ಶುಕ್ರವಾರ, ಅಕ್ಟೋಬರ್ 23, 2020
22 °C
ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು, ಪುನಶ್ಚೇತನ ಕಾರ್ಯಕ್ರಮ

ಬೀದರ್: ವಿದ್ಯಾರ್ಥಿಗಳಲ್ಲಿ ಕನಸು ಬಿತ್ತಿದ ಜಿಲ್ಲಾಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ಯಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗಳ ಅರಿವು ಹಾಗೂ ಪುನಶ್ಚೇತನ ಕಾರ್ಯಕ್ರಮದ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದವು. ಸುಮಾರು ಆರು ತಾಸು ಕಾರ್ಯಕ್ರಮ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕನಸುಗಳನ್ನು ಬಿತ್ತಿ ಸ್ಫೂರ್ತಿಯಿಂದ ಮನೆಗಳಿಗೆ ಮರಳುವಂತೆ ಮಾಡಿದವು.

ನಗರದಲ್ಲಿ 2013ರಲ್ಲಿ ಅಂದಿನ ಜಿಲ್ಲಾಧಿಕಾರಿ ಪಿ.ಸಿ.ಜಾಫರ್‌ ಪರಿಕಲ್ಪನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಧಕರ ಹಿತನುಡಿಗಳನ್ನು ಆಲಿಸಿ ಐಎಎಸ್‌ ಅಧಿಕಾರಿಯಾಗಿ ಬಂದ ಬೀದರ್‌ ನಗರದವರೇ ಆದ ನದೀಮ್ ವೇದಿಕೆ ಮೇಲೆ ನಿಂತು ಮಾರ್ಗದರ್ಶನ ನೀಡುವ ಮೂಲಕ ಯುವ ಪೀಳಿಗೆಯನ್ನು ಹುರಿದುಂಬಿಸಿದರು.

‘ಬೀದರ್ ಜಿಲ್ಲೆ ಅಷ್ಟೇ ಅಲ್ಲ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಕರು ಹಾಗೂ ಯುವತಿಯರು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಮನವಿ ಮಾಡಿದರು.

‘ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಬಂದವರೆಲ್ಲರೂ ಸಾಮಾನ್ಯ ಕುಟುಂಬದಿಂದಲೇ ಬಂದವರಾಗಿದ್ದಾರೆ. ಅವರಂತೆ ನಾನು ಸಹ ಪತ್ರಿಕೆಗಳನ್ನು ಓದಿ ಪರಿಶ್ರಮಪಟ್ಟು ಯುಪಿಎಸ್‌ಪಿ ಪರೀಕ್ಷೆ ಪಾಸಾಗಿದ್ದೇನೆ’ ಎಂದು ಹೇಳಿದರು.

ಬೀದರ್‌ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್‌ ಮಾತನಾಡಿ, ‘ರಾಜಸ್ಥಾನ ಮೂಲದ ನನ್ನ ಸಮುದಾಯ ಹಾಗೂ ಕುಟುಂಬದಲ್ಲಿನ ಮೊದಲ ಐಎಎಸ್ ಅಧಿಕಾರಿಯಾಗಿದ್ದೇನೆ’ ಎಂದು ತಿಳಿಸಿದರು.

‘ಬಿ.ಎ. ಪಾಸಾಗಿ, ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವೆ. ನನ್ನ 25ನೇ ವಯಸ್ಸಿನಲ್ಲಿ ಕನ್ನಡ ಕಲಿಯುತ್ತಿದ್ದೇನೆ. ಮಹಿಳೆ ಕೆಲಸ ಮಾಡಲು ಸಾಧ್ಯವೇ ಇಲ್ಲ ಎನ್ನುವ ಪ್ರದೇಶದಿಂದ ಬಂದವಳು ನಾನು. ನನ್ನ ತಂದೆಗೆ ನನ್ನ ಮೇಲೆ ಬಹಳ ವಿಶ್ವಾಸ ಇತ್ತು. ಅವರ ವಿಶ್ವಾಸ ಹುಸಿಯಾಗದಂತೆ ನೋಡಿಕೊಂಡಿದ್ದೇನೆ’ ಎಂದರು.
ನಂತರ ಪೂರ್ವಭಾವಿ ಪರೀಕ್ಷೆಗಳ ಸಿದ್ಧತೆ ಕುರಿತು ಮಾಹಿತಿ ನೀಡಿದರು.

ಭಾಲ್ಕಿ ಡಿವೈಎಸ್‌ಪಿ ದೇವರಾಜ್ ಮಾತನಾಡಿ, ‘ನಮಗೆ ನಾವೇ ದಾರಿ ದೀಪವಾಗಬೇಕು. ಭಾವ ಶುದ್ಧಿಯಾಗಿಟ್ಟುಕೊಂಡು ಕೆಲಸ ಮಾಡಬೇಕು. ಹಳ್ಳಿಯಲ್ಲಿ ಓದಿದ ಕನ್ನಡ ಮಾಧ್ಯಮದ ವಿದ್ಯಾರ್ಥಿ ನಾನು. ಪರಿಶ್ರಮದ ಮೂಲಕವೇ ಚೆನ್ನಾಗಿ ಅರ್ಥ ಮಾಡಿಕೊಂಡು ಓದಿದೆ. ಅದು ನೆರವಾಯಿತು’ ಎಂದು ಹೇಳಿದರು.

‘ಟಾರ್ಚ್‌ ಕಂಪನಿಗಳು ನಮಗೆ ಪ್ರತಿಸ್ಪರ್ಧಿಗಳೇ ಇಲ್ಲ ಅಂದುಕೊಂಡಿದ್ದವು. ಆದರೆ, ಇದೀಗ ಮೊಬೈಲ್‌ನಲ್ಲಿ ಟಾರ್ಚ್‌ ಬಂದು ಟಾರ್ಚ್‌ ಗಳು ಮಹತ್ವ ಕಳೆದುಕೊಂಡವು. ನಮ್ಮ ಮಧ್ಯೆ ಪ್ರತಿಸ್ಪರ್ಧಿಗಳು ಇದ್ದೇ ಇರುತ್ತಾರೆ. ನಾವು ಅಪ್‌ಡೇಟ್‌ ಆಗಬೇಕು. ಅದಕ್ಕಾಗಿ ವಿಶ್ಲೇಷಣಾ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು’ ಎಂದರು.

ಪುಣೆಯ ಆದಾಯ ತೆರಿಗೆ ಇಲಾಖೆಯ ಆಯುಕ್ತ ಭಾಲ್ಕಿ ಮೂಲದ ಅಮರ್‌ ಪಾಟೀಲ ಮಾತನಾಡಿ, ‘ನಾಯಕತ್ವ ಗುಣಗಳು ನಮ್ಮಲ್ಲಿ ಇರಬೇಕು. ನಾವು ಇರುವ ಪ್ರದೇಶ ಹಾಗೂ ಜಿಲ್ಲೆಯ ಇತಿಹಾಸದ ಬಗ್ಗೆ ಚೆನ್ನಾಗಿ ಮಾಹಿತಿ ಇರಬೇಕು. ನಮ್ಮ ಜಿಲ್ಲೆಯ ಬಗ್ಗೆಯೇ ಏನೂ ಗೊತ್ತಿಲ್ಲ ಅಂದರೆ ಅದು ನಮ್ಮ ವ್ಯಕ್ತಿತ್ವದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ತಿಳಿಸಿದರು.

‘ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಅಧಿಕಾರಿಯಲ್ಲಿ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳು ಇರಬೇಕು. ಇದೇ ಅಂಶಗಳು ವ್ಯಕ್ತಿತ್ವ ಪರೀಕ್ಷೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಹೇಳಿದರು.

ಬಸವಕಲ್ಯಾಣ ತಹಶೀಲ್ದಾರ್‌ ಸಾವಿತ್ರಿ ಸಲಗಾರ ಮಾತನಾಡಿ, ‘ನಾನು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನವಳು. ತಾಲ್ಲೂಕಿನಲ್ಲೇ ಮೊದಲ ಕೆಎಎಸ್‌ ಪರೀಕ್ಷೆ ಪಾಸಾದ ಅಧಿಕಾರಿ ಕೂಡ ಆಗಿದ್ದೇನೆ, 17 ವರ್ಷಗಳ ಪರಿಶ್ರಮದ ಫಲವಾಗಿ ಇಂದು ಅಧಿಕಾರಿಯಾಗಿದ್ದೇನೆ.’ ಎಂದರು.

ಬೀದರ್‌ ತಹಶೀಲ್ದಾರ್ ಗಂಗಾದೇವಿ ಮಾತನಾಡಿ, ‘1998ರಲ್ಲಿ ಕೆಎಎಸ್‌ ಅಧಿಕಾರಿಯಾಗಿ ಕೆಲಸ ಶುರು ಮಾಡಿದೆ. ಸಾರ್ವಜನಿಕ ಸೇವೆ ಹೇಗೆ ಮಾಡೋವುದು ಎನ್ನುವುದನ್ನು ಬೀದರ್‌ ಜಿಲ್ಲೆ ಕಲಿಸಿಕೊಟ್ಟಿದೆ’ ಎಂದರು.

ಪ್ರೊಬೆಸ್‌ನರಿ ಐಪಿಎಸ್‌ ಅಧಿಕಾರಿ ಸಿದ್ಧಾರ್ಥ ಗೋಯಲ್‌ ಮಾತನಾಡಿ, ‘ಯಾವ ಸೈಟ್‌ಗಳನ್ನು ನೋಡಬೇಕು. ಹೇಗೆ ಅಧ್ಯಯನ ಸಾಹಿತ್ಯವನ್ನು ಸಂಗ್ರಹಿಸಿಕೊಳ್ಳಬೇಕು. ಎಲ್ಲಿ ತರಬೇತಿ ಪಡೆದುಕೊಳ್ಳಬೇಕು ಎನ್ನುವ ಅರಿವು ನಮಗೆ ಇರಬೇಕು. ಇದರೊಂದಿಗೆ ನಿತ್ಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಇದರಿಂದ ಸಹಜವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ’ ಎಂದು ತಿಳಿಸಿದರು.

2019ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸಾದ ಐಆರ್‌ಎಸ್‌ ಅಧಿಕಾರಿ ಮಹಮ್ಮದ್‌ ನದೀಮ್ ಮಾತನಾಡಿ, ‘ಓಲ್ಡ್‌ಸಿಟಿಯಲ್ಲಿರುವ ನಮ್ಮ ಮನೆಯಿಂದ 50 ಮೀಟರ್ ಅಂತರದಲ್ಲಿ ಪೊಲೀಸ್‌ ಠಾಣೆ ಇದೆ. ನಾನು ಪೊಲೀಸ್‌ ಅಧಿಕಾರಿಗಳನ್ನು ನೋಡುತ್ತ ನಿಲ್ಲುತ್ತಿದ್ದೆ. ನನ್ನ ಕುಟುಂಬದವರು ನೀನು ಒಂದು ದಿನ ಐಪಿಎಸ್‌ ಅಧಿಕಾರಿ ಆಗುತ್ತಿ ಅನ್ನುತ್ತಿದ್ದರು. ಪರಿಶ್ರಮದಿಂದ ನಾನು ಗುರಿ ಸಾಧಿಸಿದೆ’ ಎಂದರು.

‘2013–2014ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಪಿ.ಸಿ. ಜಾಫರ್‌ ನಡೆಸಿದ್ದ ಮಾರ್ಗದರ್ಶನ ಶಿಬಿರದಲ್ಲಿ ಪಾಲ್ಗೊಂಡಿದೆ. ಅದರಿಂದ ನನಗೆ ಸ್ಪೂರ್ತಿ ದೊರೆಯಿತು. ಬೀದರ್‌ನಲ್ಲಿ ಕಲಿತ ನಾನು ಯುಪಿಎಸ್‌ಸಿ ಪೂರಕ ಪರೀಕ್ಷೆಯಲ್ಲಿ ಪಾಸಾದರೂ 2017ರ ಫೆಬ್ರುವರಿಯಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ ಫೇಲಾಗಿದ್ದೆ. ಎದೆಗುಂದದೆ ಒಂದು ಕಾಗದದ ಮೇಲೆ ಪರೀಕ್ಷೆ ಅವಧಿಯಲ್ಲಿ ನನ್ನಿಂದಾದ ಲೋಪಗಳ ಪಟ್ಟಿ ಮಾಡಿದೆ’ ಎಂದು ತಿಳಿಸಿದರು.

‘ಮೊದಲ ಹಂತದಲ್ಲಿ ಪಠ್ಯಕ್ರಮ ಪೂರ್ಣಗೊಳಿಸಿರಲಿಲ್ಲ. ಆದರೆ, ನಂತರ ಸರಿಪಡಿಸಿಕೊಂಡು ಮುಖ್ಯ ಪರೀಕ್ಷೆಯಲ್ಲಿ 656ನೇ ರ್‍ಯಾಂಕ್‌ನಲ್ಲಿ ಪಾಸಾದೆ. ಖುಷಿ ಇದ್ದರೂ ತೃಪ್ತಿಯಾಗಿರಲಿಲ್ಲ. ಆದಾಯ ತೆರಿಗೆ ಇಲಾಖೆಯಲ್ಲಿ ಆಯುಕ್ತನಾಗಿ ಕಾರ್ಯನಿರ್ವಹಿಸಲು ಶುರು ಮಾಡಿದೆ. ಮತ್ತೆ ಪರೀಕ್ಷೆ ಬರೆದೆ ಕೊನೆಗೆ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು’ ಎಂದು ಹೇಳಿದರು.

‘ನನ್ನ ಅಜ್ಜ, ಹೋಂ ಗಾರ್ಡ್‌ ಇದ್ದರು, ತಂದೆ ಕಮಾಂಡೆಂಟ್‌ ಆಗಿದ್ದರು. ನಾನು ಪೊಲೀಸ್‌ ಅಧಿಕಾರಿಯಾದ ಹೆಮ್ಮೆ ನನಗೆ ಹಾಗೂ ಕುಟುಂಬಕ್ಕೆ ಇದೆ. ಬಿದ್ದ ಮೇಲೆ ಮತ್ತೆ ಮೇಲೆ ಏಳಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಮ್ಮನ್ನು ನಾವು ಅಳತೆಗೋಲು ಮಾಡಿಕೊಳ್ಳದ ಹೊರತು ನಮ್ಮ ಸಾಮರ್ಥ್ಯ ಅರಿತುಕೊಳ್ಳಲು ಸಾಧ್ಯವಾಗದು. ಅಬ್ದುಲ್‌ ಖದೀರ್ ಅವರು 2013ರಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅವರಿಗೆ ಕೃತಜ್ಞನಾಗಿದ್ದೇನೆ’ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯ ಇಂಡಿಯ ಉಪ ವಿಭಾಗಾಧಿಕಾರಿ ರಾಹುಲ್‌ ಶಿಂದೆ ಮಾತನಾಡಿ, 2013ರಲ್ಲಿ ನನಗೆ ಇಲ್ಲಿ ಕರೆದಿದ್ದರು. ಆವಾಗಲೂ ಬಂದಿದ್ದೆ. ಎಲ್ಲರೂ ಒಳ್ಳೆಯ ಕಾಲೇಜುಗಳಲ್ಲೇ ಓದಿರಬೇಕು ಎಂದೆನಿಲ್ಲ. ಎಲ್ಲರಿಗೂ ಪರಿಶ್ರಮವೇ ಬುನಾದಿ. ಆರು ಬಾರಿ ಪ್ರಯತ್ನ ಮಾಡಿದ ನನಗೆ ನಾನೇ ಮಾದರಿ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಬಸವಕಲ್ಯಾಣದ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಮಾತನಾಡಿ, ‘ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡುವಾಗಲೂ ಎಚ್ಚರಿಕೆ ವಹಿಸಬೇಕು. ಮೊದಲು ಸಾರ್ವಜನಿಕ ಆಡಳಿತ ವಿಷಯ ಪಡೆದು ನಾನು ತಪ್ಪು ಮಾಡಿದೆ. ನಂತರ ಮಾನವವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ಉತ್ತಮ ಅಂಕ ಪಡೆದುಕೊಂಡೆ. ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಳ್ಳುವುದು ಉತ್ತಮ’ ಎಂದು ತಿಳಿಸಿದರು.

‘ನಮಗೆ ಅನುಕೂಲವಾಗುವ ಹಾಗೆ ಪಠ್ಯಕ್ರಮ, ಲಭ್ಯವಿರುವ ಸಾಹಿತ್ಯ, ತರಬೇತಿ ಸಂಸ್ಥೆಗಳು ಇವೆಯೇ ನೋಡಿಕೊಳ್ಳಬೇಕು. ನಾನು ಮನೆಯಲ್ಲೇ ಓದಿದ್ದೇನೆ. ನಿಮಗೆ ಮಾರ್ಗದರ್ಶನ ಕೊಡುವವರು ಇದ್ದರೆ ತರಬೇತಿ ಸಂಸ್ಥೆಗಳಿಗೆ ಹೋಗುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳು ಬಯಸಿದರೆ ವಾಟ್ಸ್‌ಆ್ಯಪ್‌ ಗ್ರುಪ್ ಮಾಡಿ ಮಾರ್ಗದರ್ಶನ ಮುಂದುವರಿಸಲು ಸಿದ್ಧರಿದ್ದೇವೆ. ಇ–ಮೇಲ್‌ ಮೂಲಕ ಮಾಹಿತಿ ಒದಗಿಸಲಿದ್ದೇವೆ’ ಎಂದು ತಿಳಿಸಿದರು.

ಕಲಬುರ್ಗಿಯ ಐಎಎಸ್ ಅಧಿಕಾರಿ ಆಕಾಶ ಹಾಗೂ ಸಂಸದ ಭಗವಂತ ಖೂಬಾ ಮಾತನಾಡಿದರು. ವಿದ್ಯಾರ್ಥಿಗಳಾದ ಪವಿತ್ರಾ ಮಾರುತಿ ಭೀಮಣ್ಣ, ಭಾಲ್ಕಿಯ ಇಬ್ರಾಹಿಂ, ಬೀದರ್‌ ತಾಲ್ಲೂಕಿನ ಹಿಪ್ಪಳಗಾಂವದ ಆಸೀಫ್ ಹಾಗೂ ಆದಿಶ್‌ ವಾಲಿ ಸಂವಾದದಲ್ಲಿ ಪಾಲ್ಗೊಂಡು ಗೊಂದಲಗಳನ್ನು ನಿವಾರಿಸಿಕೊಂಡರು.

ತಹಶೀಲ್ದಾರ್ ನಾಗಯ್ಯ ಹಿರೇಮಠ, ಶಾಹೀನ್‌ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌ ಇದ್ದರು. ಚೆನ್ನಬಸವ ಹೇಡೆ ನಿರೂಪಿಸಿದರು.

ಟೀಕೆಗಳೇ ಮೆಟ್ಟಿಲುಗಳಾದವು.....

ಬೀದರ್‌: ‘ನಾನು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಗ ಇವನೇನು ಅಧಿಕಾರಿಯಾಗಬಲ್ಲ ಎಂದು ಜನ ಆಡಿಕೊಳ್ಳುತ್ತಿದ್ದರು. ನಾನು ಟೀಕೆ ಟಿಪ್ಪಣೆಗಳಿಗೆ ಕಿವಿಗೊಡಲಿಲ್ಲ. ಕೆಲವರು ಮಾತಿನ ಕಲ್ಲುಗಳನ್ನು ಎಸೆದರು. ನಾನು ಅವುಗಳನ್ನೇ ಬಳಸಿಕೊಂಡು ಮನೆ ಕಟ್ಟಿಕೊಂಡೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಶಾಯಿರಿ ಮೂಲಕ ಹೇಳಿದರು.

‘ನಾನು ಉತ್ತರಪ್ರದೇಶದ ಒಂದು ಚಿಕ್ಕ ಹಳ್ಳಿಯಿಂದ ಬಂದವ. ಅಧಿಕ ಮಳೆ ಸುರಿದಾಗ ನಮ್ಮೂರಿನ ನದಿಗೆ ಪ್ರತಿ ವರ್ಷ ಪ್ರವಾಹ ಬರುತ್ತದೆ. ನಾನು ಸಮಸ್ಯೆಗಳ ಮಧ್ಯೆಯೇ ಬೆಳೆದವ. ನಾನು ಕಲಿಯುತ್ತಿದ್ದ ಸರ್ಕಾರಿ ಹೈಸ್ಕೂಲ್‌ನಲ್ಲಿ 200 ವಿದ್ಯಾರ್ಥಿಗಳು ಇದ್ದರು. ಅದರಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ 18 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದರು. ನಾನೇ ಶಾಲೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದೆ’ ಎಂದು ತಿಳಿಸಿದರು.

‘ಅಮೆ ಹಾಗೂ ಮೊಲದ ಓಟದ ಸ್ಪರ್ಧೆಯಲ್ಲಿ ಆಮೆಗೆ ಆತ್ಮವಿಶ್ವಾಸ ಇತ್ತು. ನೀರಿನಲ್ಲಿ ನಾನೇ ಅತ್ಯುತ್ತಮ ಎನ್ನುವುದು ಆಮೆಗೆ ಗೊತ್ತಿತ್ತು. ಅದರಂತೆಯೇ ನನಗೆ ಆತ್ಮವಿಶ್ವಾಸ ಇದ್ದ ಕಾರಣ ಚೆನ್ನಾಗಿ ಓದಿ ಯಪಿಎಸ್‌ನಲ್ಲಿ 195ನೇ ರ್‍ಯಾಂಕ್‌ ಪಡೆದುಕೊಂಡೆ. ಭೌತವಿಜ್ಞಾನ ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡೆ’ ಎಂದು ತಿಳಿಸಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ಬೀದರ್‌ ಜಿಲ್ಲೆಗೆ ಎರಡು ಸಾವಿರ ಗರ್ಭಿಣಿಯರು ಬಂದಿದ್ದರು. ಅವರಿಗೆ ಸೌಲಭ್ಯ ಕಲ್ಪಿಸಿ ನೆರವಾದೆ. ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿದೆ. ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಸುಧಾರಣೆಗೂ ಪರಿಶ್ರಮಪಟ್ಟಿದ್ದೇನೆ. ಒಂದು ವಿಷಯ ಬೇಸರವಾದಾಗ ಬೇರೆ ವಿಷಯವನ್ನು ಆಯ್ಕೆ ಮಾಡಬೇಕು. ಇದರಿಂದ ಆಸಕ್ತಿ ಕಡಿಮೆಯಾಗುವುದಿಲ್ಲ’ ಎಂದರು.

’ನಾನು ಹಾಸ್ಟೆಲ್‌ಗಳಲ್ಲಿ ನನ್ನ ನಂಬರ್‌ ಬರೆಯಿಸಿದ್ದೇನೆ. ಕೆಲಸ ಮಾಡದ ಮೂವರು ವಾರ್ಡನ್‌ಗಳನ್ನು ಅಮಾನತು ಮಾಡಿದ್ದೇನೆ. ಫೀಡ್‌ ಬ್ಯಾಕ್‌ ಚೆನ್ನಾಗಿದ್ದರೆ ಚೆನ್ನಾಗಿ ಕೆಲಸ ಮಾಡಬಹುದು. ನವಿನ್‌ರಾಜ್‌ ಸಿಂಗ್‌ ಸಿವಿಲ್‌ ಎಂಜಿನಿಯರ್‌ ಆಗಿದ್ದರು. ಅವರು ಚೆಕ್‌ಡ್ಯಾಮ್‌ಗಳನ್ನು ಅರ್ಧ ಚಕ್ರದ ಮಾದರಿಯಲ್ಲಿ ನಿರ್ಮಾಣ ಮಾಡಿದರು. ಇದರಿಂದ ಅದು ಗಟ್ಟಿಯಾಗಿ ಉಳಿಯಲು ಸಾಧ್ಯವಾಯಿತು. ಇದು ರಾಷ್ಟ್ರಕ್ಕೆ ಮಾದರಿ ಆಯಿತು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ಮಾತನಾಡಿ, ‘ಪೊಲೀಸ್‌ ಇಲಾಖೆಗೆ ಸೇರಲು ಸಾಕಷ್ಟು ಅವಕಾಶಗಳು ಇವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅವಕಾಶಗಳನ್ನು ಬಾಚಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

‘ನಾನು ಎಂಜಿನಿಯರಿಂಗ್ ಮಾಡಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿ ಸಂಬಳ ಹೆಚ್ಚು ಇದ್ದರೂ ನಾಗರಿಕ ಸೇವೆಗೆ ಸೇರಿದೆ. ಮೊದಲ ಪ್ರಯತ್ನದಲ್ಲಿ ಸಫಲತೆ ಸಾಧ್ಯವಾಗಲಿಲ್ಲ. ಹಾಗಂತ ಎದೆಗುಂದಲಿಲ್ಲ. ಛಲಬಿಡದೆ ಪ್ರಯತ್ನಿಸಿದೆ.ನಾಲ್ಕನೇ ಪ್ರಯತ್ನದಲ್ಲಿ ಯಶ ದೊರಕಿತು’ ಎಂದು ತಿಳಿಸಿದರು.

ನನ್ನ ತಂದೆ ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು. ಮೊದಲ ಪರೀಕ್ಷೆಯಲ್ಲಿ ಆದ ಲೋಪ ಸರಿಪಡಿಸಿಕೊಂಡು ಪರೀಕ್ಷೆಗಳನ್ನು ಬರೆಯುತ್ತ ಹೋದೆ. ಕೊನೆಗೆ ಅದು ಗುರಿ ಸಾಧಿಸಲು ನೆರವಾಯಿತು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಮಾತನಾಡಿ, ‘ಆತ್ಮವಿಶ್ವಾಸ ನಮ್ಮ ಬುನಾದಿಯಾಗಬೇಕು. ನಾನು ಕೋಚಿಂಗ್‌ ಕ್ಲಾಸ್‌ ಸೇರಿಕೊಂಡಿದ್ದೆ. ಗುಂಪು ಚರ್ಚೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದೆ. ಬೇಗ ಓದಿ, ಬೇಗ ಅರ್ಥ ಮಾಡಿಕೊಳ್ಳಬೇಕು. ಯಾವ ಸಮಯದಲ್ಲಿ ಯಾವ ವಿಷಯ ಓದಬೇಕು ಎನ್ನುವುದನ್ನು ಮೊದಲು ಸರಿಯಾಗಿ ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಪ್ರತಿಭಾವಂತರ ಅನುಭವಗಳನ್ನು ಸ್ಫೂರ್ತಿಯಾಗಿ ಪಡೆಯಬೇಕು. ಸರ್ಕಾರ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ಯಾದಗಿರಿ ಪ್ರೊಬೆಷ್‌ನರಿ ಉಪ ವಿಭಾಗಾಧಿಕಾರಿ ಅಶ್ವಿಜಾ ಬಿ. ಮಾತನಾಡಿ, ‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಿಲಿಮನರಿ, ಮೇನ್‌ ಹಾಗೂ ಪರ್ಸನಾಲಿಟಿ ಟೆಸ್ಟ್‌ ಹೀಗೆ ಮೂರು ವಿಧಾನಗಳಿವೆ. ವಿಷಯವನ್ನು ಚೆನ್ನಾಗಿ ಗ್ರಹಿಸಿಕೊಂಡು ಸಮಯದ ಪರಿಜ್ಞಾನದೊಂದಿಗೆ ಪ್ರಶ್ನೆ ಪತ್ರಿಕೆಗಳಲ್ಲಿನ ಉತ್ತರ ಬರೆಯಬೇಕು’ ಎಂದು ತಿಳಿಸಿದರು.

‘ನನ್ನ ತಾತ ಕೂಲಿ ಮಾಡುತ್ತಿದ್ದರು. ತಂದೆ ಸರ್ಕಾರಿ ನೌಕರಿ ಮಾಡುತ್ತಾರೆ. ನೆರೆ ಹೊರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಚೆನ್ನಾಗಿ ಓದಿದೆ. ಯಶ ಸಾಧಿಸಿದೆ. ನಾವು ಗ್ರಹಿಸಿದ ಜ್ಞಾನವನ್ನು ಪೇಪರ್‌ನಲ್ಲಿ ಎಷ್ಟು ಬರೆಯಲು ಸಾಧ್ಯವೋ ಅಷ್ಟನ್ನು ಬರೆಯಬೇಕು. ಪರೀಕ್ಷೆ ‍ಪೂರ್ವದಲ್ಲಿ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸ್ವ ಸಾಮರ್ಥ್ಯದ ಅರಿವು ಇರಲಿ

ಬೀದರ್‌: ‘ಪ್ರತಿಯೊಬ್ಬ ವ್ಯಕ್ತಿಗೆ ಸ್ವಸಾಮರ್ಥ್ಯದ ಅರಿವು ಇರಬೇಕು. ತನ್ನನ್ನು ತಾನು ಮೊದಲು ಅರಿತುಕೊಳ್ಳಬೇಕು. ಅದು ಆತ್ಮವಿಶ್ವಾಸವನ್ನು ದೃಢಪಡಿಸುತ್ತದೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ನುಡಿದರು.

‘ಪರಿಶ್ರಮ, ಜ್ಞಾನ ಹಾಗೂ ಸಹನೆ ಇವು ಯಶಸ್ಸಿನ ಮೆಟ್ಟಿಲತ್ತ ಒಯ್ಯುತ್ತವೆ. ಜ್ಞಾನವನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು. ಕಷ್ಟ, ನಷ್ಟಗಳನ್ನು ಅನುಭವಿಸಿದ ವ್ಯಕ್ತಿ ಒಂದು ದಿನ ಸುಖ ಅನುಭವಿಸುತ್ತಾನೆ. ಯಶಸ್ವಿ ವ್ಯಕ್ತಿಯ ಹಿಂದೆ ರೋಮಾಂಚನಕಾರಿಯಾದ ಕತೆ ಇರುತ್ತದೆ’ ಎಂದು ತಿಳಿಸಿದರು.

‘ಸ್ವಾಮಿ ವಿವೇಕಾನಂದರ ಆತ್ಮಸ್ಥೈರ್ಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಪರಿಶ್ರಮ ನಮಗೆಲ್ಲ ಮಾದರಿಯಾಗಬೇಕು. ಬುದ್ಧ ಆತ್ಮಶಕ್ತಿಯ ಮೂಲಕವೇ ಜಗತ್ತನ್ನು ವ್ಯಾಪಿಸಿದ. ಬುದ್ಧನ ಆತ್ಮವಿಶ್ವಾಸ ನಮ್ಮಲ್ಲಿ ಒಡಮೂಡಬೇಕು’ ಎಂದು ಹೇಳಿದರು.

‘ಐಎಎಸ್‌ ಅಧಿಕಾರಿ ಪಿ.ಸಿ.ಜಾಫರ್ ಅವರ ನಂತರ ಜಿಲ್ಲಾಧಿಕಾರಿಯಾಗಿ ಬಂದ ರಾಮಚಂದ್ರನ್‌ ಅವರು ಮೊದಲುಗೊಂಡು ಜಿಲ್ಲೆಯಲ್ಲಿ ಎಲ್ಲರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಕೊಂಡಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು