ಶುಕ್ರವಾರ, ಅಕ್ಟೋಬರ್ 7, 2022
28 °C
ಕನ್ನಡ ಶಾಲೆ ಆಗಿದ್ದರೂ ಇಂಗ್ಲಿಷ್, ಉರ್ದು ಭಾಷೆಯಲ್ಲಿರುವ ಹಳೆ ದಾಖಲೆಗಳು

ಬಸವಕಲ್ಯಾಣ: ಬಟಗೇರಾ ಶಾಲೆಗೆ 70ರ ಸಂಭ್ರಮ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಹತ್ತು ಹಳ್ಳಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಒದಗಿಸಿಕೊಟ್ಟ ತಾಲ್ಲೂಕಿನ ಬಟಗೇರಾದ ಸರ್ಕಾರಿ ಪ್ರಾಥಮಿಕ ಶಾಲೆ 70 ವರ್ಷಗಳಷ್ಟು ಹಳೆಯದಾಗಿದೆ.

ಇದು ಮಹಾರಾಷ್ಟ್ರಕ್ಕೆ ಹತ್ತಿರದಲ್ಲಿದೆ. ಮರಾಠಿ ಮತ್ತು ಉರ್ದು ಭಾಷೆಗಳ ಪ್ರಭಾವದ ನಡುವೆಯೂ ಕನ್ನಡ ಮಾಧ್ಯಮದ ಕಲಿಕಾ ಕೇಂದ್ರವಾಗಿದ್ದ ಗಡಿಯಲ್ಲಿನ ಏಕೈಕ ಶಾಲೆ ಇದಾಗಿದೆ.ಮೊದ ಮೊದಲು ಗ್ರಾಮದ ಪಂಚಾಯಿತಿ ಚಾವಡಿಯಲ್ಲಿ ಬೇಸಿಕ್ ಸ್ಕೂಲ್‌ನ ತರಗತಿಗಳು ನಡೆಯುತ್ತಿದ್ದವು. ಹಾಗೆ ನೋಡಿದರೆ, 1949 ರಿಂದ ಇಲ್ಲಿ ಕೆಲವೊಂದು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದ್ದರೂ ಆಗ ಈ ಭಾಗ ಹೈದರಾಬಾದ್ ಸಂಸ್ಥಾನ ಹಾಗೂ ಈಗ ಮಹಾರಾಷ್ಟ್ರದಲ್ಲಿರುವ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇದ್ದುದರಿಂದ ಯಾವುದೇ ದಾಖಲೆಗಳು ದೊರಕುವುದಿಲ್ಲ. ಶಾಲೆಯಲ್ಲಿ ಶಿಕ್ಷಕರ ವೇತನ ಹಾಗೂ ಖರ್ಚಿಗೆ ಸಂಬಂಧಿಸಿದಂತೆ ಹೆಡ್ ಆಫ್ ದಿ ಆಫೀಸ್ ಪದನಾಮದಡಿ ಸಹಿ ಮಾಡಿರುವ 1952 ಮತ್ತು 53ರ ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಅಚ್ಚಾದ ರಿಜಿಸ್ಟರ್‌ನ ಕೆಲ ಪುಟಗಳು ದೊರೆತಿವೆ.

‘ನಾನು ಚಾವಡಿಯಲ್ಲಿ ಕೆಲ ವರ್ಷ ಕಲಿತಿದ್ದು 1955ಕ್ಕೂ ಒಂದೆರಡು ವರ್ಷ ಮೊದಲು ಇಲ್ಲಿ ತರಗತಿಗಳು ಆರಂಭಗೊಂಡಿದ್ದವು’ ಎಂದು ಬಾಲಚಂದ್ರ ಕುಲಕರ್ಣಿ ಹೇಳಿದ್ದಾರೆ. ‘1962 ರಲ್ಲಿ ಹೊಸ ಕಟ್ಟಡ ಉದ್ಘಾಟನೆಗೊಂಡಿತು. ಅಲ್ಲಿ ಶಿಕ್ಷಣ ಪಡೆದು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು ನಿವೃತ್ತರಾಗಿ 8-10 ವರ್ಷ ಆಗುತ್ತಿದೆ’ ಎಂದು ಹಿರಿಯರಾದ ದಯಾನಂದ ಕಾರಬಾರಿ ತಿಳಿಸಿದ್ದಾರೆ. ‘ಕೊಠಡಿಗಳು ಶಿಥಿಲಗೊಂಡಿರುವ ಕಾರಣ ಹಳೆ ಕೋಣೆಯೊಂದರ ಕೆಲಭಾಗ ಮಾತ್ರ ಉಳಿಸಿಕೊಂಡು ಇನ್ನುಳಿದಿರುವುದನ್ನು ಕೆಡವಿ ಹೊಸ ಕಟ್ಟಡ ಕಟ್ಟಲಾಗಿದೆ. ಈಗ ಇಲ್ಲಿ 221 ಮಕ್ಕಳಿದ್ದಾರೆ. 16 ಕೊಠಡಿಗಳಿವೆ. 7 ಶಿಕ್ಷಕರಿದ್ದಾರೆ’ ಎಂದು ಮುಖ್ಯಶಿಕ್ಷಕ ಗುಂಡಪ್ಪ ಜಮಾದಾರ ಹೇಳಿದ್ದಾರೆ.

‘ಇಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸುತ್ತಲಿನ ಹತ್ತರ್ಗಾ, ಚಿತ್ತಕೋಟಾ, ಗಿಲಗಿಲಿ, ರಾಮತೀರ್ಥ, ಶಿರಗೂರ, ಬಟಗೇರಾವಾಡಿ ಹಾಗೂ ಆಳಂದ ತಾಲ್ಲೂಕಿನ ಕೆಲ ಊರುಗಳ ವಿದ್ಯಾರ್ಥಿಗಳು ಒಳಗೊಂಡು ಹತ್ತು ಗ್ರಾಮಗಳ ಮಕ್ಕಳು ಬರುತ್ತಾರೆ. ಇಲ್ಲಿನ ಕೆಲ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ತಾಲ್ಲೂಕಿಗೆ ಟಾಪರ್ ಆಗಿದ್ದರು. ಈ ಶಾಲೆಯಲ್ಲಿ ಕಲಿತವರು ಹೆಚ್ಚಿನವರು ಶಿಕ್ಷಕರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಗೈದವರಿದ್ದಾರೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು