ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣದಲ್ಲಿ ಎರಡನೇ ಸ್ವಾಭಿಮಾನಿ ಕಲ್ಯಾಣ ಪರ್ವ: ಚನ್ನಬಸವಾನಂದ ಸ್ವಾಮೀಜಿ

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸರ್ವಾಧಿಕಾರಿ–ಆರೋಪ
Published 23 ಸೆಪ್ಟೆಂಬರ್ 2023, 9:40 IST
Last Updated 23 ಸೆಪ್ಟೆಂಬರ್ 2023, 9:40 IST
ಅಕ್ಷರ ಗಾತ್ರ

ಬೀದರ್: ‘ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಈ ವರ್ಷದಿಂದ ಒಂದೇ ‘ಕಲ್ಯಾಣ ಪರ್ವ’ ಮಾಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಹಾಗಾಗಿ ಪ್ರತ್ಯೇಕವಾಗಿ ಬಸವಕಲ್ಯಾಣದಲ್ಲಿ ಅಕ್ಟೋಬರ್‌ 21,22ರಂದು ಎರಡನೇ ಸ್ವಾಭಿಮಾನಿ ‘ಕಲ್ಯಾಣ ಪರ್ವ’ ಹಮ್ಮಿಕೊಳ್ಳಲಾಗಿದೆ’ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ನಗರದ ಬಸವ ಮಂಟಪದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕಲ್ಯಾಣದ ಬೇಗ್‌ ಸಭಾ ಮಂಟಪದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಪರ್ವದಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಗಂಗಾದೇವಿಯವರು ಎಲ್ಲಾ ಜಂಗಮ ಮೂರ್ತಿಗಳು ಹಾಗೂ ಶರಣರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿ ಧೋರಣೆ ನಡೆಸುತ್ತಿರುವುದರಿಂದ ಹಿಂದಿನ ವರ್ಷ ಎಲ್ಲರೂ ಒಗ್ಗೂಡಿ ಕಲ್ಯಾಣ ಪರ್ವ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಪ್ರಥಮ ಕಲ್ಯಾಣ ಪರ್ವ ಹಮ್ಮಿಕೊಂಡಿದ್ದೆವು. ಈ ಸಲವೂ ಗಂಗಾದೇವಿ ಅದೇ ಧೋರಣೆ ತಾಳಿದ್ದರಿಂದ ಎರಡನೇ ಕಲ್ಯಾಣ ಪರ್ವ ಆಯೋಜಿಸಲಾಗಿದೆ. ಭಕ್ತರಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಪರ್ವದ ಯಶಸ್ವಿಗಾಗಿ ಸ್ವಾಭಿಮಾನಿ ಕಲ್ಯಾಣ ಪರ್ವ ಸಮಿತಿ ರಚಿಸಲಾಗಿದೆ. ಜಾತಿ, ಮತ, ಪಂಥದ ಭೇದವಿಲ್ಲದೆ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನಮ್ಮ ಹಾಗೂ ಬಸವ ಧರ್ಮ ಪೀಠದ ನಡುವಿನ ವ್ಯಾಜ್ಯವನ್ನು ಗಂಗಾದೇವಿಯವರು ಸುಪ್ರೀಂಕೋರ್ಟ್‌ ವರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಂತೀಮ ತೀರ್ಪು ಬರುವವರೆಗೆ ನಾವು ಸಂಧಾನ ಮಾಡಿಕೊಳ್ಳುವುದಿಲ್ಲ. ಮಾತೆ ಮಹಾದೇವಿ ಹಾಗೂ ಹಾಗೂ ಲಿಂಗಾನಂದ ಸ್ವಾಮೀಜಿಯವರ ನಿಷ್ಠರು, ಹಿರಿಯ ಶಿಷ್ಯರ ಸಮೂಹ ಮತ್ತು ರಾಷ್ಟ್ರೀಯ ಬಸವ ದಳದವರ ಒಮ್ಮತದ ತೀರ್ಮಾನದಂತೆ ನಾವು ಪ್ರತ್ಯೇಕವಾಗಿಯೇ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಮಾತನಾಡಿ, ಗಂಗಾದೇವಿಯವರು ಒಂದಾಗಬೇಕೆಂದರೂ ಸಿದ್ದರಾಮೇಶ್ವರ ಸ್ವಾಮೀಜಿ ಒಂದಾಗಲು ಬಿಡುತ್ತಿಲ್ಲ. ಇನ್ನೂ ಕೆಲವರು ನೂತನವಾಗಿ ಬಸವ ಧರ್ಮ ಪೀಠಕ್ಕೆ ಕಾಲಿಟ್ಟವರು ಕೂಡ ಅದೇ ಕೆಲಸ ಮಾಡುತ್ತಿದ್ದಾರೆ. ಆಶ್ರಮದಿಂದ ಸಿದ್ಧರಾಮೇಶ್ವರ ಸ್ವಾಮೀಜಿಯವರನ್ನು ಹೊರಹಾಕಿದಾಗ ಎಲ್ಲರೂ ಒಂದಾಗಿ ಮತ್ತೆ ಶಾಂತಿ ನೆಲೆಸಬಹುದು. ಸುಮಾರು ಮೂರ್ನಾಲ್ಕು ದಶಕಗಳಿಂದ ಸಂಸ್ಥೆಗಾಗಿ ದುಡಿಯುತ್ತಿರುವ ಬಹುತೇಕ ಶರಣರು ನಮ್ಮೊಂದಿಗಿದ್ದಾರೆ ಎಂದರು.

ಬೀದರ್‌ ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮುಖಂಡರಾದ ಮಲ್ಲಿಕಾರ್ಜುನ ಜೈಲರ್, ಬಸವಂತರಾವ ಬಿರಾದಾರ, ಮಲ್ಲಿಕಾರ್ಜುನ ಶಹಾಪುರ, ಓಂಪ್ರಕಾಶ ರೊಟ್ಟೆ, ರವಿಕಾಂತ ಬಿರಾದಾರ, ನಿರ್ಮಲಾ ನಿಲಂಗೆ, ವಿದ್ಯಾವತಿ ನಿಡಗುಂದೆ, ಜಗದೀಶ್ವರ ಬಿರಾದಾರ, ಸುನಿತಾ ಬಿರಾದಾರ ಹಾಜರಿದ್ದರು.

‘ನಾವೇನು ಭಯೋತ್ಪಾದಕರಾ?’
ಬೀದರ್‌ ಬಸವ ಮಂಟಪದ ಮಾತೆ ಸತ್ಯಾದೇವಿ ಮಾತನಾಡಿ, ಬಸವ ಧರ್ಮ ಪೀಠ ಬಿಟ್ಟು ನಾವು ಎಂದೂ ಹೊರಗೆ ಹೋಗಿಲ್ಲ. ಆದರೆ, ಗಂಗಾದೇವಿಯವರು ನಮ್ಮನ್ನು ದೂರ ಮಾಡುತ್ತಿದ್ದಾರೆ. ಅವರ ಉದ್ದೇಶವೇನಿದೆ ನಮಗೆ ಗೊತ್ತಿಲ್ಲ. ಅವರ ಆಹ್ವಾನದ ಮೇರೆಗೆ ಸೆ. 19ರಂದು ಕಲ್ಯಾಣ ಪರ್ವದ ಪೂರ್ವಸಿದ್ದತಾ ಸಭೆಗೆ ಬೀದರ್‌ನಿಂದ ಸುಮಾರು 25 ಜನರು ಹಾಗೂ ಬೇರೆ ಬೇರೆ ಕಡೆಗಳಿಂದ ಸುಮಾರು 60ಕ್ಕೂ ಹೆಚ್ಚು ಜನರು ಬಸವಕಲ್ಯಾಣದ ಬಸವ ಮಹಾಮನೆಗೆ ಹೋಗಿದ್ದೆವು. ಆದರೆ, ಆಶ್ರಮದಲ್ಲಿರುವ ಸಿದ್ಧರಾಮೇಶ್ವರ ಸ್ವಾಮೀಜಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನೂರಾರು ಜನ ಪೊಲೀಸರನ್ನು ಕರೆಸಿ ನಮ್ಮನ್ನು ಒಳಗೆ ಹೋಗದಂತೆ ತಡೆದರು. ಬಂಧಿಸಿ ಬಿಡುಗಡೆ ಮಾಡಿದರು. ನಾವೇನು ಭಯೋತ್ಪಾದಕರಾ? ಮೂರು ದಶಕಗಳಿಂದ ನಾವೇ ಕಟ್ಟಿ ಬೆಳೆಸಿದ ಆಶ್ರಮದೊಳಗೆ ನಾವೇ ಹೋಗಬಾರದೆ?  ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT