ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಬೇಕಿದೆ ಇನ್ನೂ 693 ಜನರ ವರದಿ

ನಗರದಲ್ಲಿ ಅಗತ್ಯ ವಸ್ತು ಖರೀದಿಸಿದ ಜನ
Last Updated 8 ಮೇ 2020, 10:23 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಈವರೆಗೆ 23 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಈಗಾಗಲೇ 14 ಜನರ ವರದಿ ನೆಗೆಟಿವ್‌ ಬಂದಿದ್ದು, ಆಸ್ಪತ್ರೆಯಿಂದಲೂ ಬಿಡುಗಡೆಯಾಗಿದ್ದಾರೆ. 83 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ರಾಜ್ಯದ ಅಂಕಿ ಅಂಶಗಳಲ್ಲಿ ಗೊಂದಲ ಮುಂದುವರಿದಿದೆ. ಬೀದರ್‌ನಲ್ಲಿ ಈವರೆಗೆ ಇಬ್ಬರು ಮೃತಪಟ್ಟರೂ ಒಬ್ಬರೇ ಮೃತಪಟ್ಟಿರುವುದಾಗಿ ಉಲ್ಲೇಖಿಸಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ಇಬ್ಬರು, ಮೂವರು ಜನರು ಜ್ವರದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು 3780 ಜನರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳಿಸಿದ್ದಾರೆ. ಇನ್ನೂ 693 ಜನರ ಫಲಿತಾಂಶ ಬರಬೇಕಿದೆ.

ಗ್ರಾಹಕರೇ ಇರಲಿಲ್ಲ

ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದಿನ ಮದ್ಯದ ಅಂಗಡಿಗಳ ಮುಂದೆ ಗ್ರಾಹಕರ ಸರತಿ ಸಾಲು ಇತ್ತು. ಎರಡನೆಯ ದಿನ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಮದ್ಯದ ದರ ಹೆಚ್ಚಿಸಿರುವ ಕಾರಣ ಗುರುವಾರ ಮದ್ಯದ ಅಂಗಡಿಗಳ ಮುಂದೆ ಗ್ರಾಹಕರೇ ಇರಲಿಲ್ಲ.

ಮೊಬೈಲ್‌ ಮಾರಾಟ ಮಳಿಗೆ, ಎಲೆಕ್ಟ್ರಾನಿಕ್‌ ಅಂಗಡಿ, ಝೆರಾಕ್ಸ್‌, ಸ್ಷೇಷನರಿ, ಪಾದರಕ್ಷೆ ಅಂಗಡಿ, ಬೇಕರಿ ಹಾಗೂ ಸಣ್ಣಪುಟ್ಟ ಬಟ್ಟೆ ಅಂಗಡಿಗಳು ತೆರೆದುಕೊಂಡಿದ್ದವು. ಆದರೆ ಮಾರುಕಟ್ಟೆಯಲ್ಲಿ ಗ್ರಾಹಕರು ಇರಲಿಲ್ಲ. ಸೋಂಕು ಹರುಡುವಿಕೆ ಭಯದಿಂದ ಜನ ಮನೆಗಳಿಂದ ಹೊರ ಬರಲಿಲ್ಲ.

ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ಕೊಡಲಾಯಿತು. ಮೆಡಿಕಲ್‌ ಸ್ಟೋರ್‌ ಹಾಗೂ ರಕ್ತ ತಪಾಸಣೆ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜಿಲ್ಲೆಯೊಳಗೆ ಸಂಚರಿಸಲು ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಅನುಮತಿ ನೀಡಿಲ್ಲ. ಹೀಗಾಗಿ ಜನ ಸ್ವಂತ ವಾಹನಗಳಲ್ಲಿ ಸಂಚರಿಸಿದರು.


ತವರಿಗೆ ಮರಳಿದ 480 ಕಾರ್ಮಿಕರು

ಬೆಂಗಳೂರಲ್ಲಿ ಸಿಲುಕಿದ್ದ 480 ಕಾರ್ಮಿಕರು ರಸ್ತೆ ಸಾರಿಗೆ ಸಂಸ್ಥೆಯ 16 ಬಸ್‌ಗಳಲ್ಲಿ ಗುರುವಾರ ನಗರಕ್ಕೆ ಬಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಅವರ ಕೈಗೆ ಸ್ಯಾನಿಟೈಸರ್‌ ಸಿಂಪಡಿಸಿ ಅವರಿಂದ ಮಾಹಿತಿ ಪಡೆದುಕೊಂಡರು. ತಡವಾಗಿ ಬಂದವರಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಆಹಾರ ವಿತರಿಸಲಾಯಿತು.

ಗ್ರಾಮೀಣ ಪ್ರದೇಶದ ಜನ ಖಾಸಗಿ ವಾಹನ ಹಾಗೂ ಬೈಕ್‌ಗಳಲ್ಲಿ ತಮ್ಮ ಮನೆಗಳಿಗೆ ತೆರಳಿದರು. ತಾಲ್ಲೂಕು ಕೇಂದ್ರಗಳಿಗೆ ತೆರಳಲು ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಯಾವುದೇ ಬಸ್‌ ವ್ಯವಸ್ಥೆ ಮಾಡಿರಲಿಲ್ಲ.

ಬೆಂಗಳೂರಿಗೆ ತೆರಳಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ 96 ಕಾರ್ಮಿಕರ ಪೈಕಿ 90 ಜನರು ಮೂರು ಬಸ್‌ಗಳಲ್ಲಿ ಸಂಜೆ ಬೆಂಗಳೂರಿಗೆ ತೆರಳಿದರು.


ವಲಸೆ ಕಾರ್ಮಿಕರು ಆತಂಕದಲ್ಲಿ


ಉತ್ತರ ಭಾರತದ ಕೆಲ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಲು ಮೂರು ನಾಲ್ಕು ದಿನಗಳಿಂದ ಅನುಮತಿಗಾಗಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದಾರೆ. ಜಿಲ್ಲಾಡಳಿತ ವಲಸೆ ಕಾರ್ಮಿಕರ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದು, ಕೇಂದ್ರ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ.

ಬಿಹಾರದ 26 ಜನ ನಗರಸಭೆಯ ಸಮೀಪ ಬಸ್‌ ತಂಗುದಾಣದಲ್ಲೇ ಆಶ್ರಯ ಪಡೆದಿದ್ದಾರೆ. ಸಾಮಾಜಿಕ ಸಂಘಟನೆಗಳು ಕೊಡುವ ಉಪಾಹಾರ ಸೇವಿಸಿ ಊರಿಗೆ ತೆರಳಲು ದಿನಗಳನ್ನು ಎಣಿಸುತ್ತಿದ್ದಾರೆ. ಸಂಬಂಧಿಕರ ಮೂಲಕ ಬಿಹಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಅಲ್ಲಿನ ಸರ್ಕಾರ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಅದು ಸಹ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದೆ.

ಮಧ್ಯಪ್ರದೇಶ, ಉತ್ತರಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಕಾರ್ಮಿಕರು ಬೀದರ್‌ನಲ್ಲಿ ಸಿಲುಕಿದ್ದಾರೆ. ಕೆಲವರು ಶಹಾಪುರ ಗೇಟ್ ಸಮೀಪದ ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ಇದ್ದಾರೆ. ಇನ್ನು ಕೆಲವರು ಖಾಸಗಿ ಲಾಡ್ಜ್‌ಗಳಲ್ಲಿ ವಾಸವಾಗಿದ್ದಾರೆ. ಒಂದೂವರೆ ತಿಂಗಳಿಂದ ಯಾವುದೇ ಕೆಲಸವಿಲ್ಲದ ಕಾರಣ ಕೈಯಲ್ಲಿ ಹಣವೂ ಇಲ್ಲ. ಹೀಗಾಗಿ ತಮ್ಮ ಊರು ಸೇರಲು ಪರದಾಡುತ್ತಿದ್ದಾರೆ.


ಗುಟ್ಕಾ ತಿಂದರೆ ₹ 100, ಮಾರಿದರೆ ₹250 ದಂಡ


ಬೀದರ್‌: ನಿಯಮ ಉಲ್ಲಂಘಿಸಿ ಅಂಗಡಿಗಳನ್ನು ತೆರೆದರೆ ಇನ್ನು ಮುಂದೆ ಮೊದಲ ಸಲ ಉಲ್ಲಂಘನೆಗೆ ₹ 500 ಹಾಗೂ ಎರಡನೇ ಸಲ ಉಲ್ಲಂಘನೆಗೆ ₹ 1000 ದಂಡನೆ ವಿಧಿಸಲು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ನಿರ್ದೇಶನ ನೀಡಿದ್ದಾರೆ.

ಮಾಸ್ಕ್‌ ಧರಿಸದಿದ್ದರೆ ₹ 50, ಅಂತರ ಕಾಯ್ದಕೊಳ್ಳದಿದ್ದರೆ ₹ 250, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ₹ 100 ಹಾಗೂ ಗುಟ್ಕಾ ತಂಬಾಕುಗಳನ್ನು ಮಾರಾಟ ಮಾಡಿದರೆ ₹ 250 ದಂಡ, ಯಾವುದೇ ಅಗತ್ಯ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ₹ 500 ರಿಂದ 1000 ವಿಧಿಸುವಂತೆ ಆದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT