು ಮಾಡುತ್ತಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು’ ಎಂದು ಆಶಿಸಿದರು.

‘ಭಾರತೀಯರನ್ನು ಗುರುತಿಸುವುದು ಭಾರತೀಯತೆಯ ಸ್ವಭಾವದ ಮೂಲಕವೇ ಹೊರತು‌ ಭೌಗೋಳಿಕ ಗಡಿಯ ಚೌಕಟ್ಟಿನ ಮೂಲಕವಲ್ಲ. ಭಾರತೀಯರ ವಿಶೇಷತೆಯೇ ಅವರ ಸ್ವಭಾವ. ಮನುಷ್ಯರ ಸ್ವಭಾವವೇ ಸಂಸ್ಕೃತಿ ಎನಿಸಿಕೊಂಡು ಅದು ಸಮಾಜದ ಸ್ವಭಾವವಾಗುತ್ತದೆ. ಸಂಸ್ಕೃತಿ ಎನ್ನುವುದು ಮೌಲ್ಯಯುತ ಆಚರಣೆ’ ಎಂದು ವಿಶ್ಲೇಷಿಸಿದರು.

‘ಸಂಸ್ಕಾರವನ್ನು ರಕ್ಷಿಸುವುದೆಂದರೆ, ಅದನ್ನು ಕಲಿಸುವ ಜನರ ರಕ್ಷಣೆ. ಅವರಲ್ಲಿ ಕಲಾವಿದರು ಪ್ರಮುಖರು. ಆದ್ದರಿಂದಲೇ ಕಾರ್ಮಿಕರಿಗಾಗಿ ಮಜ್ದೂರ್ ಸಂಘ, ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಪರಿಷತ್, ಕ್ರೀಡಾ ಕ್ಷೇತ್ರಕ್ಕಾಗಿ ಕ್ರೀಡಾಭಾರತಿ ಎಂದು ಕರೆದರೆ, ಕಲೆಯನ್ನು ಒಳಗೊಂಡ ಸಂಘಟನೆಯನ್ನು ಕಲಾಭಾರತಿ ಎನ್ನದೆ ಅದನ್ನು ಸಂಸ್ಕಾರ ಭಾರತಿ ಎಂದು ಕರೆಯಲಾಯಿತು’ ಎಂದು ಅಭಿಪ್ರಾಯಪಟ್ಟರು.

ಜನಪದ ಕಲಾವಿದರಾದ ಗಣಪತ್ ಸಖಾರಾಮ್ ಮಸಗೆ ಮತ್ತು ಚಿತ್ರ ಕಲಾವಿದ ವಿಜಯ ದಶರಥ್ ಆಚ್ರೆಕರ್ ಅವರಿಗೆ ಪ್ರಥಮ ವರ್ಷದ ‘ಭರತ ಮುನಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಅಧ್ಯಕ್ಷ ವಾಸುದೇವ ಕಾಮತ್, ಕ್ಷೇತ್ರೀಯ ಪ್ರಚಾರಕ್ ಸುಧೀರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT